ಸೃಜನ-ಕನ್ನಡಿಗ (sRujana-kannaDiga)

ಸಹೃದಯ, ವಿಶ್ವಾಸ ಮತ್ತು ಸೃಜನಶೀಲತೆ: Creator of this blog is Sudarshan. He has interest in Engineering research and Kannada writing. As a part of the process of Kannada writing, this blog will pay extra attention to cultural and philosophical aspects of Mathematics, Science, History, Language etc.

Name:
Location: Mysore, Karnataka, India

Friday, February 10, 2006

ಹಳೆಯ ಮತ್ತು ಹೊಸದರ ನಡುವೆ ಶ್ಯಾಮ್ ಬೆನಗಲ್

ಇವೊತ್ತು ನಿಂತು ನೋಡಿದಾಗ ಹಳೆಯದೆನಿಸಬಹುದಾದ ಕಾಲದಲ್ಲಿ ಹೊಸ ಅಲೆಯ ಚಿತ್ರ ಕೊಟ್ಟ ನಿರ್ದೇಶಕ ಶ್ಯಾಮ್ ಬೆನಗಲ್ ನಮ್ಮ ಇನ್ಸ್ಟಿಟ್ಯೂಟ್‍ಗೆ ಬಂದಿದ್ದರು. ಲೀಡರ್‍‍ಶಿಪ್ ಬಗ್ಗೆ ಮಾತಾಡಲು ಮ್ಯಾನೇಜ್‍ಮೆಂಟ್ ಸ್ಕೂಲ್-ನವರು ಅವರನ್ನು ಕರೆಸಿದ್ದರು.

ತಾವು ಆರನೇ ವಯಸ್ಸಿನಲ್ಲಿಯೇ ಸಿನಿಮಾ ಮಾಡುವ ಮನಸ್ಸು ಹೊಂದಿದ್ದರ ಬಗ್ಗೆ, ತಮ್ಮ ಮೇಲೆ ಪ್ರಭಾವ ಬೀರಿದ ನೆಹರು ಬಗ್ಗೆ ಮಾತನಾಡಿದರು. (ಒಂದು ಸಂವಹನೆಯಲ್ಲಿ ಅಡಗಿರಬಹುದಾದ ಹಲವು ಪದರು-ಗಳ ಬಗ್ಗೆ ನೆಹರು ಅವರ ಕಾಲೇಜಿನಲ್ಲಿ ಮಾತಾಡಿದ್ದರಂತೆ. ಇವೊತ್ತಿನ ಯಾವ ರಾಜಕಾರಣಿಯೂ ಅಂಥ ವಿಷಯದ ಬಗ್ಗೆ ಮಾತನಾಡುವ ಸಾಧ್ಯತೆಯನ್ನು ಯೋಚಿಸಲಾರೆ ಎಂದರು.) ಇವೊತ್ತಿನ ಎಮ್.ಎನ್.ಸಿ.ಗಳಿಗೆ ವ್ಯತಿರಿಕ್ತವಾಗಿ ಅಂದಿನ ಟಾಟ, ಬಿರ್ಲಾ ಸಂವೇದನೆಗಳನ್ನು, ಅವರ ನಾಯಕತ್ವದ ಗುಣಗಳನ್ನು ನೆನೆದರು.

ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿ ಮತ್ತು ಅದರ ನಾಯಕರು ಇಂಗ್ಲೆಂಡಿನ ಶಿಕ್ಷಣದಿಂದ ತಂದ ಆಧುನಿಕ ಮೌಲ್ಯಗಳಾದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾನತೆ ಇವುಗಳನ್ನು ಬಿತ್ತುತ್ತಿರುವಾಗ, ಸಮಾನಾಂತರವಾಗಿ ಭಾರತೀಯ ಚಲನಚಿತ್ರದ ಮುಖ್ಯವಾಹಿನಿ ಹೇಗೆ ಪರಂಪರೆ ಮತ್ತು ಆಧುನಿಕತೆಯ ನಡುವಿನ ಸಂಘರ್ಷವನ್ನು ದಾಖಲಿಸುತ್ತಾ ಬಂತು ಎಂಬುದನ್ನು ವಿವರಿಸಿದರು.

ಹಿಂದಿನ ಸಿನೆಮಾಗಳು ಪರಂಪರೆ ಮತ್ತು ಆಧುನಿಕತೆ, ಹಳ್ಳಿ ಮತ್ತು ನಗರ, ಬಡವ ಮತ್ತು ಶ್ರೀಮಂತ ಇವುಗಳ ಸಂಘರ್ಷದಲ್ಲಿ ಪರಂಪರೆ, ಹಳ್ಳಿ ಮತ್ತು, ಬಡವನ ಮೌಲ್ಯಗಳನ್ನೇ ಎತ್ತಿಹಿಡಿಯುತ್ತಿದ್ದವು. ಇತ್ತೀಚಿನ ಕೆಲವು ಸಿನೆಮಾಗಳಲ್ಲಿ ಆಧುನಿಕತೆಯನ್ನು ಸಾಂಕೇತಿಸುವ ಪಾತ್ರಗಳು ಭಾರತೀಯರನ್ನು ಕ್ರಿಯಾಶೀಲತೆಯತ್ತ ಉತ್ತೇಜಿಸುವುದನ್ನು ತೋರಿಸುತ್ತಿವೆ ಎಂಬುದನ್ನು ವಿವರಿಸುತ್ತಾ,
ಇವೊತ್ತಿನ ಟೈಮ್ಸ್ ಆಫ್ ಇಂಡಿಯಾದ ಲೇಖನವನ್ನು ಉದ್ಧರಿಸುತ್ತಾ ಆಮೀರ್ ಖಾನ್‍ನ ಇತ್ತೀಚಿನ ಚಿತ್ರ `ರಂಗ್ ದೇ ಬಸಂತಿ'ಯಲ್ಲಿನ ಇಂಗ್ಲೀಶ್ ಯುವತಿಯ ಪಾತ್ರವೊಂದು ಯುವಕರನ್ನು ಭ್ರಷ್ಟಾಚಾರದ ವಿರುದ್ಧ ಕ್ರೀಯಾಶೀಲರಾಗುವಂತೆ ಉತ್ತೇಜಿಸುವ ಚಿತ್ರಣವನ್ನು ಉಧಾರಿಸಿದರು. (ಲೇಖನ `ಲಗಾನ್' ಮತ್ತು `ಮಂಗಲ್ ಪಾಂಡೆ' ಚಿತ್ರಗಳು ಈ ದಿಕ್ಕಿನಲ್ಲಿನ ಹಿಂದಿನ ಮೊದಲ ಹೆಜ್ಜೆಗಳು ಎಂದು ವಾದಮಾಡುತ್ತದೆ.)

ಆದರೆ ಈ ಸಂಕೇತಗಳನ್ನು ಇಂದಿನ ಪ್ರೇಕ್ಷಕ ಐ.ಟಿ. ಉತ್ತೇಜಿತ ಸಂಸ್ಕೃತಿಯ ಜೊತೆ ಸಮೀಕರಿಸುವ ಸಾಧ್ಯತೆ ಇದೆಯಲ್ಲವೆ? ಎಂದು ನನಗೆ ಬೆನಗಲ್ ಅವರನ್ನು ಆ ಕ್ಷಣದಲ್ಲಿ ಕೇಳಬೇಕು ಎನ್ನಿಸಿತು. ಆಗ ಕೇಳುವ ಅವಕಾಶವಾಗಲಿಲ್ಲ. ಭಾಷಣ ಮುಗಿದ ನಂತರ ಸೆಮಿನಾರ್ ರೂಮಿನಲ್ಲಿ ಒಂದು ಸಂವಾದ ಇಟ್ಟುಕೊಂಡಿದ್ದರು. ಆಗ ಕೇಳಿದೆ.

ನಾನು ಪ್ರಶ್ನೆ ಪೂರ್ತಿ ಮಾಡುವ ಮೊದಲೇ ಐ.ಟಿ., ಆಧುನಿಕ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಷ್ಟಾಚಾರ ರಹಿತ ವ್ಯವಸ್ಥೆ ಇತ್ಯಾದಿಗಳನ್ನು ತರುವ ಸಾಧ್ಯತೆಗಳನ್ನು ಖಡಾಖಂಡಿತವಾಗಿ ನಿರಾಕರಿಸಿದರು. ಬೆಂಗಳೂರಿನ ಐ.ಟಿ.ಯಿಂದ ಲಾಭಪಡೆದವರು ಸಮಾಜದಲ್ಲಿ ಅಂಥಾ ವ್ಯತ್ಯಾಸವೇನೂ ಮಾಡಿಲ್ಲ ಎಂದರು. ಬಿ.ಪಿ.ಓ.ನ ಹೆಚ್ಚಿನ ಸಂಬಳದ ಕೆಲಸದಿಂದ ಯಾವುದೇ ರಚನಾತ್ಮಕ ವ್ಯತ್ಯಾಸ ಆಗಿಲ್ಲ, ಆಗುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಇನ್ಫಾರ್ಮೇಶನ್ ಟೆಕ್ನಾಲಜಿಯ ಪ್ರೊಫೆಸರ್ ಒಬ್ಬರು ಕರ್ನಾಟಕದ ಪ್ರಾಜೆಕ್ಟ್ `ಭೂಮಿ', ಮತ್ತು ಮಹಾರಾಷ್ಟ್ರದ `ರೈಟ್ ಟು ಇನ್ಫಾರ್ಮೇಶನ್ ಆಕ್ಟ್' ಇಂಥವು ಆಡಳಿತದಲ್ಲಿ ಪಾರದರ್ಶಕತೆಯನ್ನು ತರುತ್ತಿರುವ ಕಡೆ ಅವರ ಗಮನ ಸೆಳೆದರು. ಅಂಥವು ಕೆಲವು ಪ್ರಗತಿಪರ ಹೆಜ್ಜೆಗಳು ಎಂದು ಒಪ್ಪಿಕೊಂಡ ಬೆನಗಲ್ ಭ್ರಷ್ಟಾಚಾರವನ್ನು ಪೋಷಿಸುವ ಹಿತಾಸಕ್ತಿಗಳ ಬೇರು ಎಷ್ಟು ಆಳವಾದದ್ದು ಎಂದು ಕೆರೋಸಿನ್ ಲಾಬಿಯ ಜೊತೆಗಿನ ತಮ್ಮ ಅನುಭವದ ಮೂಲಕ ವಿವರಿಸಿದರು. ಸಬ್ಸಿಡಿಯ ಪ್ರಚಾರಕ್ಕೆ ಸಂಬಂಧಿಸಿದಂತೆ ಚಿತ್ರವೊಂದನ್ನು ಮಾಡುವಂತೆ ಸರ್ಕಾರ ಅವರನ್ನು ಕೇಳಿಕೊಂಡಿತ್ತು.

ಆಮುಲ್ ಚಳುವಳಿಗೆ ಸಂಬಂಧ ಪಟ್ಟ ತಮ್ಮ ಚಿತ್ರ `ಮಂಥನ್' ಮತ್ತು `ಸ್ವಾಧ್ಯಾಯ' ಚಳುವಳಿಗೆ ಸಂಬಂಧ ಪಟ್ಟ ತಮ್ಮ ಚಿತ್ರ `ಅಂತರ್ನಾದ್' ಇವುಗಳ ನಿರ್ಮಾಣದ ಅನುಭವದ ರೋಮಾಂಚನವನ್ನು ಹಂಚಿಕೊಂಡರು. ಇವೆರಡೂ ಸ್ವಾತಂತ್ರ್ಯೋತ್ತರ ಭಾರತ ಕಂಡ ಉತ್ಕೃಷ್ಟ `ಸಹಕಾರೀ' ಚಳುವಳಿಗಳು ಎಂಬುದನ್ನು ಇಲ್ಲಿ ನೆನೆಯಬಹುದು.

ನಿಮ್ಮ ಇತ್ತೀಚಿನ ಚಿತ್ರಗಳು ಸಾಮಾಜಿಕ ಬದಲಾವಣೆ, ಅಭಿವೃದ್ಧಿಯ ಸಮಸ್ಯೆಯ ಕುರಿತು ಒತ್ತು ಕಳೆದುಕೊಳ್ಳುತ್ತಿವೆಯಲ್ಲ? ಎಂಬ ಸಭಿಕರೊಬ್ಬರ ಪ್ರಶ್ನೆಗೆ, ಮನರಂಜನೆಗೆ ಒತ್ತು ಹೆಚ್ಚಾಗಿರುವ ಇವೊತ್ತಿನ ಸಂದರ್ಭದಲ್ಲಿ ಅಂಥ ಅನಿವಾರ್ಯತೆಯನ್ನು ಒಪ್ಪಿಕೊಂಡರು. ಮಲ್ಟಿಪ್ಲೆಕ್ಸ್ ವ್ಯವಸ್ಥೆಯಿಂದ ಪ್ರೇಕ್ಷಕರ ವಿಭಾಗೀಕರಣ ಸುಲಭವಾಗಿ ಸಹಾಯವಾಗಿದೆ ಎಂದರು.

ಶ್ಯಾಮ್ ಬೆನೆಗಲ್‍ರು ನಮ್ಮ ನಿಮ್ಮಂತೆ ಹಳೆಯ ಸಂವೇದನೆಗಳನ್ನು ಉಳಿಸಿಕೊಳ್ಳಲು ಹೆಣಗುತ್ತಾ, ಇವೊತ್ತಿನ ಹೊಸ ಕಾಲಕ್ಕೂ ಹೊಂದಿಕೊಳ್ಳಲು ಯತ್ನಿಸುತ್ತಿರುವ ವ್ಯಕ್ತಿಯಾಗಿ ಕಂಡರು.

4 Comments:

Blogger Saamaanya Jeevi said...

ಈ ಬರಹ ಓದಿ ಸ್ವಲ್ಪ ಸಮಾಧಾನವಾದರೂ, ನನಗೆ ಅವರ ಬಗ್ಗೆ ಇರುವ ಅಸಮಾಧಾನವನ್ನು ದಾಖಲಿಸಬೇಕಿದೆ. ಪತ್ರಿಕೆಗಳು ಇತ್ತೀಚೆಗೆ ರೂಪಿಸುತ್ತಿರುವ ಬೆನೆಗಲ್ ವಿರುದ್ಧ ಈ ನನ್ನ ಅಸಮಾಧಾನ. ಬೆನೆಗಲ್-ರ ಇತ್ತೀಚಿನ ಹೇಳಿಕೆಗಳು ವರ್ತನೆ, ಧೋರಣೆ ಇತ್ಯಾದಿಗಳನ್ನು ನೋಡಿದರೆ ಅಷ್ಟೇನೂ ಆಶಾದಾಯಕವೆಂದೆನ್ನಿಸುವುದಿಲ್ಲ. ಸುಭಾಷ್ಚಂದ್ರ ಬೋಸ್ ಕುರಿತ ಸಿನೆಮಾದ ಸಮಯದಲ್ಲಿ ಅವರ ಸಂದರ್ಶನಗಳನ್ನು ಓದಿದರೆ ಅವರ ೭೦-ರ ದಶಕದ ಸಂವೇದನೆಗಳು ತಮ್ಮ ಜೀವಶಕ್ತಿ ಕಳೆದುಕೊಳ್ಳತ್ತಲಿದೆ ಎಂದೆನ್ನಿಸುವಂತಿತ್ತು. ನನ್ನ ಪ್ರಕಾರ ಅವರ ಕಟ್ಟ ಕಡೆಯ ಉತ್ತಮ ಚಿತ್ರವೆಂದರೆ 'ಸೂರಜ್ ಕಾ ಸಾಥ್ವಾಂ ಘೋಡಾ'. ಅವರ 'ಮಮ್ಮೊ' ಕೂಡಾ ಚೆನ್ನಾಗಿತ್ತು. ಆದರೆ ಆ ನಂತರದಲ್ಲಿ ಅವರು ದಿಕ್ಕುತಪ್ಪಿದರು ಎಂದೆನ್ನಿಸಿದೆ. ಮುಖ್ಯವಾಗಿ 'ಸರ್ದಾರೀ ಬೇಗುಂ'-ನ ನಂತರ. ಸ್ವಲ್ಪ ಮಟ್ಟಿಗೆ ಬಾಲಿವುಡ್-ನ ಪ್ರಭಾವಕ್ಕೆ ಸಿಕ್ಕಂತಾಗಿದ್ದಾರೆ. ಬಾಲಿವುಡ್ ಕೂಡಾ ಅವರನ್ನು ಅತಿಯಾಗಿ ಹೊಗಳುತ್ತಾ ಒಂದು ಬಗೆಯ ಅಪ್ರಾಪ್ರಿಯೇಷನ್ ಮಾಡುತ್ತಿದೆ ಎನ್ನಿಸುತ್ತದೆ. ಅವರ ಕಾಲದ ಅತ್ಯಂತ ಸಂವೇದನಾಶೀಲ ನಟರಾದ ಅಮರೀಶ್ ಪುರಿ, ಓಂ ಪುರಿ, ನಾಸಿರುದ್ದೀನ್ ಶಾ-ರ ಇತ್ತೀಚಿನ ಮಾತು, ಧೋರಣೆಗಳನ್ನು ನೋಡಿದರೂ ಅದೇ ಬಗೆಯ ನಿರಾಸೆಯಾಗುತ್ತದೆ. ಒಟ್ಟು ಕಾಲನ ಹೊಡೆತಕ್ಕೆ ಸಿಕ್ಕ ಕೆಲ ಮನಸ್ಸುಗಳು ತಮ್ಮ ಮೊದಲಿನ ಸಂವೇದನೆಗಳನ್ನು ಉಳಿಸಿಕೊಂಡಂತಿಲ್ಲ. ಈ ಮಾತನ್ನು ಇದಕ್ಕಿಂತ ಹೆಚ್ಚು ಬುದ್ಧಿಜೀವಿ, ಸಾಹಿತಿ, ನಟ, ನಿರ್ದೇಶಕರಿಗೂ ಅನ್ವಯಿಸಬಹುದಾಗಿದೆ. ೭೦, ೮೦-ರ ದಶಕದ ಸಂವೇದನೆಗಳನ್ನು ಇರ್ರೆಲೆವೆಂಟ್ ಎಂದು ಜರೆದು ನಡೆಯುವ ಯಾವುದನ್ನೂ ನನಗೆ ಪ್ರಗತಿ ಎಂದು ಕರೆಯಲು ಮನಸ್ಸೊಪ್ಪುವುದಿಲ್ಲ. ಆದರೆ ಅನೇಕರು ಆ ಬಗೆಯ ಧೋರಣೆಗಳನ್ನು ಇತ್ತೀಚೆಗೆ ತಳೆಯುತ್ತಿದ್ದಾರೆ. ಇವತ್ತಿನ ಮೂರನೆಯ ದರ್ಜೆಯ ಪ್ರಯೋಗಗಳನ್ನು ೭೦-ರ ದಶಕದ ಅತ್ಯುತ್ತಮವಾದ್ದಕ್ಕೆ ಹೋಲಿಸುವುದು ಮುಂತಾದ ಅಪಾಯಕಾರಿ ಕೆಲಸಗಳನ್ನು ಮಾಡುತ್ತಿದ್ದಾರೆ.

ನಮಗೆ ಮತ್ತೆ 'ಯಾತ್ರಾ'-ದಂತಹ ಸೀರಿಯಲ್ ತೆಗೆದ ಶ್ಯಾಂ ಬೆನೆಗಲ್ ಬೇಕಾಗಿದೆ. ಆ ಸಂವೇದನೆಗಳ ಪೂರ್ತಿ ಶಕ್ತಿಯಿಂದಲೇ ಅವರು ೨೧-ನೇ ಶತಮಾನವನ್ನೆದುರಿಸಿ, ಅಗತ್ಯ ಬಿದ್ದಾಗ ಕಲಾತ್ಮಕವಾದ ಹೋರಾಟಗಳನ್ನು ನಡೆಸುತ್ತಾ ಸಾಗುವುದು ಕನಿಷ್ಠ ನನಗಂತೂ ಬೇಕಿದೆ. ಅದರ ಹೊರತಾಗಿ 'ಸರ್ದಾರೀ ಬೇಗಂ', 'ಸುಭಾಷ್ ಬೋಸ್' ಮುಂತಾದ ಸುಲಭದ ದಾರಿಗಳನ್ನು ಅವರು ಬಿಟ್ಟರೆ ನಮಗೆ ಒಳ್ಳೆಯದು. ಅವರು ಬಿಡಲಿ ಎಂದು ಹೇಳುವಷ್ಟು ನಾವು ದೊಡ್ಡವರಲ್ಲ. ಆದರೆ ಆಶಿಸುವುದಕ್ಕೆ ಅಧಿಕಾರವಿದೆ.

Sunday, February 12, 2006 4:02:00 AM  
Anonymous Anonymous said...

ಸೂ: ನನ್ನ ಕೆಳಗಿನ ಕಾಮೆಂಟ್ ಒಂದಷ್ಟು offtopic ಎನಿಸಬಹುದು, ಆದರೂ ಇದಕ್ಕೆ ಒಂದು ರೀತಿ ಸಂಬಂಧಪಟ್ಟ ಂತಿರುವ ನನ್ನ ಅನಿಸಿಕೆಗಳನ್ನ ಮುಂದಿಡುತ್ತಿರುವೆ.

ಕಾಲದ ಹೊಡೆತಕ್ಕೆ ಸಿಕ್ಕ ಮನಸ್ಸುಗಳು ಎನ್ನುವುದಕ್ಕಿಂತ ಕಲಾತ್ಮಕತೆ - ವಾಣಿಜ್ಯ ಯಶಸ್ಸು (commercial success) ಮಧ್ಯೆ ಸಿಲುಕಿದವರು ಎಂದು ಹೇಳಬಹುದು.

ಕೆಲವರು (ಹೊಸಬರು) ಸಾಧ್ಯವಾದಷ್ಟು ಕಲಾತ್ಮಕತೆ ರೂಢಿಸಿಕೊಂಡು ಚಿತ್ರಗಳನ್ನು ವಾಣಿಜ್ಯ ರೀತ್ಯ ಯಶಸ್ವಿಯಾಗುವಂತೆಯೂ ನೋಡಿಕೊಂಡಿದ್ದಾರೆ.

principalistic ಆಗಿ ಸಿನೆಮಾ ಮಾಡುವುದು ಒಂದೆಡೆಯಾದರೆ principles compromise ಮಾಡಿಕೊಂಡು ತಮಗೂ, ತಮ್ಮ ನಿರ್ಮಾಪಕರಿಗೂ ಹಾನಿಯಾಗದಂತೆ ನೋಡಿಕೊಳ್ಳುವ ಹಾಗೆ ಸಿನೆಮಾ ಮಾಡುವುದು ಇನ್ನೊಂದೆಡೆ. ನನ್ನ ಅನಿಸಿಕೆಯಂತೆ ಶ್ಯಾಮ್ ಬೆನಗಲ್ ಈ ಎರಡನೆಯ ವಿಧಾನ ಅನುಸರಿಸಹೋಗಿ ಸಾಕಷ್ಟು ಯಶಸ್ವಿಯಾಗದೆ ಧ್ವಂಧ್ವದಲ್ಲಿದ್ದಾರೆ. ಆದರೆ ಅದಕ್ಕಾಗಿ ಅವರನ್ನು ದೂಷಿಸುವಂತಿಲ್ಲ... ಬರಿಯ ಕಲಾತ್ಮಕವಾದ, ಅರ್ಥಪೂರ್ಣವಾದ ಮಾತ್ರಕ್ಕೆ ಸಿನೆಮಾಗಳನ್ನು ನಮ್ಮ ನಿಮ್ಮಂತೆ ಎಲ್ಲರೂ ನೋಡೋದಿಲ್ಲವಲ್ಲ. ಸಾಕಷ್ಟು ವೀಕ್ಷಕರಿಗೆ ತಲುಪದ ಸಿನೆಮಾ ಸಂದೇಶ ಹೊತ್ತು ಬಂದರೂ ಪ್ರಯೋಜನವಾಗದು. ಇಂದು, ಅವರೇ ಹೇಳಿದಂತೆ ಮಲ್ಟಿಪ್ಲೆಕ್ಸುಗಳು ಬಂದು ಇಂತಹ ಸಿನೆಮಾಗಳಿಗೆ ದಾರಿ ಮಾಡಿಕೊಟ್ಟಿರುವುದರಿಂದ ಮುಂದೆ ಅಂಥವುಗಳನ್ನು ಕಾಣುವ optimism ಕೂಡ ಉಂಟು.

Monday, February 13, 2006 12:17:00 AM  
Blogger Sudarshan said...

`ಸಮಕಾಲೀನ ಸಂದರ್ಭದಲ್ಲಿ ಶ್ಯಾಮ್ ಬೆನಗಲ್'-ಕುರಿತು ವಿಶ್ಲೇಷಣಾತ್ಮಕ ಚರ್ಚೆಯೊಂದು ವಿನಾಯಕ ಪಂಡಿತ್‍ರ `ಅಗಸೆಯ ಅಂಗಳ'ದಲ್ಲಿ ಮುಂದುವರೆದಿದೆ.

Friday, February 17, 2006 4:13:00 AM  
Anonymous Anonymous said...

ಮಾನ್ಯರೇ,
ಈ ಚರ್ಚೆಯ ಸಂದರ್ಭದಲ್ಲಿ ಪ್ರಸ್ತುತವಾಗಬಹುದಾದ ಒಂದು ಮಾತು. ನೀವು ಹಾಗೂ ಪ್ರತಿಕ್ರಿಯೆಯಲ್ಲಿ ಶಿವು ಅವರು ಮತ್ತು ವಿನಾಯಕ್ ಪಂಡಿತ್ ರವರು ಹಲವಾರು ಬದಲಾವಣೆಗಳ ಕುರಿತು ಪ್ರಸ್ತಾಪಿಸಿದ್ದೀರಿ. ಜತೆಗೇ, ಸಿನೆಮಾ ಎನ್ನುವ ಪ್ರಕಾರ (Genre) ದಲ್ಲಿಯೂ ಬದಲಾವಣೆಯಾಗಿದೆ. ಅದರ ವ್ಯಾಕರಣವೇ ಬದಲಾಗಿದೆ. ಆಧುನಿಕ ಸಿನೆಮಾ ಹಾಗೂ ಆಧುನಿಕೋತ್ತರ ಸಿನೆಮಾಗಳು ಬೇರೆ ಬೇರೆ ರೀತಿಯ ಕಥನಗಳು. ಆಧುನಿಕ ಸಿನೆಮಾದ asceticism ಆಧುನಿಕೋತ್ತರ ಸಿನೆಮಾದಲ್ಲಿಲ್ಲ. ಇದು ಅದರ ವಿರುದ್ಧ ದಿಕ್ಕಿನಲ್ಲಿ ಸಾಗಿ saturation/ abundance ನ್ನು ಅಪ್ಪಿಕೊಳ್ಳುತ್ತದೆ. ಹೀಗಾಗುವಾಗ ಅದು ಸಾಂಸ್ಕೃತಿಕ ರಾಜಕೀಯ ಬದಲಾವಣೆಗಳಲ್ಲೂ ಪಾಲ್ಗೊಂಡು ತನ್ನ ವೇಷವ್ಯತ್ಯಯವನ್ನು ಜಾಹೀರು ಮಾಡುತ್ತದೆ. ಇದು, ಐಡಿಯಾಲಜಿ ಹಿನ್ನೆಲೆಗೆ ಸೇರಿದ, ಮೇಲ್ಪದರದ ಪ್ರಸ್ತುತಿಯೇ ಸಿನೆಮಾದ ಜೀವಾಳವಾಗುವ, ರಾಜಕೀಯವಾಗಿ ಶತ್ರು ಏಕರೂಪಿಯಾಗಿ ಸಿಗದ ಸಂದರ್ಭದ, ಸಂವಹನೆಯೇ ವಾಸ್ತವ ನಿರ್ಮಿತಿಯ ಮೂಲಬೀಜವಾದ ಸಾಂಸ್ಕೃತಿಕ ಸಮಾಜದ ಅಭಿವ್ಯಕ್ತಿ ವಿಧಾನ. ಇದರಲ್ಲಿ, ಬೆನೆಗಲ್ ಹಿಂದಿನ ಸಿನೆಮಾ ಮಾಡಿದರೆ ಸಿನೆಮಾ ಎಂದು ಕೂಡ ಪರಿಗಣಿಸಲಾಗುವುದಿಲ್ಲವೇನೋ.
ಎರಡನೆಯದಾಗಿ, ಹಿಂದಿನ ಮಾದರಿಯ ಅಭಿವ್ಯಕ್ತಿ ವಿಧಾನವೇ ಸರಿ ಎಂಬ ನಮ್ಮ ಅನಿಸಿಕೆಗೆ ಒಂದು ಬಗೆಯ nostalgia ಕಾರಣವಾಗಬಹುದಾ ಎಂದು ನನ್ನ ಗುಮಾನಿ.
ಕಮಲಾಕರ
30 ಜುಲೈ 2006

Sunday, July 30, 2006 11:45:00 AM  

Post a Comment

<< Home