ವಿಜ್ಞಾನ-ಸಂಸ್ಕೃತಿ-ಜಿಜ್ಞಾಸೆ
------------------------
ಆಧುನಿಕ ವಿಜ್ಞಾನ-ಗಣಿತಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅಧ್ಯಯನ-ಸಂಶೋಧನೆ ಮಾಡಿದ ಭಾರತೀಯರಿಗೆಲ್ಲರಿಗೂ ವಿಷಯ ನಿರ್ವಹಣೆಯಲ್ಲಿ ಒಂದು ಬಗೆಯ ಬಿಕ್ಕಟ್ಟು ಅನುಭವಕ್ಕೆ ಬಂದಿರುತ್ತದೆ. ಇದು ಬರೀ ತರಬೇತಿಗೆ ಸಂಬಂಧಿಸಿದ ಪ್ರಶ್ನೆಯಲ್ಲ ಎಂಬುದೂ ಅವರ ಅರಿವಿಗೆ ಬಂದಿರುತ್ತದೆ. ಈ ಬಗೆಯ ಬಿಕ್ಕಟ್ಟಿನ ಹಿಂದಿನ ಸಾಂಸ್ಕೃತಿಕ ಪ್ರೇರಣೆಗಳನ್ನು ಅರ್ಥಮಾಡಿಕೊಳ್ಳಲೆತ್ನಿಸುವ ಕೃತಿಯೊಂದು ಇತ್ತೀಚೆಗೆ ರೊದ್ದಂ ನರಸಿಂಹ ಅವರಿಂದ `ವಿಜ್ಞಾನ-ಸಂಸ್ಕೃತಿ' ಶೀರ್ಷಿಕೆಯಲ್ಲಿ ಪ್ರಕಟಿತವಾಗಿದೆ. ಪ್ರಸ್ತುತ ಜಿಜ್ಞಾಸೆಯು ಆ ಕೃತಿಯ ಕೇಂದ್ರಿತವಾಗಿದೆ.
ವಿಶಾಲವಾಗಿ ಗಮನಿಸಿದರೆ, ಇಂದಿನ ಆಧುನಿಕ ವಿಜ್ಞಾನವು ಪ್ರಪಂಚದ ಹಲವಾರು ಜನಾಂಗಗಳ ಸಂಸ್ಕೃತಿ, ಸಂವೇದನೆಗಳ ಸಂಘರ್ಷ ಮತ್ತು ಸಾಮರಸ್ಯದಿಂದ ರೂಪಗೊಂಡಿದೆ. ಆದರೆ ಇದರ ಪರಿಭಾಷೆ ಮತ್ತು ಸ್ವರೂಪ ಹೆಚ್ಚಾಗಿ ಪಾಶ್ಚಾತ್ಯ ಪ್ರೋಟೆಸ್ಟಂಟ್ ಸಂಸ್ಕೃತಿಯಿಂದ ಪ್ರೇರಿತವಾದದ್ದು ಎನ್ನಲಾಗುತ್ತದೆ. ಪ್ರಸ್ತುತ ಕೃತಿಯ ಮೂರು ಲೇಖನಗಳ ಸಂಗ್ರಹದ ಮೊದಲ ಲೇಖನ ವಿಜ್ಞ್ಯಾನಿ ಹಾಗೂ ಚಿಂತಕ ಜೊಸೆಫ್ ನೀಡ್‍ಹ್ಯಾಂನ ಪ್ರಶ್ನೆಯಾದ-ಚೀನಾ ಮತ್ತು ಭಾರತ ದೇಶಗಳು ವಿಶಿಷ್ಟವಾದ ಆಧುನಿಕವೆನ್ನಬಹುದಾದ ವಿಜ್ಞಾನವನ್ನು ರೂಪಿಸಿಕೊಳ್ಳುವಲ್ಲಿ ಏಕೆ ವಿಫಲವಾದವು?- ಈ ಕುರಿತು ಜ್ಞ್ಯಾನಶಾಸ್ತ್ರೀಯ ಮಾರ್ಗದಲ್ಲಿ ಉತ್ತರಿಸುವ ಪ್ರಯತ್ನ ಮಾಡಿದೆ. ಉಳಿದೆರಡು ಲೇಖನಗಳನ್ನು ಈ ಮೊದಲ ಲೇಖನದ ಪೂರಕ ಲೇಖನಗಳಾಗಿ ನೋಡಬಹುದು ಎಂದೆನಿಸುತ್ತದೆ.
ಮೂಲವಾಕ್ಯ ಮತ್ತು ಮಾದರಿ ನೆಲೆಯಲ್ಲಿ ನ್ಯೂಟನ್ ಕಾಲದಲ್ಲಿ ರೂಪಗೊಂಡ ವಿಶಿಷ್ಟ ಮಾರ್ಗವೇ ಪಶ್ಚಿಮದಲ್ಲಿನ ಆಧುನಿಕ ವಿಜ್ಞಾನದ ಕ್ರಾಂತಿಗೆ ಕಾರಣ. ಭಾರತೀಯ ಮಾರ್ಗವು ಹೆಚ್ಚಾಗಿ ಗುಣನಕ್ರಮ(ಅಲ್ಗಾರಿದಮಿಕ್) ರೀತಿಯದ್ದಾಗಿದ್ದು- ಎಂಬ ನೆಲೆಯಲ್ಲಿ ಮೊದಲ ಲೇಖನ ರೂಪಗೊಡಿದೆ. ನ್ಯೂಟನ್-ನ, ಮುಂದೆ, ಬರ್ಟ್ರಂಡ್ ರಸ್ಸೆಲ್-ನಿಂದ ಸಂಸ್ಕರಿಸಲ್ಪಟ್ಟ ಈ ಕ್ರಮದಲ್ಲಿ, ಮೂಲವಾಕ್ಯಗಳ ಚೌಕಟ್ಟಿನ ಶಿಷ್ಟವ್ಯವಸ್ಥೆಯೊಂದು ಸತ್ಯವನ್ನು ಸಾಧಿಸಿ ತೋರಿಸಲು ಯತ್ನಿಸುತ್ತದೆ. ಆದರೆ ಗುಣನಕ್ರಮವು ಹೆಚ್ಚಾಗಿ ಪ್ರಯೋಜಕತ್ವದ ಕಡೆ ಗಮನಹರಿಸುತ್ತದೆ. ಈ ಅಭಿಪ್ರಾಯವು ಬಹುತೇಕ ಆಧುನಿಕ ವಿಜ್ಞಾನ, ಗಣಿತ ಕ್ಷೇತ್ರದ ಭಾರತೀಯರ ಅನುಭವವನ್ನು ಸಮರ್ಥಿಸುತ್ತದೆ.
ಈ ಪುಸ್ತಕಕ್ಕೆ ಸಂಬಂಧಿಸಿದ ಆದರೆ ಪುಸ್ತಕವು ನೇರವಾಗಿ ಸಂಬೋಧಿಸದೇ ಹೋದ (ಇದನ್ನೇನೂ ಆರೋಪ ಎಂದು ಪರಿಗಣಿಸುವುದಿಲ್ಲವಾದಲ್ಲಿ) ಎರಡು ಮುಖ್ಯ ಕಾಳಜಿಗಳನ್ನು ನಾನು ಮಂಡಿಸಬಯಸುತ್ತೇನೆ:
೧)ನೀಡ್‍ಹ್ಯಾಮನ ಪ್ರಶ್ನೆಗೆ ಪ್ರತಿಯಾಗಿ ಕೃತಿಯಲ್ಲಿ ಹಲವಾರು ಸಾಂಪ್ರದಾಯಿಕ ಕಾರಣಗಳನ್ನು ಪಟ್ಟಿಮಾಡಲಾಗಿದೆಯಾದರೂ, ಆ ಪಟ್ಟಿಯಲ್ಲಿ ಲುಪ್ತವಾದ ಅಧ್ಯಯನಯೋಗ್ಯವಾದ, ಜ್ಞಾನಶಾಸ್ತ್ರೀಯ ಪ್ರಶ್ನೆಯೊಂದಿದೆ. ಭಾಷಾಶಾಸ್ತ್ರದ ನೆಲೆಯಿಂದಲೂ ಜೊಸೆಫ್ ನೀಡ್‍ಹ್ಯಾಮ್‍ನ ಪ್ರಶ್ನೆಯನ್ನು ಪರಿಶೀಲಿಸುವ ಪ್ರಯತ್ನಗಳಾಗಿವೆಯೆ? ಈ ಕುರಿತ ಅಧ್ಯಯನದ ಅಗತ್ಯದ ಹಿಂದೆ ಕೆಲವು ಆಧಾರಪೂರಿತ ತರ್ಕಗಳಿವೆ:
ಪಾಣಿನಿಯು ಸಂಗ್ರಹಿಸಿದ `ಅಷ್ಟಾಧ್ಯಾಯಿ' ಭಾರತೀಯ ಬೀಜಗಣಿತಕ್ಕೆ ಮಾತ್ರ ಪ್ರೇರಣೆಯಾಗದೇ ಆಧುನಿಕ ಶಿಷ್ಟ ಭಾಷಾ ಸಿದ್ಧಾಂತಗಳಿಗೂ (formal language theory), ಕಂಪ್ಯೂಟರ್ ವಿಜ್ಞಾನದ `ಅಟೋಮಾಟ' ಕ್ಕೆ ಸಂಬಂಧಿಸಿದ ವಿಷಯಗಳಿಗೂ ಪ್ರೇರಣೆಯಾಗಿದೆ. ಇವೇ ವಿಷಯಗಳು ಮುಂದೆ ಲೇಖಕರು ಸೂಚಿಸುತ್ತಿರುವ ವೂಲ್ಫಾರ್ಮನ ನವ-ವಿಜ್ಞಾನಕ್ಕೂ ಕುಮ್ಮಕ್ಕು ಕೊಟ್ಟಿವೆ ಎಂಬುದು ವಿಜ್ಞಾನ ಕ್ಷೇತ್ರದವರಿಗೆಲ್ಲ ವಿದಿತ ಸಂಗತಿ. ಇನ್ನೊಂದು ಮಗ್ಗುಲಿನಿಂದ ನೋಡುವುದಾದರೆ, ಭಾಷೆಗಳು ವಾಸ್ತವವನ್ನು ಗ್ರಹಿಸುವ ರೀತಿ ವಿಭಿನ್ನ ನಾಗರೀಕತೆಗಳನ್ನು ರೂಪಿಸಿದೆ ಎಂಬ ಪಶ್ಚಿಮದಿಂದಲೇ ಬಂದ ಸಪೀರ್ ವೋರ್ಫನ ಚಿಂತನೆಯನ್ನು ಈ ಹಿನ್ನೆಲೆಯಲ್ಲಿ ಪುನರ್-ಪರಿಶೀಲಿಸಬಹುದಾಗಿದೆ. ಆಧುನಿಕ-ವಿಜ್ಞಾನದ ಪರಿಕಲ್ಪನೆಗಳನ್ನು ದೇಶೀ ಭಾಷೆಗಳಿಗೆ ಭಾಷಾಂತರಿಸುವಾಗ ಸಹಜವಾಗಿ ಸಂವೇದನಾಶೀಲ ಭಾಷಾಂತರಕಾರನಿಗೆ ಈ ಪ್ರಶ್ನೆಗಳು ಹುಟ್ಟುತ್ತವೆ. ಟ್ಯೂಟನಿಕ್, ಆಂಗ್ಲೋ-ಸ್ಯಾಕ್ಸನ್ ಭಾಷೆಗಳಿಗೆ ವಾಸ್ತವನ್ನು ಗ್ರಹಿಸುವಲ್ಲಿನ ಬಿಕ್ಕಟ್ಟೇ(?) ವೈಜ್ಞಾನಿಕ ಪ್ರಗತಿಗೆ ಕಾರಣ, ಪ್ರಪಂಚದ ದಕ್ಷಿಣದ ಭಾಷೆಗಳಲ್ಲಿನ ಬಿಕ್ಕಟ್ಟುಗಳಿಗೆ ಆಸ್ಪದಕೊಡದ ಗುಣವೊಂದು ಹಿನ್ನೆಡೆಗೆ ಕಾರಣ ಎಂಬ ಹಳೆಯ ಚರ್ಚೆಯೊಂದು ವೋರ್ಫನ ವಿಚಾರಗಳಿಗೆ ಪೂರಕವಾಗಿದೆ. ಬೆಂಜಮಿನ್ ವೋರ್ಫ್ ತನ್ನ ಅಧ್ಯಯನಕ್ಕೆ ಆಯ್ದುಕೊಂಡದ್ದು `ಹೋಪಿ' ಎಂಬ ಅಮೇರಿಕನ್ ಮೂಲನಿವಾಸಿಗಳ ಸಂಸ್ಕೃತಿಯನ್ನು. `ಹೋಪಿ'ಯ ಭಾಷೆಯಲ್ಲಿ ಭೂತ-ವರ್ತಮಾನ-ಭವಿಷ್ಯಗಳನ್ನು ಬೇರ್ಪಡಿಸುವ ಪದಗಳಿಲ್ಲವಾದ್ದರಿಂದ ಅವರ ಕಾಲದ ಪರಿಕಲ್ಪನೆಯು ಭಿನ್ನವಾಗಿರಬಹುದೆಂದೇ ವೋರ್ಫ್-ನ ತರ್ಕವಾಗಿತ್ತು. ಭಾರತೀಯ ಭಾಷೆಗಳಿಗೆ ಬಂದರೆ ಅಣು, ಪರಮಾಣು, ಬೆಳಕು, ಕ್ಷೇತ್ರ ಈ ರೀತಿಯ ವಸ್ತುವಿನ ಪಾರಭೌತಿಕ ಮಗ್ಗುಲನ್ನು ಬೇರ್ಪಡಿಸಿ ನೋಡದೇ ಇರುವ ಗುಣ. ಸಮಕಾಲೀನ ಆಧುನಿಕ ಸಂದರ್ಭದಲ್ಲಿ `ಆಲೋಚನೆ'ಗಳನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ `ಭಾಷಾಂತರಿ'ಸುವ ಕೆಲಸದಲ್ಲಿ ನಾವು ಹೆಚ್ಚು ನೈಪುಣ್ಯ ಸಾಧಿಸಿರುವಂತೆ ತೋರುತ್ತಿದೆಯಾದರೂ, ನೀಡ್‍ಹ್ಯಾಮ್‍ನ ಪ್ರಶ್ನೆಯೆತ್ತುತ್ತಿರುವ ಕಾಲಕ್ಕೆ ಸಂಬಂಧಪಟ್ಟಂತೆ ವೋರ್ಫ್-ನ ವಿಚಾರಗಳು ಸುಲಭವಾಗಿ ತಳ್ಳಿಹಾಕುವಂಥವುಗಳಲ್ಲ ಎಂಬುದನ್ನು ಗಮನಿಸಬೇಕು. ಇಲ್ಲಿ ನೀರ್ಣಾಯಕವಾಗಿ ಏನನ್ನೂ ಹೇಳದೇ, ನಮ್ಮ ಪೂರ್ವ ನಿಶ್ಚಿತ ನೀರ್ಣಯಗಳ ಜಿಗಿತಕ್ಕೆ ತಕ್ಕ ಅಂಶಗಳನ್ನು ಆಯುವ ದುರಭ್ಯಾಸಕ್ಕೆ ಪ್ರತಿರೋಧವೊಡ್ಡುತ್ತ ಎಚ್ಚರದ ಅಧ್ಯಯನಗಳಿಗೆ ಆಹ್ವಾನ ನೀಡುವುದು ಮಾತ್ರ ಇಲ್ಲಿನ ಉದ್ದೇಶವಾಗಿದೆ.
೨)ಆಧುನಿಕ ವಿಜ್ಞಾನವನ್ನೇ ಕುರಿತ ಅಧ್ಯಯನಕ್ಕೆ ಸಂಬಂಧಿಸಿದಂತೆ ಪಶ್ಚಿಮ-ಪೂರ್ವಗಳೆಲ್ಲೆಡೆಯಲ್ಲೂ, ಸಕಲ ಜ್ಞಾನ ಕ್ಷೇತ್ರಗಳಲ್ಲೂ, ರಾಜಕೀಯ ವಲಯಗಳಲ್ಲೂ ಅಪಾರ ವಿವಾದ ಸೃಷ್ಟಿಸಿರುವ ಥಾಮಸ್ ಕುಹ್ನನ ಚಿಂತನೆಯೊಂದು ಹೀಗಿದೆ: ಆಧುನಿಕ ವಿಜ್ಞಾನದ ಚರಿತ್ರೆಯು ಕೆಲವು ವಿಶಿಷ್ಟ `ಪ್ಯಾರಡೈಮ್'ಗಳ ಸರಣಿಯಿಂದ ನಿರ್ಮಿತವಾಗಿದೆ. ಪ್ರತಿಯೊಂದು `ಪ್ಯಾರಡೈಮ್' ಕೆಲವು ವಿಶಿಷ್ಟ `ನಂಬಿಕೆ' `ಆಚರಣೆ'ಗಳ ಆಧರಿಸಿರುತ್ತದೆ. ಕುಹ್ನ್‍ನ ಈ ಪ್ಯಾರಡೈಮ್ ಪರಿಕಲ್ಪನೆಯನ್ನು ಕೆಲ ಎಡಪಂಥೀಯರು ಅರ್ಥೈಸುವ ರೀತಿ ಪ್ರತಿಗಾಮಿಗಳಿಗೆ, ಮೂಢನಂಬಿಕೆಯ ಆರಾಧಕರಿಗೂ ಅಸ್ತ್ರ ಕೊಟ್ಟಂತಾಗಿದೆ ಎಂದು ಪಶ್ಚಿಮ-ನೆಲೆಯ ಅಭಿಪ್ರಾಯವಾಗಿದೆ. ಇತ್ತೀಚೆಗೆ ಭಾರತೀಯ ಸಾಂಸ್ಕೃತಿಕ ನೆಲೆಯಿಂದ ವಿಜ್ಞಾನವನ್ನು ಚರ್ಚಿಸುವರೆಲ್ಲರೂ ಈ ಆರೋಪವನ್ನು ಎದುರಿಸಬೇಕಾದ ವಿಚಿತ್ರ ದುರಂತ ಸ್ಥಿತಿಯೊಂದು ಒದಗಿಬಂದಿದೆ. ಅನ್ಯ ಸಂಸ್ಕೃತಿಗಳಿಂದ ಪ್ರೇರಿತ ಜ್ಞಾನಶಾಖೆಗಳ ಬಗೆಗೆ, ಸತ್ಯದ ಬಹುತ್ವದ ಬಗೆಗೆ, ಆಧುನಿಕ ವಿಜ್ಞಾನದಿಂದ ಸಂವೇದನಾಶೀಲತೆಯನ್ನು ಕೋರುವ, ಪ್ರಚೋದಿಸುವ ತೀವ್ರವಾದ ಚರ್ಚೆಯೊಂದು ಎಪ್ಪತ್ತರ ದಶಕದಲ್ಲಿ ಕುಹ್ನ್, ಫೇಯರಬೆಂಡ್‍ರಂಥವರ ಕೃತಿಗಳಿಂದ ಹುಟ್ಟಿತು. ಚರ್ಚೆಯ ಹೆಚ್ಚಿನ ವಿವರಗಳು ಸದ್ಯದ ಪ್ರತಿಕ್ರಿಯೆಯ ಇತಿಮಿತಿಯ ಆಚೆಗಿನದು. ಈ ಹಿನ್ನೆಲೆಯಲ್ಲಿ, ಪ್ರಸ್ತುತ ಪುಸ್ತಕದ ಮಹತ್ವವಿರುವುದು, ಸೂಚ್ಯವಾಗಿ ಪ್ರತಿಗಾಮಿಗಳಿಗೆ ಎಲ್ಲೂ ಆಸ್ಪದಕೊಡದೇ, ವಿಜ್ಞಾನ ಕ್ಷೇತ್ರದೊಳಗಿನ ಈ ಧೀಮಂತ ಲೇಖಕರು ವಿಜ್ಞಾನ ಮತ್ತು ಸಂಸ್ಕೃತಿಯ ಪ್ರಶ್ನೆಯನ್ನು ನಿರ್ವಹಿಸುವ ರೀತಿ ಭಾರತೀಯ, ಪಾಶ್ಚಾತ್ಯ ಪರಂಪರೆಗಳೆರಡರಲ್ಲೂ ಸಂವೇದನಾಶೀಲರಾದವರು ಒಪ್ಪುವಂಥದ್ದಾಗಿದೆ. ವಿಜ್ಞಾನವನ್ನು ಮೇಲೆ ವಿವರಿಸಿದ ರೀತಿಯ `ಸರಣಿ'ಯಾಗಿ ನೋಡದೇ, ಪುಸ್ತಕದ ಲೇಖಕರು ವ್ಯಾಖ್ಯಾನಿಸಿದಂತೆ ವಿಜ್ಞಾನವನ್ನು ಒಂದು ವ್ಯವಸ್ಥಿತ ಜ್ಞಾನ ಸಮೂಹವಾಗಿ ನೋಡುವ ಮೂಲಕ ಬಹುಶಃ ಪ್ರತಿಗಾಮಿಗಳು ಸೃಷ್ಟಿಸುವ ಗೊಂದಲದಿಂದ ಪಾರಾಗಬಹುದಾಗಿದೆ.
ವಿಜ್ಞಾನ ಒಂದು ಸಮಗ್ರ `ನಿರಪೇಕ್ಷ ವಾಸ್ತವ' (objective reality )ವನ್ನು ಗ್ರಹಿಸುವ ಶಕ್ತಿಯನ್ನು ಹೊಂದಿದೆಯೆ ಇಲ್ಲವೇ ಎಂಬ ವಿವಾದ ಮಾನವಕುಲದಲ್ಲಿ ಶತಮಾನದಿಂದಲೂ ನಡೆಯುತ್ತ ಬಂದಿದೆ ಮತ್ತು ಇತ್ತೀಚೆಗೆ ಮನುಕುಲದ ನಂಬಿಕೆ ಅದರ ಇತಿಮಿತಿಗಳತ್ತಲೇ ವಾಲುತ್ತಿದೆಯಾದರೂ, ಅದು ನಮಗೆ `ಸ್ಥಳೀಯ'ವೆನ್ನಬಹುದಾದ ಸತ್ಯಗಳನ್ನು, ಕಾಣ್ಕೆಗಳನ್ನು ಕಾಣಿಸುತ್ತಲೇ ಬಂದಿದೆ.
ಪ್ರಸ್ತುತ ಸಂಗ್ರಹದ ಎರಡನೇ ಲೇಖನ ವಿಶೇಷವಾಗಿ ಗಣಿತದ ಸಾಂಸ್ಕೃತಿಕ ಪ್ರಭೇದಗಳತ್ತ ಗಮನಹರಿಸುತ್ತದೆ. ಮುಖ್ಯವಾಗಿ ಖಗೋಳಶಾಸ್ತ್ರವು ಎಲ್ಲ ಸಂಸ್ಕೃತಿಗಳಿಗೂ ಸಾಮಾನ್ಯವಾದ ವಾಸ್ತವವನ್ನು ಎರಡು ಮೂಲವಾಕ್ಯಗಳು ಮತ್ತು ದೃಗ್ಗಣಿತ ಎಂಬ (ಸ್ಥೂಲವಾಗಿ ವಿಭಿನ್ನ ಎನ್ನಬಹುದಾದ) ಮಾರ್ಗಗಳಿಂದ ಹೇಗೆ ಗ್ರಹಿಸಹೊರಟಿವೆ ಎಂಬುದನ್ನು ಟಾಲೆಮಿ ಮತ್ತು ಆರ್ಯಭಟರ ಉದಾಹರಣೆಗಳ ಮೂಲಕ ಓದುಗರ ಮುಂದಿಟ್ಟಿದ್ದಾರೆ. ಪಶ್ಚಿಮದ ನಿಖರ ವಿಜ್ಞಾನದ ಶಕ್ತಿಶಾಲಿ ದರ್ಶನದ ಹಿಂದೆ ಬೀಜಗಣಿತ ಮತ್ತು ರೇಖಾಗಣಿತದ ಸಂಲಗ್ನತೆಯೇ ಪ್ರಮುಖ ಕಾರಣವೆಂದು ಲೇಖಕರು ಪ್ರತಿಪಾದಿಸುತ್ತಾರೆ. ಲೇಖಕರು ಗಾಡೆಲ್‍ನ ಚಿಂತನೆಯ (ಅದು ಹೀಗಿದೆ: ಮೂಲವಾಕ್ಯಗಳ ಯಾವುದೇ ಒಂದು ಶಿಷ್ಟ ವ್ಯವಸ್ಥೆಯು ನಿಯಮಿತವಾಗುತ್ತ ಪರಿಪೂರ್ಣವಾಗಿರದು. ಅಂದರೆ ಕೆಲವು `ಸತ್ಯ'ಗಳು ಆ ಶಿಷ್ಟವ್ಯವಸ್ಥೆಯ ಚೌಕಟ್ಟಿನಲ್ಲಿ ಸಾಧಿಸಲಾಗದೇ ಹೊರ ಉಳಿಯುವ ಸಾಧ್ಯತೆ ಇರುತ್ತದೆ) ಹಿನ್ನೆಲೆಯಲ್ಲಿ ಈ ಎರಡು ಆಲೋಚನಾಕ್ರಮಗಳನ್ನು ಇನ್ನಷ್ಟು ಸ್ಪಷ್ಟವಾಗಿ ವಿವರಿಸುವ ಪ್ರಯತ್ನ ಮಾಡಿದ್ದರೆ ಹೆಚ್ಚು ಉಪಯುಕ್ತವಾಗುತ್ತಿತ್ತು ಎನಿಸುತ್ತದೆ.
ಈ ಎರಡನೇಯ ಲೇಖನದಲ್ಲಿ ವಿಶೇಷವಾಗಿ ಕನ್ನಡ ಸಾಹಿತ್ಯಾಸಕ್ತರಿಗೆ ಸ್ವಾರಸ್ಯಕರವೆನಿಸುವ ಮತ್ತೊಂದು ಸಂಗತಿಯಿದೆ. ಅದು ಕೆಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ಪೀಠಿತನಾಗಿದ್ದ ಜೇಮ್ಸ್ ಲೈಟ್‍ಹಿಲ್, ನ್ಯೂಟನ್ನನ ಬಲವಿಜ್ಞಾನದ ತತ್ವಗಳನ್ನು ಅನುಸರಿಸುತ್ತಾ ಬಂದ ವಿಜ್ಞಾನ ಸಮುದಾಯದ ಪರವಾಗಿ ೧೯೮೬ರಲ್ಲಿ ಕ್ಷಮಾಪಣೆ ಕೇಳಿದ್ದು. ಸ್ವತಃ ನ್ಯೂಟನ್ ಮತ್ತು ಡೆಕಾರ್ಟೆ ಇಂಥಾ ಕ್ಷಮಾಪಣೆಯೊಂದನ್ನು ಕೇಳಬೇಕೆಂದು ೧೯೮೧-ರ ಹೊತ್ತಿಗಾಗಲೇ ಕನ್ನಡಿಗರ ನಡುವೆ ಇಲ್ಲವಾಗಿದ್ದ ಕವಿ ಬೇಂದ್ರೆಯ ಒತ್ತಾಯವೂ ಆಗಿತ್ತೆಂದು ಇತ್ತೀಚೆಗೆ ಜಯಂತ್‍ರ `ಬೇಂದ್ರೆ ಮಾಸ್ತರ್' ಕಾರ್ಯಕ್ರಮದಲ್ಲಿ ಶ್ರೀ ವಸಂತ್ ದೀವಾನ್‍ಜಿ ಅವರು ಹೇಳುತ್ತಿದ್ದುದು ವೀಕ್ಷಕರಿಗೆ ನೆನಪಿರಬಹುದು. ಸ್ವತಃ ಕಲೆ, ಮಾನವೀಯ ವಿಷಯಗಳತ್ತ ಒಲವಿದ್ದ ಜೇಮ್ಸ್-ಲೈಟ್‍ಹಿಲ್‍ನಿಂದ ಅಂತಹ ಹೇಳಿಕೆ ಬಂದಿದ್ದರೆ ಆಶ್ಚರ್ಯಪಡಬೇಕಿಲ್ಲ. ಬಹುಶಃ ೭೦-ರ ದಶಕದ ಪೋಸ್ಟ್-ಮಾಡರ್ನಿಸ್ಟ್ ಚಿಂತಕರಲ್ಲಿ (ಆಗ ಅಂಥವರನ್ನು ನಾವು ಆ ಹೆಸರಿನಿಂದ ಕರೆಯದೇ ಹೋಗಿದ್ದಿರಬಹುದು) ಇಂಥ ಒಂದು ಬೇಡಿಕೆಯ ಕುರಿತು ಚರ್ಚೆ ನಡೆದಿರಬಹುದು ಮತ್ತು ಹಲವಾರು ಚಿಂತಕರು, ವಿಜ್ಞಾನಿಗಳ ಒಡನಾಟವಿದ್ದ ಬೇಂದ್ರೆ ಕೂಡಾ ಅಂಥ ಒಂದು ಚರ್ಚೆಯಲ್ಲಿ ಪಾಲುಗಾರರಾಗಿದ್ದಿರಬಹುದು. ಆಧುನಿಕ ವಿಜ್ಞಾನದ ಸ್ವರೂಪದ ಕುರಿತ ತೀರ್ಪುಗಾರರಾಗಿ ಬೇಂದ್ರೆಯವರನ್ನು ಕಾಣುವುದು ಅವರವರ ಇತ್ಯರ್ಥಕ್ಕೆ ಬಿಟ್ಟದ್ದಾದರೂ, ಈ ನಿದರ್ಶನ ಕವಿವರ್ಯರಿಗೆ ತಮ್ಮ ನೆಲೆಯ ಮೇಲಿದ್ದ ನಂಬಿಕೆಯ ಸ್ಥಿರತೆಗೆ ದ್ಯೋತಕವಾಗಿದೆ.
ಪುಸ್ತಕದ ಮೂರನೇ ಲೇಖನ ವಿಜ್ಞಾನದ `ಆಚೆ'ಗಿನ ಹೆಚ್ಚು ಪಾರಭೌತಿಕ ವಿಷಯವನ್ನು ಕುರಿತದ್ದು. ವಿಜ್ಞಾನದ ಸಲಕರಣೆಗಳು ಬಹುಶಃ ಗ್ರಹಿಸಲಿಕ್ಕಾಗದ ಆದರೆ ಇರಬಹುದಾದ `ನಿರಪೇಕ್ಷ ವಾಸ್ತವ' ಎಂಬುದಕ್ಕೆ ತದ್ವಿರುದ್ದವಾದ ಮತ್ತು ಸುಲಭವಾಗಿ ವ್ಯಕ್ತಪಡಿಸಲಾಗದ ಸಂಗತಿಗೆ ಸಂಬಂಧಪಟ್ಟಿದೆ. ಒಂದು ಸನ್ನಿವೇಶ, ಸಂದರ್ಭದಲ್ಲಿ ಅಪಾರವಾದ ಸಾರ್ವಜನಿಕ, ಖಾಸಗೀ ಜ್ಞಾನ ವ್ಯಕ್ತಿಯ ಎದುರಿಗೆ ಲಭ್ಯವಿದ್ದಾಗ್ಯೂ, ಆ ವ್ಯಕ್ತಿಯು ಭವಿಷ್ಯದ ತನ್ನ ಕ್ರಿಯೆಯ ಕುರಿತು ಗೊಂದಲಿತನಾಗುವ ಸಮಸ್ಯೆಯೇ ವಿಜ್ಞಾನದ ಗ್ರಹಿಕೆಯಾಚೆಗಿನ ಮೂಲಭೂತ ಸಮಸ್ಯೆಯೆಂಬುದನ್ನು, ಲೇಖಕರು ಕೆಲವು ಭಾರತೀಯ ಪಠ್ಯಗಳನ್ನು, ಪ್ರಮುಖವಾಗಿ ಭಗವದ್‍ಗೀತೆಯೀನಿತ್ತಿಕೊಂಡು ಚರ್ಚಿಸಿದ್ದಾರೆ. ಬೌದ್ಧಿಕ ದರ್ಪದ ಮನುಷ್ಯ ಆಂತರಿಕ ಸ್ವಾಸ್ಥ್ಯ, ಸೌಂದರ್ಯವನ್ನು ಹೋಂದಿದವನಾಗಿರಬೇಕೆಂಬ ಕಾಳಜಿಗೆ ಈ ಪ್ರಶ್ನೆಯು ಸಂಬಂಧಿತವಾದದ್ದು ಎಂಬ ದೃಷ್ಟಿಯಿಂದಲೂ ಈ ಲೇಖನವನ್ನು ನೋಡಬಹುದು.
ಮೊದಲ ಲೇಖನದ ಕೊನೆಯಲ್ಲಿ ಲೇಖಕರು ಆಶಿಸುವಂತೆ ಕಳೆದ ಶತಮಾನದಿಂದೀಚೆ ಪ್ರಸ್ತುತದಲ್ಲಿ ನಡೆಯುತ್ತಿರುವ ಪಶ್ಚಿಮದ ಜೊತೆಗಿನ ಸಂವಾದದಿಂದಾಗಿ ಪೂರ್ವದ ನೆಲದಲ್ಲಿ ಆಕ್ರಮಣಕಾರಿ ಅಲ್ಲದ, ಪ್ರತಿಗಾಮಿಯೂ ಅಲ್ಲದ ವಿಜ್ಞಾನ ಮಾರ್ಗವೊಂದು ಭವಿಷ್ಯದಲ್ಲಿ ಹುಟ್ಟೀತಾದರೆ, ಹುಟ್ಟಿಸಬೇಕಾದರೆ ಅದು ಬೇಡುವ ಸೃಜನಶೀಲತೆ, ಸಂಕಲ್ಪ ಶಕ್ತಿ ಅಪಾರವಾದದ್ದು.
ಉಲ್ಲೇಖಗಳು
------------
೧. ಬೆಂಜಮಿನ್ ವೋರ್ಫ್, `ಲ್ಯಾಂಗ್ವೇಜ್, ಥಾಟ್ ಆಂಡ್ ರಿಯಾಲಿಟಿ - ಸಿಲೆಕ್ಟೆಡ್ ರೈಟಿಂಗ್ಸ್', ೧೯೫೬
೨. ಥಾಮಸ್ ಕುಹ್ನ್, `ಸ್ಟ್ರಕ್ಚರ್ ಆಫ್ ಸೈಂಟಿಫಿಕ್ ರೆವಲ್ಯೂಷನ್ಸ್', ೧೯೬೨
೩. ಫೇಯರಬೆಂಡ್, `ಅಗೇನ್ಸ್ಟ್ ಮೆಥಡ್', ೧೯೭೫
೪. ಮೀರಾ ನಂದಾ, `ಪೋಸ್ಟ್-ಮಾಡರ್ನಿಸ್ಮ್, ಹಿಂದೂ ನ್ಯಾಶನಲಿಸ್ಮ್ ಆಂಡ್ ವೇದಿಕ್ ಸಾಯನ್ಸೆಸ್', ಫ಼್ರಂಟ್‍ಲೈನ್, ಡಿಸೆಂಬರ್ ೨೦, ೨೦೦೩
-ಸುದರ್ಶನ
ಕೃಪೆ: `ದೇಶಕಾಲ' ಕನ್ನಡ ತ್ರೈಮಾಸಿಕ ಸಾಹಿತ್ಯ-ಸಾಂಸ್ಕೃತಿಕ ಪತ್ರಿಕೆ