`ಒಳ ವಿಮರ್ಶಕ'ನ ಅನಿವಾರ್ಯತೆ: ಡಾ. ಯು. ಆರ್. ಅನಂತಮೂರ್ತಿಯವರ `ಋಜುವಾತು' ಅಂಕಣಕ್ಕೆ ಒಂದು ಪ್ರತಿಕ್ರಿಯೆ
(ಇತ್ತೀಚೆಗೆ ಬಿಡುಗಡೆಯಾದ ಡಾ. ಯು. ಆರ್. ಅನಂತಮೂರ್ತಿಯವರ `ಉದಯವಾಣಿ' ಪತ್ರಿಕೆಯ ಅಂಕಣ ಬರಹಗಳ ಪುಸ್ತಕರೂಪಕ್ಕೆ ಪ್ರತಿಕ್ರಿಯೆಯಾಗಿ ಬರೆದದ್ದು. ತನ್ನ ಗ್ರಾಮೀಣ ಪರಂಪರೆಯ ಬೇರುಗಳ ನೆಲೆಯಿಂದ ದೂರವಾಗಿ ನಗರೀಕರಣಗೊಳ್ಳುತ್ತಾ ವಿಘಟಿತ ಮನಸ್ಥಿತಿಯಲ್ಲಿರುವ ಆಧುನಿಕ ಮಧ್ಯಮ-ವರ್ಗದ ಭಾರತೀಯನಿಗೆ ಅನಂತಮೂರ್ತಿ ಓರ್ವ `ಒಳ-ವಿಮರ್ಶಕ'ರಾಗಿ ರೂಪಗೊಂಡಿದ್ದಾರೆ. ಹಾಗೆಯೇ ತಾವೊಬ್ಬ ಹಿಂದೂ ಧರ್ಮದ 'ಒಳ-ವಿಮರ್ಶಕ'ನೆಂದು ಸಹ ಅವರೇ ಹಲವೆಡೆ ಹೇಳಿಕೊಂಡಿದ್ದಾರೆ. ನಗರದ ಆಧುನಿಕ ಮಧ್ಯಮವರ್ಗದವನಿಗೂ, ಎಲ್ಲಾ ಧರ್ಮದ ಮೂಲದವರಿಗೂ ಹೀಗೊಬ್ಬ ಒಳ-ವಿಮರ್ಶಕನೊಬ್ಬನ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ. ಅದೇ ರೀತಿ ಬರಹಗಾರನೊಬ್ಬ ತನ್ನನ್ನೇ ತಾನು ಓರ್ವ `ಒಳ-ವಿಮರ್ಶಕ'ನಾಗಿ ರೂಪಿಸಿಕೊಳ್ಳ ಹೊರಟಾಗ ತನ್ನದೇ ಆದ ಕೆಲವು ಅನಿವಾರ್ಯತೆಗಳನ್ನು ಎದುರಿಸುತ್ತಾನೆ. ಈ ಲೇಖನ ಅಂಥಾ ಎರಡೂ ಬಗೆಯ ಕೆಲವು ಅನಿವಾರ್ಯತೆಗಳನ್ನು ಸ್ಪರ್ಶಿಸುತ್ತದೆ ಅಷ್ಟೇ. ಮುಖ್ಯವಾಗಿ ಇದೊಂದು ಪ್ರತಿಕ್ರಿಯೆಯ ರೂಪದಲ್ಲಿ ೭೫ ತುಂಬಿರುವ ನಮ್ಮ ನಡುವಿನ ಹಿರಿಯ ಚೇತನ ಡಾ. ಅನಂತಮೂರ್ತಿಯವರ ಕಾಳಜಿಗಳಿಗೆ ಒಂದು ಸ್ಪಂದನೆ.)
ಕನ್ನಡದ ಓರ್ವ ಹಿರಿಯ-ಧೀಮಂತ ಲೇಖಕರಾಗಿ ಶ್ರೀ ಅನಂತಮೂರ್ತಿ ಕಳೆದ ಸುಮಾರು ನಾಲ್ಕು ದಶಕಗಳಿಂದ ಕಥೆ, ಕಾವ್ಯ ಮೂಲಕ ಮಾತ್ರವಲ್ಲದೆ ಸೃಜನಶೀಲ ಚಿಂತನೆಯಿಂದ ನಮ್ಮ ಸುತ್ತಲಿನ ವಿದ್ಯಮಾನಗಳನ್ನು ಗಾಂಧೀ-ಲೋಹಿಯಾ ಪ್ರಣೀತವೆನ್ನಬಹುದಾದ ನೆಲೆಯೊಂದರಿಂದ ತಮ್ಮದೇ ಆದ ವಿಶಿಷ್ಟ ವಾರೆನೋಟದಲ್ಲಿ ಕಾಣುತ್ತಾ, ನಮ್ಮ ನಾಡಿನ ಶಿಕ್ಷಿತ ಮಧ್ಯಮ-ಮೇಲ್ಮಧ್ಯಮವರ್ಗದ ಸಾಕ್ಷಿಪ್ರಜ್ಞೆಯ ರೂಪದಲ್ಲಿ ನಮ್ಮನ್ನು ಕೆಣಕುತ್ತಾ, ಟೀಕಿಸುತ್ತಾ, ವಿಮರ್ಶಿಸುತ್ತಾ `ಬೆತ್ತವ ಪಿಡಿದ' ಹಿರಿಯ ಶಿಕ್ಷಕನಂತೆ ನಮ್ಮ ಕೈ-ಹಿಡಿದು ನಡೆಸುತ್ತಿದ್ದಾರೆ.
ಕಳೆದ ಸುಮಾರು ಒಂದು ವರ್ಷದಲ್ಲಿ ಉದಯವಾಣಿಯ `ಋಜುವಾತು' ಅಂಕಣದ ಮೂಲಕ ನಮ್ಮೊಡನೆ ನಡೆಸಿದ ಅನುಸಂಧಾನಕ್ಕೆ (ಈ ಅಪೂರ್ವ ಅವಕಾಶಕ್ಕೆ ನಾನಂತೂ ಕೃತಜ್ಞ) ನನ್ನ ಸಂಕ್ಷಿಪ್ತ ಪ್ರತಿಕ್ರಿಯೆಯನ್ನು ಅವರನ್ನು ತೀವ್ರವಾಗಿ ಕಾಡುವ ಸಮಸ್ಯೆ-ಆತಂಕಗಳ ಕುರಿತ ನನ್ನ ಅನಿಸಿಕೆಗಳನ್ನು ವ್ಯಕ್ತಪಡಿಸುವ ಮೂಲಕ ಪ್ರಸ್ತುತಪಡಿಸುತ್ತಿದ್ದೇನೆ. ಈ ಕೆಳಗಿನ ವಸ್ತು-ವಿಂಗಡಣೆ ಚರ್ಚೆಯ ನೆಪಕ್ಕಾಗಿ ಮಾತ್ರವಾಗಿದ್ದು, ಇವೆಲ್ಲವೂ ಪರಸ್ಪರ ಸಂಬಂಧರಹಿತವೇನೂ ಅಲ್ಲ ಎಂಬ ಎಚ್ಚರದೊಂದಿಗೆ:
ಆಧುನಿಕತೆಯ ಸಂದರ್ಭದಲ್ಲಿ ಧರ್ಮದ ಸ್ವರೂಪ ಮತ್ತು ಪಾತ್ರ
ವಿಜ್ಞಾನ, ತಂತ್ರಜ್ಞಾನ, ಬಂಡವಾಳುಶಾಹಿ ಇವುಗಳ ಪರಸ್ಪರ ನಂಟು ಮತ್ತು ಕಳೆದ ಕೆಲವು ದಶಕಗಳಲ್ಲಿ ಇವು ಕಂಡ ಕ್ಷಿಪ್ರಗತಿಯ ಬೆಳವಣಿಗೆ ಇವೇ ಇವೊತ್ತಿನ `ಆಧುನಿಕತೆ'ಯನ್ನು ರೂಪಿಸಿದ್ದು, ಮನುಕುಲವು ವಿಶಾಲ ಅರ್ಥದ ಮಾನವೀಯ ಮುಖದ `ಧರ್ಮ'ದಿಂದ ವಿಮುಖವಾಗಿಸುತ್ತಿವೆಯೇನೋ ಎಂಬುದು ಅನಂತಮೂರ್ತಿಯವರನ್ನು ಸೇರಿದಂತೆ ಹಲವಾರು ಸಂವೇದನಾಶೀಲ ಮನಸ್ಸುಗಳನ್ನು ಕಾಡುತ್ತಿರುವ ಆತಂಕ.
ಆಧುನಿಕ-ವಿಜ್ಞಾನ ಮತ್ತು ನಮ್ಮ ದೇಶದ ಪಾರಂಪರಿಕ ನಂಬಿಕೆ, ಆಚರಣೆಗಳ ನಡುವಿನ ಅನುಸಂಧಾನದ ಕುರಿತಂತೆ ಮೂರು ಮುಖ್ಯ ಧೋರಣೆಗಳನ್ನು ಗುರುತಿಸಬಹುದು. ಮೊದಲನೆಯದು ಆಶೀಶ್ ನಂದೀಯವರದ್ದು. ಆಧುನಿಕ ವಿಜ್ಞಾನ ಆಳುವ-ವರ್ಗದ ಕೈ-ಬೊಂಬೆಯಾಗಿದ್ದು ಅಂಚಿನವರನ್ನು ನಿರ್ನಾಮ ಮಾಡುವ ಏಕ-ಮಾತ್ರ ಉದ್ದೇಶ ಹೊಂದಿದೆ ಎಂಬ ಧೋರಣೆಯಿಂದಲೇ ಇವರ ಚಿಂತನೆಗಳು ಹೊರಡುತ್ತವೆ. ಅನಂತಮೂರ್ತಿಯವರ ಸಂವೇದನೆ ಇದಕ್ಕೆ ಹತ್ತಿರವಾಗಿದ್ದು ಪಶ್ಚಿಮದಿಂದ ಆಮದಾಗಿರುವ ಅಭಿವೃದ್ಧಿ ಮಾದರಿಗಳಲ್ಲದೇ ಅಣು-ವಿಜ್ಞಾನ-ತಂತ್ರಜ್ಞಾನ ಸಂಪೂರ್ಣ ವಿನಾಶಕಾರಿ ಎಂಬ ಕಳವಳ ಅವರದ್ದಾಗಿದೆ. ಆಧುನಿಕ-ವಿಜ್ಞಾನದ ಮೂಲದಿಂದ ತಂತ್ರಜ್ಞಾನದ ಮಾರ್ಗವಾಗಿ ನಮ್ಮ ದೇಶದಲ್ಲಿ ಇಂದು ಪ್ರಚಲಿತವಾಗಿರುವ ಅಭಿವೃದ್ಧಿ ಮಾದರಿಗಳು ಅಂಚಿನವರಿಗೆ ಮಾರಕವಾಗಿವೆ ಎಂಬುದರಲ್ಲಿ ಅನುಮಾನವಿಲ್ಲ. ಹಾಗೆಯೇ ಅಣುಬಾಂಬ್ ಮುಕ್ತ ಪ್ರಪಂಚ ಯಾವುದೇ ನಾಗರಿಕನ ಆಶಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅಣು-ಶಕ್ತಿಯ ಕುರಿತ ಮನುಕುಲದ ದ್ವಂದ್ವ ಹೆಚ್ಚು ಸಂಕೀರ್ಣವಾದದ್ದು. ಅಣು-ಶಕ್ತಿಯಿಂದ ಕಾರ್ಬನ್ ಮುಕ್ತ ಪರಿಸರ ಮತ್ತು ಜಾಗತಿಕ ಉಷ್ಣ ಪ್ರಕ್ರಿಯೆಯಿಂದಾಗಿರುವ ಸಮಸ್ಯೆಗಳ ನಿವಾರಣೆ ಮಾತ್ರವಲ್ಲದೆ ತೈಲ ರಾಷ್ಟ್ರಗಳ ಮೇಲಿನ ಅತಿಯಾದ ಅವಲಂಬನೆಯನ್ನು ಕಡಿಮೆಗೊಳಿಸಿ, ರಾಷ್ಟ್ರಗಳ ನಡುವಿನ ಸಂಘರ್ಷವನ್ನು ಕಡಿಮೆಗೊಳಿಸಬಹುದೆಂಬ ವಾದವೂ ಇದೆ. ಒಟ್ಟಿನಲ್ಲಿ ಈ ಸಂದಿಗ್ಧಗಳ ಕುರಿತಂತೆ ಆಶೀಶ್ ನಂದಿಯವರ ಮಾರ್ಗ ಅನು-ಸಂಧಾನದ ಮಾರ್ಗದಿಂದ ಕೊಂಚ ದೂರವಾದದ್ದು. ಎರಡನೇಯ ಧೋರಣೆ ನಮ್ಮ ಹಿರಿಯ ವಿಜ್ಞಾನಿ ರೊದ್ದಂ ನರಸಿಂಹರದ್ದಾಗಿದ್ದು ಆಧುನಿಕ ವಿಜ್ಞಾನದ ಫಲಗಳನ್ನು ಶಾಂತಿ ಮತ್ತು ಸಮಾಜದ ಅಭ್ಯುದಯಕ್ಕೆ ಬಳಸಿಕೊಳ್ಳುವತ್ತ ತುಡಿಯುವಂಥದ್ದು. ಮೂರನೇಯ ಧೋರಣೆ ಮೀರಾ ನಂದಾರದ್ದು, ನಂದಿಯವರ ಧೋರಣೆಗೆ ತದ್ವಿರುದ್ಧವಾದದ್ದು. ಆಧುನಿಕ ವಿಜ್ಞಾನವೇ ಕೋಮುವಾದವೂ ಸೇರಿದಂತೆ ನಮ್ಮ ಎಲ್ಲಾ ಸಮಸ್ಯೆಗಳಿಗೆ ಮದ್ದು ಆದುದರಿಂದ ಇವೊತ್ತೇ ಭಾರತ ಅಂಬೇಡ್ಕರ್, ಎಮ್. ಎನ್. ರಾಯ್ ಮಾದರಿಯ ಶುದ್ಧಾಂಗ ಸೆಕ್ಯುಲರ್ ಸಮಾಜವಗಬೇಕು ಎಂಬ ತೀವ್ರ್‍ಅವಾದದ ನೆಲೆಯದ್ದು. ವೈಚಿತ್ರವೆಂದರೆ ಆಶೀಶ್-ನಂದಿ ಮತ್ತು ಮೀರಾ ನಂದಾ ಇಬ್ಬರೂ ಪಂಡಿತ್ ನೆಹರೂರ ಸೆಕ್ಯುಲರಿಸ್ಮ್ ಪರಿಕಲ್ಪನೆಯನ್ನು ಅನುಮಾನಿಸುತ್ತಾರೆ; ಆದರೆ ತದ್ವಿರುದ್ಧ ಕಾರಣಗಳಿಗಾಗಿ. ನಂದಿ-ಗೆ ಅದು `ಪಶ್ಚಿಮದ ಆಮದು ಸರಕಾಗಿ' ಕಂಡರೆ, ಮೀರಾ ನಂದಾರ ಪ್ರಕಾರ ನೆಹರು ಸಂಪ್ರದಾಯಿಗಳಿಗೆ ಮಣಿದು `ಸರ್ವ ಧರ್ಮ ಸಮಭಾವ'ವೆಂಬ ದುರ್ಬಲ ಸೆಕ್ಯುಲರಿಸ್ಮ್-ಗೆ ಶರಣಾದರೆಂದು.
ಆಧುನಿಕ ವಿಜ್ಞಾನದ ಜೊತೆಗಿನ ನನ್ನ ಈ ವರೆಗಿನ ಅನುಭವದಲ್ಲಿ ನಾನು ಕಂಡುಕೊಂಡ ಸತ್ಯ ಇದು: ಆಧುನಿಕ ವಿಜ್ಞಾನದ `ದರ್ಶನ'ಗಳಿಗೆ ನಮ್ಮ ಪ್ರಜ್ಞೆಯನ್ನೂ, ಹೃದಯವನ್ನೂ ಹಿಗ್ಗಿಸುವ ಶಕ್ತಿಯಿದೆ ಎಂದು ನಂಬಿರುವವನು ನಾನು. ವಿಶ್ವ ನಿರಂತರ ವಿಕಸನ ಪ್ರಕ್ರಿಯೆಯಲ್ಲಿರಬಹುದೆಂಬ ಕಲ್ಪನೆಯಾಗಲಿ, ಮಿಲಿಯನ್‍ಗಟ್ಟಲೇ ಗ್ಯಾಲಕ್ಸಿಗಳಲ್ಲಿ ಮನುಕುಲವು ತೃಣ ಸಮಾನ ಜೀವಿ ಎಂಬ ಅರಿವಾಗಲಿ, ವಿಶ್ವದ ಜನ್ಮರಹಸ್ಯ ಕಪ್ಪುರಂಧ್ರವೆಂಬ ತಾರೆಯ ಬದುಕಿನ ಒಂದು ಘಟ್ಟದಲ್ಲೇ ಅಡಗಿರಬಹುದೆಂಬ ಸೋಜಿಗವಾಗಲಿ, ಶಕ್ತಿ ಮತ್ತು ವಸ್ತು ಪರಸ್ಪರ ರೂಪಾಂತರಗಳೆಂಬ ಜ್ಞಾನವಾಗಲಿ ಮನುಷ್ಯನಲ್ಲಿ ಸಮಾನತೆಯ ಭಾವವನ್ನೂ, ವಿವೇಕವನ್ನೂ, ವಿನಯವನ್ನು ಹುಟ್ಟಿಸುವ ಚೈತನ್ಯಪಡೆದಿವೆ. ಧರ್ಮ-ಗ್ರಂಥಗಳ ದರ್ಶನಕ್ಕಿಂತ ಇವುಗಳೇನೂ ತೀರಾ ಭಿನ್ನವಾಗಿಲ್ಲ. ಆದರೆ ದುರದೃಷ್ಟವಶಾತ್ `ನಮಗೆ ಇದು ಮಾತ್ರ ಸಾಕು-ಅದು ಬೇಡ' ಎಂಬ ಎರಡೂ ಪಕ್ಷಗಳ ಧೋರಣೆ ಪ್ರಗತಿಪರವಾದದ್ದಲ್ಲ. ಈಗ ನಾವು ಕಾಣುತ್ತಿರುವ ಮತೀಯತೆ, ಭಾಷಾ ಅಥವಾ ಜನಾಂಗೀಯ ಮೂಲಭೂತವಾದ ಅನಿಯಂತ್ರಿತ ಕೈಗಾರಿಕೆ, ಅಸಮರ್ಪಕ ಪ್ರಜಾಸತ್ತಾತ್ಮಕವಲ್ಲದ ತಂತ್ರಜ್ಞಾನ, ಅನೈಸರ್ಗಿಕ ವಲಸೆ ಮತ್ತು ಸಮುದಾಯಗಳ ವಿಘಟನೆ ಇವೆಲ್ಲವೂಗಳ ಸಂಕೀರ್ಣ ಫಲ ಎಂದು ನನ್ನ ಅನಿಸಿಕೆ.
ಕೆಲವೇ ದಶಕಗಳ ಹಿಂದೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದ್ದ ಧಾರ್ಮಿಕ ಚಟುವಟಿಕೆಗಳು ಮುಗ್ಧವೂ, ಸದ್ಭಾವ, ಸದುದ್ದೇಶ-ಪೂರಕವೂ ಆಗಿರುತ್ತಿದ್ದವು. ಗಣೇಶ-ಚತುರ್ಥಿ ಮತ್ತು ಸರಸ್ವತಿ ಪೂಜೆಯೇ ಆಗಿರಬಹುದು, ಮೊಹರಮ್-ನ ಹುಲಿ-ನರ್ತನವೇ ಆಗಿರಬಹುದು. ಇಂದು ಯಾರಿಗೂ ಹಾಗನ್ನಿಸುತ್ತಿಲ್ಲ. ಪ್ರತಿಯೊಂದೂ ಅಂಥ ಚಟುವಟಿಕೆಯಲ್ಲೂ ಆಕ್ರಮಣದ ವಾಸನೆ ಕಾಣತೊಡಗಿದೆ. ಹೀಗಾಗಿ ನಮ್ಮ ಅತಿರೇಕದ ಮನಸ್ಥಿತಿಯಲ್ಲಿ ಕನಿಷ್ಠ ಪಕ್ಷ ಸರ್ಕಾರೀ ಕಚೇರಿಗಳಲ್ಲೂ, ಶಾಲಾ-ಕಾಲೇಜುಗಳಂಥ ಸೆಕ್ಯುಲರ್ ಆವರಣದಲ್ಲಿ ಯಾವುದೇ ಮತಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆಯದಂತೆ ನಿಷೇಧಿಸಬೇಕೇನೋ ಎಂದು ತೀವ್ರವಾಗಿ ನಮ್ಮಲ್ಲಿ ಹಲವರಿಗೆ ಅನಿಸತೊಡಗಿದೆ.
ಆದರೆ ಭಾರತದಂಥ ದೇಶದಲ್ಲಿ ಅಂಥಾ ಒಂದು ಶುದ್ಧಾಂಗ ಸೆಕ್ಯುಲರ್ ವಾತಾವರಣದ ನಿರ್ಮಾಣವೇ ಕಲ್ಪಿಸಲಾಗದಂಥದ್ದು. ಅಮೇರಿಕೆ-ಐರೋಪ್ಯ ಸಮಾಜಗಳಲ್ಲೇ ವಿಜ್ಞಾನ-ತಂತ್ರಜ್ಞಾನ, ಕೈಗಾರಿಕೆ, ನಗರೀಕರಣ ಬೆಳೆದಂತೆ ಸಮಾಜ ಹೆಚ್ಚು ಹೆಚ್ಚು ಸೆಕ್ಯುಲರ್ ಆಗಬಹುದೆಂಬ ಸಮಾಜ-ಶಾಸ್ತ್ರಜ್ಞ ಮ್ಯಾಕ್ಸ್ ವೆಬರ್-ನ ಕನಸು ಸುಳ್ಳಾಗಿದೆ. ಅಮೇರಿಕೆಯ ಸಮಾಜದಲ್ಲಿ ಇತ್ತೀಚೆಗೆ ಕ್ರಿಶ್ಚಿಯನ್ ಕನ್ಸರ್ವೇಟಿಸ್ಮ್ ಹೆಚ್ಚು ಪ್ರಬಲವಾಗಿರುವುದು, ಮೌಢ್ಯ, ಕಂದಾಚಾರ, ಕೂಪ-ಮಂಡೂಕತನಗಳು ಇವೊತ್ತಿಗೂ ಆ ಸಮಾಜದಲ್ಲಿ ಉಳಿದಿರುವುದು ವೆಬರ್-ನ ನಂಬಿಕೆ ಸುಳ್ಳಾದುದಕ್ಕೆ ಸಾಕ್ಷಿ. ಆದುದರಿಂದ ಸಂಪೂರ್ಣ ಸೆಕ್ಯುಲರ್ ಹ್ಯುಮನಿಸ್ಟ್ ಸಮಾಜ ಎಂಬುದೊಂದು ನಾವು ಸಾಧಿಸಲಾಗದ ಯುಟೋಪಿಯಾ ಮಾತ್ರವಲ್ಲ, ಬಹುಶಃ ಅದನ್ನು ಸಾಧಿಸಬಯಸುವ ತೀವ್ರ-ವಾದ ಕೊಂಚ ಅನಾರೋಗ್ಯಕರವೂ ಹೌದು. (ನಾನು ಶಿಕ್ಷಣಕ್ಕಾಗಿ ೫ ವರ್ಷ ಅಮೇರಿಕೆಯಲ್ಲಿ ಇದ್ದಾಗ ಕ್ರಿಶ್ಚಿಯನ್ ಸಮುದಾಯದ ಚಟುವಟಿಕೆಗಳಲ್ಲಿ ಕೆಲವೊಮ್ಮೆ ಸ್ವ-ಇಚ್ಛೆಯಿಂದ ಪಾಲ್ಗೊಂಡಿದ್ದೇನೆ, ಇನ್ನೂ ಕೆಲವೊಮ್ಮೆ ಪಾಲ್ಗೊಳ್ಳಲೇಬೇಕಾದ ಒತ್ತಡವನ್ನು ಅನುಭವಿಸಿದ್ದೇನೆ. ತೀರಾ ಇತ್ತೀಚೆಗೆ ಮುಂಬೈನ ಪೋಲೀಸ್ ಠಾಣೆಗಳಲ್ಲಿ ನಡೆಯುತ್ತಿದ್ದ ಸತ್ಯನಾರಾಯಣ ಪೂಜೆಗಳನ್ನು, ರಾಷ್ಟ್ರೀಯ ಸಂಸ್ಥೆಯಾದ ಶುದ್ಧಾಂಗ ಸೆಕ್ಯುಲರ್ ಆಗಿರಬೇಕಾದ ಐ.ಐ.ಟಿ.ಯಲ್ಲಿ ಹಿಂದೂಗಳಿಗೆ ಮಾತ್ರ ಮೀಸಲಾದ ದೇವಸ್ಥಾನವನ್ನೂ ಕಂಡಿದ್ದೇನೆ, ಆದರೆ ಮುಸ್ಲಿಮ್ ವಿದ್ಯಾರ್ಥಿಗಳು ಒಟ್ಟಾಗಿ ಹಾಸ್ಟೆಲುಗಳಲ್ಲಿ ನಮಾಜು ಮಾಡಲು ಅನುಮತಿ ನಿರಾಕರಿಸಲಾಯಿತೆಂದು ಕೇಳಿದ್ದೇನೆ. ನಮ್ಮ ಸಮಾಜದ ಈ ಎಲ್ಲ ವಿರೋಧಾಭಾಸಗಳಿಂದ ಕಳವಳಗೊಂಡಿದ್ದೇನೆ. ಇವನ್ನೆಲ್ಲಾ ಅನುಮೋದಿಸಬೇಕೆ ಬೇಡವೆ ಎಂದು ಗೊಂದಲಕ್ಕೀಡಾಗಿದ್ದೇನೆ.) ಇಂಥಾ ಸನ್ನಿವೇಶದಲ್ಲಿ ಸಮಾಜದ ಬಹುಸಂಖ್ಯಾತ ಮತದವರು ಸಾರ್ವಜನಿಕ ಅವರಣದಲ್ಲಿ ತಮ್ಮ ಮತದೊಡನೆ ಬೆಸೆದ ಚಟುವಟಿಕೆಗಳನ್ನು ನಡೆಸುವಾಗ ಹೆಚ್ಚಿನ ಸಂವೇದನೆ ತೋರಿಸಬೇಕೆಂಬುದೆಂದು ನನ್ನ ನಿಲುವು ಮತ್ತು ಸದ್ಯಕ್ಕೆ ನನಗೆ ತೋಚುವ ಪರಿಹಾರ. ಅನಂತಮೂರ್ತಿಯವರು ಶುದ್ಧಾಂಗ ಸೆಕ್ಯುಲರ್ ಸಮಾಜದ ನಿರ್ಮಾಣಕಾರರ ವಕ್ತಾರರು ಎಂದು ಖಂಡಿತ ನಾನು ತಪ್ಪಾಗಿ ಭಾವಿಸಿಲ್ಲ, ಅಥವಾ ಇತ್ತೀಚೆಗೆ ಕೆಲವರು ಭಾವಿಸಿರುವಂತೆ ಜನಪರತೆಯ ಹೆಸರಿನಲ್ಲಿ ಎಲ್ಲಾ ಬಗೆಯ ಮೌಢ್ಯಗಳನ್ನು ಅನುಮೋದಿಸುವವರೂ ಅಲ್ಲ. ನನ್ನ ಅನಿಸಿಕೆಗಳು ನಾವು ಎದುರಿಸುತ್ತಿರುವ ಸಂದರ್ಭದ ಸಂಕೀರ್ಣತೆ ಮತ್ತು ಬಿಕ್ಕಟ್ಟುಗಳನ್ನು ಇನ್ನಷ್ಟು ವಿಷದಪಡಿಸುವ ಮತ್ತೊಂದು ಪ್ರಯತ್ನ ಮಾತ್ರ. ಸೆಕ್ಯುಲರಿಸ್ಟ್-ಗಳ ಅತಿರೇಕದ ವಾದಗಳನ್ನು ನಿರಾಕರಿಸುತ್ತಲೇ ನೆಹರುರ ಸೆಕ್ಯುಲರಿಸ್ಮ್ ಸಂಪೂರ್ಣ ವರ್ಜ್ಯವಲ್ಲ ಎಂಬ ನಿಲುವು ನನ್ನದು.
ಈ ವಿಷಯದ ಕುರಿತಂತೆ ಅನಂತಮೂರ್ತಿಯವರ ಬರವಣಿಗೆ ಬಗ್ಗೆ ನನ್ನ ಇನ್ನೊಂದು ತಕರಾರಿದೆ. ಹಿಂದೂ ಧರ್ಮದ ಸಂಕೀರ್ಣ `ಪೇಗನ್' ಸ್ವರೂಪವನ್ನು ಎತ್ತಿ-ಹಿಡಿಯುವ ಭರದಲ್ಲಿ ಅವರು ಭಾರತೀಯ ಮುಸ್ಲಿಮ್ ಮತ್ತು ಕ್ರೈಸ್ತ ಸಮುದಾಯಗಳ ಸಂಕೀರ್ಣ ಸ್ವರೂಪ ಮತ್ತು ಸ್ಥಿತಿಯನ್ನು ಸಾಕಷ್ಟು ಗಣನೆಗೆ ತೆಗೆದುಕೊಳ್ಳದೇ ಚರ್ಚಿಸುತ್ತಾರೇನೋ ಅನ್ನಿಸುತ್ತದೆ. ಅನ್ಯಧರ್ಮಗಳಿಗೆ ಒಂದು ಬಗೆಯ ಏಕರೂಪತೆಯನ್ನು ಆರೋಪಿಸುತ್ತಾರೆ ಎನಿಸುತ್ತದೆ. ಹಿರಿಯರಾದ ಅನಂತಮೂರ್ತಿ ಜಾತಿ-ಮತಗಳ ಗಡಿ ದಾಟಿ ಬೆಳೆದುನಿಂತವರು; ವಿಶಾಲ ಪ್ರಪಂಚದ ಜೊತೆ ಸಂಪರ್ಕವಿರಿಸಿಕೊಂಡವರು. ಹೀಗಿರುವಾಗಲೂ ಅವರ ಬರವಣಿಗೆಯಲ್ಲಿ ನಮಗೆ ಕಾಣುವ ಈ ಮಿತಿ ಹಿಂದೂ ಧರ್ಮದ `ಒಳ-ವಿಮರ್ಶಕ'ನಾಗಿ ಉಳಿವಬಯಸುವ ಅನಿವಾರ್ಯತೆಗಳಿಂದ ಹುಟ್ಟಿರುವುದೆ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ.
ಕನ್ನಡ-ದ `ಅಳಿವು-ಉಳಿವು-ಬೆಳೆಯು'
ಪಾಶ್ಚಾತ್ಯ ಪ್ರಣೀತ ಬಂಡವಾಳುಶಾಹಿ ಪ್ರಬಲವಾಗಿರುವ ಸಂದರ್ಭದಲ್ಲಿ ಕನ್ನಡದ ಉಳಿವು ಮತ್ತು ಬೆಳವಣಿಗೆಯ ದೃಷ್ಟಿಯಿಂದ ಅನಂತಮೂರ್ತಿಯವರು ನಮ್ಮ ಮುಂದಿಡುವ ಯೋಚನೆಗಳು ಸ್ವಾಗತಾರ್ಹವಾಗಿವೆ. ಸರ್ವರಿಗೂ ಪ್ರಾಥಮಿಕ ಮಟ್ಟದಲ್ಲಿ ಮಾಧ್ಯಮವಾಗಿ ಕನ್ನಡ, ಭಾಷೆಯಾಗಿ `ಕಚ್ಚಾ ಇಂಗ್ಲೀಷ್', ಅಸಮಾನತೆಯನ್ನು ನೀಗಿಸಲು ಮಾದರಿ ಕುವೆಂಪು ಕನ್ನಡ-ಶಾಲೆ (ಆಧುನಿಕವಾಗಿ ಸುಸಜ್ಜಿತವಾದ ಖಾಸಗೀ ಶಾಲೆಗಳು ಲಭ್ಯವಿರುವ ತನಕ ನಾವು ನಮ್ಮ ಮಕ್ಕಳನ್ನು ಈ ಶಾಲೆಗಳಿಗೆ ಕಳಿಸುವಷ್ಟು ನಾವುಗಳು ಧೀಮಂತರಾಗುವುದು ಅನುಮಾನ. ಆದುದರಿಂದ ಈ ಕಾಮನ್ ಸ್ಕೂಲುಗಳು ಸೌಲಭ್ಯದ ದೃಷ್ಟಿಯಿಂದ ಅತ್ಯುತ್ತಮ ಗುಣಮಟ್ಟದ್ದಾಗಿರಬೇಕು), ಕನ್ನಡ ಮಾಧ್ಯಮದಲ್ಲಿ ಇಂಜೀನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಆಗಲೇ ಬೇಕಾದ ಯೋಜನೆಯಾದರೂ ಇದು ಸಾಕಷ್ಟು ಪೂರ್ವತಯಾರಿ ಬೇಡುವಂಥದ್ದು. ಇದು ಕಾರ್ಯರೂಪಕ್ಕೆ ಬರಬೇಕಾದರೆ ಆಧುನಿಕ ಜ್ಞಾನವೆಲ್ಲವೂ ಕನ್ನಡಕ್ಕೆ ಬರಬೇಕು (ಈ ವಿಷಯದಲ್ಲಿ ನಾವು ಬಹಳ ಹಿಂದೆ ಇದ್ದೇವೆ. ಆಧುನಿಕ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ- ಭೌತಶಾಸ್ತ್ರದಲ್ಲಿ ಜಿ.ಟಿ. ನಾರಾಯಣರಾಯರ ಕೆಲವು ಪುಸ್ತಕಗಳನ್ನು ಹೊರತುಪಡಿಸಿ- ಒಂದೇ ಒಂದು ಉತ್ತಮ ಕನ್ನಡ ಪುಸ್ತಕ ನಮಗೆ ಕಾಣಸಿಗುವುದಿಲ್ಲ. ಈ ವಿಷಯದಲ್ಲಿ ಚೀನಿಯರು ಮತ್ತು ರಷ್ಯನ್ನರು ನಮಗೆ ಮಾದರಿಯಾಗಬೇಕು. ಅವರಿಗಿಂತ ಹೆಚ್ಚಾಗಿ ಆಧುನಿಕ ಜ್ಞಾನದ ವಿಕೇಂದ್ರೀಕರಣವನ್ನು ಆಚರಣೆಯ ಮೂಲಕ ಪ್ರತಿಪಾದಿಸಿದ ನಮ್ಮೊಡನಿದ್ದೂ ನಮ್ಮೊಂದಿಗಿಲ್ಲದ ಪೂರ್ಣಚೇಂದ್ರ ತೇಜಸ್ವಿಯವರ ಚೈತನ್ಯ ನಮ್ಮದಾಗಬೇಕು.) ಮಾತ್ರವಲ್ಲ ರಾಷ್ಟ್ರೀಯ-ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಕೊಟ್ಟು-ಕೊಳ್ಳುವಿಕೆಯ ದೃಷ್ಟಿಯಿಂದ ಇಂಗ್ಲೀಷಿನ ಪ್ರಮುಖ ಪಾತ್ರವನ್ನು ಪದವೀ-ಸ್ನಾತಕೋತ್ತರ ಹಂತದಲ್ಲಿ ನಿರ್ಲಕ್ಷಿಸಕೂಡದು. ಇದೇ ನಿಟ್ಟಿನಲ್ಲಿ ಕನ್ನಡ-ದಲ್ಲಿ ತಂತ್ರಾಂಶಗಳ ಅಭಿವೃದ್ಧಿಗೆ (ಈ ಕ್ಷೇತ್ರದಲ್ಲಿ ಪರಸ್ಪರ ತಾಳಮೇಳವಿಲ್ಲದೇ ಸ್ಥಿತಿ ಶೋಚನೀಯವಾಗಿದ್ದು) ಕನ್ನಡ ಮೂಲದ ಉದ್ಯಮಿ-ಗಳು, ತಂತ್ರಜ್ಞರು ಒಟ್ಟಾಗಿ ಮುಂದೆ ಹೆಜ್ಜೆ ಇಡುವ ಅವಶ್ಯಕತೆ ಇದೆ. ಇನ್ನು ಕನ್ನಡ ಪತ್ರಿಕಾ-ಮಾಧ್ಯಮಕ್ಕೆ ಸಂಬಂಧಿಸಿದಂತೆ ದೇಶದ ಪ್ರಮುಖ ವ್ಯಾಪಾರೀ ಆಂಗ್ಲ ಪತ್ರಿಕೆಯೊಂದು ಕನ್ನಡಕ್ಕೆ ಭಾಷಾಂತರಗೊಳಿಸಿದ ಆವೃತ್ತಿಯನ್ನು ತರುತ್ತಿರುವುದು ಮಾತ್ರವಲ್ಲ ಅನ್ಯಪತ್ರಿಕೆಗಳನ್ನು ಹೊಸಕಿ-ಹಾಕುವ ಹುನ್ನಾರದಲ್ಲಿರುವುದು ಆತಂಕದ ವಿಷಯವೇ. ಆದರೆ ಭಾಷಾ ಪತ್ರಿಕೆಯಾಗಿ ಜನರ ನಿತ್ಯದ ಬವಣೆಗಳಿಗೆ ಸ್ಪಂದಿಸದೇ ಹೋದಲ್ಲಿ ಅದು ನಿಲ್ಲಲಾರದು ಎಂಬ ಭರವಸೆಯಲ್ಲಿ ಈ ವಿಷಯಕ್ಕೆ ಹೆಚ್ಚಿನ ಮನ್ನಣೆ ಕೊಡದಿರುವುದೇ ನಾವು ತೋರಬಹುದಾದ ಸರಿಯಾದ ಪ್ರತಿಕ್ರಿಯೆ.
`ಭೂತ' ಮತ್ತು ಚರಿತ್ರೆ
ತನ್ನ 'ಗ್ರಹಿಕೆ'ಗೆ ಸಂಪೂರ್ಣ ದಕ್ಕದೇ ನುಣುಚಿಕೊಳ್ಳುವ `ಭೂತ'ದ ಜೊತೆ ಮನುಜನದು ಅಳಿಸಲಾಗದ ತೊಡಕಿನ ನಂಟು. ಹೀಗೆ ದಕ್ಕದಿರುವ `ಭೂತ'ವನ್ನು `ವರ್ತಮಾನ'ದಲ್ಲಿ ಪ್ರೇತವಾಗಿಸಿ ನಮ್ಮ ನಮ್ಮ ಕೋಮು, ಜನಾಂಗ, ದೇಶ, ಭಾಷೆಗಳ ಮೂಲಭೂತವಾದಕ್ಕೆ ಬಳಸಿಕೊಳ್ಳುವ ಪ್ರವೃತ್ತಿ ನಮ್ಮಲ್ಲಿ ಹೆಚ್ಚುತ್ತಿರುವುದು ಇತ್ತೀಚಿನ ವಿದ್ಯಮಾನ. ಚರಿತ್ರೆಯ ಈ ವೈಚಿತ್ರ್ಯವನ್ನು ಕಾಣಲು ಅನಂತಮೂರ್ತಿ ವಾಲ್ಟರ್ ಬೆಂಜಾಮಿನ್, ಗೋಪಾಲ ಕೃಷ್ಣ ಅಡಿಗ ಮತ್ತು ಬೇಂದ್ರೆಯವರ `ದರ್ಶನ'ಗಳನ್ನು ಜೊತೆಗಿಟ್ಟು ಹೊಸ ಅರಿವಿಗಾಗಿ ತುಡಿಯುವ ಅವರ ಪ್ರಯತ್ನ ಬಹುತೇಕ ಸಫಲವಾಗಿದೆ ಎನ್ನಬಹುದು.
ವಾಲ್ಟರ್ ಬೆಂಜಾಮಿನ್ ಜರ್ಮನಿಯಲ್ಲಿ ನಾಟ್ಜಿಸ್ಮ್ ಪ್ರಬಲವಾಗಿ, ಹೀಗೆ ಫ್ಯಾಸಿಸ್ಂ ಬೆಳೆಯಲು ಕಾರಣವೇನಿರಬಹುದು? ಎಂಬ ಕಳವಳದಲ್ಲಿ ಮಾರ್ಕ್ಸ್‍ವಾದಿಯಾಗಿಯೇ ಆ ವಾದದಲ್ಲಿನ ಲೋಪಗಳಿಗಾಗಿ ತಡಕಾಡುತ್ತಿದ್ದ. ಜನಸಂಘದ ಬಗ್ಗೆ ಒಲವಿದ್ದ ಅಡಿಗರು ಹಾರೆ ಎತ್ತಿ ಕುಕ್ಕಿ ಮೇಲಕ್ಕೆತ್ತಬಯಸಿದ್ದು ಸನಾತನ ಧರ್ಮದ `ಬಂಗಾರದ ಕಲಶ'. ಇವೊತ್ತಿನ ಫ್ಯಾಸಿಸ್ಟ್ ಶಕ್ತಿಗಳ ಪರಿಕಲ್ಪನೆಗಿಂತಲೂ ಭಿನ್ನವಾದ `ಭೂತ'. ಸೆಕ್ಯುಲರ್ ಪರಿಕಲ್ಪನೆಗಳಿಂದ ತುಂಬಿತುಳುಕುವ ಮಾರ್ಕ್ಸ್-ಚಿಂತನೆಯನ್ನು ಅನುಮಾನಿಸಲು ಬೆಂಜಾಮಿನ್ ಬಳಸುವ ಸಲಕರಣೆ `ಚರಿತ್ರೆಯ ವಿರುದ್ಧ ದಿಕ್ಕಿಗೆ ಮುಖ ಮಾಡಿರುವ ಹಾರುವ ಆಂಜೆಲ್-ನ ಪ್ರತಿಮೆ' ಗ್ರೀಕ್ ಪುರಾಣಕ್ಕೆ ಸಂಬಂಧಿಸಿದ್ದು. ಪುರಾಣದ ಪ್ರತಿಮೆಗಳ ಭಾಷೆಯಲ್ಲೇ ಆಧುನಿಕ ಮನುಷ್ಯನ `ಇರುವಿಕೆ'ಯನ್ನು ಗ್ರಹಿಸಬಯಸುವ ಅಡಿಗರು ಕಾಣಬಯಸುವ `ಭೂತ' ಕೂಡಾ ಆಧ್ಯಾತ್ಮ-ಲೇಪ ಉಳ್ಳದ್ದು. ಅದೊಂದು ಸಾವಿರ ಕಂಬದ ಬಸದಿ. ಹೀಗೆ ತನ್ನ ಸುತ್ತಲಿನ ಸಮೂಹ-ಸನ್ನಿಯಿಂದ ಅನ್ಯರಾಗುಳಿಯಬಯಸುತ್ತಿದ್ದ ಅಡಿಗರು ಇವೊತ್ತಿನ ಜನಸಂಘದ ಉಗ್ರವಾದಗಳಿಗೆ ಅಡಿಗರು ರೋಸಿ ಹೋಗಿ ದೂರವಾಗಿ ಉಳಿಯುತ್ತಿದ್ದರೆ? ಒಳ-ವಿಮರ್ಶಕರಾಗಿರುತ್ತದರೆ? ಎಂಬ ಪ್ರಶ್ನೆ ನಮ್ಮನ್ನು ಕಾಡದಿರದು.
ಇದೇ ಹಿನ್ನೆಲೆಯಲ್ಲಿ ಅನಂತಮೂರ್ತಿಯವರದ್ದೇ ಆದ ಇನ್ನೊಂದು ಕಥೆ `ಅಕ್ಕಯ್ಯ' ನೆನಪಾಗುತ್ತದೆ. ಕಥಾನಾಯಕ ಪ್ರೊಫೆಸರ್ ಶ್ರೀನಿವಾಸ ಮಾರ್ಕ್ಸ್‍ವಾದವನ್ನು ಮೊದಲು ಆದರ್ಶಕ್ಕಾಗಿ ನಂತರ ತನ್ನ ಕೆರಿಯರ್-ಗಾಗಿ ಬೆನ್ನಟ್ಟಿ ಅಮೇರಿಕೆಯಲ್ಲಿ `ಯಶಸ್ವಿ'ಯಾಗಿದ್ದಾನೆ. ಆತನ ಡ್ರಾಯಿಂಗ್ ರೂಮಿನಲ್ಲಿ ಆತನೇ ಬಿಡಿಸಿದ ಚಿತ್ರವೊಂದರಲ್ಲಿ -ಮಾರ್ಕ್ಸ್‍ನ ಪರಿಭಾಷೆಯಲ್ಲಿ ಹೇಳುವುದಾದರೆ- `ವಿಲೇಜ್ ಇಡಿಯಾಸಿ'ಯ ಪ್ರತೀಕಳೆಂಬಂತಿರುವ, ತನ್ನ ಜೀವನ-ಕ್ರಮದ ಮೂಲಕ ಶ್ರೀನಿವಾಸನಿಗಿಂತ ತಾತ್ವಿಕವಾಗಿಯೂ ಭಿನ್ನವಾಗಿರುವ ಆತನ ಅಕ್ಕ, ಈ ಅಕ್ಕಯ್ಯ ಆಂಜೆಲ್-ನ ರೂಪದಲ್ಲಿ ಹಾರುತ್ತಾ ಕೈಬೀಸಿ ಕರೆಯುತ್ತಿದ್ದಾಳೆ. ಆ ಮೂಲಕ ಶ್ರೀನಿವಾಸನ ಸಿದ್ಧಾಂತಗಳು ಮತ್ತು ಜೀವನ-ಕ್ರಮದ ವಿಮರ್ಶಕಿಯಾಗಿ ಅವರು ಅವಳನ್ನು ನಮಗೆ-ಓದುಗರಿಗೆ ಕಾಣಿಸುತ್ತಾರೆ.
ಕಳೆದ ಸುಮಾರು ಒಂದು-ದಶಕದಿಂದಲೂ ಅನಂತಮೂರ್ತಿಯವರ ಬರಹಗಳನ್ನು ತಕ್ಕಮಟ್ಟಿಗೆ ಸೂಕ್ಷ್ಮವಾಗಿ ಗಮನಿಸುತ್ತಿರುವ ನಾನು, ಅವರ ವೈಚಾರಿಕ ಬರಹಗಳೂ ಮತ್ತವರ ಸೃಜನಶೀಲ ಕೃತಿಗಳು ಒಂದಕ್ಕೊಂದು ಪೂರಕವಾಗಿವೆ ಎಂದು ಭಾವಿಸಿದ್ದೇನೆ. ಪರಸ್ಪರ ಒಳನೋಟಗಳನ್ನು ಬೆಳಗಿಸುತ್ತವೆ ಎಂದು ಕಂಡುಕೊಂಡಿದ್ದೇನೆ. ಅವರ ಈ ಸೃಜನಶೀಲ ಮತ್ತು ಅಪಾರ ಕಳಕಳಿಯಿಂದ ತುಂಬಿದ ಚಿಂತನಧಾರೆ ಸದಾ ಹರಿಯುತ್ತಲೇ ಇರಲಿ. ಕನ್ನಡ ಸಮುದಾಯದ ಜೊತೆ ಅವರ ಈ ಅನುಸಂಧಾನ ನಿರಂತರವಾಗಿ ಸಾಗಲಿ.

Labels: ಅನಂತಮೂರ್ತಿ, ಆಧುನಿಕ, ಚರಿತ್ರೆ, ವಿಜ್ಞಾನ, ಸೆಕ್ಯುಲರಿಸ್ಮ್