ಸೃಜನ-ಕನ್ನಡಿಗ (sRujana-kannaDiga)

ಸಹೃದಯ, ವಿಶ್ವಾಸ ಮತ್ತು ಸೃಜನಶೀಲತೆ: Creator of this blog is Sudarshan. He has interest in Engineering research and Kannada writing. As a part of the process of Kannada writing, this blog will pay extra attention to cultural and philosophical aspects of Mathematics, Science, History, Language etc.

Name:
Location: Mysore, Karnataka, India

Thursday, September 28, 2006

ಲಗೇ ರಹೋ ಮುನ್ನಾಭಾಯಿ: ಒಂದು ವಾರೆ ನೋಟ

[ಈ ಲೇಖನ ದಿನಾಂಕ ೧-೧೦-೨೦೦೬ರ ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾಗಿದೆ. ಉದಯವಾಣಿಯ ಲಿಂಕ್ ಇಲ್ಲಿದೆ.]

ನಾನು ಈ ಸಿನೆಮಾ ನೋಡಿದ್ದು ಮುಂಬೈ-ನ ಕಾಂಜೂರು ಉಪನಗರದ ರೈಲುನಿಲ್ದಾಣದ ಬಳಿಯ ಮಲ್ಟಿಪ್ಲೆಕ್ಸ್ ಒಂದರಲ್ಲಿ. ರೈಲು-ನಿಲ್ದಾಣದ ಸುತ್ತಲಿನ ಪ್ರದೇಶ ಮುಂಬೈನ ಹಲವು ಪ್ರದೇಶಗಳಂತೇ ಹಲವಾರು ಕಾಂಟ್ರ್ಯಾಸ್ಟ್-ಗಳಿಂದ ತುಂಬಿರುವಂಥದ್ದು. ಹಲವಾರು ನಮೂನಿಯ ಅಂಗಡಿಗಳು, ತರಕಾರಿ ಮಾರುವವರು, ನಿಂಬೂಪಾನಿ ಮಾರುವವರು, ಪಾನಿಪುರಿಯವರು, ಅಟೋ-ನಿಲ್ದಾಣ, ಪುರಾತನ ಕಾಲದ್ದೆನಿಸುವ ಖಾರಪುಡಿ, ಮಸಾಲೆಪುಡಿ ಕುಟ್ಟುವ ಕಾರ್ಖಾನೆ, ನಿಲ್ದಾಣಕ್ಕೆ ಹೋಗಿಬರುವ ಜನರು, ಅಶಿಸ್ತು, ಗಜಿಬಿಜಿ, ಧೂಳು, ಹೊಗೆ, ಕೊಳಚೆ. ಇವೆಲ್ಲವುಗಳ ಮಧ್ಯ ಒಂದೆರಡು ಲಕಲಕಿಸುವ ಹೈ-ರೈಸ್ ಅಪಾರ್ಟ್ಮೆಂಟುಗಳು ಮತ್ತು ಮುಲ್ಟಿಪ್ಲೆಕ್ಸ್ ಹೊಂದಿರುವ ಮಾಲ್. ಏರ್ ಕಂಡೀಶನ್ಡ್ ಮಲ್ಟಿಪ್ಲೆಕ್ಸ್-ನ ಹೊರಗಿರುವವವನಿಗೆ ಹೇಗಾದರೂ ಮಾಡಿ ಮಲ್ಟಿಪ್ಲೆಕ್ಸ್-ಒಳಗೆ ಸೇರಿ ಬಿಗಿಯಾದ ಉಡುಪು ಧರಿಸಿದ ಆ ಯುವಜೋಡಿಯಂತೆ ಝಂ ಎಂದು ಸಿನೆಮಾ ನೋಡುವ ಆಸೆ, ಆತುರ. ಮಲ್ಟಿಪ್ಲೆಕ್ಸ್-ನಲ್ಲಿರುವವರಿಗೆ ಸುತ್ತಲಿನ ಆ ಅಸಹ್ಯದ ಬಗ್ಗೆ ಅನುಕಂಪ, ಕನಿಕರ, ಅಸಡ್ಡೆ, ನಮ್ಮಿಂದ ಸಾಧ್ಯವಾಗುವುದಾದರೆ ಇದನ್ನೆಲ್ಲ ಬದಲಿಸಿಬಿಡಬೇಕೆಂಬ ರೋಷ ಇವುಗಳಾನ್ನು ಹೊತ್ತ ಸ್ಥಿತಿವಂತರ ಕಲಸುಮೇಲೊಗರದ ಭಾವ.

ನಮ್ಮ ಇಂಥಾ ಒಂದು ಎಕ್ಸಿಸ್ಟೆನ್ಷಿಯಲ್ ಸ್ಥಿತಿಯನ್ನು ಮನಸ್ಸಿನಲ್ಲಿಟ್ಟುಕೊಂಡು `ಲಗೇ ರಹೋ ಮುನ್ನಾಭಾಯಿ'ಯನ್ನು ಪರಿಶೀಲಿಸೋಣ.

ಮುನ್ನಾಭಾಯಿ ಮತ್ತು ಸರ್ಕೇಷ್ವರ್(ಸರ್ಕೀಟ್) ನಿತ್ಯ ಬದುಕುವ ಪರಿಸರ 'ಅಸಹ್ಯ'ವಾದ ಸ್ಲಮ್ಮಿಗೆ ಸೇರಿದ್ದಾದರೆ, ನಾಯಕಿ-ಯ ಪರಿಸರ ಕೆಲವರಿಗೆ ಮಾತ್ರ ಕೈಗೆಟಕುವ ವೊರ್ಲ್ದ್‍ಸ್ಪೇಸ್ ಸೆಟಲೈಟ್ ರೇಡಿಯೋ-ದ ಸ್ಟುಡಿಯೋದ ಹವಾನಿಯಂತ್ರಿತ ಪರಿಸರ. ಸಿನೆಮಾ ಹೇಳುವ ಪ್ರಕಾರ ನಾಯಕ ನಾಯಕಿಯ ಪ್ರೀತಿ ಪಡೆಯಲು ಬಳಸುವ ಮಾರ್ಗ 'ದಾದಾಗಿರಿ'ಯಾಗದೇ 'ಗಾಂಧಿಗಿರಿ'ಯಾಗಿರುತ್ತದೆ. ಇದು ಬಹುಮಟ್ಟಿಗೆ ನಿಜವೂ ಹೌದು. ಅಂತೆಯೇ ಸಿನೆಮಾ ನಮ್ಮ ನಿಮ್ಮೆಲ್ಲರ ಮನಸ್ಸನ್ನು ಗೆಲ್ಲುತ್ತದೆ.

ಈ ಸಿನೆಮಾದ ಹಿಂದಿನ ಅವತರಣಿಕೆಯಾದ 'ಮುನ್ನಾಭಾಯಿ ಎಂ.ಬಿ.ಬಿ.ಎಸ್.', ವಸಾಹತುಶಾಹಿ ನಿರ್ಮಿಸಿರುವ ವ್ಯವಸ್ಥೆಯ ಲೋಪದೋಷಗಳಿಗೆ (ಆಧುನಿಕ ವೈದ್ಯಕೀಯ ವ್ಯವಸ್ಥೆಯಲ್ಲಿ ವಿದ್ಯಾರ್ಜನೆಗೆ ವ್ಯವಸ್ಥೆಯ ಅಂಚಿನಲ್ಲಿರುವ ಮುನ್ನಾಭಾಯಿ ಅಂಥವರಿಗೆ ಜಾಗವಿಲ್ಲ), ಸಿನೆಮಾ ಕೊಡುವ ಪರಿಹಾರವಾಗಲಿ, ಸಿನೆಮಾದ ಒಟ್ಟೂ ನಿರೂಪಣೆಯಾಗಲಿ `ನಾಗರಿಕ' ಸಮಾಜ ಒಪ್ಪುವಂಥದ್ದಾಗಿರಲಿಲ್ಲ.

ಆದರೆ `ಲಗೇ ರಹೋ..' ತೋರಿಸುವ ಪರಿಹಾರ ಮಾರ್ಗವೂ, ಸಿನೆಮಾದ ಒಟ್ಟೂ ನಿರೂಪಣೆಯೂ ಹೆಚ್ಚು ಆರೋಗ್ಯಕರವಾಗಿದೆ. ಅಂತೆಯೇ ತುಸು ಹೆಚ್ಚು ಗಂಭೀರ ವಿಮರ್ಶೆಗೆ ಅರ್ಹವಾಗಿದೆ. ತತ್‍ಕ್ಷಣಕ್ಕೆ ಹೊಳೆವ ಕೆಲವು ಉತ್ತಮ ಅಂಶಗಳು ಇವು. ಮುನ್ನಾ ಮತ್ತು ಸರ್ಕೀಟ್ ನಗರೀಕರಣ ಹಿನ್ನೆಲೆಯಲ್ಲಿ ನೆಲೆಯಿಲ್ಲದಂತಾಗಿರುವ ವೃದ್ಧರಿಗೆ ಭೂಮಾಲೀಕರಿಂದ ಅಹಿಂಸೆ ಮತ್ತು ಪ್ರೀತಿಯ ಮಾರ್ಗದಿಂದಲೇ ಆಶ್ರಯ ಮರಳಿಗಳಿಸಿಕೊಡುತ್ತಾರೆ. ತಂದೆಯ ಹಣ ಕಳೆದ ಮಗನನ್ನು ಟ್ಯಾಕ್ಸಿ ನಡೆಸುವ ವೃತ್ತಿಮಾರ್ಗಕ್ಕೆ ಹಚ್ಚುತ್ತಾರೆ. (ಸ್ವತಃ ಅವರಿಬ್ಬರು ಅಷ್ಟೇ ಗಂಭೀರವಾಗಿ ಯಾವುದೇ ಪ್ರಾಮಾಣಿಕ ವೃತ್ತಿಗೆ ತತ್‍ಕ್ಷಣಕ್ಕೆ ಪ್ರವೃತ್ತರಾಗುದಿಲ್ಲ.
ಆ ಮಾತು ಬೇರೆ. ನಾಯಕ ನಾಯಕಿಯನ್ನು ಗಾಂಧಿಗಿರಿಯ ಮೂಲಕ ಗೆಲ್ಲಬೇಕು. ಜೊತೆಗೇ ನಮ್ಮನ್ನು ರಂಜಿಸಬೇಕು. ಇದು ಸಿನೆಮಾ. ಇದನ್ನು ಬಿಟ್ಟು ಅವರು ಕದಲುವಂತಿಲ್ಲ). ಸಿನೆಮಾದುದ್ದಕ್ಕೂ ವ್ಯಕ್ತವಾಗುವ ಗಾಂಧಿಯನ್ನು ಪುತ್ಥಳಿಯಿಂದಲೂ, ನೋಟುಗಳಿಂದಲೂ, ರಸ್ತೆಗಳ ನಾಮ ಫಲಕದಿಂದಲೂ, ಕೋರ್ಟು-ಕಚೇರಿಗಳ ಗೋಡೆಯಿಂದಲೂ ಕೆಳಗಿಸಿ ನಮ್ಮ ನಮ್ಮ ಹೃದಯದಲ್ಲಿ ಇಳಿಸಿಕೊಳ್ಳಬೇಕೆಂಬ ಸರಳ ಸಂದೇಶ. ಒಳ್ಳೆಯ ಕೆಲಸ ಮಾಡಿದರೆ ಈ ಜನ ಮುನ್ನಾಭಾಯಿಯನ್ನೂ ಪುತ್ಥಳಿಗೆ ಏರಿಸಿಬಿಡಬಹುದೆಂಬ ವ್ಯಂಗ್ಯದಲ್ಲೂ ವ್ಯಕ್ತವಾಗುವುದೂ ಅದೇ ಸಂದೇಶವೇ! ಈ ಸಂದೇಶದಿಂದ ನಿತ್ಯ ಭಯೋತ್ಪಾದನೆಯ ಇಂದಿನ ದಿನಗಳಲ್ಲಿ ೧೯೯೩ರ ಮುಂಬೈ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಆರೋಪ ಎದುರಿಸುತ್ತಿರುವ ನಟ ಸಂಜಯ ದತ್ತ ಸೇರಿದಂತೆ ನಾವು ನೀವೂ ಪಾಠ ಕಲಿಯುವುದಿದೆ. ಅಂದ ಹಾಗೆ ಆರೋಪ ಸಾಬೀತಾಗದ ಸಂಜಯ ದತ್ತರಿಗಿಂತ ನಾವೂ, ನೀವೂ ಹೆಚ್ಚು ಸಾಧುಗಳು ಎಂದು ಹೇಳುವುದಕ್ಕೆ ನನ್ನ ಬಳಿ ಯಾವ ಆಧಾರಗಳೂ ಇಲ್ಲ. ಗಾಂಧೀವಾದದ ಪ್ರಕಾರ ಪಾಶ್ಚಾತ್ಯ ನಾಗರೀಕತೆಯ ಬೆನ್ನು ಹತ್ತಿರುವ ನಾವೆಲ್ಲರೂ ಪರೋಕ್ಷವಾಗಿ ಭಯೋತ್ಪಾದನೆಯನ್ನು ಪೋಷಿಸುತ್ತಿರುವವರೇ! ಕೆಲವು 'ಪೋಸ್ಟ್‍ಮಾಡರ್ನಿಸ್ಟ್' ಬುದ್ಧಿಜೀವಿಗಳು ಗಾಂಧಿಯನ್ನು ಅನಾಧುನಿಕ ನೆಲೆಯಲ್ಲಿ ರೋಮ್ಯಾಂಟಿಕೀಕರಣಗೊಳಿಸುತ್ತಾ ಎಲ್ಲಾ ಗ್ರಾಮೀಣ (ಮೂಢ)ನಂಬಿಕೆಗಳ ಪರರಂತೆ ಸರಳೀಕರಿಸಿ ಚಿತ್ರಿಸುವುದೂ ಉಂಟು. ಅಂಥವರಿಗೆ ಚಾಟಿಯೇಟು ಕೊಡುವಂತೆ ಇಲ್ಲಿ ಗಾಂಧಿ ಕುಂಡಲಿ-ಕಳಂಕವಿರುವ ವಿವಾಹವನ್ನೂ ಬೆಂಬಲಿಸುವ ಆಧುನಿಕ ವೈಚಾರಿಕರಾಗಿಯೇ ಚಿತ್ರಿತರಾಗಿದ್ದಾರೆ. ಇದೂ ಕೂಡಾ ಸಿನೆಮಾದಲ್ಲಿ ನಾನು ಇಷ್ಟಪಟ್ಟ ಮತ್ತೊಂದು ಅಂಶ. ಗಾಂಧೀಜಿ ಬೆಂಬಲಿಸುತ್ತಿದ್ದ ಇನ್ನೂ ಕೆಲವು ಪ್ರಗತಿಪರ ಅಂಶಗಳನ್ನು ನಿರ್ದೇಶಕರು ತೋರಿಸುವ ಧೈರ್ಯ ಮಾಡಬಹುದಿತ್ತು ಅನಿಸುತ್ತದೆ.

ಇದೇ ಹಿನ್ನೆಲೆಯಲ್ಲಿ ಇನ್ನೊಂದು ಕಾಂಟ್ರ್ಯಾಸ್ಟ್ ಬಗ್ಗೆ ಚರ್ಚಿಸಬಯಸುತ್ತೇನೆ. 'ಲಗೇ ರಹೋ..' ನೋಡುವ ಕೆಲವೇ ದಿನ ಮೊದಲು ರಿತ್ವಿಕ್ ಘಾತಕ್ ಅವರ 'ಸುವರ್ಣರೇಖಾ' ನೋಡುವ ಅವಕಾಶ ಸಿಕ್ಕಿತು. ಸಿನೆಮಾದ ಮೊದಲ ದೃಶ್ಯದಲ್ಲಿ ೧೯೪೭ರ ವಿಭಜನೆಯಿಂದಾಗಿ ಬಂಗ್ಲಾದೇಶದಿಂದ ಬಂಗಾಳಕ್ಕೆ ಹೊಸ ಬದುಕಿನ ಆಸೆ ಹೊತ್ತು ವಲಸೆ ಬಂದ ನಿರ್ವಸತಿಕರೆಲ್ಲಾ ಸೇರಿ ತಮಗಾಗಿ ತಾತ್ಕಾಲಿಕ ವಸತಿ ಮತ್ತು ಶಾಲೆಯೊಂದನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಗಾಂಧೀಯುಗದ ಆದರ್ಶ, ಕನಸು, ಮೌಲ್ಯಗಳನ್ನು ಹೊತ್ತವರು ಅವರು. ದಿನಾಂಕ ಫೆಬ್ರುವರಿ ೧, ೧೯೪೮. ಅಂದಿನ ದಿನ ಪತ್ರಿಕೆ ಮಧ್ಯವಯಸ್ಕ ಶಿಕ್ಷಕನೊಬ್ಬನ ಕೈಯಲ್ಲಿದೆ. ಗಾಂಧೀ ಹತ್ಯೆಯಾದ ಸುದ್ದಿ ಪ್ರಕಟಗೊಂಡಿದೆ. ಪತ್ರಿಕೆ ಕೈಜಾರುತ್ತಿದ್ದಂತೆ ಆತನ ಬಾಯಿಯಿಂದ ಉದ್ಗಾರ ಹೊರಬೀಳುತ್ತದೆ 'ಹೇ ಭಗವಾನ್! ನಾವು ಮೋಸಹೋದೆವು'. ಗಾಂಧೀಯ ರಾಮರಾಜ್ಯದ ಭರವಸೆಯಲ್ಲಿ ಬಂದಿದ್ದ ಅವರಿಗೆ ಭ್ರಮನಿರಸನವಾದ ಚಿತ್ರಣವಿದು. ಕಪ್ಪು-ಬಿಳುಪಿನಲ್ಲಿ ಘಾತಕ್-ರು ಸೆರೆಹಿಡಿಯುವ ಆ ಚಿತ್ರ ಇನ್ನೂ ಮನಸ್ಸಿನಲ್ಲಿದೆ. `ಸುವರ್ಣರೇಖಾ' ಎಂಬ ಈ ಸಿನೆಮಾ ಗಾಂಧೀಜಿಯ ಪಾತ್ರವನ್ನು ಚಿತ್ರಕಥೆಯೊಳಗೆ ನೇರವಾಗಿ ತರದೇ ಕಳೆದು ಹೋಗುತ್ತಿರುವ ಗಾಂಧೀವಾದದ ಮೌಲ್ಯಗಳ ಯುಗಪಲ್ಲಟಗಳನ್ನು ದಾಖಲಿಸುವ ಒಂದು ವಾಸ್ತವವಾದಿ ಮಾರ್ಗದ ಚಿತ್ರವಾಗಿದೆ.

ಇನ್ನೊಂದು ಚಿತ್ರವನ್ನು ನೆನೆಸಿಕೊಳ್ಳಿ. ಇದು ನಮ್ಮ ಇಂದಿನ ದಿನಗಳ ವಾಸ್ತವವಾದಿ ಸಿನೆಮಾ ದಿಗ್ದರ್ಶಕನೊಬ್ಬನಿಂದ ಚಿತ್ರೀಕರಿಸಲು ಕಾದಿದ್ದು. ಉತ್ತರ ಅಮೇರಿಕೆಯ ಯಾವುದೇ ನಗರ, ಪಟ್ಟಣದ ಮಧ್ಯಮ ತರಗತಿಯ ಒಂದು ಮನೆ. ಹೊಸ ಬದುಕಿನ ಹೊಸ ಆಸೆ, ಅಮೇರಿಕನ್ ಕನಸು ಹೊತ್ತು ಬಂದ ಮಧ್ಯಮ ವರ್ಗದ ಹಿನ್ನೆಲೆಯ, ದಕ್ಷಿಣ ಏಶಿಯಾದಿಂದ ವಲಸೆ ಬಂದ, ರೂಮ್‍ಮೇಟ್ ಆಗಿರುವ ಯುವಕರು ಟಿ. ವಿ. ಮೇಲೆ ಸಿ. ಎನ್. ಎನ್. ಚಾನೆಲ್ ನೋಡುತ್ತಿದ್ದಾರೆ. (ಈ ಯುವಕರ ಹಿರಿಯರು ಸರ್ಕಾರೀ ನೌಕರರೂ, ಗಾಂಧಿ ಮತ್ತು ಸಮಾಜವಾದೀ ಮೌಲ್ಯಗಳು ನಿಧಾನವಾಗಿ ವಿಘಟಿತಗೊಳ್ಳುತ್ತಿರುವ ದಿನಗಳಲ್ಲಿ, ಮೌಲ್ಯಗಳಿಗಾಗಿ ಸೆಣೆಸುತ್ತಾ ಒಟ್ಟು ಕುಟುಂಬದ ತಾಪತ್ರಯಗಳನ್ನೂ ನಿಭಾಯಿಸುತ್ತಾ ಮಕ್ಕಳನ್ನು ಬೆಳೆಸಿದವರೂ ಆಗಿರುತ್ತಾರೆ.) ದಿನಾಂಕ ಸೆಪ್ಟೆಂಬರ್ ೧೧, ೨೦೦೧. ಈಗಾಗಲೇ ವಿಶ್ವ ವಾಣಿಜ್ಯ ಸಂಸ್ಥೆಯ ಒಂದು ಟವರ್ ಕಟ್ಟಡ ಹೊತ್ತಿ ಉರಿಯುತ್ತಿದೆ. ನೋಡು ನೋಡುತ್ತಿದ್ದಂತೆ ಇನ್ನೊಂದು ವಿಮಾನವೊಂದು ಎಲ್ಲಿಂದಲೋ ಬಂದು ಇನ್ನೊಂಡು ಟವರ್ ಕಟ್ಟಡಕ್ಕೆ ಢಿಕ್ಕಿ ಹೊಡೆಯುತ್ತದೆ. ಯುವಕರು ಒಬ್ಬರ ಮುಖವನ್ನೊಬ್ಬರು ಆತಂಕಭರಿತವಾಗಿ ನೋಡುತ್ತಾರೆ. `ನಾವು ಮೋಸ ಹೋದೆವು' ಎಂಬ ಉದ್ಗಾರ ಅವರ ಕಣ್ಣಲ್ಲೇ ಮೂಡಿರುತ್ತದೆ.

ಈ ಎರಡೂ ದೃಶ್ಯಗಳ ನಡುವಿನ ಸಾಮ್ಯ ಮತ್ತು ಕಾಂಟ್ರಾಸ್ಟ್ ರಾಚುವಂಥದ್ದು. ೧೯೪೮ರ ವಲಸೆಗಾರರು ಕನಸು ಕಂಡಿದ್ದು ಗಾಂಧೀ ಪ್ರತಿನಿಧಿಸುವ ರಾಮರಾಜ್ಯದ ಸಂಸ್ಕೃತಿ. ೨೦೦೧ರಂದು ಅಮೇರಿಕೆಗೆ ವಲಸೆ ಬಂದ ತಲೆಮಾರು ಅರಸಿದ್ದು ವರ್ಲ್ಡ್ ಟ್ರೇಡ್ ಸೆಂಟರ್ ರೂಪದಲ್ಲಿದ್ದ ಆಡಮ್ ಸ್ಮಿತ್‍ನ ವಾದವನ್ನು ಪ್ರತಿನಿಧಿಸಿದ ಸಂಸ್ಕೃತಿ. ಎರಡೂ ಕಡೆ ಉತ್ತಮ ಬದುಕಿನ ಭ್ರಮ-ನಿರಸನವಾಗುವುದು ಮೂಲಭೊತವಾದಿಗಳು ಎಸಗುವ ಕೃತ್ಯದಿಂದ. ಒಂದು ಕಡೆ ಗಾಂಧೀವಾದದ ಹತ್ಯೆಯಾದರೆ ಇನ್ನೊಂದು ಕಡೆ ಆಡಮ್ ಸ್ಮಿತ್‍ನ ವಾದದ ಹತ್ಯೆ. ಪ್ರಪಂಚದ ಹಲವು ಮುಗ್ಧರಿಗೆ ಬಂಡವಾಳಶಾಹಿಯ ಕರಾಳ ಮುಖಗಳನ್ನು ಅನಾವರಣಗೊಳಿಸಿದ ಘಳಿಗೆ ಅದು. ನಾನು ಈ ೨೦೦೧ರ ಯುವಕರನ್ನೂ ಅವರ ಮೌಲ್ಯಗಳನ್ನೂ ನ್ಯಾಯನೀರ್ಣಯಕ್ಕೆ ಒಳಪಡಿಸಲು ಈಗಲೇ ನಾನು ಸಿದ್ಧನಿಲ್ಲ. (ಬಂಡವಾಳುಶಾಹಿಯ ವಕ್ತಾರನಾಗಿದ್ದ ಸ್ಮಿತ್-ಗೆ ಸಂಪತ್ತು ಎಲ್ಲರಿಗೂ ಹಂಚಿಕೆಯಾಗಬೇಕು ಎಂಬ ತಾತ್ವಿಕ ಮಟ್ಟದ ಕಾಳಜಿಯೂ ಇತ್ತು). ಹೀಗಾಗಿ ಎರಡೂ ತಲೆಮಾರಿನವರು ತಮ್ಮ ತಮ್ಮ ಚಾರಿತ್ರಿಕ ಸಂದರ್ಭದ ವಿಧಿವಶರು.

'ಲಗೇ ರಹೋ..' ಒಂದು ಕಾಮೆಡಿ ಚಿತ್ರ. ಈ ಸಿನೆಮಾದಲ್ಲಿ ಮೇಲೆ ಕಾಣಿಸಿದ ಯಾವುದೇ ತಲ್ಲಣಗಳಿಗೆ ಅವಕಾಶವಿಲ್ಲ. ಇಲ್ಲಿ ಆಡಮ್ ಸ್ಮಿತ್ ಮತ್ತು ಗಾಂಧಿ ಮುಜುಗರವಿಲ್ಲದೇ ಬೆರೆಯುತ್ತಾರೆ. ಆಡಮ್ ಸ್ಮಿತ್-ನನ್ನು ವಿಮರ್ಶಿಸುವ ಗಾಂಧಿ ನಮಗೆ ಕಾಣುವುದೇ ಇಲ್ಲ. ಇಲ್ಲಿ ವ್ಯಕ್ತವಾಗುವ `ಗಾಂಧಿಗಿರಿ' ಬಹಳ ಸೀಮಿತವಾದದ್ದು. ಅಂದರೆ ಸಿನೆಮಾ 'ಗಾಂಧೀವಾದ'ದ ಕೆಲವೇ ಕೆಲವು ಸೀಮಿತ ಅಂಶದ ಕುರಿತು ಮಾತ್ರ ಮಾತನಾಡುತ್ತದೆ. ಸ್ಥೂಲವಾಗಿ ಹೇಳುವುದಾದರೆ ಅಸತ್ಯದ ನುಡಿ ಮತ್ತು ವ್ಯಕ್ತ ಹಿಂಸೆ(explicit violence)ಯ ನಿರಾಕರಣೆ. ಒಟ್ಟೂ ಸೂಕ್ಷ್ಮವಾದ, ಹೆಚ್ಚು ಆಳವಾದ ಗಾಂಧಿವಾದದ `ಸತ್ಯ'ಗಳ ಬಗ್ಗೆ ಅಲ್ಲ. ಅಂದರೆ ನಗರೀಕರಣ, ಕೇಂದ್ರೀಕರಣ, ಬೃಹತ್ ಕೈಗಾರಿಕೆಗಳ ಬಗೆಗಿನ ಗಾಂಧಿಯ ವಿರೋಧ ಮತ್ತು ಆ ಮೂಲಕ ಸಮಾನತೆ ಮತ್ತು ಸೌಹಾರ್ದಗಳನ್ನು ಹೇಗೆ ಸಾಧಿಸಬಹುದು ಎಂಬುದರ ಕುರಿತು ಅವರ ಚಿಂತನೆ ಇವೆಲ್ಲದರ ಕುರಿತು ಸಿನೆಮಾ ಉಸಿರೆತ್ತುವುದಿಲ್ಲ. ಅಂದರೆ ನಮ್ಮ ನಿಮ್ಮ ವಾಸ್ತವದಲ್ಲಿ ಅಗಸರ ಕೇರಿಯ `ಮುನ್ನಾಭಾಯಿ' ಮತ್ತು ರೇಡಿಯೋ ಜಾಕಿ 'ಜಾಹ್ನವಿ' ಸಹಜವಾಗಿ ವ್ಯವಹರಿಸಬಹುದಾದ, ಅದಕ್ಕಗತ್ಯವಾದ ವಾತಾವರಣದ ನಿರ್ಮಾಣಕ್ಕೆ ಒಂದು ಮಾರ್ಗವಾಗಬಹುದಾದ `ಸಂಪೂರ್ಣ ಗಾಂಧಿವಾದ'ಕ್ಕೆ ಇಲ್ಲಿ ಅವಕಾಶವಿಲ್ಲ. ಈ ಅಂಶಗಳು ನಮ್ಮ ಮನಸ್ಸಿನಲ್ಲಿದ್ದರೆ ಈ ಸಿನೆಮಾವನ್ನು ಹೆಚ್ಚಿನ ಉತ್ಪ್ರೇಕ್ಷೆ ಇಲ್ಲದೆ ಸಮಚಿತ್ತದಿಂದ ಗ್ರಹಿಸಲು ಸಾಧ್ಯವಾಗುತ್ತದೆ.

ಬಾಲಿವುಡ್‍ನ ಒಂದು `ಕಾಮೆಡಿ' ಸಿನೆಮಾನಿಂದ ನೀವು ಹೆಚ್ಚು ಅಪೇಕ್ಷೆ ಮಾಡುತ್ತಿದ್ದೀರಿ ಎಂದು ಕೆಲವರು ಹೇಳಬಹುದು. ನಿರೀಕ್ಷೆ ಮಾಡುತ್ತಿಲ್ಲ. 'ಲಗೇ ರಹೋ..' ದೇಶಾದ್ಯಾಂತ ಪ್ರಭಾವ ಬೀರಿ ಚರ್ಚಿತವಾಗುತ್ತಿದೆ. ಆದ್ದರಿಂದ ಅದರ ಕೆಲವು ಇತಿಮಿತಿಗಳ ಬಗ್ಗೆ ಎಚ್ಚರವೂ ಇರಬೇಕೆಂಬ ದೃಷ್ಟಿಯಿಂದ ಈ ಚರ್ಚೆ. ಗಾಂಧೀಜಿಯನ್ನು ಒಂದು ಕಾಮೆಡಿ ಸಿನೆಮಾದಲ್ಲಿ ಪಾತ್ರವಾಗಿಸುವುದೊಂದು ನಾಜೂಕಿನ ಕೆಲಸವೇ. ಕಾಮೆಡಿ ಮೂಲಕ ಹೇಳಿದ್ದರಿಂದ ಜನ ಸ್ವೀಕರಿಸಿದರು ಎಂಬ ನಿರ್ದೇಶಕರ ಮಾತಿಗೆ ಮಾಧ್ಯಮಗಳು ಕೊಡುವ ಮಹತ್ವ, ಆ ಮಟ್ಟದಲ್ಲಿ ಮಾತ್ರ ಗಾಂಧಿಯನ್ನು ನಾವು ಸ್ವೀಕರಿಸಬಯಸುತ್ತೇವೆ ಎಂದು ಸೂಚಿಸಬಹುದಾದ ಅಪಾಯವೂ ಇದೆ. ಸಿನೆಮಾ `ಗಾಂಧೀಜಿ'ಯನ್ನು ಪುತ್ಥಳಿಯಿಂದ ಕೆಳಗಿಳಿಸುವ ಒಂದು ಮೊದಲ ಹೆಜ್ಜೆಯೂ ಆಗಬಹುದು. ಸಿನೆಮಾದ ಶೀರ್ಷಿಕೆಯ ಹಾಡೇ ಹೇಳುವಂತೆ `ಬಂದೇ ಮೆ ಥಾ ದಮ್' ಎಂಬುದನ್ನು ಮನಃಪೂರ್ವಕವಾಗಿ ಒಪ್ಪುವ ಅಸಂಖ್ಯಾತ ಭಾರತೀಯರಲ್ಲಿ ಒಬ್ಬನಾಗಿ ಆ ವ್ಯಕ್ತಿಯ ವ್ಯಕ್ತಿತ್ವದ ಹಲವು ಆಯಾಮಗಳನ್ನು ಮರೆಯದಿರಲು ಈ ನನ್ನ ಟಿಪ್ಪಣಿ.

Saturday, September 02, 2006

ಮಲ್ಲಾಡಿಹಳ್ಳಿಯಲ್ಲಿ ಒಂದು 'ಸಂವಾದ'

೨೧ ನೇ ಶತಮಾನದ ವೇಗದ ಆಧುನಿಕತೆಯಿಂದ- ಬೆಂಗಳೂರಿನಿಂದ ಸುಮಾರು ದೂರದಲ್ಲಿ, ಆಧುನಿಕತೆಯತ್ತ ಇನ್ನೂ ಮೈಮುರಿಯುತ್ತ ಏಳುತ್ತಿರುವ ದಾವಣಗೆರೆಯಿಂದ ಸುಮಾರು ೫೦ ಕಿ.ಮೀ. ದೂರದ 'ಮಲ್ಲಾಡಿಹಳ್ಳಿ'ಯಲ್ಲಿ ಕುಳಿತು, 'ದೇಸಿ'ಗೆ ಕೊಂಚ ಹೆಚ್ಚು ಹತ್ತಿರವಾಗಿ ತಮ್ಮದೇ ಪ್ರಪಂಚ ಕಟ್ಟಿ ನಮಗೆ ಕೊಡುತ್ತಿರುವ ರಾಘವೇಂದ್ರ ಪಾಟೀಲರನ್ನು ಮುಖತಃ ಸಂದರ್ಶಿಸುವ ಅವಕಾಶ. ಕೊಟ್ಟದ್ದು ನಮಗೆ (ನನಗೆ ಮತ್ತು ನನ್ನ ಸಂಗಾತಿ ಪ್ರೀತಿಗೆ) ಹೊಸ 'ಜೀವ' ಕೊಡಲೆಂದು ಇನ್ನೂ ಕಾದು ಕೂತಿದ್ದ ಸಮಯ.

ಪಾಟೀಲರ 'ತೇರು' ಕೃತಿಯ ಬಗ್ಗೆ, ಆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಾಗ ಒಂದು ಚುಟುಕು ಟಿಪ್ಪಣಿ ಬರೆದಿದ್ದೆ. ವಿವರವಾಗಿ ಆ ನಂತರ ಬರೆಯುತ್ತೇನೆ ಎಂದು ನನ್ನ ಗೆಳೆಯರಿಗೆ ಕೊಟ್ಟ ವಾಗ್ದಾನವನ್ನು ಆ ಮುಂಚಿನ ಇತರೇ ಕೆಲವು ವಾಗ್ದಾನಗಳಂತೇ ನೆರವೇರಿಸಿರಲಿಲ್ಲ. ಹೀಗಾಗಿ ಪಾಟೀಲರನ್ನು ಭೇಟಿಯಾಗಿ 'ವಾಗ್ವಾದ'ವಲ್ಲದಿದ್ದರೂ ಒಂದು `ಸಂವಾದ'ವನ್ನು ನಡೆಸಿ ಅದರ ವಿವರಗಳನ್ನು ಗೆಳೆಯರೊಂದಿಗೆ ಹಂಚಿಕೊಳ್ಳುವ ಅವಕಾಶವೊಂದು ಎದುರಿಗೇ ಕಂಡಾಗ ಸಹಜವಾಗಿ ಉತ್ಸಾಹ ಏರಿತ್ತು.

ಆದರೆ ಪಾಟೀಲರ ಜೊತೆ ಹೇಗೆ ಸಂವಾದ ನಡೆಸುವುದು ಎಂಬ ಅಳುಕೂ ಇತ್ತು. ಸಾಹಿತ್ಯ ಮತ್ತು ರಂಗ ಚಟುವಟಿಕೆಗಳ ಮೂಲಕ ದಾವಣಗೆರೆಯ ಸುತ್ತಮುತ್ತಲೂ ಗೌರವಗಳಿಸಿರುವ ನನ್ನ ಸಂಗಾತಿ ಪ್ರೀತಿಯ ತಂದೆ ಬಿ.ಜಿ.ನಾಗರಾಜ್ ಮತ್ತು ಪ್ರೀತಿಯ ಸೋದರಮಾವನ ಜೊತೆ ಸೇರಿ ಹೊರಟಿದ್ದು, ಅವರು ಈ ಸಂವಾದಕ್ಕೆ ಕೊಂಡಿಯಾಗಬಹುದು ಎಂಬ ಭರವಸೆ ಸ್ವಲ್ಪ ಧೈರ್ಯಕೊಟ್ಟಿತ್ತು.
ಮಳೆಗಾಲದ ಮೋಡಗಳ ಸುರತದಿಂದ ತೊಯ್ದ ಹೊಲಗದ್ದೆಗಳು, ಆಧುನಿಕಗೊಳ್ಳುತ್ತಿರುವ ಕೆಲ ರೈತರ ಸಾಹಸದಿಂದ ಮಲೆನಾಡಿನವರೊಡನೆ ಸ್ಪರ್ಧಿಸುವಂತೆ ವಾಣಿಜ್ಯ ಬೆಳೆಯಾಗಿ ಬೆಳೆದು ನಿಂತಿದ್ದ ಅಡಕೆ ತೋಟಗಳು, ಸೂಳೆಯೊಬ್ಬಳು ತನ್ನ ಗಳಿಕೆಯಿಂದ ಕಟ್ಟಿಸಿದ್ದು ಎಂಬ ಐತಿಹ್ಯದ `ಸೂಳೆಕೆರೆ' ಎಲ್ಲವನ್ನೂ ನೋಡಿಕೊಂಡು ಮಲ್ಲಾಡಿಹಳ್ಳಿಯ ಪಾಟೀಲರ ಮನೆ ಸೇರುವ ಹೊತ್ತಿಗೆ ತಡವಾಗಿತ್ತು. ಮನೆಯ ಗೇಟಿನಲ್ಲೇ ನಗುತ್ತಾ ಸ್ವಾಗತಿಸಿದ ಪಾಟೀಲರು 'ನಾವು ಸಹ ಇದೀಗ ತಾನೆ ಕಾರ್ಯಕ್ರಮವೊಂದನ್ನು ಮುಗಿಸಿಬಂದೆವು' ಎಂದು ಹೇಳಿದ ಮಾತು ನಮ್ಮನ್ನು ಸಮಾಧಾನಮಾಡಲೆಂದೇ ಇತ್ತೋ?
ಪಾಟೀಲರ ಗ್ರಹಿಕೆಯಲ್ಲಿ 'ನವ್ಯೋತ್ತರ'ದ ಲಕ್ಷಣಗಳನ್ನು ಹೊಂದಿರುವಂಥದ್ದು (ಈ ಮಾತನ್ನು ಇನ್ನಷ್ಟು ವಿವರವಾಗಿ ನಂತರ ವಿವರಿಸುವೆ) ಎಂದು ಹೇಳಬಹುದಾದ ಅವರ ಮನೆಯ ಪುಟ್ಟ ಮಹಡಿ ಕೋಣೆಗೆ ನಮ್ಮನ್ನು ಕರೆದೊಯ್ದರು. ಅಲ್ಲಿ ಕನ್ನಡದ ಇನ್ನೋರ್ವ ಬರಹಗಾರ ಚಂದ್ರಶೇಖರ್ ತಾಳ್ಯ ಸಹ ಇದ್ದರು.

ರಾಘವೇಂದ್ರ ಪಾಟೀಲ ಮತ್ತು ಚಂದ್ರಶೇಖರ ತಾಳ್ಯ ಇಬ್ಬರೂ 'ಅಲ್ಲಮ ಶರಣರ ಚಳುವಳಿಗೆ ಏಕೆ ಬಂದ?' ಎಂಬ ವಿಷಯದ ಕುರಿತು ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದ್ದ ವಿಚಾರ-ಸಂಕಿರಣದ ಕುರಿತು ಯೋಚನಾ ಮಗ್ನರಾದಂತೆ ಕಂಡಿತು. ಆ ವಿಷಯದ ಕುರಿತೇ ಅವರ ಜಿಜ್ಞಾಸೆ ಸಾಗಿತ್ತು. ಭಾರತೀಯ ಸಂಸ್ಕೃತಿ ಇತಿಹಾಸದುದ್ದಕ್ಕೂ ಅಲೌಕಿಕ-ಲೌಕಿಕ, ಮೆಟಾಫಿಸಿಕಲ್-ಮಟೀರಿಯಲ್ ಹೀಗೆ ಯಾವುದೋ ಒಂದು ಅತಿಗೆ ಹೋಗದಂತೆ ನಿರ್ಬಂಧಿಸುವ ಡಯಲೆಕ್ಟಿಕ್‍ನಿಂದ ಕೂಡಿದೆ. ಆದುದರಿಂದ ಬಸವಣ್ಣನ ನೇತೃತ್ವದಲ್ಲಿ ಅತಿ ವ್ಯವಹಾರಿಕ-ಸಾಮಾಜಿಕವಾಗಬಹುದಾಗಿದ್ದ ಚಳುವಳಿಗೆ ಅನುಭಾವದ ಮೆರುಗನ್ನು ತರಲು ಅಲ್ಲಮ ಶರಣಚಳುವಳಿಗೆ ಬಂದಿರಬಹುದು ಎಂಬುದು ಪಾಟೀಲರ ತರ್ಕವಾಗಿತ್ತು.

ರಾಜಾರಾಮ ಹೆಗಡೆಯವರ 'ಗತಕಥನ'

ಈ ಪುಸ್ತಕವನ್ನು, ಇಂಥ ಪುಸ್ತಕವನ್ನು ಕನ್ನಡಕ್ಕೆ ತಮ್ಮ ಮಾಲೆಯಿಂದ ಪ್ರಕಟಿಸಿಕೊಟ್ಟಿದ್ದಕ್ಕೆ ಪಾಟೀಲರನ್ನು ಮನಸ್ಸು ತುಂಬಿ ಅಭಿನಂದಿಸಿದೆ. ಈ ಪುಸ್ತಕದ ಬಗ್ಗೆ ಒಂದೆರಡು ಮಾತುಗಳನ್ನು ನಾನಿಲ್ಲಿ ಹೇಳಲೇಬೇಕು. ನಾನು ಚರಿತ್ರೆಯ ಸಂಶೋಧಕನಲ್ಲ. ಆದರೆ ಹಲವು ಬಗೆಯ ಧೋರಣೆಗಳಿಂದ ಹೊಮ್ಮುವ ಭಾರತದ ಚರಿತ್ರೆಗೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ಓದಿದ್ದೇನೆ ಮತ್ತು ಯಾವ ಪುಸ್ತಕ, ಯಾವ ಲೇಖನ ಯಾವ ನೆಲೆಯಿಂದ ರಚಿಸಲ್ಪಟ್ಟಿದೆ ಎಂದು ಸ್ಥೂಲವಾಗಿಯಾದರೂ ಗ್ರಹಿಸಬಲ್ಲೆನು ಎಂಬ ಧೈರ್ಯವಿರುವುದರಿಂದ, ಈ ಒಂದು ಮಾತನ್ನು ಧೈರ್ಯವಾಗಿ ಹೇಳಬಲ್ಲೆ. 'ಗತಕಥನ' ಕನ್ನಡ ಸಾರಸ್ವತಲೋಕಕ್ಕೆ ಸಂದಿರುವ ವಿಶೇಷ ಪುಸ್ತಕ. ವರ್ತಮಾನದಲ್ಲಿ ನಿಂತು ಭವಿಷ್ಯದ ತಮ್ಮ ತಮ್ಮ ಏಜೆಂಡಾಗಾಗಿ 'ಭೂತ'ವನ್ನು ನಿರ್ಮಿಸಿಕೊಡುವ ದೇಶದ ಎಲ್ಲಾ ಪ್ರಮುಖ ಮನಸ್ಸಿನ ಧಾರೆಗಳನ್ನು, ಇತಿಹಾಸದಲ್ಲಿ ಕಥನವನ್ನೂ, ಕಥನದಲ್ಲಿ ಇತಿಹಾಸವನ್ನೂ ಹುಡುಕುತ್ತಾ ಸಾಗುವ ರಾಜಾರಾಮ ಹೆಗಡೆಯವರ ಬರವಣಿಗೆ ಸಮಚಿತ್ತದ, ಪ್ರಬುದ್ಧತೆಯನ್ನು ಮೆರೆಯುತ್ತಾ ಪ್ರಚೋದನಾಕಾರಿಯಲ್ಲದ ರೋಮಾಂಚನಕಾರಿ ಆಗಿದೆ. ಜೊತೆಗೆ ಮಾಸ್ತಿ ಅವರ ಚಿಕವೀರರಾಜೇಂದ್ರ ವಸಾಹತುಶಾಹಿಗೆ ಪ್ರತಿಕ್ರಿಯಿಸಿದ ಬಗೆ, ಕಲೆಯ ಬಗ್ಗೆ ಶಿವರಾಮ ಕಾರಂತರ ಧೋರಣೆಗಳು, ಭೈರಪ್ಪನವರ 'ಸಾರ್ಥ' ಸಂಘಪರಿವಾರದ ಆಸಕ್ತಿಗೆ ಬಲಿಯಾಗಬಹುದಾದ ಅಪಾಯ ಇವೆಲ್ಲವನ್ನೂ ಗಹನವಾಗಿ ವಿವರಿಸುವ ಲೇಖನಗಳು ಈ ಕೃತಿಯಲ್ಲಿವೆ.

[ಇತಿಹಾಸದ ಸಂಶೋಧಕರಾಗಿರುವ ರಾಜಾರಾಮ ಹೆಗಡೆ, ವಿಶೇಷತಃ 'ವಸಾಹತುಶಾಹಿ ಮತ್ತು ರಾಷ್ಟ್ರೀಯತೆ' ಈ ವಿಷಯದ ಕುರಿತು ಆಳವಾಗಿ ಚಿಂತಿಸಿದವರು. ಅವರ ಇನ್ನೊಂದು ಕೃತಿ 'ಲೌಕಿಕ-ಅಲೌಕಿಕ' ಸಹ ಮಲ್ಲಾಡಿಹಳ್ಳಿಯ ಆನಂದಕಂದ ಪ್ರಕಾಶನದ ಪ್ರಕಟಣೆ.]

ಸಾಹಿತ್ಯ ಮತ್ತು ತಂತ್ರಜ್ಞಾನ ಕ್ಷೇತ್ರಗಳ ನಡುವೆ ಸಂವಾದ

`ತಂತ್ರಜ್ಞಾನದ ಕ್ಷೇತ್ರದಲ್ಲಿರುವ ನಿಮಗೆ ನಮ್ಮ ಸಾಹಿತ್ಯ ಲೋಕದಿಂದ ಬರುವ ಟೀಕೆಗಳ ಬಗ್ಗೆ ಏನನ್ನಿಸುತ್ತದೆ? ಬೇಸರವಿದೆಯೆ?' ಎಂದು ಲೇಖಕ ತಾಳ್ಯ ಪ್ರಶ್ನಿಸಿದರು.

`ಹೌದು ಸ್ವಲ್ಪ ಬೇಸರವಿದೆ. ಈ ಎರಡೂ ಕ್ಷೇತ್ರದ ನಡುವೆ ನಿಜವಾದ ಆರೋಗ್ಯಕರ ಸಂವಾದ ನಡೆಯದೇ ಇರುವಂಥ ಸ್ಥಿತಿ ಉಂಟಾಗಿದೆ. ಇದು ಅಷ್ಟು ಸರಿಯಲ್ಲ ಎಂದು ನನಗನ್ನಿಸುತ್ತದೆ' ಎಂದು ಹೇಳಿದೆ. ಹಾಗೆ ಹೇಳಿದ ನಂತರ ನಮ್ಮ ಚರ್ಚೆ ಬೇರೆಕಡೆಗೆ ಹರಿಯಿತಾದರೂ, ನಾನು ಹೇಳದೇ ಉಳಿದ ಮಾತುಗಳು ಇವು:

'ಎರಡು ಕಡೆಯಿಂದ ಅತಿರೇಕದ ನಿಲುವುಗಳು ಹೊರಟಾಗ ಇವೆರಡರ ನಡುವೆ ಸಂವಾದ ಸಾಧ್ಯವಾಗುವುದಿಲ್ಲ. ಅದೇ ರೀತಿ ಒಬ್ಬರು ಇನ್ನೊಬ್ಬರ ಕುರಿತು ವಸ್ತುನಿಷ್ಠವಾಗಿ ವಿಮರ್ಶಿಸದೇ ಬರೀ ಲಘುವಾದ ಧೋರಣೆಯ ಮಾತುಗಳನ್ನಾಡುತ್ತಿದ್ದರೂ ಯಾವುದೇ ರಚನಾತ್ಮಕ ಪ್ರಗತಿ ಆಗುವುದಿಲ್ಲ. ಸಾಹಿತ್ಯ ಲೋಕದ ಧೀಮಂತರು ತಂತ್ರಜ್ಞಾನದ ಉದ್ಯಮಿಗಳ ಬಗ್ಗೆ ಆ ಉದ್ಯಮ ಬೇಡುವ ಅಪಾರ ಸೃಜನಶೀಲತೆ, ಸಾಮೂಹಿಕ ಪರಿಶ್ರಮ, ವ್ಯವಹಾರ ಕುಶಲತೆ ಇವೆಲ್ಲವನ್ನೂ ಮರೆತು ಅವರ ಬಗ್ಗೆ, ಉದ್ಯಮದ ಬಗ್ಗೆ ಹಗುರವಾಗಿ ಗೇಲಿಮಾಡುವುದು ಸರಿಯಲ್ಲ. ಹಾಗೆ ಮಾಡುವುದರ ಮೂಲಕ ತಂತ್ರಜ್ಞಾನ ಕ್ಷೇತ್ರದ ಕುರಿತು ವಸ್ತುನಿಷ್ಠ ವಿಮರ್ಶೆ ಮಾಡುವ ಶಕ್ತಿಯನ್ನೂ, ಮತ್ತು ಅಂಥ ಟೀಕೆಗೆ ಆರೋಗ್ಯಕರ ಸ್ಪಂದನೆ, ಪ್ರತಿಕ್ರಿಯೆಗಳನ್ನು ಪಡೆಯುವ ಯೋಗ್ಯತೆಯನ್ನೂ, ಸಾಧ್ಯತೆಯನ್ನೂ ಸಾಹಿತ್ಯಲೋಕ ಕಳೆದುಕೊಳ್ಳುತ್ತದೆ. ಅದೇ ರೀತಿ ತಂತ್ರಜ್ಞಾನದ ಉದ್ಯಮಿಗಳು ತಮಗಿರುವ ಬಂಡವಾಳ ಶಕ್ತಿ, ಆಧುನಿಕ ಜ್ಞಾನ ಇವುಗಳನ್ನು ಕನ್ನಡಕ್ಕಾಗಿ ವಿನಿಯೋಗಿಸದೇ ತಾವು ದೇವಲೋಕ್ಕೆ ಸೇರಿದವರಂತೆ ಕರ್ನಾಟಕ ಸರ್ಕಾರದೊಡನೆ, ಜನಸಾಮಾನ್ಯರೊಡನೆ ನಡೆದುಕೊಳ್ಳುವುದೂ ಸಹ ಅಂಥದೇ ನಕಾರಾತ್ಮಕ ನಡುವಳಿಕೆಯಾಗುತ್ತದೆ. (ಅಲ್ಲದೇ ತಂತ್ರಜ್ಞಾನಕ್ಕೆ ಕನ್ನಡ ಅಳವಡಿಸುವುದರಲ್ಲಿ ಹೆಚ್ಚಿನ ಗದ್ದಲವಿಲ್ಲದೇ ಕ್ರೀಯಾಶೀಲರಾಗಿರುವವರು ಶಕ್ತಿ,ಪ್ರಭಾವ ಇರುವ ಇವರಾರೂ ಅಲ್ಲ. ಪವನಜ, ವಾಸು, ಪ್ರೊ. ಯೋಗಾನಂದ, ಶೇಖರಪೂರ್ಣ ಇಂಥ ಸಾಮಾನ್ಯರಲ್ಲೇ ಅನನ್ಯವಾಗಿರುವ ತಂಡಗಳು). ಇವೊತ್ತಿನ ಸಂದರ್ಭದಲ್ಲಿ ಇವೆರಡೂ ಕ್ಷೇತ್ರಗಳ ನಡುವಿನ ಆರೋಗ್ಯಕರ ಸಂವಾದ ಇಂದಿನ ತುರ್ತು ಮತ್ತು ಅಗತ್ಯವಾಗಿದೆ '.

'ನವ್ಯೋತ್ತರ'ದ ಲಕ್ಷಣ

ಪಾಟೀಲರಿಗೆ ನಿಮ್ಮ ಗ್ರಹಿಕೆಯಲ್ಲಿ 'ನವ್ಯೋತ್ತರ'ದ ಲಕ್ಷಣಗಳು ಎಂದರೆ ಯಾವವು? ಎಂದು ಕೇಳಿದೆ. 'ಬರೀ ಎಡಪಂಥೀಯ ದೃಷ್ಟಿಕೋಣದಿಂದಲೇ ಆಗಲಿ, ಬರೀ ಬಲಪಂಥೀಯ ದೃಷ್ಟಿಕೋಣದಿಂದಲೇ ಆಗಲಿ ಲೋಕವನ್ನು ಗ್ರಹಿಸುವುದು ಸಾಧ್ಯವಿಲ್ಲ. ಸಂಘರ್ಷವನ್ನಾಗಲಿ, ಭಾವುಕತೆಯನ್ನೇ ಆಗಲಿ, ಲೌಕಿಕ, ಸಾಮಾಜಿಕ, ಅಲೌಕಿಕಗಳನ್ನು ಅತಿಗೆ ಒಯ್ಯುವುದಿಲ್ಲ. ಅದೇ ರೀತಿ ಪರಿಸರ ಮತ್ತು ಪ್ರಜ್ಞೆಯ ದೃಷ್ಟಿಯಿಂದ ದೇಸೀ ಮತ್ತು ಆಧುನಿಕತೆಗಳೆರಡು ವಿಪರೀತವಾಗಿರುವುದಿಲ್ಲ. ಈ ರೀತಿ ಎಲ್ಲವೂ ಹದವಾಗಿ ಬೆರೆತಿರುವುದೇ ನವ್ಯೋತ್ತರ' ಎಂದೆನ್ನುತ್ತಾ ಪಾಟೀಲರು 'ದೇಸೀ ಮತ್ತು ಆಧುನಿಕತೆಯಲ್ಲಿ ದೇಸಿಗೆ ಹೆಚ್ಚು ಒತ್ತು' ಎಂದರು (ಮಲ್ಲಾಡಿಹಳ್ಳಿಯ ಪಾಟೀಲರ ಮನೆಯ ಸ್ವರೂಪವನ್ನು ಈ ಅರ್ಥದಲ್ಲಿ ಗ್ರಹಿಸಬಹುದು!).
ಆದರೆ ವಿವೇಕ ಶಾನಭಾಗರ ಕಥನದಲ್ಲಿ 'ಹುಲಿಸವಾರಿ'ಯ ನಂತರದ ಬರವಣಿಗೆಯಲ್ಲಿ ಪ್ರಜ್ಞೆ ಮತ್ತು ಪರಿಸರದ ದೃಷ್ಟಿಯಿಂದ ಆಧುನಿಕಕ್ಕೇ ಹೆಚ್ಚು ಒತ್ತಿದೆಯಲ್ಲವೆ? ಅಥವಾ ವಿವೇಕರ 'ಇನ್ನೂ ಒಂದು' ಕೃತಿಯ ಸ್ವಾತಿ ಒಂದು ಕಡೆ ಹೇಳುವಂತೆ 'ವಾದಕ್ಕಾಗಿ ಅಂಶಗಳನ್ನು ಹೆಕ್ಕಿತೆಗೆಯುತ್ತೇವೆ' ಎಂಬ ಅರಾಜಕತೆಯ ದೃಷ್ಟಿಯೇ ನವ್ಯೋತ್ತರದ ಲಕ್ಷಣವೆ? ಎಂಬ ಅನುಮಾನವೂ ಆಗಾಗ ಕಾಡಿದ್ದಿದೆ. ಆದರೆ ತೇಜಸ್ವಿ, ಪಾಟೀಲರು, ಶಾನಭಾಗರು, ಸತ್ಯನಾರಾಯಣ ಎಲ್ಲರ ಕೃತಿಗಳನ್ನು ಸ್ವಲ್ಪ ದೂರದಲ್ಲಿ ನಿಂತು ಸಮಗ್ರವಾಗಿ ಗ್ರಹಿಸಿದಾಗ ಹಾಗೇನೂ ಇಲ್ಲ ಎಂದು ಸಮಾಧಾನವಾಗುತ್ತದೆ. ಸ್ಥೂಲವಾಗಿ ಹೇಳಬೇಕೆಂದರೆ 'ನವ್ಯೋತ್ತರ' ಅನ್ನೋದು ನವೋದಯ, ನವ್ಯದಂತೆ ಒಂದು ಸಮೂಹದ ಲಕ್ಷಣ ಹೊತ್ತ ಪ್ರಾಕಾರವಾಗಿ ಇನ್ನೂ ಮೈತಳೆದಿಲ್ಲ. ಬದಲಾಗಿ ಇಂದಿಗೂ ಹೆಚ್ಚಾಗಿ ಇದು ಬರಹಗಾರ-ವ್ಯಕ್ತಿ-ವ್ಯಕ್ತಿತ್ವವನ್ನು ಅವಲಂಬಿಸಿ ನಿರ್ದಿಷ್ಟವಾಗಿದೆ. ಆದರೆ ಸುದೈವವಶಾತ್ ಕನ್ನಡ ಸಾಹಿತ್ಯ ಯಾವ ಕಾಲಘಟ್ಟದಲ್ಲೂ ಸಮುದಾಯದ ಸಾಂಸ್ಕೃತಿಕ ಕಾಳಜಿಯ ಬಗ್ಗೆ ತನ್ನ ಜವಾಬ್ದಾರಿಯನ್ನು ಕಳಚಿಕೊಳ್ಳುವಂತೆ ಅರಾಜಕವಾಗಿಲ್ಲ ಎಂದು ಹೇಳಬಹುದಾಗಿದೆ.
ನವ್ಯೋತ್ತರ ಧಾರೆ ಕನ್ನಡಸಾಹಿತ್ಯ ಈ ವರೆಗೆ ನೀಡಿದ ಸಿದ್ಧ ಆಕೃತಿಯನ್ನು ಮೀರಿ ಬೆಳೆಯುತ್ತಿದೆಯೆ? ಈ ದಿಸೆಯಲ್ಲಿ ಶಾನಭಾಗರ 'ಇನ್ನೂ ಒಂದು' ಮತ್ತು ಸತ್ಯನಾರಾಯಣ ಅವರ 'ಕಾಲಜಿಂಕೆ' ಇವುಗಳನ್ನು ಹೆಚ್ಚು ಆಸ್ಥೆಯಿಂದ ಪರಿಶೀಲಿಸುವ ಅಗತ್ಯ ಇದೆ.

ಆನಂದ ಝುಂಜರವಾಡರ ಕಾವ್ಯ

ಕೆಲವು ವರ್ಷಗಳ ಹಿಂದೆ ಆನಂದರು ಬರೆದ ಪದ್ಯವೊಂದನ್ನು ಪತ್ರಿಕೆಯೊಂದರಲ್ಲಿ ಓದಿದಂತೆ ನೆನಪು. ಪದ್ಯಮನಸ್ಸಿಗೆ ನಾಟಿತ್ತು. ಪಂಢರಪುರ, ಶಬರಿಮಲೈದಂಥ ಕ್ಷೇತ್ರಗಳಿಗೆ ಭಕ್ತರು ಬರಿಗಾಲಲ್ಲಿ ನಡೆದುಹೋಗುವ ವ್ರತಕ್ಕೆ `ದಿಂಡಿ' ಅಥವಾ 'ದಂಡಿಗೆ' ಅನ್ನುತ್ತಾರೆ. ಆಧುನಿಕತೆಯ ಸಂದರ್ಭದಲ್ಲಿ ಕೆಲವು ಸೋಗಲಾಡಿ ರಾಜಕೀಯ ಗುಂಪುಗಳು ಸಾಮೂಹಿಕ ಮೆರವಣಿಗೆ ನಡೆಸುತ್ತಾರೆ. ಇದು ಬಹಳಷ್ಟು ಸಲ ಗಾಂಧೀಜಿಯ `ದಾಂಡಿ' ಯಾತ್ರೆಯ ಅಣುಕು ನಕಲಾಗಿರುತ್ತದೆ. ಬರೀ ಮಾಧ್ಯಮಗಳನ್ನು ಆಕರ್ಷಿಸುವ ತಂತ್ರವಾಗಿರುತ್ತದೆ. ಭಕ್ತರು ನಡೆಸುವ 'ದಿಂಡಿ'ಗೆ 'ದಾಂಡಿ'ಯ ರಾಜಕೀಯದ ಪ್ರಜ್ಞೆಯೂ ಸೇರಬೇಕು, ಸೋಗಲಾಡಿಗಳು ನಡೆಸುವ 'ದಾಂಡಿ'ಗೆ 'ದಿಂಡಿ'ಯ ಭಕ್ತಿ ಸೇರಲಿ ಎಂಬ ಆಶಯದ ಪದ್ಯವದು. ಗಾಂಧೀಜಿಯ ಉಪ್ಪಿನ ಸತ್ಯಾಗ್ರಹದ 'ದಾಂಡಿ' ಯಾತ್ರೆ 'ದಿಂಡಿ'ಯೂ ಆಗಿತ್ತು ಎಂಬ ಕವಿಯ ಅರಿವಿನ ಹಿನ್ನೆಲೆಯಲ್ಲಿ ಆ ಪದ್ಯ ಮೂಡಿತ್ತು. ಅನಿವಾಸಿಯ ವನವಾಸ ಕಳೆದು ನಿವಾಸಿಯಾಗಿ 'ದೇಶಕಾಲ'ದ ಎರಡನೇ ಸಂಚಿಕೆಯನ್ನು ಕೈಗೆತ್ತಿಕೊಂಡಾಗ ನನ್ನ ಗಮನ ಸೆಳೆದದ್ದು ಅದೇ ಕವಿಗಳ 'ಶೂರ್ಪಾಲಿ' ಪದ್ಯ. ಪದ್ಯದ 'ಸ್ತಬ್ಧ ಚಿತ್ರಗಳು' 'ಶೂರ್ಪಾಲಿ'ಯ ಸಾಂಪ್ರದಾಯಿಕ ಆವರಣದಲ್ಲಿ ಆಧುನಿಕತೆ ಪ್ರವೇಶಿಸುವಾಗಿನ ತಿಕ್ಕಾಟವನ್ನು ಅನಾವರಣಗೊಳಿಸುತ್ತವೆ. ಆನಂದರ ಪ್ರತಿಭೆ ಇರುವುದು ಶಕ್ತಿಯುತ ಪ್ರತಿಮೆಗಳನ್ನು ಕೆತ್ತುವುದರಲ್ಲಿ. ಆ ಶಕ್ತಿಯ ಉತ್ತುಂಗ ಶಿಖರ ನನಗೆ ಕಂಡುಬಂದಿದ್ದು 'ಕೀರ್ತಿ' ಸ್ಟಾಲಿನ ಗಿಡಮೂಲಿಕೆಗಳು ಪದ್ಯದಲ್ಲಿ. ಈ ಪದ್ಯವನ್ನು ಜೋರಾಗಿ ಗಟ್ಟಿದನಿಯಲ್ಲಿ ಓದುವುದೇ ಒಂದು ಅಪೂರ್ವ ರೋಚಕ ಅನುಭವ. ಕೀರ್ತಿನಾಥ ಕುರ್ತಕೋಟಿಯವರು ತಮ್ಮ ಸಾಹಿತ್ಯ ಬದುಕಿನುದ್ದಕ್ಕೂ ದೇಶೀ ಸಂಸ್ಕೃತಿಯ ಪರವಾಗಿ ನಿಂತು ಪಾಶ್ಚಾತ್ಯ ಪೀಡಿತರ ಜೊತೆ ಸಂಘರ್ಷದ ವಿರೋಧವಾಗಿ ಸಾಮರಸ್ಯದ ಪರವಾಗಿ ಹೋರಾಡಿದವರು. ಪದ್ಯದಲ್ಲಿ ಕವಿ ಆನಂದರು ಕೀರ್ತಿಯನ್ನು ಆಧುನಿಕರ ಸಂಘರ್ಷದ ಹಲವು ಗಾಯಗಳಿಗೆ ತಕ್ಕ ಮೂಲಿಕೆಯ ಔಷಧಿಗಳನ್ನು ಬಲ್ಲ ಓರ್ವ ಆಯುರ್ವೇದ ಪಂಡಿತನಂತೆ ಕಾಣುತ್ತಾರೆ. ಕೀರ್ತಿ ಅಂಥ 'ನವ್ಯ'ರಿಗೆ ಸರಿಯಾದ ಸಮಯಕ್ಕೆ ಸರಿಯಾದ ಔಷಧ ಕೊಟ್ಟಿದ್ದರೆ ಅಂಥವರಿಂದ ಮುಖ ಕಿವುಚಿ, ಹುಬ್ಬುಗಂಟಿಕ್ಕಿ ಓದಬಹುದಾದ ಪದ್ಯಗಳ ಬದಲು ಕುಲುಕುಲು ನಗೆಯ ಪದ್ಯಗಳು ಹುಟ್ಟಬಹುದಿತ್ತಂತೆ. ಪ್ರತಿಮೆಗಳನ್ನು ನೀವೇ ಓದಿ ಅನುಭವಿಸಿ (ಕುರ್ತಕೋಟಿ ಅವರ, ಆನಂದ ಝುಂಜರವಾಡರ ಸಾಹಿತ್ಯಿಕ ನಿಲುವುಗಳನ್ನು ಒಪ್ಪದೇಯೂ ಇಲ್ಲಿರುವ ಪ್ರತಿಮಾ ಶಕ್ತಿಗೆ ತಲೆದೂಗಲೇಬೇಕಾದ ಪದ್ಯವಿದು):

ಪಸೆ ತೀರಿದ ಶಬ್ದಯೋನಿಗೆ
ಸಿದ್ಧಾಂತಗಳ ಮಸಾಜುಮಾಡಿ
ಮೈನರೆಯುವ ಮೊದಲೇ
ಮೇಲೆಹಾರಲು ಮರಿಗಳ ಹೆರಲು,
ಹುರುಪಳಿಸುತ್ತಿದ್ದ ಜನಾಂಗದ
ಹೆರಿಗೆ-ಕೋಣೆಯಲ್ಲಿ ನೀವೂ ಇದ್ದೀರಿ
ಯುಗಧರ್ಮದ ಸೂಲಗಿತ್ತಿಯಾಗಿ,
ಅಸಲೀ ಅನುಭವದ ಅಗ್ಗಿಷ್ಟಿಕೆಯ
ಕಾವು ಕೊಟ್ಟುಕೊಳ್ಳಲಾಗದೇ,
ಕೂಸು-ಬಾಣಂತಿಗೆ ಕಾಸುವ-ಕಟ್ಟುವ ಆರೈಕೆಯಾಗದೇ,
ಜೀವನ ಸತ್ವ ತೇದು ಸೀಪಿಸುವವರಿಲ್ಲದೇ,
ಹೊಕ್ಕುಳ-ಬಳ್ಳಿ ಕತ್ತರಿಸಿಕೊಂಡು
ರಕ್ತಮಯವಾಗಿದ್ದ ಆ-ರಕ್ತ ಕಣ್ಣುಗಳನ್ನೂ
ಅನುರಕ್ತಿಯಿಂದ ಸಹಿಸಿದಿರಿ.

ಇರಬೇಕಾದಷ್ಟು ಕಾಲ ಕತ್ತಲೆಯಲ್ಲೇ ಇರಬೇಕೆಂಬ ಪಾಠ ಕಲಿಸಿ,
ಸಕಾಲದಲ್ಲಿ ಗುಡಿಗೆ ಕರೆದುಕೊಂಡು ಹೋಗಿ,
ಬಿಂಬದರ್ಶನ ಮಾಡಿಸಿ,
ರಕ್ತ-ಹಾಲು, ಮಲ-ಮೂತ್ರ, ಭಾವ-ವಿಚಾರ,
ಎಲ್ಲಅಡಗಿದ ಅಗುಳಿನ ವಿಶ್ವರೂಪ ಕಾಣುವ ಕಣ್ಣುಗಳ ಕರುಣಿಸಿ,
ಅನ್ನಪ್ರಾಶನ ಮಾಡಿಸಿದ್ದರೆ,
ನಿಂತ ತೊಟ್ಟಿಲು ತೂಗಿ,
ಮುತ್ತಿನ ಕುಂಚಿಗೆ ಕಟ್ಟಿ,
ಕುಸಿರೆಳ್ಳಿನ ಕಿರೀಟವಿಟ್ಟು,
ವಿಕರಾಳ ಮುಖದ ಕೋಡು-ಕೋರೆಗಳನ್ನೂ ಮುದ್ದಿಟ್ಟು,
ಕುಂಡಲಿ-ಹಾಕಿ-ಜಾತಕ ಬರೆದು-
ಬೆಚ್ಚಗಿನ ಬರಹಗಳ ಲೋಭಾನ ಹೊಗೆ ಕೊಟ್ಟು,
ನೀವು ತೋರಿದ ಕಕ್ಕುಲಾತಿಗೆ
ಒಂದಾದರೂ ಹೊಸ ಕವಿತೆ ಕುಲುಕುಲು ನಗುತ್ತಿತ್ತೋ ಏನೋ

ಪೋಸ್ಟ್ ಕೊಲೊನಿಯಲ್ ಧೋರಣೆಯವರ ಕುರಿತು ಆನಂದರ ವ್ಯಂಗ್ಯದ ಧ್ವನಿ ಹೀಗಿದೆ:

ಹೊಸ ಮಕ್ಕಳು ಹೇಸಿಕೊಳ್ಳುತ್ತವೆ
ನೋಯದೇ ನುರಿಸುವ ಸರ್ವತಂತ್ರ
ಸ್ವತಂತ್ರ ಹಲ್ಲಿನ ಹೊಳಪು ಕಂಡು,
ಒಳಗೊಳಗೇ ಭಯವೂ ಇದ್ದೀತು,
ಪ್ರತ್ಯಸ್ತ್ರಗಳ ಪ್ರಯೋಗ ತಿಳಿಯದೆ
ಶಾಸ್ತ್ರಾಸ್ತ್ರಗಳ ಪೆಟ್ಟು ಉಂಡು,
ಓಝೋನ್ ಪೊರೆ-ಹರಿದು
ಧೋ ಧೋ ಬೆಂಕಿ-ಮಳೆ ಸುರಿದು
ಮುಳುಗಡೇಯಾಗುತ್ತಿರುವ ಮೂರನೇ ಜಗತ್ತಿನ
ಸಂತ್ರಸ್ತರ ಸೃಜನ ನಗರದ ಹೊರವಲಯದ
ಹೊಸ ಹೊಸ ಕಾಲನಿಗಳಲ್ಲಿ `ಪಾದಯಾತ್ರೆ' ಮುಗಿಸಿ,
ಮರಳಿಪೂರ್ವ-ಮೀಮಾಂಸೆಯ ಸಂಪ್ರೋಕ್ಷಣೆ ಮಾಡಿಕೊಳ್ಳುತ್ತಿದ್ದಾರೇನೋ.

ಕೀರ್ತಿ ಕುರಿತು ಆನಂದರ ತಕರಾರೊಂದು ಕೂಡಾ ಆಸಕ್ತಿಕರವಾಗಿದೆ:

ಎಲ್ಲೋ ಬೇರು ಬಿಟ್ಟು,
ಇಲ್ಲಿ ಬಾಲ ಚಾಚಿಎಲ್ಲಿಯವರೂ ಅಲ್ಲದಿದ್ದರೂ
ಎಲ್ಲೆಡೆಗೂ ಜಿಗಿದಾಡುವವರ"ನಖ ಸ್ತುತಿ"
ಏಕೆ ಇಷ್ಟುದ್ದ ಬರೆದಿರಿ?

ಕುರ್ತಕೋಟಿ ಅವರನ್ನು ಕುರಿತು ಇಂಥ ರೋಮಾಂಚಕಾರಿ ಪದ್ಯ ಕೊಟ್ಟ ಆನಂದರಿಗೆ ಅಭಿನಂದನೆಗಳು. ಆದರೆ ಆನಂದರ ಹಲವಾರು ಪದ್ಯಗಳು ಕನ್ನಡ ಕಾವ್ಯಪರಂಪರೆ ಈಗಾಗಲೇ ದತ್ತಮಾಡಿರುವ ಸಿದ್ಧ ಆಕೃತಿಗಳಲ್ಲೇ ಉಸಿರಾಡುತ್ತವೆ ಎಂದು ನನಗೆ ಕೊಂಚ ಆತಂಕವಿದೆ. ಅಂದರೆ ದೇಸಿ-ಆಧುನಿಕತೆಯ ಆಕರ್ಷಣೆ, ವಿಕರ್ಷಣೆ, ಸಂಘರ್ಷ ಈ ಕುರಿತು ಬಳಸುವ ಸಲಕರಣೆಗಳು. ಮತ್ತು ಕವಿಯ ಒಲವು-ನಿಲುವು ಸಹ ದೇಶೀ ಸಾಂಸ್ಕೃತಿಕವಾದಕ್ಕೆ ಹತ್ತಿರವಾಗಿದೆ ಎಂಬುದೂ ಸ್ಪಷ್ಟವಿದೆ. ಪರ್ಯಾಯವಾಗಿ ಹೊಸಕಾವ್ಯ ಬರೆಯುತ್ತಿರುವ ಮಂಜುನಾಥ್ ಸೇರಿದಂತೆ ಇತರ ಹಲವರು ನಡೆಸುತ್ತಿರುವ ಪ್ರಯೋಗಗಳು ಪ್ರಜ್ಞೆ ಮತ್ತು ಆಕೃತಿಯ ದೃಷ್ಟಿಯಿಂದ ಹೆಚ್ಚು ಉಲ್ಲಾಸಕರವಾಗಿವೆ. ಉದಾಹರಣೆಗೆ ಮಂಜುನಾಥರ ಪದ್ಯಗಳಲ್ಲಿ ದೇಸೀ ಅನುಭಾವದ ಸೆಳೆತವಿದ್ದರೂ, ಆ ಅನುಭಾವ, ದೇಸೀ-ಆಧುನಿಕತೆ ಎಂಬ ರಾಜಕೀಯದ ಗೊಡವೆಗೆ ಹೋಗದೆ ಎಲ್ಲವನ್ನೂ ಒಳಗೊಳ್ಳುತ್ತಾ ತನ್ನದೇ ಪ್ರಪಂಚವನ್ನು ಸೃಷ್ಟಿಸಿಕೊಳ್ಳುತ್ತದೆ. ಆನಂದರ ಪದ್ಯಗಳು ಬಹುಶಃ ಅವರ ತಾತ್ವಿಕ ಚೌಕಟ್ಟಿನ ಮಿತಿಯಲ್ಲಿ ಹಾಗಿರುವುದು ಅನಿವಾರ್ಯವೇನೋ.

[ಆನಂದ ಝುಂಜರವಾಡ ಮುಧೋಳದಲ್ಲಿ ನೆಲೆಸಿರುವ ಕವಿ. ಅವರ 'ದಿಂಡಿ ಮತ್ತು ದಾಂಡಿ' ಕವನಸಂಕಲನ ಆನಂದಕಂದ ಪ್ರಕಾಶನ, ಮಲ್ಲಾಡಿಹಳ್ಳಿಯಿಂದ ಪ್ರಕಟವಾಗಿದೆ. ]


['ಮಾಯಿಯ ಮುಖಗಳು', 'ದೇಸಗತಿ' ಕಥಾಸಂಕಲನಗಳು, 'ತೇರು' ಕಾದಂಬರಿ, 'ವಾಗ್ವಾದ' ಬಿಡಿಲೇಖನಗಳ ಸಂಗ್ರಹ, 'ಸಂವಾದ' ಸಾಹಿತ್ಯಕ್ಕೆ ಸಂಬಂಧಿಸಿದ ಸಂಚಿಕೆ ಇವು ರಾಘವೇಂದ್ರ ಪಾಟೀಲರ ಸಾಹಿತ್ಯ ಸೃಷ್ಟಿ.]

ಮಲ್ಲಾಡಿಹಳ್ಳಿಯಿಂದ ಮರಳಿ ಬರುವಾಗ ನಮಗೆ ಅದೊಂದು ಸಾರ್ಥಕ ಭಾವದ ಸಂಜೆ. ಅಂದ ಹಾಗೆ ನನಗೆ ಮತ್ತು ನನ್ನ ಸಂಗಾತಿ ಪ್ರೀತಿಗೆ ಹೊಸ `ಜೀವ' ಕೊಡಲೆಂದು ಕಾದು ಕೂತಿದ್ದ ಸಮಯ ಬಂದೇ ಬಿಟ್ಟಿತು. ೨೬ ರ ಆಗಸ್ಟ್,ಶನಿವಾರ ಗೌರಿ ಹಬ್ಬದ ದಿನದಂದು ನಮಗೆ 'ಗೌರಿ' ಹುಟ್ಟಿದಳು.