ಸೃಜನ-ಕನ್ನಡಿಗ (sRujana-kannaDiga)

ಸಹೃದಯ, ವಿಶ್ವಾಸ ಮತ್ತು ಸೃಜನಶೀಲತೆ: Creator of this blog is Sudarshan. He has interest in Engineering research and Kannada writing. As a part of the process of Kannada writing, this blog will pay extra attention to cultural and philosophical aspects of Mathematics, Science, History, Language etc.

Name:
Location: Mysore, Karnataka, India

Monday, January 09, 2006

ಬೃಂದಾ ಕರಟ್ ಮತ್ತು ರಾಮದೇವ

ಸದ್ಯ ನಡೆಯುತ್ತಿರುವ ಈ ವಿವಾದ ನಮ್ಮ ಎಡಪಂಥೀಯ ಎಲೈಟ್ ನಾಯಕರು ಜನರ ಮನಸ್ಸನ್ನು ಗೆಲ್ಲುವಲ್ಲಿ ಏಕೆ ವಿಫಲರಾಗುತ್ತಾರೆ ಎಂಬುದಕ್ಕೆ ಕ್ಲಾಸಿಕ್ ಉದಾಹರಣೆ.

ದಿನಾಂಕ ೭-೧-೨೦೦೬ರ ವಿಜಯ-ಕರ್ನಾಟಕ ಪತ್ರಿಕೆಯಲ್ಲಿ ಪತ್ರಿಕೆಯ ಅಂಕಣಕಾರರು ಈ ವಿವಾದದ ಕುರಿತ ಪ್ರಸ್ತಾಪ ಮಾಡಿದ್ದಾರೆ. ಬೃಂದಾ ವಿಫಲವಾಗಿರುವ ಕಡೆ ಈ ಅಂಕಣಕಾರರ ಉತ್ತೇಜಕಾರಿ, ಸೂಕ್ಷ್ಮಗಳಿಲ್ಲದ ಧ್ವನಿ ಗೆಲ್ಲುವ ಸಾಧ್ಯತೆಯೇ ಹೆಚ್ಚು. ಅದೃಷ್ಟವಶಾತ್ ಅವರಿಗಿಂತ ಪರಿಣಾಮಕಾರಿಯಾಗಿ, ಅರ್ಥಪೂರ್ಣವಾಗಿ ಅದೇ ಅಂಕಣದ ಕೆಳಗೆ ವಾಚಕರ-ವಿಜಯದಲ್ಲಿ ಡಾ. ವಾಸುಕಿ-ತನಯ ಎಂಬ ಆಯುರ್ವೇದ ವೈದ್ಯರೊಬ್ಬರು ಬರೆದಿದ್ದಾರೆ.

ಬೃಂದಾ ಕರಟ್ ಅವರು ರಾಮದೇವರ ಆಯುರ್ವೇದ ಉತ್ಪಾದನಾ ಘಟಕದ(ಅದನ್ನು ಫ್ಯಾಕ್ಟರಿ ನಿಯಮಗಳಲ್ಲಿ ಗಣಿಸಲಾಗುವುದಿಲ್ಲವಂತೆ) ಕಾರ್ಮಿಕರಿಗೆ ಆಗಿರುವ ಆರ್ಥಿಕ ಅನ್ಯಾಯಗಳ ವಿರುದ್ಧ ಹೋರಾಡುವುದು ಸರಿ. ಆದರೆ ಡಾ. ವಾಸುಕಿ-ಪಂಡಿತ್ ಹೇಳಿರುವಂತೆ ಅಲ್ಲಿ ತಯಾರಾಗಿರುವ ಔಷಧಗಳ ಬಗ್ಗೆ ನೀರ್ಣಯ ನೀಡಲು ಅವರು ಅರ್ಹರಲ್ಲ. ಆಯುರ್ವೇದದದಲ್ಲಿ ಪ್ರಾಣಿ-ಗಳ ದೇಹಕ್ಕೆ ಸಂಬಂಧಿಸಿದ ಅಂಶಗಳು ಇರುವುದರಲ್ಲಿ ಆಶ್ಚರ್ಯವೇನೂ ಇಲ್ಲ ಎಂಬುದು ಆಯುರ್ವೇದ ಪಂಡಿತರ ಅಭಿಪ್ರಾಯವಾಗಿದೆ. ಕಾರ್ಮಿಕರನ್ನಾಗಲಿ, ಜನರನ್ನಾಗಲಿ ಕೆರಳಿಸಲು ಬೃಂದಾ ಆ ಅಸ್ತ್ರ ಬಳಸುವುದು ಸಮ್ಮತವಲ್ಲ.

ಆಧುನಿಕ ವೈದ್ಯ ಚಿಕಿತ್ಸೆ ಎಲ್ಲರಿಗೂ ದಕ್ಕುವಂತೆ ಬೃಂದಾ ಮತ್ತು ನಾವೆಲ್ಲರೂ ಹೋರಾಡಬೇಕು. ಆ ದಿಕ್ಕಿನಲ್ಲಿ ಪ್ರಕ್ರಿಯೆಗಳು ಚಲಿಸುವಂತೆ ನಾವು ಕಾರ್ಯಪ್ರವೃತ್ತರಾಗಬೇಕು. ಅಂದರೆ ಫಾರ್ಮಾಸ್ಯೂಟಿಕಲ್ಸ್‍ನ ಬೆಲೆ ನಿಯಂತ್ರಿಸುವ ಅಂತರ್‍ ರಾಷ್ಟ್ರೀಯ ಒಪ್ಪಂದಗಳು ಜನರ-ಪರವಾಗಿರುವಂತೆ ನೋಡಿಕೊಳ್ಳಬೇಕು. ಜೊತೆಗೇ ಫಾರ್ಮಾಸ್ಯೂಟಿಕಲ್ಸ್‍ನಲ್ಲಿ ನಡೆಯುವ ಮೋಸಗಳನ್ನೂ ಬಯಲಿಗೆಳೆಯಬೇಕು. ರಾಮದೇವರ ಆಯುರ್ವೇದದ ಔಷಧಗಳ ಪ್ಯಾಕೇಜ್ ಮೇಲೆ ಅದರ ಘಟಕಾಂಶಗಳನ್ನು ವಿವರವಾಗಿ ಬರೆಯುವಂತೆ ಸೂಕ್ತ ಕಾನೂನುಗಳು ಇಲ್ಲವಾದಲ್ಲಿ, ಅವುಗಳನ್ನು ಜಾರಿಗೆ ತರುವಂತೆ ಉದ್ಯುಕ್ತರಾಗಬೇಕು. ಈ ಮಾರ್ಗಗಳನ್ನು ಬಿಟ್ಟು, ರಾಮದೇವರ ಔಷಧಿಗಳು ಖೊಟ್ಟಿಯಲ್ಲವೆಂದು ಅಯುರ್ವೇದ ಪಂಡಿತರಿಂದ ರುಜುವಾತಾಗಿದ್ದ ಪಕ್ಷದಲ್ಲಿ, ಈಗ ಅತ್ಯಂತ ಬಡವನಿಗೂ ದಕ್ಕುತ್ತಿರುವ ಆ ಔಷಧಗಳನ್ನೂ ಕಸಿದುಕೊಳ್ಳುವುದು ದುಷ್ಟತನದ ವರ್ತನೆಯಾಗುತ್ತದೆ.

ದಿ.೧೧-೧-೨೦೦೬ರಂದು ಸೇರಿಸಿದ್ದು:
ಇವೊತ್ತಿನ ಟೈಮ್ಸ್ ಆಫ್ ಇಂಡಿಯಾ-ದ ಮುಖ್ಯ ಲೇಖನವೊಂದರಲ್ಲಿ ಸಮಾಜ-ವಿಜ್ಞಾನಿ ಶಿವ್ ವಿಶ್ವನಾಥನ್ ಈ ಉರಿಯುತ್ತಿರುವ ವಿವಾದದ ಬಗ್ಗೆ ಬರೆದಿದ್ದಾರೆ. ಶಿವ್ ಅವರ ಕಣ್ಣಿಗೆ ಇದು ಬರೀ ಮೇಲ್ನೋಟಕ್ಕೆ ತೋರಿ ಬರುವ ಆಧುನಿಕ ಸ್ತ್ರೀವಾದಿ ವೈಜ್ಞಾನಿಕ ಮಾರ್ಕ್ಸಿಸ್ಟ್ ಒಬ್ಬಳು, ಅನಾಧುನಿಕ ಆಯುರ್ವೇದ ಪ್ರಾಕ್ಟೀಸು ಮಾಡುತ್ತಾ ಟಿ.ವಿ. ಮೂಲಕ ಪ್ರಚಾರ ಮಾಡುವ, ಆಧುನಿಕ ಸ್ತ್ರೀಯೊಂದಿಗೆ ಹೇಗೆ ಸಂವೇದನಾಶೀಲನಾಗಿ ನಡೆದುಕೊಳ್ಳಬೇಕೆಂದು ಪ್ರಜ್ಞೆಯಲ್ಲಿಲ್ಲದ ಹಿಂದು ಗುರುವೊಬ್ಬನ ಜೊತೆಗೆ ನಡೆಸಿರುವ ಮುಖಾಮುಖಿಯಾಗಿ ಮಾತ್ರವಾಗಿ ಕಾಣುವುದಿಲ್ಲ. ಬದಲು, ಅನಾಧುನಿಕ ಶಾಸ್ತ್ರವೊಂದು ಧರ್ಮ-ಸಂಸ್ಕೃತಿಯಲ್ಲಿ ಬೇರೂರಿದ ತನ್ನ ಹೋಲಿಸ್ಟಿಕ್ ಹಿರಿಮೆಯನ್ನು ಎತ್ತಿಹಿಡಿಯುತ್ತಲೇ ಆಧುನಿಕ ವಿಜ್ಞಾನದಿಂದ ರಾಮದೇವರ ಮೂಲಕ ಮನ್ನಣೆ ಬೇಡುವ ಹೋರಾಟವಾಗಿ ಕಾಣುತ್ತದೆ. ಮಾತ್ರವಲ್ಲ ಅಂಥ ರಾಮದೇವರ ಜೊತೆ ಒಂದು ವೈಜ್ಞಾನಿಕ ಮಾರ್ಗವಾಗಿ ಸೋತು ಹೋಗಿರುವ ಮಾರ್ಕ್ಸಿಸ್ಂ-ನನ್ನೂ, ತಾನು ಹೆಚ್ಚು ವೈಜ್ಞಾನಿಕಳು, ಆದರೆ ಆಯುರ್ವೇದದ ನಿಯಮಗಳು ಅತ್ಯಂತ ಕಠಿಣವಾಗಿರುವ ಕೇರಳದಿಂದ ಬಂದವಳು ಎಂದು ಹೇಳಿಕೊಳ್ಳುವ ಮಾರ್ಕ್ಸಿಸ್ಟ್ ಬೃಂದಾಳನ್ನೂ ಒಟ್ಟಿಗೇ ಗಮನಿಸಿದಾಗ, ಅವರಿಬ್ಬರಲ್ಲೂ ಶಿವ್ ಅವರಿಗೆ ಸಾಮ್ಯತೆಗಳು ಕಾಣತೊಡಗುತ್ತವೆ. ಮಾರುಕಟ್ಟೆ ಮತ್ತು ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧದ ಹೋರಾಟಗಾರರಾಗಿ ಬೃಂದಾ ಮತ್ತು ರಾಮದೇವ ಒಂದೇ ಆಗಿ ಶಿವ್-ಗೆ ಕಾಣತೊಡಗುತ್ತಾರೆ.

ಶಿವ್ ವಿಶ್ವನಾಥನ್ ಓರ್ವ ಮೇಧಾವಿ ಮತ್ತು ತೀಕ್ಷ್ಣ ಬುದ್ಧಿಯ ವಿಶ್ಲೇಷಕರು ಎಂಬಲ್ಲಿ ಎರಡು ಮಾತಿಲ್ಲ. ಆದರೆ ಅವರ ಬರವಣಿಗೆಯ ಧಾಟಿ ಅಷ್ಟು ಸಂವೇದನಾತ್ಮಕವಲ್ಲ. ಅವರ ಲೇಖನ ಓದುವಾಗ ಲಕ್ಷಾಂತರ ಜನರಿಗೆ ದಾರುಣವಾದ, ಸಂಕಟದ ಸಮಸ್ಯೆಯೊಂದನ್ನು ಟೈಮ್ಸ್ ಆಫ್ ಇಂಡಿಯಾದ ಓದುಗ ವರ್ಗ ಬಾಯಿ ಚಪ್ಪರಿಸುವಂತೆ ಬೌದ್ಧಿಕವಾಗಿ ವಿಶ್ಲೇಷಿಸುವುದು ಎಷ್ಟು ಸರಿ? ಎಂದು ಕೇಳಬೇಕೆನ್ನಿಸುತ್ತದೆ. (ಚಿತ್ರನಟಿ ಖುಶ್ ಬೂ ವಿವಾದದ ಬಗೆಯೂ ಇದೇ ಧಾಟಿಯ ಲೇಖನವೊಂದನ್ನು ಅದೇ ಪತ್ರಿಕೆಗೆ ಬರೆದದ್ದನ್ನು ಓದಿದ ನೆನಪು). ಸಾಹಿತ್ಯಕ್ಕಿರುವ ಸಂವೇದನಾತ್ಮಕ ಗುಣವೊಂದು ಈ ಬಗೆಯ ವಿಶ್ಲೇಷಣೆಗಳಿಗೆ ಇರುವುದಿಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ವಿಶ್ಲೇಷಣೆಯೊಂದನ್ನು ರುಚಿಕರವಾಗಿ, ರೋಮಾಂಚಕಾರಿಯಾಗಿ ಮೂಡಿಸುವುದರಿಂದಾಗಿ ನಮ್ಮೆದುರು ದಿಟ್ಟಿಸಿ ನೋಡುತ್ತಿರುವ, ಉರಿಯುವ ಸಮಸ್ಯೆಯೊಂದರ ಗಾಂಭೀರ್ಯತೆಯನ್ನು ಗೌಣ ಮಾಡಿದಂತಾಗುತ್ತದೆ. ಇದೇ ಧಾಟಿಯ ಲೇಖನಗಳನ್ನು ಭಾಷಾ-ಪತ್ರಿಕೆಗಳಲ್ಲಿ ಬರೆಯುವ ಧೈರ್ಯ ಮಾಡಬಲ್ಲರೆ ಶಿವ್? ಎಂದು ಕೇಳಬೇಕೆನ್ನಿಸುತ್ತದೆ.

1 Comments:

Blogger v.v. said...

You write:

ಅವರ ಲೇಖನ ಓದುವಾಗ ಲಕ್ಷಾಂತರ ಜನರಿಗೆ ದಾರುಣವಾದ, ಸಂಕಟದ ಸಮಸ್ಯೆಯೊಂದನ್ನು ಟೈಮ್ಸ್ ಆಫ್ ಇಂಡಿಯಾದ ಓದುಗ ವರ್ಗ ಬಾಯಿ ಚಪ್ಪರಿಸುವಂತೆ ಬೌದ್ಧಿಕವಾಗಿ ವಿಶ್ಲೇಷಿಸುವುದು ಎಷ್ಟು ಸರಿ? ಎಂದು ಕೇಳಬೇಕೆನ್ನಿಸುತ್ತದೆ.

Was this really a "ದಾರುಣವಾದ, ಸಂಕಟದ ಸಮಸ್ಯೆ" for hundreds of thousands of people? Don't you think you are a bit too overly sentimental here?

Your whole-sale dismissal of analytical articles in favour of "ಸಾಹಿತ್ಯ" based on an article or two is rather tenuous in my opinion.

Thanks for an interesting post. I enjoyed reading it.

..
v.v.

Sunday, January 15, 2006 8:09:00 PM  

Post a Comment

<< Home