ಸೃಜನ ಕನ್ನಡಿಗನೊಬ್ಬನ ಕಣ್ಮರೆ
ಇಡೀ ಕನ್ನಡ ಸಮುದಾಯದ ಭಾವಪ್ರಪಂಚವನ್ನು ಆಳುವ ಸಾಮರ್ಥ್ಯ ಪಡೆದಿದ್ದ, ಬಹುಶ ಇನ್ನೂ ಕೆಲವು ವರ್ಷಗಳ ಕಾಲ ಸಹ ಆಳಬಲ್ಲಂತಿದ್ದ ಕನ್ನಡ ಮೇರುನಟ ಭೌತಿಕ ಪ್ರಪಂಚದಿಂದ ಸರಿದುಹೋಗಿದ್ದಾರೆ. ಇಲ್ಲಿ ಭೂತಕಾಲದ ಪ್ರತ್ಯಯ ಬಳಸುವುದು ಕಷ್ಟವೇ! ವರ್ತಮಾನದಲ್ಲಿ ಅಷ್ಟು ಅವರು ನಿಚ್ಚಳರಾಗಿದ್ದಾರೆ, ಭವಿಷ್ಯದಲ್ಲೂ ಇರಲಿದ್ದಾರೆ.
ಸಿನೆಮಾ ಪ್ರಪಂಚದಲ್ಲಿ ಬದುಕಿಯೂ, ಸಿನೆಮಾದಲ್ಲಿಯೂ, ತಮ್ಮ ವಾಸ್ತವದ ಬದುಕಿನಲ್ಲಿಯೂ ಸಾಂಪ್ರದಾಯಿಕ ಮೌಲ್ಯಗಳಿಗೆ ಬದ್ಧರಾಗಿ ಬದುಕಿದ್ದೇ ಅವರು ಎಲ್ಲಾ ವರ್ಗಗಳಿಂದ ಮನ್ನಣೆ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ ಅಂಶ. ರಂಗಭೂಮಿಯ ಹಿನ್ನೆಲೆಯಿಂದ ಬಂದು, ಗಾಯನದ ಎಲ್ಲಾ ಪ್ರಾಕಾರಗಳಲ್ಲಿ ಜನ-ಮೆಚ್ಚುಗೆಗಳಿಸುವಂತೆ ಮೆರೆದಿದ್ದು ಅವರ ಸೃಜನ ಶಕ್ತಿಗೆ ಸಾಕ್ಷಿ. ಅವರ ಗಾಯನದ ಗುಣ-ಮಟ್ಟದ ಶಾಸ್ತ್ರೀಯ ಮೌಲ್ಯಮಾಪನ ಪಂಡಿತವರ್ಗಕ್ಕೆ ಬಿಟ್ಟದ್ದು. ಆದರೆ ಅವರ ಹಲವು ಹಾಡುಗಳು ಜನಮನದಲ್ಲಿ (`ನಿನಗಾಗಿ ಓಡೋಡಿ ಬಂದೆ', `ನಾದಮಯ ಈ ಲೋಕವೆಲ್ಲಾ',`ಜೇನಿನ ಹೊಳೆಯೂ..' ಈ ಧಾಟಿಯ ಹಲವು ಹಾಡುಗಳು ನನ್ನ ಮನದಲ್ಲೂ), ಇನ್ನೂ ಕೆಲವು ದಶಕಗಳ ಕಾಲ ಉಳಿಯಲಿವೆ ಎಂಬುದರಲ್ಲಿ ಸಂಶಯಬೇಡ.
ಆದರೆ ಮೃತರನ್ನು ಹೇಗೆ ಗೌರವಿಸಬೇಕು ಎಂಬುದನ್ನು ನಮ್ಮ ಸಮಾಜ ಕಲಿತುಕೊಳ್ಳುವ ಪ್ರಯತ್ನವನ್ನೇ ಮಾಡಿದಂತಿಲ್ಲ. ನಮ್ಮ ಸಮಾಜದ ಕೆಳವರ್ಗದ ಕೆಲವರು ಮಾಡುವ ಎಲ್ಲಾ ತಪ್ಪುಗಳಿಗೆ ಅವರ ನಿತ್ಯದ ಬವಣೆಯ, ಅವರ ಅಸಹಾಯಕತೆಯ ಅಥವ ಇನ್ಯಾವುದೋ ಸಮಜಾಯಿಷಿ ಕೊಡುತ್ತಾ ಹೋಗುವುದು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನಿನ್ನೆಯ ಘಟನೆಗಳನ್ನು ಕನ್ನಡ ಸಮುದಾಯದ ಎಲ್ಲಾ ಹಿರಿಯರು (ಅದರಲ್ಲೂ ಮುಖ್ಯವಾಗಿ ಸಾಂಸ್ಕೃತಿಕ ಕ್ಷೇತ್ರದ ಗಣ್ಯರು) ನಿರ್ಭಯವಾಗಿ ಖಂಡಿಸಬೇಕು. ಚಿತ್ರರಂಗದ ಸಮಸ್ಯೆ, ಕನ್ನಡದ ಸಮಸ್ಯೆ, ಇನ್ನಿತರ ಜನಪರ ಚಟುವಟಿಕೆಗಳ ಸಂದರ್ಭದಲ್ಲಿ ಸ್ವತಃ ಡಾ. ರಾಜ್‍ಕುಮಾರ್ ತಮ್ಮ ಬೆಂಬಲಿಗರನ್ನು ನಿಯಂತ್ರಿಸುವಲ್ಲಿ ತಮ್ಮ ಹಲವು ಪ್ರಯತ್ನಗಳ ನಂತರವೂ ವಿಫಲರಾಗುತ್ತಿದ್ದರೆಂಬುದನ್ನು ನಮಗೆ ಈ ಹೊತ್ತಿನಲ್ಲಿ ಸ್ವಲ್ಪ ಕಷ್ಟವಾದರೂ ನೆನಪಿಸಿಕೊಳ್ಳಬಹುದು. ಇದನ್ನು ಕೇವಲ ಒಬ್ಬ ವ್ಯಕ್ತಿಯ ಮೇಲಿನ ಆಪಾದನೆ ಎಂದು ಯಾರೂ ತಪ್ಪು ತಿಳಿಯಬಾರದು. ಮೃತರನ್ನು ಗೌರವಿಸುವ ಕುರಿತಂತೆ, ಜನಾಂದೋಲನಗಳನ್ನು ನಡೆಸುವ ಕುರಿತಂತೆ ಪ್ರಜಾತಂತ್ರದಲ್ಲಿ ನಾವೆಲ್ಲರೂ ಅಂದರೆ ನಾಗರಿಕರೂ, ಜನನಾಯಕರೂ, ಬರಹಗಾರರೂ ಒಟ್ಟಾಗಿ ಚಿಂತಿಸಿ, ಕೆಲವು ನಿಯಮಾವಳಿಗಳನ್ನು ರೂಪಿಸಿಕೊಂಡು ಅಚರಣೆಗೆ ತರಬೇಕಾದದ್ದು ಎಲ್ಲರ ಕರ್ತವ್ಯ. ವ್ಯಕ್ತಿ, ಭಾಷೆ, ನಾಡು, ದೇಶದ ಹೆಸರಿನಲ್ಲಿ ನಡೆಯುವ ಜನಸಮೂಹದ ಚಟುವಟಿಕೆಗಳು ಹಿಂಸಾರೂಪಕ್ಕೆ ಪರಿವರ್ತಿತವಾಗದಂತೆ ಜನನಾಯಕರು ಹೇಗೆ ನಡೆದುಕೊಳ್ಳಬೇಕು ಎಂಬುದರ ಕುರಿತು ಅಪಾರ ಸಂಕಟದ ಚಿಂತನೆ ನಡಿಸಿದ್ದ ಗುರುದೇವ ರವೀಂದ್ರನಾಥ ಟ್ಯಾಗೋರರ ಪಠ್ಯಗಳನ್ನು ನಾವು ಈ ಸಂದರ್ಭದಲ್ಲಿ ಪರಿಶೀಲಿಸಬಹುದಾಗಿದೆ ಎನ್ನಿಸುತ್ತದೆ.
ಸೃಜನ-ಕನ್ನಡಿಗ ಡಾ ರಾಜ್‍ಕುಮಾರ್ ಅವರಿಗೆ ಮೌನದಲ್ಲಿಯೇ ಗೌರವದ ನಮನ.