ಸೃಜನ-ಕನ್ನಡಿಗ (sRujana-kannaDiga)

ಸಹೃದಯ, ವಿಶ್ವಾಸ ಮತ್ತು ಸೃಜನಶೀಲತೆ: Creator of this blog is Sudarshan. He has interest in Engineering research and Kannada writing. As a part of the process of Kannada writing, this blog will pay extra attention to cultural and philosophical aspects of Mathematics, Science, History, Language etc.

Name:
Location: Mysore, Karnataka, India

Wednesday, May 17, 2006

ಕಲಾಪ್ರತಿಮೆಗಳಾಗಿ ಗಣಿತಜ್ಞರು

ಈ ಬಾರಿಯ `ಅಗಸೆಯ ಅಂಗಳ'ದಲ್ಲಿ ವಿನಾಯಕರು ರಾಬರ್ಟ್ ಮುಸಿಲ್ ಎಂಬ ಜರ್ಮನ್ ಲೇಖಕ `ಗಣಿತಜ್ಞ'ನ ಬಗ್ಗೆ ೧೯೧೩ರಲ್ಲಿಯೇ ಬರೆದ ಲೇಖನವೊಂದರ ಆಂಗ್ಲ ಆವೃತಿಯ ಸಮರ್ಥ ಕನ್ನಡಾನುವಾದ ಮಾಡಿದ್ದಾರೆ. ಯಂತ್ರಯುಗದ ಗಣಿತಜ್ಞನ ಸ್ಥಿತಿಯ ಬಗ್ಗೆ ಮುಸಿಲ್ ಹೇಳಿರುವ ಮಾತುಗಳು ಇಂದು ಹೆಚ್ಚು ಪ್ರಸ್ತುತವಾಗಿವೆ. ಆಮೂರ್ತ ಮತ್ತು ಸೌಂದರ್ಯ ಪ್ರಜ್ಞೆಯ ಗಣಿತಜ್ಞ ಇಂದು ಹೆಚ್ಚು ಹೆಚ್ಚು ಪ್ರಭುತ್ವ ಮತ್ತು ವಿನಾಶಕಾರಿ ತಂತ್ರಜ್ಞಾನದ ಬಂದಿಯಾಗದಂತೆ ತಪ್ಪಿಸಿಕೊಳ್ಳಲು ಹಿಂದಿಗಿಂತ ಹೆಚ್ಚು ಕಷ್ಟಪಡಬೇಕಾಗಿದೆ. ಈ ದಿನಗಳಲ್ಲಿ ಆತನಿಗೆ `ಮುಕ್ತಿ' ಅಷ್ಟು ಸುಲಭವಲ್ಲ.

ತಾನು ಸೃಷ್ಟಿಸಿದ ಗಣಿತವೆಲ್ಲವೂ `ಶುದ್ಧ'ವಾಗಿ ಉಳಿಯಬೇಕೆಂದು ಪರಿತಪಿಸಿದ್ದ, ತನ್ನದೇ ರೀತಿಯಲ್ಲಿ ಮಡಿವಂತನಾಗಿದ್ದ, ಮಡಿವಂತ ರಾಮನುಜನ್‍ನ ಬಂಟನಾಗಿದ್ದ, ಗುರುವಾಗಿದ್ದ, ಪೋಷಕನಾಗಿದ್ದ
ಜಿ.ಎಚ್. ಹಾರ್ಡಿ `ನಂಬರ್ ಥಿಯರಿ', ಅದು ಷ್ಟೊಂದು ಹೈ ಪ್ರೊಫೈಲ್ ಶಾಖೆಯಲ್ಲ ಎಂದು ಭಾವಿಸುವವರಿಗೆ ಪ್ರತಿಯಾಗಿ, ಆ ಶಾಖೆಯ ಕುರಿತು ಹೇಳುತ್ತಿದ್ದನಂತೆ (ಏ ಮ್ಯಾಥೆಮೇಟಿಶಿಯನ್ಸ್ ಅಪಾಲಜಿ, ೧೯೪೦): "ಗಾಸ್ ಮತ್ತು ಅವನಂಥ ಕುಬ್ಜ ಜಾತಿಯ ಗಣಿತಜ್ಞರು ಅದೆಷ್ಟು ಪುಣ್ಯವಂತರು? ಮನುಷ್ಯನ ಸಾಮಾನ್ಯ ಚಟುವಟಿಕೆಗಳಿಂದ ಆ ಶಾಖೆಗಿರುವ ದೂರತ್ವವೇ ಅದನ್ನು ಮೃದುವಾಗಿಯೂ, ಶುದ್ಧವಾಗಿಯೂ ಉಳಿಸೀತು" ಎಂದು. ಆದರೆ ಇಂದು ವಿಷಯ ತಿಳಿದರೆ ಹಾರ್ಡಿ ತನ್ನ ಗೋರಿಯಲ್ಲೇ ಹೊರಳಾಡಬಹುದು. "ನಂಬರ್ ಥಿಯರಿ" ಸೇರಿದಂತೆ ಆತ ಸೃಷ್ಟಿಸಿರುವ ಗಣಿತವೆಲ್ಲವೂ ವಿನಾಶಕಾರಿ ಮಿಲಿಟರಿ ತಂತ್ರಜ್ಞಾನವೂ ಸೇರಿದಂತೆ ಎಲ್ಲಾ ಬಗೆಯ ಮಾನವ ಚಟುವಟಿಕೆಗೆ ಪೂರಕವಾಗುವ ತಂತ್ರಜ್ಞಾನದಲ್ಲಿ ಬಳಕೆಯಾಗಿದೆ. ಹಾರ್ಡಿಯ ಧೋರಣೆ ಅತಿರೇಕದ್ದೆನ್ನಿಸಿದರೂ, ಒಟ್ಟೂ ನಾಗರೀಕತೆಗೆ ಅದು ಆತ ಎಚ್ಚರ ಹೇಳುವ ಬಗೆಯಾಗಿತ್ತು ಎಂದೇ ನಾವು ತಿಳಿಯಬೇಕು.

ಇಂಥಾ ಹಾರ್ಡಿ(ಅಲ್ಲದೇ ಈತ ಕನ್ನಡಿ ದ್ವೇಷಿಯೂ, ಸಮಾಜವಾದಿ ಒಲವಿನವನೂ, ಕ್ರಿಕೆಟ್ ಆರಾಧಕನೂ ಆಗಿದ್ದನಂತೆ) ಮತ್ತು `ನಮ್ಮ'
ಶ್ರೀನಿವಾಸ ರಾಮನುಜನ್ ಜೋಡಿಯ ಕುರಿತ ಚಲನಚಿತ್ರವೊಂದನ್ನು (ನಮಗೆಲ್ಲಾ ಚಿರಪರಿಚಿತವಿರುವ ರಾಬರ್ಟ್ ಕೆನಿಗಲ್‍ನ ಪುಸ್ತಕ `ಮ್ಯಾನ್ ವ್ಹು ನ್ಯೂವ್ ದಿ ಇನ್ಫಿನಿಟಿ: ಅನಂತವನ್ನರಿತ ಮನುಜ' ಪುಸ್ತಕವನ್ನಾಧರಿಸಿ) ದೇವ್ ಬೆನಗಲ್ ಮತ್ತು ಸ್ಟಿಫನ್ ಫ್ರೈ ಜೋಡಿ ತಯಾರಿಸಲಿದೆಯಂತೆ. ನಿಜ ಜೀವನಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿ ಅಥವಾ ಘಟನೆ ಕುರಿತಂತೆ ಚಲನಚಿತ್ರ ಮಾಡುವುದು ಸೂಕ್ಷ್ಮ ಮತ್ತು ಜವಾಬ್ದಾರಿಯ ವಿಷಯ. ಇಲ್ಲಿ ಪ್ರಸ್ತುತ ನನ್ನ ಚರ್ಚೆ ಗಣಿತಜ್ಞರ ಕುರಿತು ಮಾತ್ರ ಮೀಸಲು ಎಂದು ಓದುಗರಿಗೆ ನೆನಪಿಸಬಯಸುತ್ತೇನೆ. ಕಲಾಕೃತಿಯೊಂದು (ಒಳ್ಳೆಯದೋ, ಕೆಟ್ಟದ್ದೋ, ಪ್ರತಿಯೊಂದು ಚಲನಚಿತ್ರವೂ ಕಲಾಕೃತಿಯೇ, `ಏ ಫಾರ್ಮ್ ಆಫ್ ಆರ್ಟ್' ಎನ್ನುವ ಅರ್ಥದಲ್ಲಿ) ನಾವು ಈಗಾಗಲೇ ನಮಗಾಗಿ ಸೃಷ್ಟಿಸಿಕೊಂಡಿರುವ ಭಾವಪ್ರಪಂಚವೊಂದನ್ನು ಒಡೆದು ಹೊಸದನ್ನು ಕಟ್ಟುವ ಪ್ರಯತ್ನಮಾಡುತ್ತದೆಯಷ್ಟೇ. ಅಂಥ ಒಡೆದು ಕಟ್ಟುವ ಅನುಭವ ನಲಿವಿನ ಜೊತೆ ಅಪಾರ ನೋವು, ಹಿಂಸೆಯನ್ನು ಉಂಟುಮಾಡುತ್ತದೆ. ಏಕೆಂದರೆ ಈಗಿರುವ `ಭಾವಚಿತ್ರ'ವು ಆ ಗಣಿತಜ್ಞನ ಬಗೆಗೆ ನಮ್ಮ ಬಳಿ ಈಗಿರುವ ಮಾಹಿತಿ ಮತ್ತು ನಮ್ಮ ವೈಯಕ್ತಿಕ ಸಂವೇದನೆಯೊಂದಿಗೆ ಬೆರೆತು ಸೃಷ್ಟಿಯಾದುದ್ದಾಗಿರುತ್ತದೆ. ಅಂಥ ಭಾವಚಿತ್ರಕ್ಕೆ ಹೊಸದೊಂದು ಚಿತ್ರ, ಅದೂ ಇನ್ನೊಬ್ಬ ವ್ಯಕ್ತಿಯು ಹೊತ್ತು ತಂದ ಮಾಹಿತಿ ಮತ್ತು ಸಂವೇದನೆಗನುಸಾರವಾಗಿ ರೂಪಿತವಾದದ್ದು, ಎದುರಾದಾಗ ಸಹಜವಾಗಿಯೇ ಸಂಕಟ-ಸಂಘರ್ಷ ಉದ್ಭವಿಸುತ್ತದೆ. ಈ ಮುಖಾಮುಖಿಯ ನಂತರ ನಮ್ಮಲ್ಲಿ ಆ ಗಣಿತಜ್ಞನ ಬಗ್ಗೆ ಇರುವ `ಭಾವಚಿತ್ರ'ವನ್ನು ನಮ್ಮ ಆಯ್ಕೆಗೆ ತಕ್ಕಂತೆ ಮಾರ್ಪಡಿಸಿಕೊಳ್ಳುತ್ತೇವೆ.

ಆದುದರಿಂದಲೇ ಗೇಂ ಥಿಯರಿಯ ಕರ್ತೃ ಜಾನ್ ನ್ಯಾಶ್‍ನ ಕುರಿತ ಹಾಲಿವುಡ್ ಚಿತ್ರ `ಬ್ಯೂಟಿಫುಲ್ ಮೈಂಡ್' (ಇದು ಸಿಲ್ವಿಯಾ ನಸರ್ ಎಂಬುವವರ ಇದೇ ಹೆಸರಿನ ಪುಸ್ತಕವನ್ನು ಆಧರಿಸಿದೆ ಎಂಬುದು ನಿಮಗೆ ತಿಳಿದಿರಲಿಕ್ಕೆ ಸಾಕು) ಬಿಡುಗಡೆಯಾದಾಗ, ಅಮೇರಿಕೆಯಲ್ಲಿ ಗಣಿತ, ತಾಂತ್ರಿಕ ವಿಷಯಗಳ ವಿದ್ಯಾರ್ಥಿಗಳಾಗಿದ್ದ ನಾವು ಕೆಲವರು ಅದನ್ನು ನೋಡದಿರಲು ನಿರ್ಧರಿಸಿದ್ದೆವು. ಅದೊಂದು ಬಗೆಯ ಎಲೈಟಿಸ್ಟ್ ಧೋರಣೆ ಎಂದು ಈಗನ್ನಿಸಿದರೂ, ನಮ್ಮ ಮನಸ್ಸಿಗೆ ಆಪ್ತವಾಗಿರುವ ಸಂಗತಿಯೊಂದು ಒಡೆದುಹೋಗದಂತೆ ರಕ್ಷಿಸಬೇಕೆನ್ನುವ ತುಡಿತವೂ ಅದರಲ್ಲಿತ್ತೆಂಬುದನ್ನೂ ಗಮನಿಸಬೇಕು.

ಹೀಗಿರುವಾಗ, ನ್ಯಾಶ್‍ಗಿಂತಲೂ ಸಂಸ್ಕೃತಿಕ ಕಾರಣಗಳಿಗಾಗಿ ಆಪ್ತನಾಗಿರುವ ನಮ್ಮ ರಾಮನುಜನ್‍ರ ಬಗ್ಗೆಯೇ ಚಿತ್ರವೊಂದು ಬರಲಿದೆ ಎಂದಾದಾಗ ಆತಂಕ ಸಹಜವಲ್ಲವೆ? ರಾಮಾನುಜನ್ ಮತ್ತು ಹಾರ್ಡಿ ಕುರಿತ ಕಥೆ-ದಂತಕಥೆಗಳನ್ನೆಲ್ಲಾ ಇಲ್ಲಿ ಬರೆಯಲು ಜಾಗವಿಲ್ಲ. ಅವೆಲ್ಲಾ ನಮಗೆ ಗೊತ್ತಿದ್ದದ್ದೆ. ನಮ್ಮ ನಮ್ಮ ಕಾಲೇಜಿನ ಕ್ಯಾಂಟೀನುಗಳಲ್ಲಿ, ಕಾಫೀ ಶಾಪುಗಳಲ್ಲಿ ಕುಳಿತು ಚರ್ಚಿಸಿದ್ದು, ಚರ್ಚಿಸಬೇಕಾದದ್ದು. ("ಮಾಸಲು ಲಕೋಟೆಯಲ್ಲಿ ಬಂದ ಲೆಕ್ಕದ ಹಾಳೆಗಳನ್ನು ಹಾರ್ಡಿ ಕೆಂಬ್ರಿಜ್‍ನ ತನ್ನ ಕೋಣೆಯಲ್ಲಿ ಕೂತು ಮೊದಲು ಅನುಮಾನದಿಂದ ನೋಡಿದ್ದು, ಆಮೇಲೆ ಲಿಟ್ಲ್ ವುಡ್‍ಗೆ ತೋರಿಸಿ ಇಬ್ಬರೂ ಖುಷಿಯಿಂದ ಹಾರಾಡಿದ್ದು. ಪೈಜಾಮಿನಲ್ಲಿ ರಾಮನುಜನ್ ಹುಳಿಗೆ ಅಂತ ಸೌತೆಕಾಯಿ ಕೊಚ್ಚುತ್ತಾ ಹಾರ್ಡಿಯ ಸವಾಲನ್ನೂ ಕೊಚ್ಚಿ ಹಾಕಿದ್ದು, ಹುಷಾರಿಲ್ಲ ಅಂತ ಜ್ವರ ಬಂದು ತಣ್ಣಗೇ ಮಲಗಿದ್ದಾಗ ಮುದುಕ ಹಾರ್ಡಿ ಬಂದು ತಾನು ಬಂದ ಟ್ಯಾಕ್ಸಿಯ ನಂಬರ್ ಅದೆಷ್ಟು ಸಪ್ಪೆ ಅಂತಾ ಗೊಣಗಿದಾಗ ಮಿಳುಗುತಣ್ಣೀರ್‍ನ ರುಚಿಯೆಲ್ಲಾ ಆ ನಂಬರ್‍ನಲ್ಲಿ ತೋರಿಸಿದ್ದು..ಇತ್ಯಾದಿ")

ಕಾಲೇಜಿನ ಎಳಸುತನದ ಉತ್ಸಾಹವನ್ನೂ ಮೀರಿ ನೋಡಿದರೆ, ಈ ವಸ್ತು ಎಂಥ ಸಾಂಸ್ಕೃತಿಕ ನಯ,ನಾಜೂಕು, ಸೂಕ್ಷ್ಮಗಳಿಂದ ತುಂಬಿದೆ ಎಂದ್ರೆ ದೇವ್ ಬೆನಗಲ್ ಮತ್ತು ಸ್ಟೀಫನ್ ಫ್ರೈ ಜೋಡಿ ಇದನ್ನು ಸಮರ್ಥವಾಗಿ ತೆರೆಗೆ ತರಬಲ್ಲರೆ ಎಂಬ ಬಗ್ಗೆ ನಮಗೆಲ್ಲಾ ಆತಂಕವಿದೆಯಲ್ಲವೆ? ನಮ್ಮ ಬಳಿ ಇರುವ ಚಿತ್ರವನ್ನು ಅವರ ಚಿತ್ರ ಯಾವ ರೀತಿ ಮಾರ್ಪಡಿಸುತ್ತದೆ? ಪೂರ್ತಿ ಒಡೆದು ಹಾಕುತ್ತದೋ? ವೈಯಕ್ತಿಕವಾಗಿ ಹೇಳುವುದಾದರೆ, ನನ್ನ ಬಳಿ ಇರುವ ಚಿತ್ರ ಮುಖ್ಯವಾಗಿ ಕೆನಿಗಲ್‍ನ ಪುಸ್ತಕ, ಹಾರ್ಡಿಯ ಪುಸ್ತಕ(ಗಣಿತಜ್ಞನ ಕ್ಷಮಾಪಣೆ, ೧೯೪೦) ಮತ್ತು ಭಾರತೀಯ ಸಾಂಸ್ಕೃತಿಕ ಮೂಲದ ಗಣಿತ ಮತ್ತು ತಾಂತ್ರಿಕ ವಿಷಯಗಳ ವಿದ್ಯಾರ್ಥಿಯಾಗಿ ಅಮೇರಿಕೆಯ ವಿಶ್ವವಿದ್ಯಾಲಯದ ಪಶ್ಚಿಮದ ಸಂಸ್ಕೃತಿಯ ಪ್ರೋಫೆಸರ್‍‍ಗಳ ಜೊತೆಗಿನ ಅನುಸಂಧಾನದ ಅನುಭವದಿಂದ ರೂಪಿತವಾಗಿದೆ. (ಗಣಿತಜ್ಞನಾಗಿ, ತಂತ್ರಜ್ಞನಾಗಿ ನಾನೆಷ್ಟು ಉತ್ತಮನು ಎಂಬ ಪ್ರಶ್ನೆ ನನಗನಿಸುವಂತೆ ಇಲ್ಲಿ ಅಪ್ರಸ್ತುತವೆನಿಸುತ್ತದೆ.)



ನಮಗೆ ತಿಳಿದಿರುವಂತೆ ರಾಮನುಜನ್ ಮತ್ತು ಹಾರ್ಡಿ ವಸ್ತುವಿನ ಕುರಿತ ನಾಟಕವೊಂದನ್ನು ಈಗಾಗಲೇ ಪ್ರಯತ್ನಿಸಲಾಗಿದೆ. ಇಯಾನ್ ಹಾಪ್ಟ್‍ಮನ್ ಎಂಬುವವರು ನಿರ್ಮಿಸಿದ `ಪಾರ್ಟಿಶನ್' ಎಂಬ ಹೆಸರಿನ ನಾಟಕದಲ್ಲಿ ಮುಖ್ಯವಾಗಿ ಆಧುನಿಕ ಗಣಿತದ ಶಿಷ್ಟಶಾಸ್ತ್ರದ ಶಿಸ್ತನ್ನು ರೂಢಿಸಿಕೊಳ್ಳಲಾಗದೇ ಶಿಷ್ಟ ಶಿಕ್ಷಣದ ಆಸರೆ ಇಲ್ಲದೇ ಸ್ವತಂತ್ರ ದೇಸೀ ಚಿಂತನೆಯ ಮೂಲಕ `ಆಧುನಿಕ' ಕ್ರಮದ `ಆಧಾರ'ವಿಲ್ಲದೇ ಗಣಿತದ ಪ್ರಮೇಯಗಳನ್ನು ಮಂಡಿಸುತ್ತಿದ್ದ ರಾಮಾನುಜನ್‍ಗೆ ಹಾರ್ಡಿಯ ಸಾಂಗತ್ಯ ಮತ್ತು ಪಶ್ಚಿಮದ ಪರಿಸರ ಮಾನಸಿಕವಾಗಿ, ದೈಹಿಕವಾಗಿ ಮಾರಕವಾಯಿತೆ? ಸೂಕ್ಷ್ಮ ಸಂಗತಿಯನ್ನು ನಿರ್ವಹಿಸುವ ಪ್ರಯತ್ನವನ್ನು ಮಾಡಿದೆಯಂತೆ. ಕುಂಭಕೋಣಮ್-ನಲ್ಲೇ ಬಹುತೇಕ ತನ್ನ ಬಾಲ್ಯ-ಯುವಾವಸ್ಥೆಗಳನ್ನು ಕಳೆದ, ೧೦೦ ವರ್ಷ ಹಿಂದಿನ ಸಾಂಪ್ರದಾಯಿಕ ಭಾರತೀಯ ಯುವ ಮನಸ್ಸು ತನ್ನ ತಾಯಿಯಿಂದ, ಸಾವಿರಾರು ಮೈಲು ದೂರದ ಅನ್ಯ ಪರಿಸರದಲ್ಲಿ ಸಂಪೂರ್ಣ ಗಣಿತಕ್ಕಾಗಿಯೇ ತೇಯುವ ಕಥೆಯಲ್ಲಿ ಮನಶಾಸ್ತ್ರಜ್ಞರಿಗೂ, ಜನಸಾಮಾನ್ಯರಿಗೂ ಅನೇಕ ಆಸಕ್ತಿಯ ಪದರುಗಳನ್ನು ಹೊಂದಿರಲಿಕ್ಕೆ ಸಾಕು. ಅಂತೆಯೇ ಈ ಪ್ರಶ್ನೆಯನ್ನು ಹಲವಾರು ಗಣಿತಜ್ಞರೂ ಸೇರಿದಂತೆ, ಸಂಸ್ಕೃತೀ ಚಿಂತಕರೂ, ಮನಶಾಸ್ತ್ರಜ್ಞ್ಯರೂ ಈಗಲೂ ಚರ್ಚಿಸುತ್ತಲೇ ಇದ್ದಾರೆ. ಇಲ್ಲಿ ಗಣಿತ-ಸಂಸ್ಕೃತಿಗಳಿಗೆ ಸಂಬಂಧಿಸಿದಂತೆ ಇನ್ನೊಂದು ಸೂಕ್ಷ್ಮ, ಸಾರಸ್ಯಕರ, ವಿವಾದಾತ್ಮಕ ಸಂಗತಿಯೊಂದಿದೆ(*). ಭಾರತೀಯ ಗಣಿತ-ಸಂಪ್ರದಾಯದಲ್ಲಿ ತಾರ್ಕಿಕ ಆಧಾರಕ್ಕೆ ಸ್ಥಾನವೇ ಇಲ್ಲ ಎಂಬ ಮಿಥ್ಯ ಕಲ್ಪನೆಯೊಂದು ಚಾಲ್ತಿಯಲ್ಲಿದೆ. ಅದು ಅಷ್ಟು ಸರಿಯಲ್ಲವೆಂದೂ, ಆಧುನಿಕ ವಲಯದಲ್ಲಿ ಪ್ರಮೇಯವನ್ನು ಮಂಡಿಸಿದವನೇ ತಾರ್ಕಿಕ ಆಧಾರವನ್ನೂ ಮಂಡಿಸಬೇಕೆಂಬುದು ಅಪೇಕ್ಷಿತವಾಗಿದೆ, ಆದರೆ ಪ್ರಾಚೀನ ಭಾರತೀಯ ಗಣಿತ ಸಂಪ್ರದಾಯದಲ್ಲಿ ಪ್ರಮೇಯವನ್ನು ಮಂಡಿಸುವವರು ಮತ್ತು ವ್ಯಾಖ್ಯಾನಕಾರರು ಬಹುತೇಕ ಬೇರೆಬೇರೆಯಾಗಿದ್ದು, ಪ್ರತ್ಯೇಕ ಗ್ರಂಥಗಳಲ್ಲಿ ಪ್ರಮೇಯಗಳು ಮತ್ತದರ ತಾರ್ಕಿಕ ವಿವರಣೆಗಳು ಪ್ರಕಟವಾಗಿದ್ದರಿಂದ ಅಂಥ ಮಿಥ್ಯಕಲ್ಪನೆ ಹುಟ್ಟಿದೆಯೆಂದು ಭಾರತೀಯ ಗಣಿತದ ಸಮರ್ಥಕರು ವಾದಿಸುತ್ತಾರೆ. ಒಟ್ಟಿನಲ್ಲಿ ರಾಮನುಜನ್-ಹಾರ್ಡಿಯ ಸಂಬಂಧದಲ್ಲಿ, ಆ ಒಟ್ಟೂ ಅನುಭವದಲ್ಲಿ ಅನೇಕ ಸಂಘರ್ಷಗಳಿದ್ದರೂ, ರಾಮನುಜನ್ ಪಡೆದದ್ದೂ, ಪ್ರಪಂಚಕ್ಕೆ ಕೊಟ್ಟದ್ದೂ ಗಣನೀಯವಾಗಿಯೇ ಇದೆ ಎಂಬಂಶವನ್ನಂತೂ ನಿರಾಕರಿಸುವಂತಿಲ್ಲ. (ಇದೇ ವಸ್ತುವನ್ನು ಗಹನವಾಗಿ ಶೋಧಿಸುವ, ಇಲ್ಲಿ ನೆನೆಯಬಹುದಾದ ಇನ್ನೊಂದು ಪುಸ್ತಕ, ಆಶೀಶ್ ನಂದಿ ವಿರಚಿತ, "ಪರ್ಯಾಯ ವಿಜ್ಞಾನಗಳು: ಸೃಜನಶೀಲತೆ ಮತ್ತು ಅಧಿಕೃತತೆ: ಇಬ್ಬರು ವಿಜ್ಞಾನಿಗಳು, ಬೋಸ್ ಮತ್ತು ರಾಮನುಜನ್"). `ಪಾರ್ಟಿಶನ್' ನಾಟಕವನ್ನು ನಾನು ನೋಡಿಲ್ಲವಾದ್ದರಿಂದ ಅದರ ಗುಣಮಟ್ಟದ ಬಗ್ಗೆ ನಾನು ಇಲ್ಲಿ ಹೆಚ್ಚೇನನ್ನೂ ಹೇಳಲಾರೆ.
ಅಮೇರಿಕನ್ ಮ್ಯಾಥೆಮ್ಯಾಟಿಕಲ್ ಸೊಸೈಟಿಯ ತಾಣದಲ್ಲಿ ಲಭ್ಯವಿರುವ ವಿಮರ್ಶೆಯೊಂದನ್ನು ಗಮನಿಸಿದರೆ, ನಾಟಕ ಕೆಲವು ಚಾರಿತ್ರಿಕ ಸತ್ಯಗಳನ್ನು ಪಲ್ಲಟಗೊಳಿಸುವುದರೊಂದಿಗೆ, ನಾಮಗಿರಿ ಅಮ್ಮನ ಪ್ರೇರಣೆಯ ಸಂಗತಿಯನ್ನು ಉತ್ಪ್ರೇಕ್ಷೆಗೊಳಿಸುವ ಧೋರಣೆಯನ್ನು ಮೀರುವುದಿಲ್ಲವೆಂದು ತೋರುತ್ತದೆ. ಆದ್ದರಿಂದ ನಮ್ಮೆದುರಿಗೆ ಪ್ರಶ್ನೆ ಇರುವುದು ದೇವ್ ಬೆನಗಲ್ ಮತ್ತು ಸ್ಟೀಫನ್ ಫ್ರೈ ಇಂಥ ಗಹನ, ಗಂಭೀರ ವಸ್ತುವನ್ನು ನಮಗೆ ಯಾವ ರೂಪದಲ್ಲಿ ಕೊಡಲಿದ್ದಾರೆ ಎನ್ನುವುದು. ಮುಖ್ಯವಾಹಿನಿಯ ಚಿತ್ರವೊಂದನ್ನು ರೂಪಿಸ ಹೊರಟಿರುವ ಈ ನಿರ್ದೇಶಕರು ವಸ್ತುವಿನ ಗಾಢತೆ-ಗಹನತೆಯ ಕುರಿತು ಒಪ್ಪಂದ ಮಾಡಿಕೊಳ್ಳುವರೆ? ಅದೊಂದು ಓರಿಯೆಂಟಲಿಸ್ಟ್ ಧೋರಣೆಯ ಚಿತ್ರವಾಗದಂತೆ, ಇಸ್ಮಾಯಿಲ್-ಮರ್ಚಂಟ್‍ರ ಚಿತ್ರಗಳಿಗೆ ಇರುವುದಕ್ಕಿಂತಲೂ ಹೆಚ್ಚಿನ ಆಳ, ಸೂಕ್ಷ್ಮ, ನೈಜತೆ ಬರುವಂತೆ ನೋಡಿಕೊಳ್ಳಬಲ್ಲರೆ? ಹಾಗಾಗದಂತೆ ನೋಡಿಕೊಳ್ಳಲು ಬೆನಗಲ್ ಮತ್ತು ಫ್ರೈ ಜೋಡಿ, ಬರೀ ಕೆನಿಗೆಲ್‍ನ ಪುಸ್ತಕ ಓದಿದರೆ ಸಾಲದು ಎನ್ನಿಸುತ್ತದೆ. ಚಿತ್ರ ಮಾಡುವವರು ಕ್ಯಾಂಬ್ರಿಜ್‍ನ ಕಾರಿಡಾರುಗಳಲ್ಲೂ, ನಾಮಗಿರಿ, ಕುಂಭಕೋಣಂ-ನ ಬೀದಿಯಲ್ಲೂ ಓಡಾಡಿ, ಅಟ್ಲಾಂಟಿಕ್‍ನ ಎರಡೂ ಬದಿಯ ಗಣಿತಜ್ಞರೂ, ಸಂಸ್ಕೃತಿ ಚಿಂತಕರೂ ಮತ್ತು ಮನಶಾಸ್ತ್ರಜ್ಞ್ಯರ ಜೊತೆ ಸಂವಹಿಸಬೇಕಾಗುತ್ತದೆ. ನನ್ನ ಬೇಡಿಕೆ ಅತಿಯೆನ್ನಿಸುವಂತೆ ತೋರುವುದಾದರೂ, ಇವೆಲ್ಲದರ ಜೊತೆ ನಿರ್ದೇಶಕರಿಂದ ನಾನು ಬೇಡುವುದೆಂದರೆ ಗಣಿತದ ಸಾಂಸ್ಕೃತಿಕ ಬೀದಿಗಳಲ್ಲೂ ಸ್ವತಃ ಓಡಾಡಿ ಅನುಭವ ಪಡೆಯುವುದು ಒಳ್ಳೆಯದು. (ಈ ದಿಸೆಯಲ್ಲಿ ಗಣಿತಜ್ಞರು ನಿಮಗೆ ಸಹಾಯಮಾಡಬಲ್ಲರು). ಆಗ ಮಾತ್ರ ರಾಮಾನುಜನ್-ಹಾರ್ಡಿಯ ಬಗ್ಗೆ ಒಳನೋಟದ ಬೆಳಕು ಸಿಕ್ಕು, ಅದನ್ನು ತೆರೆಯ ಮೂಲಕ ಎಲ್ಲರಿಗೂ ಕಾಣಿಸುವ ಸಾಫಲ್ಯ, ಸಾರ್ಥಕ್ಯ ಪಡೆಯಬಹುದು ಎನಿಸುತ್ತದೆ.



ನಾನು ಹೇಳಬಯ
ಸುತ್ತಿರುವುದು ಇಷ್ಟು. ಗಣಿತಜ್ಞನ ಬಗ್ಗೆ 'ಚಿತ್ರ' ಮಾಡಲು ಹೊರಟರೆ, ಒಂದೋ ಎಲ್ಲರಿಗೂ ತಲುಪಬೇಕೆಂಬ ತುಡಿತದಲ್ಲಿ ಆತನ ಗಣಿತದಿಂದಲೇ ಪ್ರೇರಿತವಾದ ಆತನ ಸತ್ವವನ್ನು ಕೈಬಿಡಬೇಕಾಗಿ, ಎಲ್ಲರಿಗೂ ಸಾಮನ್ಯವೆನಿಸಬಲ್ಲ ಮಾನವೀಯ ಅಂಶಗಳನ್ನಷ್ಟೆ ತೋರಿಸಿ, ಈತ ನಮ್ಮ-ನಿಮ್ಮಂತೆಯೇ ಎಂದೆನಿಸುವಂತೆ ಮಾಡಬಹುದು. ಇಲ್ಲದಿದ್ದರೆ, ಆಸಕ್ತರಿಗೆ ಮಾತ್ರ ತಲುಪಬಯಸುವ, ಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾಗಬಲ್ಲ, ಗಣಿತದ ಒಳನೋಟಗಳು, ಗಣಿತದ ಚಟುವಟಿಕೆಯ ಹಿಂದಿನ ತಾಳ್ಮೆ, ಪರಿಶ್ರಮ ಇವುಗಳನ್ನು ದಾಖಲಿಸುವ, ಗಣಿತಜ್ಞರ ಜೊತೆ ಸಂದರ್ಶನಗಳಿಂದ ಕೂಡಿದ ಸಾಕ್ಷ್ಯಚಿತ್ರವೇ ಉತ್ತಮವೆನ್ನಿಸುತ್ತದೆ. "ನಂಬರ್ ಥಿಯರಿ"ಯ ಇನ್ನೊಬ್ಬ ವಿಕ್ಷಿಪ್ತ ದಿಗ್ಗಜ ಪೌಲಿ ಎರ್ಡಿಶ್ ಬಗ್ಗೆ ತಯಾರಿಸಿದ "ಎನ್ ಇಸ್ ಎ ನಂಬರ್" ಮತ್ತು ಫರ್ಮ್ಯಾಟ್ ಥಿಯರಿ-ಗೆ "ಆಧಾರ" ಮಂಡಿಸಿದ ಆಂಡ್ರ್ಯೂವ್ ವೈಲ್ಸ್ ಕುರಿತ ಚಿತ್ರ "ಆಧಾರ: ಫರ್ಮಾಟ್‍ನ ಕೊನೆಯ ಪ್ರಮೇಯ" ಇವುಗಳನ್ನು ನೆನೆಯಬಹುದು.



ರಾಮನುಜನ್-ಹಾರ್ಡಿಯ ವಸ್ತು ಇತರ ಗಣಿತಜ್ಞರ ಕಥೆಗಿಂತ ಅಂತರ್-ಸಾಂಸ್ಕೃತಿಕ ಕಾರಣಗಳಿಂದಾಗಿ ಹೆಚ್ಚು ನಾಜೂಕು ಮತ್ತು ಗಹನವಾದದ್ದು. ಹೇಗೆ ವಾಸ್ತವಿಕ ಚರಿತ್ರೆ ನಮಗೆ ದಕ್ಕುವುದು ಅಸಾಧ್ಯವೋ, ಹಾಗೇ ರಾಮನುಜನ್-ಹಾರ್ಡಿಯವರ `ವಾಸ್ತವ' ಚಿತ್ರವೂ ನಮಗೆ ದಕ್ಕಲಾರದು. ಹಾಗೆಂದುಕೊಂಡು ಈ ಕಥೆಯಲ್ಲಿ ನಾಟಕೀಯವೆನ್ನಬಹುದಾದ, ಮಿಥಿಕಲ್ ಎನ್ನಬಹುದಾದ ಅಂಶಗಳಿವೆ ಎಂಬ ಉತ್ಸಾಹೀ ಧೋರಣೆಗಳನ್ನು ಮಾತ್ರ ಹೊತ್ತು ಇನ್ನೊಂದು ರಂಜನೀಯ ಪುರಾಣವನ್ನು ಸೃಷ್ಟಿಸಿದರೆ ಅದರಿಂದ ವಸ್ತುವಿಗೆ ಅಪಚಾರವಾಗುತ್ತದೆ. ಆದ್ದರಿಂದ ಮಾನವೀಯ ರಸಗಳ ಜೊತೆ, ವಸ್ತುವಿನ ಗಹನತೆಯನ್ನು ಹದವಾಗಿ ಬೆರೆಸಿದ ಚಿತ್ರವೊಂದನ್ನು ನಾನು ಅಪೇಕ್ಷಿಸುತ್ತಿದ್ದೇನೆ. ಬೆನೆಗಲ್ ಮತ್ತು ಫ್ರೈ ಅವರ ಚಿತ್ರ ಉತ್ತಮವಾಗಿ ಮೂಡಿ ಬರಲಿ ಎಂದೇ ಆಶಿಸುತ್ತೇನೆ. ಆದರೆ ಅದರ ಜೊತೆಗೆ ಅದು ಈಗಾಗಲೇ ನಮ್ಮ ಬಳಿ ಇರುವ `ಭಾವ'ಚಿತ್ರವನ್ನು ಹಾನಿಮಾಡದಿರಲಿ ಎಂದೂ ಬಯಸುತ್ತೇನೆ.

(*)ವಿಜ್ಞಾನ-ಗಣಿತದ ಪೂರ್ವ-ಪಶ್ಚಿಮದ ಸಂಸ್ಕೃತಿಗಳ ಕುರಿತು ಪ್ರೋ. ರೊದ್ದಂ ನರಸಿಂಹರ ಕೆಲವು ಆಸಕ್ತಿಕರ ಆಲೋಚನೆಗಳನ್ನು ಇಲ್ಲಿ ಓದಬಹುದು. ಕೆ.ವಿ. ಅಕ್ಷರ ಅವರು ಅನುವಾದ ಮಾಡಿರುವ ಅಕ್ಷರ ಪ್ರಕಾಶನದ ಕನ್ನಡ ಅವತರಣಿಕೆಯೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಪೂರಕವಾದ ನನ್ನ ವಿಮರ್ಶಾ ಲೇಖನವೊಂದು ಇಲ್ಲಿದೆ.

೦೬-೦೯-೨೦೦೬ ರಂದು ಸೇರಿಸಿದ ಟಿಪ್ಪಣಿ:
ಶ್ರೀನಿವಾಸ ರಾಮನುಜನ್‍ರ ಕುರಿತು ಇನ್ನೊಂದು ಬಹುಮುಖ್ಯ ಆಕರ ಗ್ರಂಥ: `ರಾಮಾನುಜನ್: ಲೆಟರ್ಸ್ ಆಂಡ್ ಕಾಮೆಂಟರಿ', ಕಲ್ಚರ್ ಆಂಡ್ ಹಿಸ್ಟರಿ ಆಫ್ ಮ್ಯಾಥೆಮ್ಯಾಟಿಕ್ಸ್ -೧, ಅಮೇರಿಕನ್ ಮ್ಯಾಥೆಮ್ಯಾಟಿಕಲ್ ಸೊಸೈಟಿ. ಈ ಪುಸ್ತಕದಲ್ಲಿ ಪ್ರಸ್ತುತಪಡಿಸಲಾಗಿರುವ ಎರಡು ಮುಖ್ಯ ಅಂಶಗಳನ್ನು ಓದುಗರ ಆಸಕ್ತಿಗಾಗಿ ಉಲ್ಲೇಖಿಸಬಯಸುತ್ತೇನೆ.

೧)ಭೌತವಿಜ್ಞಾನಿ ಚಂದ್ರಶೇಖರ್ ಬರೆದಿರುವ ಲೇಖನದಲ್ಲಿ `ನಾಮಗಿರಿಯ ಅಮ್ಮನ ಪ್ರೇರಣೆಯಿಂದ ಗಣಿತ ಸೂತ್ರಗಳನ್ನು ಹೊಮ್ಮಿಸುವ' ಪುರಾಣವನ್ನು ನಿರಚನಗೊಳಿಸುವ ಪ್ರಯತ್ನಮಾಡಿದ್ದಾರೆ. ಈ ವಿಷವಾಗಿ ಸ್ವತಃ ಚಂದ್ರಶೇಖರ್ ಹಾರ್ಡಿ-ಗೆ ಪತ್ರ ಬರೆದು ಅವರ ಅಭಿಪ್ರಾಯ ಕೇಳುತ್ತಾರೆ. ಇದಕ್ಕೆ ಹಾರ್ಡಿ `ರಾಮನುಜನ್-ನಲ್ಲಿದ್ದ ಕೆಲವು ಸಾಂಸ್ಕೃತಿಕ ಲಕ್ಷಣಗಳನ್ನು ಹೊರತುಪಡಿಸಿ, ಆತ ನಮ್ಮ ನಿಮ್ಮಂತೆ ಬೌದ್ಧಿಕ ಸ್ಫುಟತೆ ( intellectually sound) ಹೊಂದಿದವನೇ ಆಗಿದ್ದ' ಎಂದು ಉತ್ತರಿಸುತ್ತಾರೆ.

೨)ರಾಮಾನುಜನ್ ಬದುಕಿನ ಇನ್ನೊಂದು ಬಹುಮುಖ್ಯ ನಾಜೂಕು ಸಂಗತಿ ಅವರ ಆತ್ಮಹತ್ಯೆಯ ಪ್ರಯತ್ನ. ವೇಗದ ಲಂಡನ್-ನ ಮೆಟ್ರೋ ರೈಲಿನ ಗಾಲಿಗೆ ತಮ್ಮನ್ನು ಒಪ್ಪಿಸಿಕೊಳ್ಳುವ ಅವರ ಪ್ರಯತ್ನ ವಿಫಲವಾಗುತ್ತದೆ. ಪೋಲಿಸರು ಬಂಧಿಸುತ್ತಾರೆ. ಹಾರ್ಡಿ-ಗೆ ಕರೆಹೋಗುತ್ತದೆ. ಹಾರ್ಡಿ ಠಾಣೆಗೆ ಬಂದು 'ರಾಮನುಜನ್ ಕೆಂಬಿಜ್‍ನ ಪ್ರತಿಷ್ಠಿತ ಫೆಲೋ ಆದದ್ದರಿಂದ ನೀವು ಅವರನ್ನು ಬಂಧಿಸುವಂತಿಲ್ಲ' ಎಂದು ವಾದಹೂಡುತ್ತಾನೆ. ಆದರೆ ಈ ಸಂಗತಿ ಸುಳ್ಳಾಗಿರುತ್ತದೆ. ಈ ವಿಷಯವಾಗಿ ಹಾರ್ಡಿ ಮತ್ತು ಕೆಲವು ಗಣಿತಜ್ಞರು ರಾಮನುಜನ್ ಪರವಾಗಿ ಲಾಬಿ ಮಾಡುತ್ತಿರುತ್ತಾರೆ. ಕೆಲವು ವಿರೋಧಿಗಳೂ ಇರುತ್ತಾರೆ. ಆತ್ಮಹತ್ಯೆಯ ಪ್ರಯತ್ನ ಮತ್ತು ಬಂಧನದ ಸುದ್ದಿ ಹೊರಬಂದರೆ ರಾಮನುಜನ್-ಗೆ ಆ ಹಿರಿಮೆ ದಕ್ಕದೇ ಹೋಗಬಹುದು ಎಂಬ ಆತಂಕ ಹಾರ್ಡಿ-ಗೆ. ಪೋಲಿಸ್ ಅಧಿಕಾರಿ ರಾಮನುಜನ್-ರನ್ನು ವಿಚಾರಣೆಗೆ ಗುರಿಪಡಿಸದೇ ಬಿಡುಗಡೆಗೊಳಿಸುತ್ತಾರೆ. ಕೆಲವೇ ತಿಂಗಳಲ್ಲಿ ರಾಮಾನುಜನ್-ಗೆ `ಫೆಲೋ' ಸ್ಥಾನ ಸಿಗುತ್ತದೆ. 'ಫೆಲೋ ಆದವರನ್ನು ಬಂಧಿಸುವಂತಿಲ್ಲ ಎಂಬ ಕಾನೂನೇನೂ ಇರಲಿಲ್ಲ, ಇಲ್ಲ. ಗಣಿತಜ್ಞರ ಬಗ್ಗೆ ನಮಗಿರುವ ಗೌರವದಿಂದಾಗಿ ಕೇಸು ನಡೆಸಲಿಲ್ಲ ಅಷ್ಟೇ' ಎಂದು ಈ ಘಟನೆ ನಡೆದ ಹಲವು ವರ್ಷಗಳ ನಂತರ ಆ ಪೋಲೀಸ್ ಅಧಿಕಾರಿ ಹಾರ್ಡಿ-ಯನ್ನೇ ಅಚ್ಚರಿಗೊಳಿಸದನೆಂಬ ಸಂಗತಿ ಕೂಡಾ ಈ ಪುಸ್ತಕದಲ್ಲಿ ಇದೆ.

ಆದರೆ ಈ ಇಡೀ ಸಂಗತಿಯ ಹಿಂದೆ ರಾಮಾನುಜನ್-ರ ಅಂತರ್ಯದಲ್ಲಿ ಯಾವ ಬಗೆಯ ಕೋಲಾಹಲ ನಡೆಯುತ್ತಿರಬಹುದು? ಸಾವಿರಾರು ಮೈಲಿ ಆಚೆಯ ತಾಯಿ ಮತ್ತು ಹೆಂಡತಿಯ ನಡುವಿನ ಮನಸ್ತಾಪವೊಂದೇ ಕಾರಣವೆ? (ಹೆಂಡತಿ ಗಂಡನಿಗೆ ಬರೆಯುವ ಪತ್ರಗಳು ಅತ್ತೆಯ ತಂತ್ರಗಳಿಂದಾಗಿ ಆತನಿಗೆ ತಲುಪುತ್ತಿಲ್ಲ) ಕೆಂಬ್ರಿಜ್-ನ ಪರಿಸರವೂ ಕಾರಣವೆ?

ಆದುದರಿಂದ ರಾಮಾನುಜನ್-ರ ಆಂತರ್ಯವನ್ನೂ, ಅವರ ಸುತ್ತ ನಡೆದಿರಬಹುದಾದ ಸಂಗತಿಗಳನ್ನೂ ಒಂದು `ಕಲೆ'ಯಾಗಿ ನಿರೂಪಿಸಲು ಅತ್ಯುತ್ತಮ ಕಥೆಗಾರನ ಸಂವೇದನೆಯೇ ಬೇಕು. ನಾನಿಲ್ಲಿ ರಾಮಾನುಜ-ರ ಒಳಬದುಕಿನ ನಾಜೂಕು ಸಂಗತಿಯ ಬಗ್ಗೆ ಹಲವು ಅಧಿಕೃತ ಪುಸ್ತಕಗಳಲ್ಲಿ ಉಲ್ಲೇಖವಿರುವುದರಿಂದ ಬರೀ ಗಾಸಿಪ್ ಆಗಿರಲಿಕ್ಕಿಲ್ಲ ಎಂಬ ಧೈರ್ಯವಿದ್ದರೂ, ಕೊಂಚ ಒರಟೊರಟಾಗಿ ಬರೆದಿರುವುದಕ್ಕೆ ಖೇದವಿದೆ. ನಮ್ಮ ಸಿನೆಮಾ ನಿರ್ದೇಶಕರು ನನಗಿಂತ ಉತ್ತಮರಾಗಲಿ ಎಂದು ಮಾತ್ರ ಆಶಿಸುತ್ತೇನೆ.