ಅನಂತಮೂರ್ತಿಯವರ ಕೃತಿಗಳಲ್ಲಿ `ಹಡೆ' ಪಾತ್ರಗಳು
`ಹಡೆ' ಪಾತ್ರಗಳ ಕುರಿತು ಅನಂತಮೂರ್ತಿಯವರಿಗೆ ಏನೋ ಒಂದು ವಿಶೇಷ ಆಕರ್ಷಣೆ, ಕುತೂಹಲವಿದ್ದಂತಿದೆ. ಅದೇಕೆ ಹಾಗೆ ಎಂದು ನನಗೂ ಕೆಟ್ಟ ಕುತೂಹಲ. ಈ ವಿಷಯದ ಬಗ್ಗೆ ಬರೆಯಬೇಕೆಂದು ಹಲವು ಸಲ ಚಿಂತಿಸಿ ವ್ಯವಧಾನ ಸಾಲದೇ ತಳ್ಳಿಹಾಕಿದ್ದೆ. ಉದಯವಾಣಿಯ ಋಜುವಾತು ಅಂಕಣದ ನಂಜುಂಡಸ್ವಾಮಿಯವರ ಕುರಿತ ವ್ಯಕ್ತಿಚಿತ್ರದಲ್ಲಿ `ಆಚಾರ'ರ ಚಿತ್ರಣವನ್ನು ಓದುತ್ತಿದ್ದಂತೆ, ಆ ನನ್ನ ಹಳೆಯ ಹಂಬಲ ಮತ್ತೆ ಜಾಗ್ರತವಾಯಿತು. ಈ ಸಂದರ್ಭದಲ್ಲಿ ವ್ಯಕ್ತಿಚಿತ್ರದ ಬಗ್ಗೆ ಒಂದು ಮಾತು ಹೇಳದೆ ಮುಂದೆ ಹೋಗಲಾರೆ. ವ್ಯಕ್ತಿಚಿತ್ರದ ಪ್ರಾಕಾರದಲ್ಲಿ ಅನಂತಮೂರ್ತಿ ಅವರಿಗೊಂದು ವಿಶೇಷ ಶಕ್ತಿಯಿದೆ. ಬೇಂದ್ರೆ, ಗೋಪಾಲಗೌಡರು, ವಿ.ಸೀತಾರಾಮಯ್ಯ, ಆಚಾರ್ಯ ಕೃಪಲಾನಿ ಇವರನ್ನೆಲ್ಲಾ ಅನನ್ಯವೆನ್ನಿಸುವ ರೀತಿಯಲ್ಲಿ ನಮಗೆ ಕಾಣಿಸಿದ್ದಾರೆ. ನಂಜುಂಡಸ್ವಾಮಿಯವರ ಬಗೆಗಿನ ವ್ಯಕ್ತಿಚಿತ್ರ ಕೂಡಾ ಅದೇ ಸಾಲಿಗೆ ಸೇರುತ್ತದೆ.
ಅನಂತಮೂರ್ತಿ ಅವರ ಕೃತಿಯ `ಹಡೆ' ಪಾತ್ರಗಳನ್ನು ಚರ್ಚಿಸುವ ಮೊದಲು, `ಹಡೆ' ಪದದ ಅರ್ಥವ್ಯಾಪ್ತಿಯನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತೇನೆ. ಈ ಪದ ಮನಸ್ಸಿಗೆ ಹೊಳೆಯಿಸುವ ಪ್ರತಿಮೆ ಎಂತಹುದು?
`ಹಡೆ' ಪಾತ್ರವೆಂದರೆ ಸಾಮಾನ್ಯವಾಗಿ ನಾನು ಗುರುತಿಸಿದಂತೆ ಸ್ವತಃ ತನ್ನ ಅಧಿಕಾರ, ಶಕ್ತಿ, ಸ್ಥಾನಮಾನಗಳ ಕುರಿತು ಎಚ್ಚರವಿಲ್ಲದ, ಅವುಗಳನ್ನು ಪಡೆಯಬೇಕೆಂಬ ಹಂಬಲವಿಲ್ಲದ ವ್ಯಕ್ತಿ. ಜೊತೆಗೇ ತನ್ನ ಎದುರಿಗೆ ಇರುವುವರ ಶಕ್ತಿ, ಅಧಿಕಾರ, ಸ್ಥಾನಮಾನಗಳನ್ನು ಲೆಕ್ಕಕ್ಕೆ ತಾರದೇ ವರ್ತಿಸಬಲ್ಲ ಪಾತ್ರ. ಒಂದು ಕೋನದಿಂದ ನೋಡಿದಾಗ ವ್ಯವಹಾರಿಕ ಕೌಶಲ್ಯವಿಲ್ಲದ ಹ್ಯಾಪನಂತೆ ಕಂಡುಬಂದರೆ, ಅದೇ ಇನ್ನೊಂದು ಕೋನದಿಂದ ನೋಡಿದಾಗ ಅನನ್ಯ ಕೌಶಲ್ಯದ ವ್ಯಕ್ತಿಯಾಗಿ ಕಂಡು ಬರುವುದೇ ಪಾತ್ರದ ವೈಶಿಷ್ಟ್ಯ. ಹಾಗಿರುವುಂದಲೇ ಅಂಥ ಪಾತ್ರಗಳಿಗೆ, ವ್ಯಕ್ತಿಗಳಿಗೆ ಅನಂತಮೂರ್ತಿ ಅವರ ಕೃತಿ-ಪ್ರಪಂಚದಲ್ಲಿ ವಿಶೇಷ ಸ್ಥಾನಮಾನ.
ಎರಡು ವಿಭಿನ್ನ ಮೌಲ್ಯ, ಸಂವೇದನೆಗಳ (ಅನಂತಮೂರ್ತಿ ಅವರ ಕೃತಿಗಳಲ್ಲಿ ಪ್ರಧಾನವಾಗಿ ಪರಂಪರೆ ಮತ್ತು ಆಧುನಿಕತೆಯನ್ನು ಪ್ರತಿನಿಧಿಸುವ) ಪ್ರತೀಕಗಳು ಅಥವಾ ಪಾತ್ರಗಳು ಸಂಘರ್ಷಕ್ಕೊಳಗಾದಾಗ, ಆ ಉದ್ವಿಗ್ನ ವಾತಾವರಣದಲ್ಲಿ, ಈ ಬಗೆಯ ಪಾತ್ರವು ತನ್ನ ಹಗುರುತನದಿಂದ ಸಂವಾದ ಹುಟ್ಟಿಸುವ ಶಕ್ತಿ ಪಡೆದಿರುತ್ತದೆ. ವ್ಯಕ್ತಿಗಳ ಸ್ವ-ಪ್ರತಿಷ್ಠೆ, ಅಹಂಕಾರದ ಅಂಧತ್ವದ ಮುಖವಾಡಗಳನ್ನು ಕಿತ್ತೆಸೆದು ಮಾನವೀಯ ಮುಖಗಳನ್ನು ಅನಾವರಣಗೊಳಿಸುವ ಶಕ್ತಿ ಪಡೆದಿರುತ್ತದೆ.
`ಸಂಸ್ಕಾರ'ದ ಪುಟ್ಟ, `ಪ್ರಸ್ತ'ದ ಶ್ಯಾಂಭಟ್ಟರು, `ಸೂರ್ಯನ ಕುದುರೆ'ಯ ವೆಂಕಟ, `ದಿವ್ಯ'ದ ಕೇಶವ ಅನಂತಮೂರ್ತಿಯವರು ಕೆತ್ತಿರುವ ಕೆಲವು ವಿಶಿಷ್ಟ ಹಡೆ ಪಾತ್ರಗಳು.
ಸಂಸ್ಕಾರದ ಪುಟ್ಟ ಪ್ರಾಣೇಶಾಚಾರ್ಯರ ಅಂತರಂಗದಲ್ಲಿ ನಡೆಯುತ್ತಿದ್ದ ಮೌಲ್ಯ ಸಂಘರ್ಷಕ್ಕೆ ಸಾಕ್ಷಿಪ್ರಜ್ಞೆಯಾಗಿ ಬಂದರೆ, `ಪ್ರಸ್ತ'ದ ಶ್ಯಾಂಭಟ್ಟರು ಎಲ್ಲಾ ಸಂಬಂಧಗಳ ನಡುವಿನ ಸೂಕ್ಷ್ಮ ಸಮಸ್ಯೆಗಳನ್ನು ಬಿಡಿಸುವ ಸಂಧಾನಕಾರರಾಗಿ ಬರುತ್ತಾರೆ. ಬಹುತೇಕ ವಿಮರ್ಶಕರು ಈಗಾಗಲೇ ಗುರುತಿಸಿರುವ ಲೇಖಕರ ಸಾಹಿತ್ಯ ಬದುಕಿನ ಎರಡು ಘಟ್ಟಗಳಲ್ಲಿ (ಡಿ.ಆರ್. ನಾಗರಾಜ್ ಬಳಸುವ ಪದಗಳು `ಮೂಲನವ್ಯ' ಮತ್ತು `ಪರಿವರ್ತನಶೀಲ ನವ್ಯ') `ಪುಟ್ಟ' ಮತ್ತು `ಶ್ಯಾಂಭಟ್ಟರು' ಮೊದಲ ಘಟ್ಟಕ್ಕೆ ಸೇರುತ್ತಾರೆ. `ವೆಂಕಟ' ಮತ್ತು `ಕೇಶವ' ಎರಡನೇ ಘಟ್ಟಕ್ಕೆ ಸೇರಿದ ಪಾತ್ರಗಳು. `ವೆಂಕಟ' ತನ್ನ ನಿಷ್ಕ್ರೀಯತೆಯಿಂದ, ತನ್ನ ನಾನ್-ಪಾಲಿಟಿಕಲ್ ಧೋರಣೆಯಿಂದ ಆಧುನಿಕತೆಯನ್ನು ಪ್ರಶ್ನಿಸುವ ಸಂಕೇತವಾಗುತ್ತಾನೆ. `ದಿವ್ಯ'ದ ಕೇಶವ ಕೂಡಾ ಅದೇ ಬಗೆಯ ಸಂಕೇತವಾಗಿ ಘನಶ್ಯಾಮನ ಪಾತ್ರಕ್ಕೆ ಪ್ರತಿದ್ವಂದ್ವಿಯಾಗುತ್ತಾನೆ. ಹೀಗೆ ಎರಡನೇ ಘಟ್ಟದಲ್ಲಿ ಹೆಚ್ಚಾಗಿ ಈ `ಹಡೆ' ಪಾತ್ರಗಳು ಪಾಶ್ಚಾತ್ಯ ಪ್ರಣೀತ ಆಧುನಿಕತೆಯನ್ನು ಪ್ರಶ್ನಿಸುವ ಸಲಕರಣೆಯಾಗಿ ಬಳಸಲ್ಪಡುವಂತೆ ತೋರುತ್ತದೆ.
ಎಲ್ಲದಕ್ಕೂ ಅತೀತನಾಗಿ ಇರುವುದೇ ಆತನ ರಾಜಕಾರಣ ಎಂದು ಅನಂತಮೂರ್ತಿ ಹಲವು ಕಡೆ ಗುರುತಿಸಿದ್ದಾರೆ. ಬಹುಶಃ ಅದೇ ಕಾರಣಕ್ಕೆ ಲೌಕಿಕವಾಗಿ ವರ್ತಿಸುವವರಿಗೆ ಇಂಥವರ ಬಗ್ಗೆ ಭಯ ("ಆದರೆ ಅವನು ಹೇಳದಿದ್ದ ಮಾತುಗಳೆಲ್ಲ ಅವನ ನಗುವಿನಲ್ಲಿ ಇವೆಯೆಂದೆನಿಸಿ ನಾನು ಸೋರಿ ಹೋಗಿಬಿಡಬಹುದೆಂದು ದಿಗಿಲಾಯಿತು": `ಸೂರ್ಯನ ಕುದುರೆಯ' ಅನಂತೂ, ವೆಂಕಟನ ಬಗ್ಗೆ) ಮತ್ತು ಮೆಚ್ಚುಗೆ ("ಈ ಹಡೇ ವೆಂಕಟನೂ ಒಬ್ಬ ಹವಣಿಕೆಯ ರಾಜಕಾರಣಿಯೇ. ಎಂಥ ಮ್ಯಾನಿಪುಲೇಟರ್. ನನ್ನ ಸ್ಥಿತಿಯನ್ನೇ ಬದಲಾಯಿಸಲು ಹವಣಿಸಿದ್ದ"). `ಹಡೆ' ಅನ್ನೋದು ಒಂದು ರೀತಿಯ ರಾಜರ್ಷಿ ಎಂಬ ಭಾರತೀಯ ಪರಿಕಲ್ಪನೆಗೆ ಸಮೀಪವಾದದ್ದು ಎಂದು ಲೇಖಕರು ಭಾವಿಸುವಂತೆ, ನಮಗೆ ಸೂಚಿಸುವಂತೆ ತೋರುತ್ತದೆ. ಅಧಿಕಾರಿ ವಲಯಗಳಲ್ಲಿ ಇದ್ದೂ ಅಧಿಕಾರವನ್ನು ಮೀರಿದ `ರಾಜರ್ಷಿ' ಓರ್ವ ಹೆಚ್ಚಿನ ಘನತೆ ಪಡೆದಿರುವ `ಹಡೆ'.
ಅನಂತಮೂರ್ತಿ ಅವರ ಕೃತಿಗಳಲ್ಲಿ ಇದೇ ಬಗೆಯ ಗುಣಗಳಿರುವ ಸ್ತ್ರೀ ಪಾತ್ರಗಳನ್ನು ನಾವು ಕಾಣುವುದಿಲ್ಲ. ಈ ಕುರಿತು ಹೆಚ್ಚಿನ ಚರ್ಚೆಯ ಅಗತ್ಯವಿದೆ. ಅದೇ ರೀತಿ ಇತರ ಲೇಖಕರು ಈ ಬಗೆಯ ಪಾತ್ರಗಳನ್ನು ಕಾಣುವ ಬಗೆಯ ಕುರಿತೂ ಚರ್ಚೆಯಾಗಬೇಕಿದೆ.
ಕೊನೆಯದಾಗಿ: ಇತ್ತೀಚೆಗೆ ಸ್ನೇಹಿತನ ಜೊತೆ ಚರ್ಚಿಸುತ್ತಿದ್ದಾಗ ಒಂದು ಮಾತು ಬಂತು, ಬಹುಶಃ ಅದೇ ಹಳೇ ಚರ್ಚೆ: `ಸಂಸ್ಕಾರ'ದ ಪ್ರಾಣೇಶಾಚಾರ್ಯ ಪಾತ್ರ ಆಥೆಂಟಿಕ್ ನೇಟಿವ್ ರಚನೆ ಅಲ್ಲ. ವಸಾಹಾತು ಅನುಭವದಿಂದ ಪೀಡಿತ ಲೇಖಕನೊಬ್ಬ ತನ್ನ ಅನುಭವವನ್ನು ಆ ಪಾತ್ರದ ಮೇಲೆ ಆರೋಪಿಸಿದ್ದು ಇತ್ಯಾದಿ. ನಾನು ಹೇಳಿದೆ: ಅದು ಸರಿ. ಇದರ ಮೂಲಕ ಅದು ಮುಂದಿನ ತಲೆಮಾರಿನವರಲ್ಲಿ ನೇಟಿವ್ ಪಾತ್ರ, ಸಂಸ್ಕೃತಿಯ ಬಗ್ಗೆ ತಪ್ಪು ಗ್ರಹಿಕೆಗಳನ್ನು ಹುಟ್ಟಿಸುವ ಸಾಧ್ಯತೆ ಪಡೆದಿರುವ ಅಪಾಯವೇನೋ ಇದೆ, ಆದರೆ ಅದೇ ಕಾರಣದಿಂದ ವಸಾಹಾತು ಅನುಭವ ಪಡೆದ ಅನಂತಮೂರ್ತಿ ಅವರ ತಲೆಮಾರಿಗೂ, ನಂತರದವರಿಗೂ ಅದಕ್ಕಿರುವ ರೆಲೆವನ್ಸ್-ನ್ನು ನಿರಾಕರಿಸಲು ಸಾಧ್ಯವಿಲ್ಲ ಅಂತ. ಅದೇ ರೀತಿ `ದಿವ್ಯ'ದ ಎಷ್ಟೋ ಪಾತ್ರಗಳು ಇನ್ನೊಂದು ಬಗೆಯ, ಮೇಲಿನದ್ದಕ್ಕೆ ತದ್ವಿರುದ್ಧ ಕಾರಣದಿಂದ, ಕೃತಕತೆ ಪಡೆದಿವೆ. ಕೇಶವನಂಥ ಪಾತ್ರಗಳ ಚಿತ್ರಣದಲ್ಲಿ ಆಧುನಿಕ ಬರಹಗಾರನೊಬ್ಬ ಅತಿ-ಪ್ರಜ್ಞಾಪೂರ್ವಕವಾಗಿ ಇವೊತ್ತು ನಮ್ಮ ಸುತ್ತಲೂ ಕಾಣಸಿಗದ ನೇಟಿವ್ ಪಾತ್ರವನ್ನು ಸೃಷ್ಟಿಸಲು ಹೆಣಗುತ್ತಿರುವುದು ನಮಗೆ ಕಾಣ ಸಿಗುತ್ತದೆ. ಪುರಾಣ ಹೇಳುವ `ಕೇಶವ' ಮತ್ತೆ ಪುರಾಣದಲ್ಲಿನ ಪಾತ್ರದಂತೆ ನಮಗೆ ಕಾಣುತ್ತಾನೆಯೇ ಹೊರತು ಇವೊತ್ತಿನ ವಾತಾವರಣದಲ್ಲಿ ಆಥೆಂಟಿಕ್ ಅನಿಸುವುದಿಲ್ಲ. ಆದರೆ ಒಟ್ಟೂ `ದಿವ್ಯ' ಕೃತಿಯ ಆಶಯವೇ `ದೇಸೀ' ಎನ್ನಬಹುದಾದ ಪರಿಭಾಷೆಯಲ್ಲಿ, `ದೇಸೀ' ವಾತಾವರಣವನ್ನೂ, ಪಾತ್ರಗಳನ್ನೂ ಸೃಷ್ಟಿಸುವ ಸಂಕಲ್ಪದಿಂದಲೇ ಬರೆಯಲಾಗಿರುವುದರಿಂದ, ಈ ಎಲ್ಲಾ ಕೃತಕತೆಗೆ ಒಂದು ಬಗೆಯ ಆಥೆಂಟಿಸಿಟಿ ಇದೆ. ವಿಚಿತ್ರವೆಂದರೆ, ಕೇಶವ ಹಾಗೆ ಪೂರ್ತಿ ಪೌರಾಣಿಕ ಪಾತ್ರವಾಗಿ ಓದುಗನಿಗೆ ಕಂಡುಬಂದಿದ್ದರೆ ಲೇಖಕ ತನ್ನ ಆಶಯದಲ್ಲಿ ಗೆದ್ದಂತೆ. ಸಾಹಿತ್ಯಕೃತಿಗಳಲ್ಲಿನ ತಮ್ಮ ಸೈದ್ಧಾಂತಿಕ ಬದ್ಧತೆಗಳಿಂದಾಗಿ ಪೂರ್ವ, ಪಶ್ಚಿಮಗಳನ್ನು ಸರಳೀಕರಣಗೊಳಿಸುವುದು ಅನಂತಮೂರ್ತಿಯವರ ದೌರ್ಬಲ್ಯ. ಪಶ್ಚಿಮವನ್ನು ಗ್ರಹಿಸುವಾಗ, ಪೂರ್ವವನ್ನು ಗ್ರಹಿಸುವ ಕುರಿತಂತೆ ಪಶ್ಚಿಮದ ಬರಹಗಾರರ ಮೇಲೆ ನಾವು ಆರೋಪಿಸುವ `ಓರಿಯೆಂಟಲಿಸ್ಟ್' ಧೋರಣೆಗಳಿಗೆ ಸಮಾನವಾದ, ನಮ್ಮ `ಆಕ್ಸಿಡೆಂಟಲಿಸ್ಟ್' ಧೋರಣೆಗಳನ್ನು ಮೀರಬಲ್ಲ ಕನ್ನಡ ಲೇಖಕನಿಗಾಗಿ ಕಾಯುತ್ತಿದ್ದೇನೆ.
[ಡಾ ಅನಂತಮೂರ್ತಿ ಪ್ರತಿಕ್ರಿಯೆ: ಈ ಲೇಖನದ ಕುರಿತು ಡಾಅನಂತಮೂರ್ತಿಯವರು ನೀಡಿದ ಪ್ರತಿಕ್ರಿಯೆಯನ್ನು ಸಂಗ್ರಹವಾಗಿ ಗ್ರಹಿಸಿ ಇಲ್ಲಿ ಕೊಡುತ್ತಿದ್ದೇನೆ. ದೂರವಾಣಿಯ ಮೂಲಕ ಗ್ರಹಿಸುವಾಗ ನನ್ನಿಂದ ಏನಾದರೂ ಲೋಪವಾಗಿದ್ದಲ್ಲಿ, ಡಾಅನಂತಮೂರ್ತಿ ನನ್ನನ್ನು ಕ್ಷಮಿಸುವರೆಂಬ ನಂಬಿಕೆಯೊಡನೆ. ಹಾಗೇ ದೂರವಾಣಿಯಯ ಆಚೆ ಬದಿಯಲ್ಲಿ ಅವರ ಧ್ವನಿಯಲ್ಲಿದ್ದ ಶಕ್ತಿಯನ್ನೂ, ಅವರಿಗೆ ತಮ್ಮ ಕೃತಿಗಳ ಬಗ್ಗೆ, ಪಾತ್ರಗಳ ಬಗ್ಗೆ, ಒಟ್ಟೂ ಬರವಣಿಗೆಯ ಬಗ್ಗೆ ಇರುವ ಗಟ್ಟಿ ನಂಬಿಕೆಗಳನ್ನೂ ಇಲ್ಲಿ ನನ್ನ ತೊದಲು ಬರಹದಲ್ಲಿ ಧ್ವನಿಸದೇ ಹೋಗಬಹುದು ಎಂಬ ಆತಂಕದೊಡನೆ.]
"ಲೇಖಕನಾಗಿ `ಹಡೆ' ಪಾತ್ರವನ್ನೇ ಆಗಲಿ, ನನ್ನ ಕೃತಿಯ ಇನ್ನಾವುದೇ ಪಾತ್ರವನ್ನಾಗಲಿ ನಾನು ವಿವರಿಸಬಾರದು. ಅದು ಅದರ ವಿಸ್ತಾರವನ್ನು ಸ್ವತಃ ನಾನೇ ಸಂಕುಚಿತಗೊಳಿಸಿದಂತೆ. ಅದು ಓದುಗರಾದ ನಿಮಗೆ ಬಿಟ್ಟದ್ದು. ನಾನು ಅವರು ಹೇಳುವ [ಬಹುಶಃ ಅಕಾಡೆಮಿಕ್ ವಲಯದವರು] ಪೋಸ್ಟ್-ಮಾಡರ್ನಿಸ್ಟ್ ಫ್ಯಾಶನ್ನಿನಲ್ಲಿ ಬರೆಯುವವನಲ್ಲ. ಅನುಭವಕ್ಕೆ, ಅನಿಸಿಕೆಗೆ ಕಂಡದ್ದನ್ನು ಬರೆಯುವವನು. ಇಲ್ಲಿ (ಮುಖ್ಯವಾಗಿ ಪ್ರಾಣೇಶಾಚಾರ್ಯ) ಪಾತ್ರ ಕೃತಕ, ನೇಟಿವ್ ಹೌದೇ ಅಲ್ಲವೇ ಎಂಬ ಚರ್ಚೆಯೇ ಅಸಂಗತ. ಭೈರಪ್ಪನವರ `ಸಾರ್ಥ'ದ ನಾಗಭಟ್ಟನ ಪಾತ್ರದ ಬಗ್ಗೆಯೂ ಹೀಗೆಯೇ ಹೇಳುವವರಿದ್ದಾರೆ. ಆದರೂ ನನ್ನ ಶೈಲಿ ಭೈರಪ್ಪನವರಿಗಿಂತ ತುಂಬಾ ಭಿನ್ನ. ಮೀನಾಕ್ಷಿ ಮುಖರ್ಜಿ ಗುರುತಿಸುವಂತೆ ನನ್ನ ಕೃತಿಗಳು, ಅಲಿಗೊರಿಕಲ್(ರೂಪಕ) ಮತ್ತು ರಿಯಲಿಸ್ಮ್ (ವಾಸ್ತವ) ಹೀಗೆ ಎರಡು ಮಟ್ಟದಲ್ಲಿ ಕೆಲಸಮಾಡುತ್ತವೆ. (ಅದೇ ರೀತಿ ಎರಿಕ್‍ಸನ್ ನನ್ನ ಬರವಣಿಗೆಯನ್ನು ಸ್ವಲ್ಪ ಅರ್ಥ ಮಾಡಿಕೊಂಡಿದ್ದಾರೆ. ನೈಪಾಲನಿಗೂ ಇದೆಲ್ಲಾ ಅರ್ಥವಾಗುವುದಿಲ್ಲ). ಪ್ರಾಣೇಶಾಚಾರ್ಯರ ಪಾತ್ರವನ್ನು ನಾನು `ಮತ್ಸ್ಯಗಂಧಿಯ ಜೊತೆ ಮಲಗಿ ನಡೆದ ಪರಾಶರ'ನನ್ನು ಆಧರಿಸಿದ್ದು. ಅವನು ನಮ್ಮದೇ ಸಂಸ್ಕೃತಿಯವನು. ಅದು ಹೇಗೆ ಪ್ರಾಣೇಶಾಚಾರ್ಯ ಪಾಶ್ಚಾತ್ಯ ಪೀಡಿತನಾದಾನು? `ಕೇಶವ'ನಂಥವರನ್ನೆಲ್ಲಾ ನಾನು ನನ್ನ ಬದುಕಿನಲ್ಲಿ ಕಂಡಿದ್ದೇನೆ. ಹೀಗೆಲ್ಲಾ ಇರುವಾಗ ನೀವು ಸಮಕಾಲೀನ ಎನ್ನುವುದಾದರೂ ಏನನ್ನು? (ನಾನಂತೂ ಸಮಕಾಲೀನನೇ. ಇಂದಿನ ತುರ್ತು ಅಗತ್ಯಕ್ಕೆ ರಾಜ್ಯಸಭೆಯ ಚುನಾವಣೆ ಹೋರಾಡಲೂ ಹಿಂಜರಿಯದವನು.) ಆದುದರಿಂದ ಇದು ನೇಟಿವ್ ಹೌದೇ ಅಲ್ಲವೆ ಎಂಬ ಚರ್ಚೆಗಿಂತ ಹೆಚ್ಚು ವಿಶಾಲವಾಗಿ ಗ್ರಹಿಸಿ. ಅಲ್ಲಲ್ಲಿ ಗ್ರಹಿಸಿದ್ದೀರಿ ಕೂಡಾ. ನಿಮ್ಮ ಹಾಗೆ ಗ್ರಹಿಸುವವರು ವಿರಳ. ಆ ಕಾರಣಕ್ಕಾಗಿ ನಿಮ್ಮ ಬಗ್ಗೆ ನನಗೆ ಅಭಿಮಾನ. ಧನ್ಯವಾದಗಳು."