ಸೃಜನ-ಕನ್ನಡಿಗ (sRujana-kannaDiga)

ಸಹೃದಯ, ವಿಶ್ವಾಸ ಮತ್ತು ಸೃಜನಶೀಲತೆ: Creator of this blog is Sudarshan. He has interest in Engineering research and Kannada writing. As a part of the process of Kannada writing, this blog will pay extra attention to cultural and philosophical aspects of Mathematics, Science, History, Language etc.

Name:
Location: Mysore, Karnataka, India

Saturday, September 02, 2006

ಮಲ್ಲಾಡಿಹಳ್ಳಿಯಲ್ಲಿ ಒಂದು 'ಸಂವಾದ'

೨೧ ನೇ ಶತಮಾನದ ವೇಗದ ಆಧುನಿಕತೆಯಿಂದ- ಬೆಂಗಳೂರಿನಿಂದ ಸುಮಾರು ದೂರದಲ್ಲಿ, ಆಧುನಿಕತೆಯತ್ತ ಇನ್ನೂ ಮೈಮುರಿಯುತ್ತ ಏಳುತ್ತಿರುವ ದಾವಣಗೆರೆಯಿಂದ ಸುಮಾರು ೫೦ ಕಿ.ಮೀ. ದೂರದ 'ಮಲ್ಲಾಡಿಹಳ್ಳಿ'ಯಲ್ಲಿ ಕುಳಿತು, 'ದೇಸಿ'ಗೆ ಕೊಂಚ ಹೆಚ್ಚು ಹತ್ತಿರವಾಗಿ ತಮ್ಮದೇ ಪ್ರಪಂಚ ಕಟ್ಟಿ ನಮಗೆ ಕೊಡುತ್ತಿರುವ ರಾಘವೇಂದ್ರ ಪಾಟೀಲರನ್ನು ಮುಖತಃ ಸಂದರ್ಶಿಸುವ ಅವಕಾಶ. ಕೊಟ್ಟದ್ದು ನಮಗೆ (ನನಗೆ ಮತ್ತು ನನ್ನ ಸಂಗಾತಿ ಪ್ರೀತಿಗೆ) ಹೊಸ 'ಜೀವ' ಕೊಡಲೆಂದು ಇನ್ನೂ ಕಾದು ಕೂತಿದ್ದ ಸಮಯ.

ಪಾಟೀಲರ 'ತೇರು' ಕೃತಿಯ ಬಗ್ಗೆ, ಆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಾಗ ಒಂದು ಚುಟುಕು ಟಿಪ್ಪಣಿ ಬರೆದಿದ್ದೆ. ವಿವರವಾಗಿ ಆ ನಂತರ ಬರೆಯುತ್ತೇನೆ ಎಂದು ನನ್ನ ಗೆಳೆಯರಿಗೆ ಕೊಟ್ಟ ವಾಗ್ದಾನವನ್ನು ಆ ಮುಂಚಿನ ಇತರೇ ಕೆಲವು ವಾಗ್ದಾನಗಳಂತೇ ನೆರವೇರಿಸಿರಲಿಲ್ಲ. ಹೀಗಾಗಿ ಪಾಟೀಲರನ್ನು ಭೇಟಿಯಾಗಿ 'ವಾಗ್ವಾದ'ವಲ್ಲದಿದ್ದರೂ ಒಂದು `ಸಂವಾದ'ವನ್ನು ನಡೆಸಿ ಅದರ ವಿವರಗಳನ್ನು ಗೆಳೆಯರೊಂದಿಗೆ ಹಂಚಿಕೊಳ್ಳುವ ಅವಕಾಶವೊಂದು ಎದುರಿಗೇ ಕಂಡಾಗ ಸಹಜವಾಗಿ ಉತ್ಸಾಹ ಏರಿತ್ತು.

ಆದರೆ ಪಾಟೀಲರ ಜೊತೆ ಹೇಗೆ ಸಂವಾದ ನಡೆಸುವುದು ಎಂಬ ಅಳುಕೂ ಇತ್ತು. ಸಾಹಿತ್ಯ ಮತ್ತು ರಂಗ ಚಟುವಟಿಕೆಗಳ ಮೂಲಕ ದಾವಣಗೆರೆಯ ಸುತ್ತಮುತ್ತಲೂ ಗೌರವಗಳಿಸಿರುವ ನನ್ನ ಸಂಗಾತಿ ಪ್ರೀತಿಯ ತಂದೆ ಬಿ.ಜಿ.ನಾಗರಾಜ್ ಮತ್ತು ಪ್ರೀತಿಯ ಸೋದರಮಾವನ ಜೊತೆ ಸೇರಿ ಹೊರಟಿದ್ದು, ಅವರು ಈ ಸಂವಾದಕ್ಕೆ ಕೊಂಡಿಯಾಗಬಹುದು ಎಂಬ ಭರವಸೆ ಸ್ವಲ್ಪ ಧೈರ್ಯಕೊಟ್ಟಿತ್ತು.
ಮಳೆಗಾಲದ ಮೋಡಗಳ ಸುರತದಿಂದ ತೊಯ್ದ ಹೊಲಗದ್ದೆಗಳು, ಆಧುನಿಕಗೊಳ್ಳುತ್ತಿರುವ ಕೆಲ ರೈತರ ಸಾಹಸದಿಂದ ಮಲೆನಾಡಿನವರೊಡನೆ ಸ್ಪರ್ಧಿಸುವಂತೆ ವಾಣಿಜ್ಯ ಬೆಳೆಯಾಗಿ ಬೆಳೆದು ನಿಂತಿದ್ದ ಅಡಕೆ ತೋಟಗಳು, ಸೂಳೆಯೊಬ್ಬಳು ತನ್ನ ಗಳಿಕೆಯಿಂದ ಕಟ್ಟಿಸಿದ್ದು ಎಂಬ ಐತಿಹ್ಯದ `ಸೂಳೆಕೆರೆ' ಎಲ್ಲವನ್ನೂ ನೋಡಿಕೊಂಡು ಮಲ್ಲಾಡಿಹಳ್ಳಿಯ ಪಾಟೀಲರ ಮನೆ ಸೇರುವ ಹೊತ್ತಿಗೆ ತಡವಾಗಿತ್ತು. ಮನೆಯ ಗೇಟಿನಲ್ಲೇ ನಗುತ್ತಾ ಸ್ವಾಗತಿಸಿದ ಪಾಟೀಲರು 'ನಾವು ಸಹ ಇದೀಗ ತಾನೆ ಕಾರ್ಯಕ್ರಮವೊಂದನ್ನು ಮುಗಿಸಿಬಂದೆವು' ಎಂದು ಹೇಳಿದ ಮಾತು ನಮ್ಮನ್ನು ಸಮಾಧಾನಮಾಡಲೆಂದೇ ಇತ್ತೋ?
ಪಾಟೀಲರ ಗ್ರಹಿಕೆಯಲ್ಲಿ 'ನವ್ಯೋತ್ತರ'ದ ಲಕ್ಷಣಗಳನ್ನು ಹೊಂದಿರುವಂಥದ್ದು (ಈ ಮಾತನ್ನು ಇನ್ನಷ್ಟು ವಿವರವಾಗಿ ನಂತರ ವಿವರಿಸುವೆ) ಎಂದು ಹೇಳಬಹುದಾದ ಅವರ ಮನೆಯ ಪುಟ್ಟ ಮಹಡಿ ಕೋಣೆಗೆ ನಮ್ಮನ್ನು ಕರೆದೊಯ್ದರು. ಅಲ್ಲಿ ಕನ್ನಡದ ಇನ್ನೋರ್ವ ಬರಹಗಾರ ಚಂದ್ರಶೇಖರ್ ತಾಳ್ಯ ಸಹ ಇದ್ದರು.

ರಾಘವೇಂದ್ರ ಪಾಟೀಲ ಮತ್ತು ಚಂದ್ರಶೇಖರ ತಾಳ್ಯ ಇಬ್ಬರೂ 'ಅಲ್ಲಮ ಶರಣರ ಚಳುವಳಿಗೆ ಏಕೆ ಬಂದ?' ಎಂಬ ವಿಷಯದ ಕುರಿತು ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದ್ದ ವಿಚಾರ-ಸಂಕಿರಣದ ಕುರಿತು ಯೋಚನಾ ಮಗ್ನರಾದಂತೆ ಕಂಡಿತು. ಆ ವಿಷಯದ ಕುರಿತೇ ಅವರ ಜಿಜ್ಞಾಸೆ ಸಾಗಿತ್ತು. ಭಾರತೀಯ ಸಂಸ್ಕೃತಿ ಇತಿಹಾಸದುದ್ದಕ್ಕೂ ಅಲೌಕಿಕ-ಲೌಕಿಕ, ಮೆಟಾಫಿಸಿಕಲ್-ಮಟೀರಿಯಲ್ ಹೀಗೆ ಯಾವುದೋ ಒಂದು ಅತಿಗೆ ಹೋಗದಂತೆ ನಿರ್ಬಂಧಿಸುವ ಡಯಲೆಕ್ಟಿಕ್‍ನಿಂದ ಕೂಡಿದೆ. ಆದುದರಿಂದ ಬಸವಣ್ಣನ ನೇತೃತ್ವದಲ್ಲಿ ಅತಿ ವ್ಯವಹಾರಿಕ-ಸಾಮಾಜಿಕವಾಗಬಹುದಾಗಿದ್ದ ಚಳುವಳಿಗೆ ಅನುಭಾವದ ಮೆರುಗನ್ನು ತರಲು ಅಲ್ಲಮ ಶರಣಚಳುವಳಿಗೆ ಬಂದಿರಬಹುದು ಎಂಬುದು ಪಾಟೀಲರ ತರ್ಕವಾಗಿತ್ತು.

ರಾಜಾರಾಮ ಹೆಗಡೆಯವರ 'ಗತಕಥನ'

ಈ ಪುಸ್ತಕವನ್ನು, ಇಂಥ ಪುಸ್ತಕವನ್ನು ಕನ್ನಡಕ್ಕೆ ತಮ್ಮ ಮಾಲೆಯಿಂದ ಪ್ರಕಟಿಸಿಕೊಟ್ಟಿದ್ದಕ್ಕೆ ಪಾಟೀಲರನ್ನು ಮನಸ್ಸು ತುಂಬಿ ಅಭಿನಂದಿಸಿದೆ. ಈ ಪುಸ್ತಕದ ಬಗ್ಗೆ ಒಂದೆರಡು ಮಾತುಗಳನ್ನು ನಾನಿಲ್ಲಿ ಹೇಳಲೇಬೇಕು. ನಾನು ಚರಿತ್ರೆಯ ಸಂಶೋಧಕನಲ್ಲ. ಆದರೆ ಹಲವು ಬಗೆಯ ಧೋರಣೆಗಳಿಂದ ಹೊಮ್ಮುವ ಭಾರತದ ಚರಿತ್ರೆಗೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ಓದಿದ್ದೇನೆ ಮತ್ತು ಯಾವ ಪುಸ್ತಕ, ಯಾವ ಲೇಖನ ಯಾವ ನೆಲೆಯಿಂದ ರಚಿಸಲ್ಪಟ್ಟಿದೆ ಎಂದು ಸ್ಥೂಲವಾಗಿಯಾದರೂ ಗ್ರಹಿಸಬಲ್ಲೆನು ಎಂಬ ಧೈರ್ಯವಿರುವುದರಿಂದ, ಈ ಒಂದು ಮಾತನ್ನು ಧೈರ್ಯವಾಗಿ ಹೇಳಬಲ್ಲೆ. 'ಗತಕಥನ' ಕನ್ನಡ ಸಾರಸ್ವತಲೋಕಕ್ಕೆ ಸಂದಿರುವ ವಿಶೇಷ ಪುಸ್ತಕ. ವರ್ತಮಾನದಲ್ಲಿ ನಿಂತು ಭವಿಷ್ಯದ ತಮ್ಮ ತಮ್ಮ ಏಜೆಂಡಾಗಾಗಿ 'ಭೂತ'ವನ್ನು ನಿರ್ಮಿಸಿಕೊಡುವ ದೇಶದ ಎಲ್ಲಾ ಪ್ರಮುಖ ಮನಸ್ಸಿನ ಧಾರೆಗಳನ್ನು, ಇತಿಹಾಸದಲ್ಲಿ ಕಥನವನ್ನೂ, ಕಥನದಲ್ಲಿ ಇತಿಹಾಸವನ್ನೂ ಹುಡುಕುತ್ತಾ ಸಾಗುವ ರಾಜಾರಾಮ ಹೆಗಡೆಯವರ ಬರವಣಿಗೆ ಸಮಚಿತ್ತದ, ಪ್ರಬುದ್ಧತೆಯನ್ನು ಮೆರೆಯುತ್ತಾ ಪ್ರಚೋದನಾಕಾರಿಯಲ್ಲದ ರೋಮಾಂಚನಕಾರಿ ಆಗಿದೆ. ಜೊತೆಗೆ ಮಾಸ್ತಿ ಅವರ ಚಿಕವೀರರಾಜೇಂದ್ರ ವಸಾಹತುಶಾಹಿಗೆ ಪ್ರತಿಕ್ರಿಯಿಸಿದ ಬಗೆ, ಕಲೆಯ ಬಗ್ಗೆ ಶಿವರಾಮ ಕಾರಂತರ ಧೋರಣೆಗಳು, ಭೈರಪ್ಪನವರ 'ಸಾರ್ಥ' ಸಂಘಪರಿವಾರದ ಆಸಕ್ತಿಗೆ ಬಲಿಯಾಗಬಹುದಾದ ಅಪಾಯ ಇವೆಲ್ಲವನ್ನೂ ಗಹನವಾಗಿ ವಿವರಿಸುವ ಲೇಖನಗಳು ಈ ಕೃತಿಯಲ್ಲಿವೆ.

[ಇತಿಹಾಸದ ಸಂಶೋಧಕರಾಗಿರುವ ರಾಜಾರಾಮ ಹೆಗಡೆ, ವಿಶೇಷತಃ 'ವಸಾಹತುಶಾಹಿ ಮತ್ತು ರಾಷ್ಟ್ರೀಯತೆ' ಈ ವಿಷಯದ ಕುರಿತು ಆಳವಾಗಿ ಚಿಂತಿಸಿದವರು. ಅವರ ಇನ್ನೊಂದು ಕೃತಿ 'ಲೌಕಿಕ-ಅಲೌಕಿಕ' ಸಹ ಮಲ್ಲಾಡಿಹಳ್ಳಿಯ ಆನಂದಕಂದ ಪ್ರಕಾಶನದ ಪ್ರಕಟಣೆ.]

ಸಾಹಿತ್ಯ ಮತ್ತು ತಂತ್ರಜ್ಞಾನ ಕ್ಷೇತ್ರಗಳ ನಡುವೆ ಸಂವಾದ

`ತಂತ್ರಜ್ಞಾನದ ಕ್ಷೇತ್ರದಲ್ಲಿರುವ ನಿಮಗೆ ನಮ್ಮ ಸಾಹಿತ್ಯ ಲೋಕದಿಂದ ಬರುವ ಟೀಕೆಗಳ ಬಗ್ಗೆ ಏನನ್ನಿಸುತ್ತದೆ? ಬೇಸರವಿದೆಯೆ?' ಎಂದು ಲೇಖಕ ತಾಳ್ಯ ಪ್ರಶ್ನಿಸಿದರು.

`ಹೌದು ಸ್ವಲ್ಪ ಬೇಸರವಿದೆ. ಈ ಎರಡೂ ಕ್ಷೇತ್ರದ ನಡುವೆ ನಿಜವಾದ ಆರೋಗ್ಯಕರ ಸಂವಾದ ನಡೆಯದೇ ಇರುವಂಥ ಸ್ಥಿತಿ ಉಂಟಾಗಿದೆ. ಇದು ಅಷ್ಟು ಸರಿಯಲ್ಲ ಎಂದು ನನಗನ್ನಿಸುತ್ತದೆ' ಎಂದು ಹೇಳಿದೆ. ಹಾಗೆ ಹೇಳಿದ ನಂತರ ನಮ್ಮ ಚರ್ಚೆ ಬೇರೆಕಡೆಗೆ ಹರಿಯಿತಾದರೂ, ನಾನು ಹೇಳದೇ ಉಳಿದ ಮಾತುಗಳು ಇವು:

'ಎರಡು ಕಡೆಯಿಂದ ಅತಿರೇಕದ ನಿಲುವುಗಳು ಹೊರಟಾಗ ಇವೆರಡರ ನಡುವೆ ಸಂವಾದ ಸಾಧ್ಯವಾಗುವುದಿಲ್ಲ. ಅದೇ ರೀತಿ ಒಬ್ಬರು ಇನ್ನೊಬ್ಬರ ಕುರಿತು ವಸ್ತುನಿಷ್ಠವಾಗಿ ವಿಮರ್ಶಿಸದೇ ಬರೀ ಲಘುವಾದ ಧೋರಣೆಯ ಮಾತುಗಳನ್ನಾಡುತ್ತಿದ್ದರೂ ಯಾವುದೇ ರಚನಾತ್ಮಕ ಪ್ರಗತಿ ಆಗುವುದಿಲ್ಲ. ಸಾಹಿತ್ಯ ಲೋಕದ ಧೀಮಂತರು ತಂತ್ರಜ್ಞಾನದ ಉದ್ಯಮಿಗಳ ಬಗ್ಗೆ ಆ ಉದ್ಯಮ ಬೇಡುವ ಅಪಾರ ಸೃಜನಶೀಲತೆ, ಸಾಮೂಹಿಕ ಪರಿಶ್ರಮ, ವ್ಯವಹಾರ ಕುಶಲತೆ ಇವೆಲ್ಲವನ್ನೂ ಮರೆತು ಅವರ ಬಗ್ಗೆ, ಉದ್ಯಮದ ಬಗ್ಗೆ ಹಗುರವಾಗಿ ಗೇಲಿಮಾಡುವುದು ಸರಿಯಲ್ಲ. ಹಾಗೆ ಮಾಡುವುದರ ಮೂಲಕ ತಂತ್ರಜ್ಞಾನ ಕ್ಷೇತ್ರದ ಕುರಿತು ವಸ್ತುನಿಷ್ಠ ವಿಮರ್ಶೆ ಮಾಡುವ ಶಕ್ತಿಯನ್ನೂ, ಮತ್ತು ಅಂಥ ಟೀಕೆಗೆ ಆರೋಗ್ಯಕರ ಸ್ಪಂದನೆ, ಪ್ರತಿಕ್ರಿಯೆಗಳನ್ನು ಪಡೆಯುವ ಯೋಗ್ಯತೆಯನ್ನೂ, ಸಾಧ್ಯತೆಯನ್ನೂ ಸಾಹಿತ್ಯಲೋಕ ಕಳೆದುಕೊಳ್ಳುತ್ತದೆ. ಅದೇ ರೀತಿ ತಂತ್ರಜ್ಞಾನದ ಉದ್ಯಮಿಗಳು ತಮಗಿರುವ ಬಂಡವಾಳ ಶಕ್ತಿ, ಆಧುನಿಕ ಜ್ಞಾನ ಇವುಗಳನ್ನು ಕನ್ನಡಕ್ಕಾಗಿ ವಿನಿಯೋಗಿಸದೇ ತಾವು ದೇವಲೋಕ್ಕೆ ಸೇರಿದವರಂತೆ ಕರ್ನಾಟಕ ಸರ್ಕಾರದೊಡನೆ, ಜನಸಾಮಾನ್ಯರೊಡನೆ ನಡೆದುಕೊಳ್ಳುವುದೂ ಸಹ ಅಂಥದೇ ನಕಾರಾತ್ಮಕ ನಡುವಳಿಕೆಯಾಗುತ್ತದೆ. (ಅಲ್ಲದೇ ತಂತ್ರಜ್ಞಾನಕ್ಕೆ ಕನ್ನಡ ಅಳವಡಿಸುವುದರಲ್ಲಿ ಹೆಚ್ಚಿನ ಗದ್ದಲವಿಲ್ಲದೇ ಕ್ರೀಯಾಶೀಲರಾಗಿರುವವರು ಶಕ್ತಿ,ಪ್ರಭಾವ ಇರುವ ಇವರಾರೂ ಅಲ್ಲ. ಪವನಜ, ವಾಸು, ಪ್ರೊ. ಯೋಗಾನಂದ, ಶೇಖರಪೂರ್ಣ ಇಂಥ ಸಾಮಾನ್ಯರಲ್ಲೇ ಅನನ್ಯವಾಗಿರುವ ತಂಡಗಳು). ಇವೊತ್ತಿನ ಸಂದರ್ಭದಲ್ಲಿ ಇವೆರಡೂ ಕ್ಷೇತ್ರಗಳ ನಡುವಿನ ಆರೋಗ್ಯಕರ ಸಂವಾದ ಇಂದಿನ ತುರ್ತು ಮತ್ತು ಅಗತ್ಯವಾಗಿದೆ '.

'ನವ್ಯೋತ್ತರ'ದ ಲಕ್ಷಣ

ಪಾಟೀಲರಿಗೆ ನಿಮ್ಮ ಗ್ರಹಿಕೆಯಲ್ಲಿ 'ನವ್ಯೋತ್ತರ'ದ ಲಕ್ಷಣಗಳು ಎಂದರೆ ಯಾವವು? ಎಂದು ಕೇಳಿದೆ. 'ಬರೀ ಎಡಪಂಥೀಯ ದೃಷ್ಟಿಕೋಣದಿಂದಲೇ ಆಗಲಿ, ಬರೀ ಬಲಪಂಥೀಯ ದೃಷ್ಟಿಕೋಣದಿಂದಲೇ ಆಗಲಿ ಲೋಕವನ್ನು ಗ್ರಹಿಸುವುದು ಸಾಧ್ಯವಿಲ್ಲ. ಸಂಘರ್ಷವನ್ನಾಗಲಿ, ಭಾವುಕತೆಯನ್ನೇ ಆಗಲಿ, ಲೌಕಿಕ, ಸಾಮಾಜಿಕ, ಅಲೌಕಿಕಗಳನ್ನು ಅತಿಗೆ ಒಯ್ಯುವುದಿಲ್ಲ. ಅದೇ ರೀತಿ ಪರಿಸರ ಮತ್ತು ಪ್ರಜ್ಞೆಯ ದೃಷ್ಟಿಯಿಂದ ದೇಸೀ ಮತ್ತು ಆಧುನಿಕತೆಗಳೆರಡು ವಿಪರೀತವಾಗಿರುವುದಿಲ್ಲ. ಈ ರೀತಿ ಎಲ್ಲವೂ ಹದವಾಗಿ ಬೆರೆತಿರುವುದೇ ನವ್ಯೋತ್ತರ' ಎಂದೆನ್ನುತ್ತಾ ಪಾಟೀಲರು 'ದೇಸೀ ಮತ್ತು ಆಧುನಿಕತೆಯಲ್ಲಿ ದೇಸಿಗೆ ಹೆಚ್ಚು ಒತ್ತು' ಎಂದರು (ಮಲ್ಲಾಡಿಹಳ್ಳಿಯ ಪಾಟೀಲರ ಮನೆಯ ಸ್ವರೂಪವನ್ನು ಈ ಅರ್ಥದಲ್ಲಿ ಗ್ರಹಿಸಬಹುದು!).
ಆದರೆ ವಿವೇಕ ಶಾನಭಾಗರ ಕಥನದಲ್ಲಿ 'ಹುಲಿಸವಾರಿ'ಯ ನಂತರದ ಬರವಣಿಗೆಯಲ್ಲಿ ಪ್ರಜ್ಞೆ ಮತ್ತು ಪರಿಸರದ ದೃಷ್ಟಿಯಿಂದ ಆಧುನಿಕಕ್ಕೇ ಹೆಚ್ಚು ಒತ್ತಿದೆಯಲ್ಲವೆ? ಅಥವಾ ವಿವೇಕರ 'ಇನ್ನೂ ಒಂದು' ಕೃತಿಯ ಸ್ವಾತಿ ಒಂದು ಕಡೆ ಹೇಳುವಂತೆ 'ವಾದಕ್ಕಾಗಿ ಅಂಶಗಳನ್ನು ಹೆಕ್ಕಿತೆಗೆಯುತ್ತೇವೆ' ಎಂಬ ಅರಾಜಕತೆಯ ದೃಷ್ಟಿಯೇ ನವ್ಯೋತ್ತರದ ಲಕ್ಷಣವೆ? ಎಂಬ ಅನುಮಾನವೂ ಆಗಾಗ ಕಾಡಿದ್ದಿದೆ. ಆದರೆ ತೇಜಸ್ವಿ, ಪಾಟೀಲರು, ಶಾನಭಾಗರು, ಸತ್ಯನಾರಾಯಣ ಎಲ್ಲರ ಕೃತಿಗಳನ್ನು ಸ್ವಲ್ಪ ದೂರದಲ್ಲಿ ನಿಂತು ಸಮಗ್ರವಾಗಿ ಗ್ರಹಿಸಿದಾಗ ಹಾಗೇನೂ ಇಲ್ಲ ಎಂದು ಸಮಾಧಾನವಾಗುತ್ತದೆ. ಸ್ಥೂಲವಾಗಿ ಹೇಳಬೇಕೆಂದರೆ 'ನವ್ಯೋತ್ತರ' ಅನ್ನೋದು ನವೋದಯ, ನವ್ಯದಂತೆ ಒಂದು ಸಮೂಹದ ಲಕ್ಷಣ ಹೊತ್ತ ಪ್ರಾಕಾರವಾಗಿ ಇನ್ನೂ ಮೈತಳೆದಿಲ್ಲ. ಬದಲಾಗಿ ಇಂದಿಗೂ ಹೆಚ್ಚಾಗಿ ಇದು ಬರಹಗಾರ-ವ್ಯಕ್ತಿ-ವ್ಯಕ್ತಿತ್ವವನ್ನು ಅವಲಂಬಿಸಿ ನಿರ್ದಿಷ್ಟವಾಗಿದೆ. ಆದರೆ ಸುದೈವವಶಾತ್ ಕನ್ನಡ ಸಾಹಿತ್ಯ ಯಾವ ಕಾಲಘಟ್ಟದಲ್ಲೂ ಸಮುದಾಯದ ಸಾಂಸ್ಕೃತಿಕ ಕಾಳಜಿಯ ಬಗ್ಗೆ ತನ್ನ ಜವಾಬ್ದಾರಿಯನ್ನು ಕಳಚಿಕೊಳ್ಳುವಂತೆ ಅರಾಜಕವಾಗಿಲ್ಲ ಎಂದು ಹೇಳಬಹುದಾಗಿದೆ.
ನವ್ಯೋತ್ತರ ಧಾರೆ ಕನ್ನಡಸಾಹಿತ್ಯ ಈ ವರೆಗೆ ನೀಡಿದ ಸಿದ್ಧ ಆಕೃತಿಯನ್ನು ಮೀರಿ ಬೆಳೆಯುತ್ತಿದೆಯೆ? ಈ ದಿಸೆಯಲ್ಲಿ ಶಾನಭಾಗರ 'ಇನ್ನೂ ಒಂದು' ಮತ್ತು ಸತ್ಯನಾರಾಯಣ ಅವರ 'ಕಾಲಜಿಂಕೆ' ಇವುಗಳನ್ನು ಹೆಚ್ಚು ಆಸ್ಥೆಯಿಂದ ಪರಿಶೀಲಿಸುವ ಅಗತ್ಯ ಇದೆ.

ಆನಂದ ಝುಂಜರವಾಡರ ಕಾವ್ಯ

ಕೆಲವು ವರ್ಷಗಳ ಹಿಂದೆ ಆನಂದರು ಬರೆದ ಪದ್ಯವೊಂದನ್ನು ಪತ್ರಿಕೆಯೊಂದರಲ್ಲಿ ಓದಿದಂತೆ ನೆನಪು. ಪದ್ಯಮನಸ್ಸಿಗೆ ನಾಟಿತ್ತು. ಪಂಢರಪುರ, ಶಬರಿಮಲೈದಂಥ ಕ್ಷೇತ್ರಗಳಿಗೆ ಭಕ್ತರು ಬರಿಗಾಲಲ್ಲಿ ನಡೆದುಹೋಗುವ ವ್ರತಕ್ಕೆ `ದಿಂಡಿ' ಅಥವಾ 'ದಂಡಿಗೆ' ಅನ್ನುತ್ತಾರೆ. ಆಧುನಿಕತೆಯ ಸಂದರ್ಭದಲ್ಲಿ ಕೆಲವು ಸೋಗಲಾಡಿ ರಾಜಕೀಯ ಗುಂಪುಗಳು ಸಾಮೂಹಿಕ ಮೆರವಣಿಗೆ ನಡೆಸುತ್ತಾರೆ. ಇದು ಬಹಳಷ್ಟು ಸಲ ಗಾಂಧೀಜಿಯ `ದಾಂಡಿ' ಯಾತ್ರೆಯ ಅಣುಕು ನಕಲಾಗಿರುತ್ತದೆ. ಬರೀ ಮಾಧ್ಯಮಗಳನ್ನು ಆಕರ್ಷಿಸುವ ತಂತ್ರವಾಗಿರುತ್ತದೆ. ಭಕ್ತರು ನಡೆಸುವ 'ದಿಂಡಿ'ಗೆ 'ದಾಂಡಿ'ಯ ರಾಜಕೀಯದ ಪ್ರಜ್ಞೆಯೂ ಸೇರಬೇಕು, ಸೋಗಲಾಡಿಗಳು ನಡೆಸುವ 'ದಾಂಡಿ'ಗೆ 'ದಿಂಡಿ'ಯ ಭಕ್ತಿ ಸೇರಲಿ ಎಂಬ ಆಶಯದ ಪದ್ಯವದು. ಗಾಂಧೀಜಿಯ ಉಪ್ಪಿನ ಸತ್ಯಾಗ್ರಹದ 'ದಾಂಡಿ' ಯಾತ್ರೆ 'ದಿಂಡಿ'ಯೂ ಆಗಿತ್ತು ಎಂಬ ಕವಿಯ ಅರಿವಿನ ಹಿನ್ನೆಲೆಯಲ್ಲಿ ಆ ಪದ್ಯ ಮೂಡಿತ್ತು. ಅನಿವಾಸಿಯ ವನವಾಸ ಕಳೆದು ನಿವಾಸಿಯಾಗಿ 'ದೇಶಕಾಲ'ದ ಎರಡನೇ ಸಂಚಿಕೆಯನ್ನು ಕೈಗೆತ್ತಿಕೊಂಡಾಗ ನನ್ನ ಗಮನ ಸೆಳೆದದ್ದು ಅದೇ ಕವಿಗಳ 'ಶೂರ್ಪಾಲಿ' ಪದ್ಯ. ಪದ್ಯದ 'ಸ್ತಬ್ಧ ಚಿತ್ರಗಳು' 'ಶೂರ್ಪಾಲಿ'ಯ ಸಾಂಪ್ರದಾಯಿಕ ಆವರಣದಲ್ಲಿ ಆಧುನಿಕತೆ ಪ್ರವೇಶಿಸುವಾಗಿನ ತಿಕ್ಕಾಟವನ್ನು ಅನಾವರಣಗೊಳಿಸುತ್ತವೆ. ಆನಂದರ ಪ್ರತಿಭೆ ಇರುವುದು ಶಕ್ತಿಯುತ ಪ್ರತಿಮೆಗಳನ್ನು ಕೆತ್ತುವುದರಲ್ಲಿ. ಆ ಶಕ್ತಿಯ ಉತ್ತುಂಗ ಶಿಖರ ನನಗೆ ಕಂಡುಬಂದಿದ್ದು 'ಕೀರ್ತಿ' ಸ್ಟಾಲಿನ ಗಿಡಮೂಲಿಕೆಗಳು ಪದ್ಯದಲ್ಲಿ. ಈ ಪದ್ಯವನ್ನು ಜೋರಾಗಿ ಗಟ್ಟಿದನಿಯಲ್ಲಿ ಓದುವುದೇ ಒಂದು ಅಪೂರ್ವ ರೋಚಕ ಅನುಭವ. ಕೀರ್ತಿನಾಥ ಕುರ್ತಕೋಟಿಯವರು ತಮ್ಮ ಸಾಹಿತ್ಯ ಬದುಕಿನುದ್ದಕ್ಕೂ ದೇಶೀ ಸಂಸ್ಕೃತಿಯ ಪರವಾಗಿ ನಿಂತು ಪಾಶ್ಚಾತ್ಯ ಪೀಡಿತರ ಜೊತೆ ಸಂಘರ್ಷದ ವಿರೋಧವಾಗಿ ಸಾಮರಸ್ಯದ ಪರವಾಗಿ ಹೋರಾಡಿದವರು. ಪದ್ಯದಲ್ಲಿ ಕವಿ ಆನಂದರು ಕೀರ್ತಿಯನ್ನು ಆಧುನಿಕರ ಸಂಘರ್ಷದ ಹಲವು ಗಾಯಗಳಿಗೆ ತಕ್ಕ ಮೂಲಿಕೆಯ ಔಷಧಿಗಳನ್ನು ಬಲ್ಲ ಓರ್ವ ಆಯುರ್ವೇದ ಪಂಡಿತನಂತೆ ಕಾಣುತ್ತಾರೆ. ಕೀರ್ತಿ ಅಂಥ 'ನವ್ಯ'ರಿಗೆ ಸರಿಯಾದ ಸಮಯಕ್ಕೆ ಸರಿಯಾದ ಔಷಧ ಕೊಟ್ಟಿದ್ದರೆ ಅಂಥವರಿಂದ ಮುಖ ಕಿವುಚಿ, ಹುಬ್ಬುಗಂಟಿಕ್ಕಿ ಓದಬಹುದಾದ ಪದ್ಯಗಳ ಬದಲು ಕುಲುಕುಲು ನಗೆಯ ಪದ್ಯಗಳು ಹುಟ್ಟಬಹುದಿತ್ತಂತೆ. ಪ್ರತಿಮೆಗಳನ್ನು ನೀವೇ ಓದಿ ಅನುಭವಿಸಿ (ಕುರ್ತಕೋಟಿ ಅವರ, ಆನಂದ ಝುಂಜರವಾಡರ ಸಾಹಿತ್ಯಿಕ ನಿಲುವುಗಳನ್ನು ಒಪ್ಪದೇಯೂ ಇಲ್ಲಿರುವ ಪ್ರತಿಮಾ ಶಕ್ತಿಗೆ ತಲೆದೂಗಲೇಬೇಕಾದ ಪದ್ಯವಿದು):

ಪಸೆ ತೀರಿದ ಶಬ್ದಯೋನಿಗೆ
ಸಿದ್ಧಾಂತಗಳ ಮಸಾಜುಮಾಡಿ
ಮೈನರೆಯುವ ಮೊದಲೇ
ಮೇಲೆಹಾರಲು ಮರಿಗಳ ಹೆರಲು,
ಹುರುಪಳಿಸುತ್ತಿದ್ದ ಜನಾಂಗದ
ಹೆರಿಗೆ-ಕೋಣೆಯಲ್ಲಿ ನೀವೂ ಇದ್ದೀರಿ
ಯುಗಧರ್ಮದ ಸೂಲಗಿತ್ತಿಯಾಗಿ,
ಅಸಲೀ ಅನುಭವದ ಅಗ್ಗಿಷ್ಟಿಕೆಯ
ಕಾವು ಕೊಟ್ಟುಕೊಳ್ಳಲಾಗದೇ,
ಕೂಸು-ಬಾಣಂತಿಗೆ ಕಾಸುವ-ಕಟ್ಟುವ ಆರೈಕೆಯಾಗದೇ,
ಜೀವನ ಸತ್ವ ತೇದು ಸೀಪಿಸುವವರಿಲ್ಲದೇ,
ಹೊಕ್ಕುಳ-ಬಳ್ಳಿ ಕತ್ತರಿಸಿಕೊಂಡು
ರಕ್ತಮಯವಾಗಿದ್ದ ಆ-ರಕ್ತ ಕಣ್ಣುಗಳನ್ನೂ
ಅನುರಕ್ತಿಯಿಂದ ಸಹಿಸಿದಿರಿ.

ಇರಬೇಕಾದಷ್ಟು ಕಾಲ ಕತ್ತಲೆಯಲ್ಲೇ ಇರಬೇಕೆಂಬ ಪಾಠ ಕಲಿಸಿ,
ಸಕಾಲದಲ್ಲಿ ಗುಡಿಗೆ ಕರೆದುಕೊಂಡು ಹೋಗಿ,
ಬಿಂಬದರ್ಶನ ಮಾಡಿಸಿ,
ರಕ್ತ-ಹಾಲು, ಮಲ-ಮೂತ್ರ, ಭಾವ-ವಿಚಾರ,
ಎಲ್ಲಅಡಗಿದ ಅಗುಳಿನ ವಿಶ್ವರೂಪ ಕಾಣುವ ಕಣ್ಣುಗಳ ಕರುಣಿಸಿ,
ಅನ್ನಪ್ರಾಶನ ಮಾಡಿಸಿದ್ದರೆ,
ನಿಂತ ತೊಟ್ಟಿಲು ತೂಗಿ,
ಮುತ್ತಿನ ಕುಂಚಿಗೆ ಕಟ್ಟಿ,
ಕುಸಿರೆಳ್ಳಿನ ಕಿರೀಟವಿಟ್ಟು,
ವಿಕರಾಳ ಮುಖದ ಕೋಡು-ಕೋರೆಗಳನ್ನೂ ಮುದ್ದಿಟ್ಟು,
ಕುಂಡಲಿ-ಹಾಕಿ-ಜಾತಕ ಬರೆದು-
ಬೆಚ್ಚಗಿನ ಬರಹಗಳ ಲೋಭಾನ ಹೊಗೆ ಕೊಟ್ಟು,
ನೀವು ತೋರಿದ ಕಕ್ಕುಲಾತಿಗೆ
ಒಂದಾದರೂ ಹೊಸ ಕವಿತೆ ಕುಲುಕುಲು ನಗುತ್ತಿತ್ತೋ ಏನೋ

ಪೋಸ್ಟ್ ಕೊಲೊನಿಯಲ್ ಧೋರಣೆಯವರ ಕುರಿತು ಆನಂದರ ವ್ಯಂಗ್ಯದ ಧ್ವನಿ ಹೀಗಿದೆ:

ಹೊಸ ಮಕ್ಕಳು ಹೇಸಿಕೊಳ್ಳುತ್ತವೆ
ನೋಯದೇ ನುರಿಸುವ ಸರ್ವತಂತ್ರ
ಸ್ವತಂತ್ರ ಹಲ್ಲಿನ ಹೊಳಪು ಕಂಡು,
ಒಳಗೊಳಗೇ ಭಯವೂ ಇದ್ದೀತು,
ಪ್ರತ್ಯಸ್ತ್ರಗಳ ಪ್ರಯೋಗ ತಿಳಿಯದೆ
ಶಾಸ್ತ್ರಾಸ್ತ್ರಗಳ ಪೆಟ್ಟು ಉಂಡು,
ಓಝೋನ್ ಪೊರೆ-ಹರಿದು
ಧೋ ಧೋ ಬೆಂಕಿ-ಮಳೆ ಸುರಿದು
ಮುಳುಗಡೇಯಾಗುತ್ತಿರುವ ಮೂರನೇ ಜಗತ್ತಿನ
ಸಂತ್ರಸ್ತರ ಸೃಜನ ನಗರದ ಹೊರವಲಯದ
ಹೊಸ ಹೊಸ ಕಾಲನಿಗಳಲ್ಲಿ `ಪಾದಯಾತ್ರೆ' ಮುಗಿಸಿ,
ಮರಳಿಪೂರ್ವ-ಮೀಮಾಂಸೆಯ ಸಂಪ್ರೋಕ್ಷಣೆ ಮಾಡಿಕೊಳ್ಳುತ್ತಿದ್ದಾರೇನೋ.

ಕೀರ್ತಿ ಕುರಿತು ಆನಂದರ ತಕರಾರೊಂದು ಕೂಡಾ ಆಸಕ್ತಿಕರವಾಗಿದೆ:

ಎಲ್ಲೋ ಬೇರು ಬಿಟ್ಟು,
ಇಲ್ಲಿ ಬಾಲ ಚಾಚಿಎಲ್ಲಿಯವರೂ ಅಲ್ಲದಿದ್ದರೂ
ಎಲ್ಲೆಡೆಗೂ ಜಿಗಿದಾಡುವವರ"ನಖ ಸ್ತುತಿ"
ಏಕೆ ಇಷ್ಟುದ್ದ ಬರೆದಿರಿ?

ಕುರ್ತಕೋಟಿ ಅವರನ್ನು ಕುರಿತು ಇಂಥ ರೋಮಾಂಚಕಾರಿ ಪದ್ಯ ಕೊಟ್ಟ ಆನಂದರಿಗೆ ಅಭಿನಂದನೆಗಳು. ಆದರೆ ಆನಂದರ ಹಲವಾರು ಪದ್ಯಗಳು ಕನ್ನಡ ಕಾವ್ಯಪರಂಪರೆ ಈಗಾಗಲೇ ದತ್ತಮಾಡಿರುವ ಸಿದ್ಧ ಆಕೃತಿಗಳಲ್ಲೇ ಉಸಿರಾಡುತ್ತವೆ ಎಂದು ನನಗೆ ಕೊಂಚ ಆತಂಕವಿದೆ. ಅಂದರೆ ದೇಸಿ-ಆಧುನಿಕತೆಯ ಆಕರ್ಷಣೆ, ವಿಕರ್ಷಣೆ, ಸಂಘರ್ಷ ಈ ಕುರಿತು ಬಳಸುವ ಸಲಕರಣೆಗಳು. ಮತ್ತು ಕವಿಯ ಒಲವು-ನಿಲುವು ಸಹ ದೇಶೀ ಸಾಂಸ್ಕೃತಿಕವಾದಕ್ಕೆ ಹತ್ತಿರವಾಗಿದೆ ಎಂಬುದೂ ಸ್ಪಷ್ಟವಿದೆ. ಪರ್ಯಾಯವಾಗಿ ಹೊಸಕಾವ್ಯ ಬರೆಯುತ್ತಿರುವ ಮಂಜುನಾಥ್ ಸೇರಿದಂತೆ ಇತರ ಹಲವರು ನಡೆಸುತ್ತಿರುವ ಪ್ರಯೋಗಗಳು ಪ್ರಜ್ಞೆ ಮತ್ತು ಆಕೃತಿಯ ದೃಷ್ಟಿಯಿಂದ ಹೆಚ್ಚು ಉಲ್ಲಾಸಕರವಾಗಿವೆ. ಉದಾಹರಣೆಗೆ ಮಂಜುನಾಥರ ಪದ್ಯಗಳಲ್ಲಿ ದೇಸೀ ಅನುಭಾವದ ಸೆಳೆತವಿದ್ದರೂ, ಆ ಅನುಭಾವ, ದೇಸೀ-ಆಧುನಿಕತೆ ಎಂಬ ರಾಜಕೀಯದ ಗೊಡವೆಗೆ ಹೋಗದೆ ಎಲ್ಲವನ್ನೂ ಒಳಗೊಳ್ಳುತ್ತಾ ತನ್ನದೇ ಪ್ರಪಂಚವನ್ನು ಸೃಷ್ಟಿಸಿಕೊಳ್ಳುತ್ತದೆ. ಆನಂದರ ಪದ್ಯಗಳು ಬಹುಶಃ ಅವರ ತಾತ್ವಿಕ ಚೌಕಟ್ಟಿನ ಮಿತಿಯಲ್ಲಿ ಹಾಗಿರುವುದು ಅನಿವಾರ್ಯವೇನೋ.

[ಆನಂದ ಝುಂಜರವಾಡ ಮುಧೋಳದಲ್ಲಿ ನೆಲೆಸಿರುವ ಕವಿ. ಅವರ 'ದಿಂಡಿ ಮತ್ತು ದಾಂಡಿ' ಕವನಸಂಕಲನ ಆನಂದಕಂದ ಪ್ರಕಾಶನ, ಮಲ್ಲಾಡಿಹಳ್ಳಿಯಿಂದ ಪ್ರಕಟವಾಗಿದೆ. ]


['ಮಾಯಿಯ ಮುಖಗಳು', 'ದೇಸಗತಿ' ಕಥಾಸಂಕಲನಗಳು, 'ತೇರು' ಕಾದಂಬರಿ, 'ವಾಗ್ವಾದ' ಬಿಡಿಲೇಖನಗಳ ಸಂಗ್ರಹ, 'ಸಂವಾದ' ಸಾಹಿತ್ಯಕ್ಕೆ ಸಂಬಂಧಿಸಿದ ಸಂಚಿಕೆ ಇವು ರಾಘವೇಂದ್ರ ಪಾಟೀಲರ ಸಾಹಿತ್ಯ ಸೃಷ್ಟಿ.]

ಮಲ್ಲಾಡಿಹಳ್ಳಿಯಿಂದ ಮರಳಿ ಬರುವಾಗ ನಮಗೆ ಅದೊಂದು ಸಾರ್ಥಕ ಭಾವದ ಸಂಜೆ. ಅಂದ ಹಾಗೆ ನನಗೆ ಮತ್ತು ನನ್ನ ಸಂಗಾತಿ ಪ್ರೀತಿಗೆ ಹೊಸ `ಜೀವ' ಕೊಡಲೆಂದು ಕಾದು ಕೂತಿದ್ದ ಸಮಯ ಬಂದೇ ಬಿಟ್ಟಿತು. ೨೬ ರ ಆಗಸ್ಟ್,ಶನಿವಾರ ಗೌರಿ ಹಬ್ಬದ ದಿನದಂದು ನಮಗೆ 'ಗೌರಿ' ಹುಟ್ಟಿದಳು.

4 Comments:

Anonymous Anonymous said...

Hi Sudarshan,
I am son of Anand Zunjarwad.Its nice to see your comment on my father's poetry. Keep up the good work.I really appreciate it.
-Naveen Zunjarwad
Cell:91-9448408265
naveen.az@gmail.com

Sunday, September 03, 2006 10:55:00 PM  
Anonymous Anonymous said...

ಸುದರ್ಶನರೇ,
ಚೆನ್ನಾಗಿ ಬರೆದಿದ್ದೀರಿ. ನೀವು ನವ್ಯೊತ್ತರದ ಕುರಿತು ಆಡಿದ ಮಾತುಗಳಿಗೆ ಪ್ರತಿಕ್ರಿಯೆಯಾಗಿ ಈ ಸಂದೇಶ. ನವ್ಯೋತ್ತರದ ಕುರುಹುಗಳನ್ನು ಸಾಹಿತ್ಯಕೃತಿಗಳಲ್ಲಿ ಮಾತ್ರ ಕಾಣುವ ಪ್ರಯತ್ನ ನಿಮ್ಮದು ಅನಿಸಿತು. ನನಗೇನೆನಿಸುತ್ತದೆಯೆಂದರೆ, ನಾವು ಸಾಹಿತ್ಯಕೃತಿಗಳಲ್ಲಿ ಕಾಣುವ ಪ್ರಾಕಾರಗಳು ಸಮಾಜ ಸಂಸ್ಕೃತಿಗಳಲ್ಲಿ ನಡೆಯುವ ಆಗುಹೋಗುಗಳೊಂದಿಗೆ ತಳುಕು ಹಾಕಿಕೊಂಡಿರುತ್ತವಲ್ಲವೇ? ಹಾಗಿದ್ದರೆ, ನವ್ಯೋತ್ತರ ಲಕ್ಷಣಗಳು ನಮ್ಮ ಸಾಮಾಜಿಕ ಅನುಭವಗಳೊಳಗೆ ಬಂದಿವೆಯೇ? ಹಾಗೆ ಬಂದಿರಬಹುದಾದ ಲಕ್ಷಣಗಳಿಗೂ, ನಮ್ಮ ಸಾಹಿತ್ಯದಲ್ಲಿ ಕಾಣುವ ಇದರ ಕುರುಹುಗಳಿಗೂ ಯಾವ ಬಗೆಯ ಸಂಬಂಧವಿದೆ? ಈ ಪ್ರಶ್ನೆಗಳು ನಿಮ್ಮ ಸಂವಾದ ಓದುತ್ತ ಮೂಡಿದವು.
ಕಮಲಾಕರ
http://nudibeedu.blogspot.com/

Tuesday, September 05, 2006 3:35:00 AM  
Blogger Sudarshan said...

ನವೀನ್,

ನೀವು ಆನಂದ ಝುಂಜರವಾಡರ ಮಗನೆಂದು ತಿಳಿದು ಸಂತೋಷವಾಯ್ತು. ನಿಮ್ಮ ತಂದೆಗೆ ಅವರ ಕವಿತೆಗಳನ್ನು ನಾನು ಮೆಚ್ಚಿಕೊಂಡಿರುವುದಾಗಿ ತಿಳಿಸಿ. ಅಂದ ಹಾಗೆ ನಿಮಗೂ ಆ ಸಾಹಿತ್ಯಿಕ ಪ್ರತಿಭೆ ಇರುವ ಸಾಧ್ಯತೆ ಇದೆ. ಪ್ರಕಟಿಸಿ ಎಲ್ಲರೊಂದಿಗೆ ಹಂಚಿಕೊಳ್ಳಿ.

ಧನ್ಯವಾದಗಳು.

-ಸುದರ್ಶನ


ಕಮಲಾಕರ್ ಅವರಿಗೆ,

ನಿಮ್ಮ ಸಕಾರಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು.

ನಿಮ್ಮ ಆಲೋಚನೆ ಸರಿಯಾಗಿದೆ. ಸಾಹಿತ್ಯವೆನ್ನುವುದು ಪ್ರಧಾನವಾಗಿ ಅನುಭವ ಕಥನ. ಆದ್ದರಿಂದ ಇಂದಿನ ಸಾಮಾಜಿಕ ಬದಲಾವಣೆಗಳು, ವಿಜ್ಞಾನ ತಂತ್ರಜ್ಞಾನದಿಂದ ಬದಲಾದ ಮನುಷ್ಯನ ಪ್ರಜ್ಞೆ, ಲೋಕದೃಷ್ಟಿ ಇವೆಲ್ಲವೂ ಸಾಹಿತ್ಯದಲ್ಲಿ ಒಂದು ಕಲಾತ್ಮಕ ಅಭಿವ್ಯಕ್ತಿಯಾಗಿ ಬರುವುದು ಸಹಜ. ಈ ಅರಿವಿನಿಂದಲೇ ನನ್ನ ಟಿಪ್ಪಣಿ ಬರೆಯಲ್ಪಟ್ಟಿದೆ, ಬರೀ ಸಾಹಿತ್ಯಿಕ ಪಠ್ಯದ ಶೋಧವಾಗಿ ಅಲ್ಲ. ಸಮಕಾಲೀನ ಪ್ರಜ್ಞೆ ಮತ್ತು ಅನುಭವದ ದೃಷ್ಟಿಯಿಂದ ಲೇಖನದಲ್ಲಿ ನಾನು ಉಲ್ಲೇಖಿಸಿರುವ `ಇನ್ನೂ ಒಂದು' ಮತ್ತು `ಕಾಲ ಜಿಂಕೆ' ಇವುಗಳನ್ನು ನೀವು ಓದಬಹುದು.

ಪ್ರತಿಕ್ರಿಯಿಸುತ್ತಿರಿ. ಧನ್ಯವಾದಗಳು.

-ಸುದರ್ಶನ

Tuesday, September 05, 2006 6:34:00 AM  
Anonymous Anonymous said...

Hello Sudarshan,

Your blog is very refreshing. Keep writing regularly.

Laxminarasimha

Monday, October 16, 2006 11:02:00 AM  

Post a Comment

<< Home