ಸೃಜನ-ಕನ್ನಡಿಗ (sRujana-kannaDiga)

ಸಹೃದಯ, ವಿಶ್ವಾಸ ಮತ್ತು ಸೃಜನಶೀಲತೆ: Creator of this blog is Sudarshan. He has interest in Engineering research and Kannada writing. As a part of the process of Kannada writing, this blog will pay extra attention to cultural and philosophical aspects of Mathematics, Science, History, Language etc.

Name:
Location: Mysore, Karnataka, India

Sunday, April 15, 2007

`ಒಳ ವಿಮರ್ಶಕ'ನ ಅನಿವಾರ್ಯತೆ: ಡಾ. ಯು. ಆರ್. ಅನಂತಮೂರ್ತಿಯವರ `ಋಜುವಾತು' ಅಂಕಣಕ್ಕೆ ಒಂದು ಪ್ರತಿಕ್ರಿಯೆ

(ಇತ್ತೀಚೆಗೆ ಬಿಡುಗಡೆಯಾದ ಡಾ. ಯು. ಆರ್. ಅನಂತಮೂರ್ತಿಯವರ `ಉದಯವಾಣಿ' ಪತ್ರಿಕೆಯ ಅಂಕಣ ಬರಹಗಳ ಪುಸ್ತಕರೂಪಕ್ಕೆ ಪ್ರತಿಕ್ರಿಯೆಯಾಗಿ ಬರೆದದ್ದು. ತನ್ನ ಗ್ರಾಮೀಣ ಪರಂಪರೆಯ ಬೇರುಗಳ ನೆಲೆಯಿಂದ ದೂರವಾಗಿ ನಗರೀಕರಣಗೊಳ್ಳುತ್ತಾ ವಿಘಟಿತ ಮನಸ್ಥಿತಿಯಲ್ಲಿರುವ ಆಧುನಿಕ ಮಧ್ಯಮ-ವರ್ಗದ ಭಾರತೀಯನಿಗೆ ಅನಂತಮೂರ್ತಿ ಓರ್ವ `ಒಳ-ವಿಮರ್ಶಕ'ರಾಗಿ ರೂಪಗೊಂಡಿದ್ದಾರೆ. ಹಾಗೆಯೇ ತಾವೊಬ್ಬ ಹಿಂದೂ ಧರ್ಮದ 'ಒಳ-ವಿಮರ್ಶಕ'ನೆಂದು ಸಹ ಅವರೇ ಹಲವೆಡೆ ಹೇಳಿಕೊಂಡಿದ್ದಾರೆ. ನಗರದ ಆಧುನಿಕ ಮಧ್ಯಮವರ್ಗದವನಿಗೂ, ಎಲ್ಲಾ ಧರ್ಮದ ಮೂಲದವರಿಗೂ ಹೀಗೊಬ್ಬ ಒಳ-ವಿಮರ್ಶಕನೊಬ್ಬನ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ. ಅದೇ ರೀತಿ ಬರಹಗಾರನೊಬ್ಬ ತನ್ನನ್ನೇ ತಾನು ಓರ್ವ `ಒಳ-ವಿಮರ್ಶಕ'ನಾಗಿ ರೂಪಿಸಿಕೊಳ್ಳ ಹೊರಟಾಗ ತನ್ನದೇ ಆದ ಕೆಲವು ಅನಿವಾರ್ಯತೆಗಳನ್ನು ಎದುರಿಸುತ್ತಾನೆ. ಈ ಲೇಖನ ಅಂಥಾ ಎರಡೂ ಬಗೆಯ ಕೆಲವು ಅನಿವಾರ್ಯತೆಗಳನ್ನು ಸ್ಪರ್ಶಿಸುತ್ತದೆ ಅಷ್ಟೇ. ಮುಖ್ಯವಾಗಿ ಇದೊಂದು ಪ್ರತಿಕ್ರಿಯೆಯ ರೂಪದಲ್ಲಿ ೭೫ ತುಂಬಿರುವ ನಮ್ಮ ನಡುವಿನ ಹಿರಿಯ ಚೇತನ ಡಾ. ಅನಂತಮೂರ್ತಿಯವರ ಕಾಳಜಿಗಳಿಗೆ ಒಂದು ಸ್ಪಂದನೆ.)

ಕನ್ನಡದ ಓರ್ವ ಹಿರಿಯ-ಧೀಮಂತ ಲೇಖಕರಾಗಿ ಶ್ರೀ ಅನಂತಮೂರ್ತಿ ಕಳೆದ ಸುಮಾರು ನಾಲ್ಕು ದಶಕಗಳಿಂದ ಕಥೆ, ಕಾವ್ಯ ಮೂಲಕ ಮಾತ್ರವಲ್ಲದೆ ಸೃಜನಶೀಲ ಚಿಂತನೆಯಿಂದ ನಮ್ಮ ಸುತ್ತಲಿನ ವಿದ್ಯಮಾನಗಳನ್ನು ಗಾಂಧೀ-ಲೋಹಿಯಾ ಪ್ರಣೀತವೆನ್ನಬಹುದಾದ ನೆಲೆಯೊಂದರಿಂದ ತಮ್ಮದೇ ಆದ ವಿಶಿಷ್ಟ ವಾರೆನೋಟದಲ್ಲಿ ಕಾಣುತ್ತಾ, ನಮ್ಮ ನಾಡಿನ ಶಿಕ್ಷಿತ ಮಧ್ಯಮ-ಮೇಲ್ಮಧ್ಯಮವರ್ಗದ ಸಾಕ್ಷಿಪ್ರಜ್ಞೆಯ ರೂಪದಲ್ಲಿ ನಮ್ಮನ್ನು ಕೆಣಕುತ್ತಾ, ಟೀಕಿಸುತ್ತಾ, ವಿಮರ್ಶಿಸುತ್ತಾ `ಬೆತ್ತವ ಪಿಡಿದ' ಹಿರಿಯ ಶಿಕ್ಷಕನಂತೆ ನಮ್ಮ ಕೈ-ಹಿಡಿದು ನಡೆಸುತ್ತಿದ್ದಾರೆ.

ಕಳೆದ ಸುಮಾರು ಒಂದು ವರ್ಷದಲ್ಲಿ ಉದಯವಾಣಿಯ `ಋಜುವಾತು' ಅಂಕಣದ ಮೂಲಕ ನಮ್ಮೊಡನೆ ನಡೆಸಿದ ಅನುಸಂಧಾನಕ್ಕೆ (ಈ ಅಪೂರ್ವ ಅವಕಾಶಕ್ಕೆ ನಾನಂತೂ ಕೃತಜ್ಞ) ನನ್ನ ಸಂಕ್ಷಿಪ್ತ ಪ್ರತಿಕ್ರಿಯೆಯನ್ನು ಅವರನ್ನು ತೀವ್ರವಾಗಿ ಕಾಡುವ ಸಮಸ್ಯೆ-ಆತಂಕಗಳ ಕುರಿತ ನನ್ನ ಅನಿಸಿಕೆಗಳನ್ನು ವ್ಯಕ್ತಪಡಿಸುವ ಮೂಲಕ ಪ್ರಸ್ತುತಪಡಿಸುತ್ತಿದ್ದೇನೆ. ಈ ಕೆಳಗಿನ ವಸ್ತು-ವಿಂಗಡಣೆ ಚರ್ಚೆಯ ನೆಪಕ್ಕಾಗಿ ಮಾತ್ರವಾಗಿದ್ದು, ಇವೆಲ್ಲವೂ ಪರಸ್ಪರ ಸಂಬಂಧರಹಿತವೇನೂ ಅಲ್ಲ ಎಂಬ ಎಚ್ಚರದೊಂದಿಗೆ:

ಆಧುನಿಕತೆಯ ಸಂದರ್ಭದಲ್ಲಿ ಧರ್ಮದ ಸ್ವರೂಪ ಮತ್ತು ಪಾತ್ರ

ವಿಜ್ಞಾನ, ತಂತ್ರಜ್ಞಾನ, ಬಂಡವಾಳುಶಾಹಿ ಇವುಗಳ ಪರಸ್ಪರ ನಂಟು ಮತ್ತು ಕಳೆದ ಕೆಲವು ದಶಕಗಳಲ್ಲಿ ಇವು ಕಂಡ ಕ್ಷಿಪ್ರಗತಿಯ ಬೆಳವಣಿಗೆ ಇವೇ ಇವೊತ್ತಿನ `ಆಧುನಿಕತೆ'ಯನ್ನು ರೂಪಿಸಿದ್ದು, ಮನುಕುಲವು ವಿಶಾಲ ಅರ್ಥದ ಮಾನವೀಯ ಮುಖದ `ಧರ್ಮ'ದಿಂದ ವಿಮುಖವಾಗಿಸುತ್ತಿವೆಯೇನೋ ಎಂಬುದು ಅನಂತಮೂರ್ತಿಯವರನ್ನು ಸೇರಿದಂತೆ ಹಲವಾರು ಸಂವೇದನಾಶೀಲ ಮನಸ್ಸುಗಳನ್ನು ಕಾಡುತ್ತಿರುವ ಆತಂಕ.

ಆಧುನಿಕ-ವಿಜ್ಞಾನ ಮತ್ತು ನಮ್ಮ ದೇಶದ ಪಾರಂಪರಿಕ ನಂಬಿಕೆ, ಆಚರಣೆಗಳ ನಡುವಿನ ಅನುಸಂಧಾನದ ಕುರಿತಂತೆ ಮೂರು ಮುಖ್ಯ ಧೋರಣೆಗಳನ್ನು ಗುರುತಿಸಬಹುದು. ಮೊದಲನೆಯದು ಆಶೀಶ್ ನಂದೀಯವರದ್ದು. ಆಧುನಿಕ ವಿಜ್ಞಾನ ಆಳುವ-ವರ್ಗದ ಕೈ-ಬೊಂಬೆಯಾಗಿದ್ದು ಅಂಚಿನವರನ್ನು ನಿರ್ನಾಮ ಮಾಡುವ ಏಕ-ಮಾತ್ರ ಉದ್ದೇಶ ಹೊಂದಿದೆ ಎಂಬ ಧೋರಣೆಯಿಂದಲೇ ಇವರ ಚಿಂತನೆಗಳು ಹೊರಡುತ್ತವೆ. ಅನಂತಮೂರ್ತಿಯವರ ಸಂವೇದನೆ ಇದಕ್ಕೆ ಹತ್ತಿರವಾಗಿದ್ದು ಪಶ್ಚಿಮದಿಂದ ಆಮದಾಗಿರುವ ಅಭಿವೃದ್ಧಿ ಮಾದರಿಗಳಲ್ಲದೇ ಅಣು-ವಿಜ್ಞಾನ-ತಂತ್ರಜ್ಞಾನ ಸಂಪೂರ್ಣ ವಿನಾಶಕಾರಿ ಎಂಬ ಕಳವಳ ಅವರದ್ದಾಗಿದೆ. ಆಧುನಿಕ-ವಿಜ್ಞಾನದ ಮೂಲದಿಂದ ತಂತ್ರಜ್ಞಾನದ ಮಾರ್ಗವಾಗಿ ನಮ್ಮ ದೇಶದಲ್ಲಿ ಇಂದು ಪ್ರಚಲಿತವಾಗಿರುವ ಅಭಿವೃದ್ಧಿ ಮಾದರಿಗಳು ಅಂಚಿನವರಿಗೆ ಮಾರಕವಾಗಿವೆ ಎಂಬುದರಲ್ಲಿ ಅನುಮಾನವಿಲ್ಲ. ಹಾಗೆಯೇ ಅಣುಬಾಂಬ್ ಮುಕ್ತ ಪ್ರಪಂಚ ಯಾವುದೇ ನಾಗರಿಕನ ಆಶಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅಣು-ಶಕ್ತಿಯ ಕುರಿತ ಮನುಕುಲದ ದ್ವಂದ್ವ ಹೆಚ್ಚು ಸಂಕೀರ್ಣವಾದದ್ದು. ಅಣು-ಶಕ್ತಿಯಿಂದ ಕಾರ್ಬನ್ ಮುಕ್ತ ಪರಿಸರ ಮತ್ತು ಜಾಗತಿಕ ಉಷ್ಣ ಪ್ರಕ್ರಿಯೆಯಿಂದಾಗಿರುವ ಸಮಸ್ಯೆಗಳ ನಿವಾರಣೆ ಮಾತ್ರವಲ್ಲದೆ ತೈಲ ರಾಷ್ಟ್ರಗಳ ಮೇಲಿನ ಅತಿಯಾದ ಅವಲಂಬನೆಯನ್ನು ಕಡಿಮೆಗೊಳಿಸಿ, ರಾಷ್ಟ್ರಗಳ ನಡುವಿನ ಸಂಘರ್ಷವನ್ನು ಕಡಿಮೆಗೊಳಿಸಬಹುದೆಂಬ ವಾದವೂ ಇದೆ. ಒಟ್ಟಿನಲ್ಲಿ ಈ ಸಂದಿಗ್ಧಗಳ ಕುರಿತಂತೆ ಆಶೀಶ್ ನಂದಿಯವರ ಮಾರ್ಗ ಅನು-ಸಂಧಾನದ ಮಾರ್ಗದಿಂದ ಕೊಂಚ ದೂರವಾದದ್ದು. ಎರಡನೇಯ ಧೋರಣೆ ನಮ್ಮ ಹಿರಿಯ ವಿಜ್ಞಾನಿ ರೊದ್ದಂ ನರಸಿಂಹರದ್ದಾಗಿದ್ದು ಆಧುನಿಕ ವಿಜ್ಞಾನದ ಫಲಗಳನ್ನು ಶಾಂತಿ ಮತ್ತು ಸಮಾಜದ ಅಭ್ಯುದಯಕ್ಕೆ ಬಳಸಿಕೊಳ್ಳುವತ್ತ ತುಡಿಯುವಂಥದ್ದು. ಮೂರನೇಯ ಧೋರಣೆ ಮೀರಾ ನಂದಾರದ್ದು, ನಂದಿಯವರ ಧೋರಣೆಗೆ ತದ್ವಿರುದ್ಧವಾದದ್ದು. ಆಧುನಿಕ ವಿಜ್ಞಾನವೇ ಕೋಮುವಾದವೂ ಸೇರಿದಂತೆ ನಮ್ಮ ಎಲ್ಲಾ ಸಮಸ್ಯೆಗಳಿಗೆ ಮದ್ದು ಆದುದರಿಂದ ಇವೊತ್ತೇ ಭಾರತ ಅಂಬೇಡ್ಕರ್, ಎಮ್. ಎನ್. ರಾಯ್ ಮಾದರಿಯ ಶುದ್ಧಾಂಗ ಸೆಕ್ಯುಲರ್ ಸಮಾಜವಗಬೇಕು ಎಂಬ ತೀವ್ರ್‍ಅವಾದದ ನೆಲೆಯದ್ದು. ವೈಚಿತ್ರವೆಂದರೆ ಆಶೀಶ್-ನಂದಿ ಮತ್ತು ಮೀರಾ ನಂದಾ ಇಬ್ಬರೂ ಪಂಡಿತ್ ನೆಹರೂರ ಸೆಕ್ಯುಲರಿಸ್ಮ್ ಪರಿಕಲ್ಪನೆಯನ್ನು ಅನುಮಾನಿಸುತ್ತಾರೆ; ಆದರೆ ತದ್ವಿರುದ್ಧ ಕಾರಣಗಳಿಗಾಗಿ. ನಂದಿ-ಗೆ ಅದು `ಪಶ್ಚಿಮದ ಆಮದು ಸರಕಾಗಿ' ಕಂಡರೆ, ಮೀರಾ ನಂದಾರ ಪ್ರಕಾರ ನೆಹರು ಸಂಪ್ರದಾಯಿಗಳಿಗೆ ಮಣಿದು `ಸರ್ವ ಧರ್ಮ ಸಮಭಾವ'ವೆಂಬ ದುರ್ಬಲ ಸೆಕ್ಯುಲರಿಸ್ಮ್-ಗೆ ಶರಣಾದರೆಂದು.


ಆಧುನಿಕ ವಿಜ್ಞಾನದ ಜೊತೆಗಿನ ನನ್ನ ಈ ವರೆಗಿನ ಅನುಭವದಲ್ಲಿ ನಾನು ಕಂಡುಕೊಂಡ ಸತ್ಯ ಇದು: ಆಧುನಿಕ ವಿಜ್ಞಾನದ `ದರ್ಶನ'ಗಳಿಗೆ ನಮ್ಮ ಪ್ರಜ್ಞೆಯನ್ನೂ, ಹೃದಯವನ್ನೂ ಹಿಗ್ಗಿಸುವ ಶಕ್ತಿಯಿದೆ ಎಂದು ನಂಬಿರುವವನು ನಾನು. ವಿಶ್ವ ನಿರಂತರ ವಿಕಸನ ಪ್ರಕ್ರಿಯೆಯಲ್ಲಿರಬಹುದೆಂಬ ಕಲ್ಪನೆಯಾಗಲಿ, ಮಿಲಿಯನ್‍ಗಟ್ಟಲೇ ಗ್ಯಾಲಕ್ಸಿಗಳಲ್ಲಿ ಮನುಕುಲವು ತೃಣ ಸಮಾನ ಜೀವಿ ಎಂಬ ಅರಿವಾಗಲಿ, ವಿಶ್ವದ ಜನ್ಮರಹಸ್ಯ ಕಪ್ಪುರಂಧ್ರವೆಂಬ ತಾರೆಯ ಬದುಕಿನ ಒಂದು ಘಟ್ಟದಲ್ಲೇ ಅಡಗಿರಬಹುದೆಂಬ ಸೋಜಿಗವಾಗಲಿ, ಶಕ್ತಿ ಮತ್ತು ವಸ್ತು ಪರಸ್ಪರ ರೂಪಾಂತರಗಳೆಂಬ ಜ್ಞಾನವಾಗಲಿ ಮನುಷ್ಯನಲ್ಲಿ ಸಮಾನತೆಯ ಭಾವವನ್ನೂ, ವಿವೇಕವನ್ನೂ, ವಿನಯವನ್ನು ಹುಟ್ಟಿಸುವ ಚೈತನ್ಯಪಡೆದಿವೆ. ಧರ್ಮ-ಗ್ರಂಥಗಳ ದರ್ಶನಕ್ಕಿಂತ ಇವುಗಳೇನೂ ತೀರಾ ಭಿನ್ನವಾಗಿಲ್ಲ. ಆದರೆ ದುರದೃಷ್ಟವಶಾತ್ `ನಮಗೆ ಇದು ಮಾತ್ರ ಸಾಕು-ಅದು ಬೇಡ' ಎಂಬ ಎರಡೂ ಪಕ್ಷಗಳ ಧೋರಣೆ ಪ್ರಗತಿಪರವಾದದ್ದಲ್ಲ. ಈಗ ನಾವು ಕಾಣುತ್ತಿರುವ ಮತೀಯತೆ, ಭಾಷಾ ಅಥವಾ ಜನಾಂಗೀಯ ಮೂಲಭೂತವಾದ ಅನಿಯಂತ್ರಿತ ಕೈಗಾರಿಕೆ, ಅಸಮರ್ಪಕ ಪ್ರಜಾಸತ್ತಾತ್ಮಕವಲ್ಲದ ತಂತ್ರಜ್ಞಾನ, ಅನೈಸರ್ಗಿಕ ವಲಸೆ ಮತ್ತು ಸಮುದಾಯಗಳ ವಿಘಟನೆ ಇವೆಲ್ಲವೂಗಳ ಸಂಕೀರ್ಣ ಫಲ ಎಂದು ನನ್ನ ಅನಿಸಿಕೆ.

ಕೆಲವೇ ದಶಕಗಳ ಹಿಂದೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದ್ದ ಧಾರ್ಮಿಕ ಚಟುವಟಿಕೆಗಳು ಮುಗ್ಧವೂ, ಸದ್ಭಾವ, ಸದುದ್ದೇಶ-ಪೂರಕವೂ ಆಗಿರುತ್ತಿದ್ದವು. ಗಣೇಶ-ಚತುರ್ಥಿ ಮತ್ತು ಸರಸ್ವತಿ ಪೂಜೆಯೇ ಆಗಿರಬಹುದು, ಮೊಹರಮ್-ನ ಹುಲಿ-ನರ್ತನವೇ ಆಗಿರಬಹುದು. ಇಂದು ಯಾರಿಗೂ ಹಾಗನ್ನಿಸುತ್ತಿಲ್ಲ. ಪ್ರತಿಯೊಂದೂ ಅಂಥ ಚಟುವಟಿಕೆಯಲ್ಲೂ ಆಕ್ರಮಣದ ವಾಸನೆ ಕಾಣತೊಡಗಿದೆ. ಹೀಗಾಗಿ ನಮ್ಮ ಅತಿರೇಕದ ಮನಸ್ಥಿತಿಯಲ್ಲಿ ಕನಿಷ್ಠ ಪಕ್ಷ ಸರ್ಕಾರೀ ಕಚೇರಿಗಳಲ್ಲೂ, ಶಾಲಾ-ಕಾಲೇಜುಗಳಂಥ ಸೆಕ್ಯುಲರ್ ಆವರಣದಲ್ಲಿ ಯಾವುದೇ ಮತಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆಯದಂತೆ ನಿಷೇಧಿಸಬೇಕೇನೋ ಎಂದು ತೀವ್ರವಾಗಿ ನಮ್ಮಲ್ಲಿ ಹಲವರಿಗೆ ಅನಿಸತೊಡಗಿದೆ.

ಆದರೆ ಭಾರತದಂಥ ದೇಶದಲ್ಲಿ ಅಂಥಾ ಒಂದು ಶುದ್ಧಾಂಗ ಸೆಕ್ಯುಲರ್ ವಾತಾವರಣದ ನಿರ್ಮಾಣವೇ ಕಲ್ಪಿಸಲಾಗದಂಥದ್ದು. ಅಮೇರಿಕೆ-ಐರೋಪ್ಯ ಸಮಾಜಗಳಲ್ಲೇ ವಿಜ್ಞಾನ-ತಂತ್ರಜ್ಞಾನ, ಕೈಗಾರಿಕೆ, ನಗರೀಕರಣ ಬೆಳೆದಂತೆ ಸಮಾಜ ಹೆಚ್ಚು ಹೆಚ್ಚು ಸೆಕ್ಯುಲರ್ ಆಗಬಹುದೆಂಬ ಸಮಾಜ-ಶಾಸ್ತ್ರಜ್ಞ ಮ್ಯಾಕ್ಸ್ ವೆಬರ್-ನ ಕನಸು ಸುಳ್ಳಾಗಿದೆ. ಅಮೇರಿಕೆಯ ಸಮಾಜದಲ್ಲಿ ಇತ್ತೀಚೆಗೆ ಕ್ರಿಶ್ಚಿಯನ್ ಕನ್ಸರ್ವೇಟಿಸ್ಮ್ ಹೆಚ್ಚು ಪ್ರಬಲವಾಗಿರುವುದು, ಮೌಢ್ಯ, ಕಂದಾಚಾರ, ಕೂಪ-ಮಂಡೂಕತನಗಳು ಇವೊತ್ತಿಗೂ ಆ ಸಮಾಜದಲ್ಲಿ ಉಳಿದಿರುವುದು ವೆಬರ್-ನ ನಂಬಿಕೆ ಸುಳ್ಳಾದುದಕ್ಕೆ ಸಾಕ್ಷಿ. ಆದುದರಿಂದ ಸಂಪೂರ್ಣ ಸೆಕ್ಯುಲರ್ ಹ್ಯುಮನಿಸ್ಟ್ ಸಮಾಜ ಎಂಬುದೊಂದು ನಾವು ಸಾಧಿಸಲಾಗದ ಯುಟೋಪಿಯಾ ಮಾತ್ರವಲ್ಲ, ಬಹುಶಃ ಅದನ್ನು ಸಾಧಿಸಬಯಸುವ ತೀವ್ರ-ವಾದ ಕೊಂಚ ಅನಾರೋಗ್ಯಕರವೂ ಹೌದು. (ನಾನು ಶಿಕ್ಷಣಕ್ಕಾಗಿ ೫ ವರ್ಷ ಅಮೇರಿಕೆಯಲ್ಲಿ ಇದ್ದಾಗ ಕ್ರಿಶ್ಚಿಯನ್ ಸಮುದಾಯದ ಚಟುವಟಿಕೆಗಳಲ್ಲಿ ಕೆಲವೊಮ್ಮೆ ಸ್ವ-ಇಚ್ಛೆಯಿಂದ ಪಾಲ್ಗೊಂಡಿದ್ದೇನೆ, ಇನ್ನೂ ಕೆಲವೊಮ್ಮೆ ಪಾಲ್ಗೊಳ್ಳಲೇಬೇಕಾದ ಒತ್ತಡವನ್ನು ಅನುಭವಿಸಿದ್ದೇನೆ. ತೀರಾ ಇತ್ತೀಚೆಗೆ ಮುಂಬೈನ ಪೋಲೀಸ್ ಠಾಣೆಗಳಲ್ಲಿ ನಡೆಯುತ್ತಿದ್ದ ಸತ್ಯನಾರಾಯಣ ಪೂಜೆಗಳನ್ನು, ರಾಷ್ಟ್ರೀಯ ಸಂಸ್ಥೆಯಾದ ಶುದ್ಧಾಂಗ ಸೆಕ್ಯುಲರ್ ಆಗಿರಬೇಕಾದ ಐ.ಐ.ಟಿ.ಯಲ್ಲಿ ಹಿಂದೂಗಳಿಗೆ ಮಾತ್ರ ಮೀಸಲಾದ ದೇವಸ್ಥಾನವನ್ನೂ ಕಂಡಿದ್ದೇನೆ, ಆದರೆ ಮುಸ್ಲಿಮ್ ವಿದ್ಯಾರ್ಥಿಗಳು ಒಟ್ಟಾಗಿ ಹಾಸ್ಟೆಲುಗಳಲ್ಲಿ ನಮಾಜು ಮಾಡಲು ಅನುಮತಿ ನಿರಾಕರಿಸಲಾಯಿತೆಂದು ಕೇಳಿದ್ದೇನೆ. ನಮ್ಮ ಸಮಾಜದ ಈ ಎಲ್ಲ ವಿರೋಧಾಭಾಸಗಳಿಂದ ಕಳವಳಗೊಂಡಿದ್ದೇನೆ. ಇವನ್ನೆಲ್ಲಾ ಅನುಮೋದಿಸಬೇಕೆ ಬೇಡವೆ ಎಂದು ಗೊಂದಲಕ್ಕೀಡಾಗಿದ್ದೇನೆ.) ಇಂಥಾ ಸನ್ನಿವೇಶದಲ್ಲಿ ಸಮಾಜದ ಬಹುಸಂಖ್ಯಾತ ಮತದವರು ಸಾರ್ವಜನಿಕ ಅವರಣದಲ್ಲಿ ತಮ್ಮ ಮತದೊಡನೆ ಬೆಸೆದ ಚಟುವಟಿಕೆಗಳನ್ನು ನಡೆಸುವಾಗ ಹೆಚ್ಚಿನ ಸಂವೇದನೆ ತೋರಿಸಬೇಕೆಂಬುದೆಂದು ನನ್ನ ನಿಲುವು ಮತ್ತು ಸದ್ಯಕ್ಕೆ ನನಗೆ ತೋಚುವ ಪರಿಹಾರ. ಅನಂತಮೂರ್ತಿಯವರು ಶುದ್ಧಾಂಗ ಸೆಕ್ಯುಲರ್ ಸಮಾಜದ ನಿರ್ಮಾಣಕಾರರ ವಕ್ತಾರರು ಎಂದು ಖಂಡಿತ ನಾನು ತಪ್ಪಾಗಿ ಭಾವಿಸಿಲ್ಲ, ಅಥವಾ ಇತ್ತೀಚೆಗೆ ಕೆಲವರು ಭಾವಿಸಿರುವಂತೆ ಜನಪರತೆಯ ಹೆಸರಿನಲ್ಲಿ ಎಲ್ಲಾ ಬಗೆಯ ಮೌಢ್ಯಗಳನ್ನು ಅನುಮೋದಿಸುವವರೂ ಅಲ್ಲ. ನನ್ನ ಅನಿಸಿಕೆಗಳು ನಾವು ಎದುರಿಸುತ್ತಿರುವ ಸಂದರ್ಭದ ಸಂಕೀರ್ಣತೆ ಮತ್ತು ಬಿಕ್ಕಟ್ಟುಗಳನ್ನು ಇನ್ನಷ್ಟು ವಿಷದಪಡಿಸುವ ಮತ್ತೊಂದು ಪ್ರಯತ್ನ ಮಾತ್ರ. ಸೆಕ್ಯುಲರಿಸ್ಟ್-ಗಳ ಅತಿರೇಕದ ವಾದಗಳನ್ನು ನಿರಾಕರಿಸುತ್ತಲೇ ನೆಹರುರ ಸೆಕ್ಯುಲರಿಸ್ಮ್ ಸಂಪೂರ್ಣ ವರ್ಜ್ಯವಲ್ಲ ಎಂಬ ನಿಲುವು ನನ್ನದು.

ಈ ವಿಷಯದ ಕುರಿತಂತೆ ಅನಂತಮೂರ್ತಿಯವರ ಬರವಣಿಗೆ ಬಗ್ಗೆ ನನ್ನ ಇನ್ನೊಂದು ತಕರಾರಿದೆ. ಹಿಂದೂ ಧರ್ಮದ ಸಂಕೀರ್ಣ `ಪೇಗನ್' ಸ್ವರೂಪವನ್ನು ಎತ್ತಿ-ಹಿಡಿಯುವ ಭರದಲ್ಲಿ ಅವರು ಭಾರತೀಯ ಮುಸ್ಲಿಮ್ ಮತ್ತು ಕ್ರೈಸ್ತ ಸಮುದಾಯಗಳ ಸಂಕೀರ್ಣ ಸ್ವರೂಪ ಮತ್ತು ಸ್ಥಿತಿಯನ್ನು ಸಾಕಷ್ಟು ಗಣನೆಗೆ ತೆಗೆದುಕೊಳ್ಳದೇ ಚರ್ಚಿಸುತ್ತಾರೇನೋ ಅನ್ನಿಸುತ್ತದೆ. ಅನ್ಯಧರ್ಮಗಳಿಗೆ ಒಂದು ಬಗೆಯ ಏಕರೂಪತೆಯನ್ನು ಆರೋಪಿಸುತ್ತಾರೆ ಎನಿಸುತ್ತದೆ. ಹಿರಿಯರಾದ ಅನಂತಮೂರ್ತಿ ಜಾತಿ-ಮತಗಳ ಗಡಿ ದಾಟಿ ಬೆಳೆದುನಿಂತವರು; ವಿಶಾಲ ಪ್ರಪಂಚದ ಜೊತೆ ಸಂಪರ್ಕವಿರಿಸಿಕೊಂಡವರು. ಹೀಗಿರುವಾಗಲೂ ಅವರ ಬರವಣಿಗೆಯಲ್ಲಿ ನಮಗೆ ಕಾಣುವ ಈ ಮಿತಿ ಹಿಂದೂ ಧರ್ಮದ `ಒಳ-ವಿಮರ್ಶಕ'ನಾಗಿ ಉಳಿವಬಯಸುವ ಅನಿವಾರ್ಯತೆಗಳಿಂದ ಹುಟ್ಟಿರುವುದೆ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ.


ಕನ್ನಡ-ದ `ಅಳಿವು-ಉಳಿವು-ಬೆಳೆಯು'

ಪಾಶ್ಚಾತ್ಯ ಪ್ರಣೀತ ಬಂಡವಾಳುಶಾಹಿ ಪ್ರಬಲವಾಗಿರುವ ಸಂದರ್ಭದಲ್ಲಿ ಕನ್ನಡದ ಉಳಿವು ಮತ್ತು ಬೆಳವಣಿಗೆಯ ದೃಷ್ಟಿಯಿಂದ ಅನಂತಮೂರ್ತಿಯವರು ನಮ್ಮ ಮುಂದಿಡುವ ಯೋಚನೆಗಳು ಸ್ವಾಗತಾರ್ಹವಾಗಿವೆ. ಸರ್ವರಿಗೂ ಪ್ರಾಥಮಿಕ ಮಟ್ಟದಲ್ಲಿ ಮಾಧ್ಯಮವಾಗಿ ಕನ್ನಡ, ಭಾಷೆಯಾಗಿ `ಕಚ್ಚಾ ಇಂಗ್ಲೀಷ್', ಅಸಮಾನತೆಯನ್ನು ನೀಗಿಸಲು ಮಾದರಿ ಕುವೆಂಪು ಕನ್ನಡ-ಶಾಲೆ (ಆಧುನಿಕವಾಗಿ ಸುಸಜ್ಜಿತವಾದ ಖಾಸಗೀ ಶಾಲೆಗಳು ಲಭ್ಯವಿರುವ ತನಕ ನಾವು ನಮ್ಮ ಮಕ್ಕಳನ್ನು ಈ ಶಾಲೆಗಳಿಗೆ ಕಳಿಸುವಷ್ಟು ನಾವುಗಳು ಧೀಮಂತರಾಗುವುದು ಅನುಮಾನ. ಆದುದರಿಂದ ಈ ಕಾಮನ್ ಸ್ಕೂಲುಗಳು ಸೌಲಭ್ಯದ ದೃಷ್ಟಿಯಿಂದ ಅತ್ಯುತ್ತಮ ಗುಣಮಟ್ಟದ್ದಾಗಿರಬೇಕು), ಕನ್ನಡ ಮಾಧ್ಯಮದಲ್ಲಿ ಇಂಜೀನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಆಗಲೇ ಬೇಕಾದ ಯೋಜನೆಯಾದರೂ ಇದು ಸಾಕಷ್ಟು ಪೂರ್ವತಯಾರಿ ಬೇಡುವಂಥದ್ದು. ಇದು ಕಾರ್ಯರೂಪಕ್ಕೆ ಬರಬೇಕಾದರೆ ಆಧುನಿಕ ಜ್ಞಾನವೆಲ್ಲವೂ ಕನ್ನಡಕ್ಕೆ ಬರಬೇಕು (ಈ ವಿಷಯದಲ್ಲಿ ನಾವು ಬಹಳ ಹಿಂದೆ ಇದ್ದೇವೆ. ಆಧುನಿಕ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ- ಭೌತಶಾಸ್ತ್ರದಲ್ಲಿ ಜಿ.ಟಿ. ನಾರಾಯಣರಾಯರ ಕೆಲವು ಪುಸ್ತಕಗಳನ್ನು ಹೊರತುಪಡಿಸಿ- ಒಂದೇ ಒಂದು ಉತ್ತಮ ಕನ್ನಡ ಪುಸ್ತಕ ನಮಗೆ ಕಾಣಸಿಗುವುದಿಲ್ಲ. ಈ ವಿಷಯದಲ್ಲಿ ಚೀನಿಯರು ಮತ್ತು ರಷ್ಯನ್ನರು ನಮಗೆ ಮಾದರಿಯಾಗಬೇಕು. ಅವರಿಗಿಂತ ಹೆಚ್ಚಾಗಿ ಆಧುನಿಕ ಜ್ಞಾನದ ವಿಕೇಂದ್ರೀಕರಣವನ್ನು ಆಚರಣೆಯ ಮೂಲಕ ಪ್ರತಿಪಾದಿಸಿದ ನಮ್ಮೊಡನಿದ್ದೂ ನಮ್ಮೊಂದಿಗಿಲ್ಲದ ಪೂರ್ಣಚೇಂದ್ರ ತೇಜಸ್ವಿಯವರ ಚೈತನ್ಯ ನಮ್ಮದಾಗಬೇಕು.) ಮಾತ್ರವಲ್ಲ ರಾಷ್ಟ್ರೀಯ-ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಕೊಟ್ಟು-ಕೊಳ್ಳುವಿಕೆಯ ದೃಷ್ಟಿಯಿಂದ ಇಂಗ್ಲೀಷಿನ ಪ್ರಮುಖ ಪಾತ್ರವನ್ನು ಪದವೀ-ಸ್ನಾತಕೋತ್ತರ ಹಂತದಲ್ಲಿ ನಿರ್ಲಕ್ಷಿಸಕೂಡದು. ಇದೇ ನಿಟ್ಟಿನಲ್ಲಿ ಕನ್ನಡ-ದಲ್ಲಿ ತಂತ್ರಾಂಶಗಳ ಅಭಿವೃದ್ಧಿಗೆ (ಈ ಕ್ಷೇತ್ರದಲ್ಲಿ ಪರಸ್ಪರ ತಾಳಮೇಳವಿಲ್ಲದೇ ಸ್ಥಿತಿ ಶೋಚನೀಯವಾಗಿದ್ದು) ಕನ್ನಡ ಮೂಲದ ಉದ್ಯಮಿ-ಗಳು, ತಂತ್ರಜ್ಞರು ಒಟ್ಟಾಗಿ ಮುಂದೆ ಹೆಜ್ಜೆ ಇಡುವ ಅವಶ್ಯಕತೆ ಇದೆ. ಇನ್ನು ಕನ್ನಡ ಪತ್ರಿಕಾ-ಮಾಧ್ಯಮಕ್ಕೆ ಸಂಬಂಧಿಸಿದಂತೆ ದೇಶದ ಪ್ರಮುಖ ವ್ಯಾಪಾರೀ ಆಂಗ್ಲ ಪತ್ರಿಕೆಯೊಂದು ಕನ್ನಡಕ್ಕೆ ಭಾಷಾಂತರಗೊಳಿಸಿದ ಆವೃತ್ತಿಯನ್ನು ತರುತ್ತಿರುವುದು ಮಾತ್ರವಲ್ಲ ಅನ್ಯಪತ್ರಿಕೆಗಳನ್ನು ಹೊಸಕಿ-ಹಾಕುವ ಹುನ್ನಾರದಲ್ಲಿರುವುದು ಆತಂಕದ ವಿಷಯವೇ. ಆದರೆ ಭಾಷಾ ಪತ್ರಿಕೆಯಾಗಿ ಜನರ ನಿತ್ಯದ ಬವಣೆಗಳಿಗೆ ಸ್ಪಂದಿಸದೇ ಹೋದಲ್ಲಿ ಅದು ನಿಲ್ಲಲಾರದು ಎಂಬ ಭರವಸೆಯಲ್ಲಿ ಈ ವಿಷಯಕ್ಕೆ ಹೆಚ್ಚಿನ ಮನ್ನಣೆ ಕೊಡದಿರುವುದೇ ನಾವು ತೋರಬಹುದಾದ ಸರಿಯಾದ ಪ್ರತಿಕ್ರಿಯೆ.

`ಭೂತ' ಮತ್ತು ಚರಿತ್ರೆ

ತನ್ನ 'ಗ್ರಹಿಕೆ'ಗೆ ಸಂಪೂರ್ಣ ದಕ್ಕದೇ ನುಣುಚಿಕೊಳ್ಳುವ `ಭೂತ'ದ ಜೊತೆ ಮನುಜನದು ಅಳಿಸಲಾಗದ ತೊಡಕಿನ ನಂಟು. ಹೀಗೆ ದಕ್ಕದಿರುವ `ಭೂತ'ವನ್ನು `ವರ್ತಮಾನ'ದಲ್ಲಿ ಪ್ರೇತವಾಗಿಸಿ ನಮ್ಮ ನಮ್ಮ ಕೋಮು, ಜನಾಂಗ, ದೇಶ, ಭಾಷೆಗಳ ಮೂಲಭೂತವಾದಕ್ಕೆ ಬಳಸಿಕೊಳ್ಳುವ ಪ್ರವೃತ್ತಿ ನಮ್ಮಲ್ಲಿ ಹೆಚ್ಚುತ್ತಿರುವುದು ಇತ್ತೀಚಿನ ವಿದ್ಯಮಾನ. ಚರಿತ್ರೆಯ ಈ ವೈಚಿತ್ರ್ಯವನ್ನು ಕಾಣಲು ಅನಂತಮೂರ್ತಿ ವಾಲ್ಟರ್ ಬೆಂಜಾಮಿನ್, ಗೋಪಾಲ ಕೃಷ್ಣ ಅಡಿಗ ಮತ್ತು ಬೇಂದ್ರೆಯವರ `ದರ್ಶನ'ಗಳನ್ನು ಜೊತೆಗಿಟ್ಟು ಹೊಸ ಅರಿವಿಗಾಗಿ ತುಡಿಯುವ ಅವರ ಪ್ರಯತ್ನ ಬಹುತೇಕ ಸಫಲವಾಗಿದೆ ಎನ್ನಬಹುದು.

ವಾಲ್ಟರ್ ಬೆಂಜಾಮಿನ್ ಜರ್ಮನಿಯಲ್ಲಿ ನಾಟ್ಜಿಸ್ಮ್ ಪ್ರಬಲವಾಗಿ, ಹೀಗೆ ಫ್ಯಾಸಿಸ್ಂ ಬೆಳೆಯಲು ಕಾರಣವೇನಿರಬಹುದು? ಎಂಬ ಕಳವಳದಲ್ಲಿ ಮಾರ್ಕ್ಸ್‍ವಾದಿಯಾಗಿಯೇ ಆ ವಾದದಲ್ಲಿನ ಲೋಪಗಳಿಗಾಗಿ ತಡಕಾಡುತ್ತಿದ್ದ. ಜನಸಂಘದ ಬಗ್ಗೆ ಒಲವಿದ್ದ ಅಡಿಗರು ಹಾರೆ ಎತ್ತಿ ಕುಕ್ಕಿ ಮೇಲಕ್ಕೆತ್ತಬಯಸಿದ್ದು ಸನಾತನ ಧರ್ಮದ `ಬಂಗಾರದ ಕಲಶ'. ಇವೊತ್ತಿನ ಫ್ಯಾಸಿಸ್ಟ್ ಶಕ್ತಿಗಳ ಪರಿಕಲ್ಪನೆಗಿಂತಲೂ ಭಿನ್ನವಾದ `ಭೂತ'. ಸೆಕ್ಯುಲರ್ ಪರಿಕಲ್ಪನೆಗಳಿಂದ ತುಂಬಿತುಳುಕುವ ಮಾರ್ಕ್ಸ್-ಚಿಂತನೆಯನ್ನು ಅನುಮಾನಿಸಲು ಬೆಂಜಾಮಿನ್ ಬಳಸುವ ಸಲಕರಣೆ `ಚರಿತ್ರೆಯ ವಿರುದ್ಧ ದಿಕ್ಕಿಗೆ ಮುಖ ಮಾಡಿರುವ ಹಾರುವ ಆಂಜೆಲ್-ನ ಪ್ರತಿಮೆ' ಗ್ರೀಕ್ ಪುರಾಣಕ್ಕೆ ಸಂಬಂಧಿಸಿದ್ದು. ಪುರಾಣದ ಪ್ರತಿಮೆಗಳ ಭಾಷೆಯಲ್ಲೇ ಆಧುನಿಕ ಮನುಷ್ಯನ `ಇರುವಿಕೆ'ಯನ್ನು ಗ್ರಹಿಸಬಯಸುವ ಅಡಿಗರು ಕಾಣಬಯಸುವ `ಭೂತ' ಕೂಡಾ ಆಧ್ಯಾತ್ಮ-ಲೇಪ ಉಳ್ಳದ್ದು. ಅದೊಂದು ಸಾವಿರ ಕಂಬದ ಬಸದಿ. ಹೀಗೆ ತನ್ನ ಸುತ್ತಲಿನ ಸಮೂಹ-ಸನ್ನಿಯಿಂದ ಅನ್ಯರಾಗುಳಿಯಬಯಸುತ್ತಿದ್ದ ಅಡಿಗರು ಇವೊತ್ತಿನ ಜನಸಂಘದ ಉಗ್ರವಾದಗಳಿಗೆ ಅಡಿಗರು ರೋಸಿ ಹೋಗಿ ದೂರವಾಗಿ ಉಳಿಯುತ್ತಿದ್ದರೆ? ಒಳ-ವಿಮರ್ಶಕರಾಗಿರುತ್ತದರೆ? ಎಂಬ ಪ್ರಶ್ನೆ ನಮ್ಮನ್ನು ಕಾಡದಿರದು.

ಇದೇ ಹಿನ್ನೆಲೆಯಲ್ಲಿ ಅನಂತಮೂರ್ತಿಯವರದ್ದೇ ಆದ ಇನ್ನೊಂದು ಕಥೆ `ಅಕ್ಕಯ್ಯ' ನೆನಪಾಗುತ್ತದೆ. ಕಥಾನಾಯಕ ಪ್ರೊಫೆಸರ್ ಶ್ರೀನಿವಾಸ ಮಾರ್ಕ್ಸ್‍ವಾದವನ್ನು ಮೊದಲು ಆದರ್ಶಕ್ಕಾಗಿ ನಂತರ ತನ್ನ ಕೆರಿಯರ್-ಗಾಗಿ ಬೆನ್ನಟ್ಟಿ ಅಮೇರಿಕೆಯಲ್ಲಿ `ಯಶಸ್ವಿ'ಯಾಗಿದ್ದಾನೆ. ಆತನ ಡ್ರಾಯಿಂಗ್ ರೂಮಿನಲ್ಲಿ ಆತನೇ ಬಿಡಿಸಿದ ಚಿತ್ರವೊಂದರಲ್ಲಿ -ಮಾರ್ಕ್ಸ್‍ನ ಪರಿಭಾಷೆಯಲ್ಲಿ ಹೇಳುವುದಾದರೆ- `ವಿಲೇಜ್ ಇಡಿಯಾಸಿ'ಯ ಪ್ರತೀಕಳೆಂಬಂತಿರುವ, ತನ್ನ ಜೀವನ-ಕ್ರಮದ ಮೂಲಕ ಶ್ರೀನಿವಾಸನಿಗಿಂತ ತಾತ್ವಿಕವಾಗಿಯೂ ಭಿನ್ನವಾಗಿರುವ ಆತನ ಅಕ್ಕ, ಈ ಅಕ್ಕಯ್ಯ ಆಂಜೆಲ್-ನ ರೂಪದಲ್ಲಿ ಹಾರುತ್ತಾ ಕೈಬೀಸಿ ಕರೆಯುತ್ತಿದ್ದಾಳೆ. ಆ ಮೂಲಕ ಶ್ರೀನಿವಾಸನ ಸಿದ್ಧಾಂತಗಳು ಮತ್ತು ಜೀವನ-ಕ್ರಮದ ವಿಮರ್ಶಕಿಯಾಗಿ ಅವರು ಅವಳನ್ನು ನಮಗೆ-ಓದುಗರಿಗೆ ಕಾಣಿಸುತ್ತಾರೆ.

ಕಳೆದ ಸುಮಾರು ಒಂದು-ದಶಕದಿಂದಲೂ ಅನಂತಮೂರ್ತಿಯವರ ಬರಹಗಳನ್ನು ತಕ್ಕಮಟ್ಟಿಗೆ ಸೂಕ್ಷ್ಮವಾಗಿ ಗಮನಿಸುತ್ತಿರುವ ನಾನು, ಅವರ ವೈಚಾರಿಕ ಬರಹಗಳೂ ಮತ್ತವರ ಸೃಜನಶೀಲ ಕೃತಿಗಳು ಒಂದಕ್ಕೊಂದು ಪೂರಕವಾಗಿವೆ ಎಂದು ಭಾವಿಸಿದ್ದೇನೆ. ಪರಸ್ಪರ ಒಳನೋಟಗಳನ್ನು ಬೆಳಗಿಸುತ್ತವೆ ಎಂದು ಕಂಡುಕೊಂಡಿದ್ದೇನೆ. ಅವರ ಈ ಸೃಜನಶೀಲ ಮತ್ತು ಅಪಾರ ಕಳಕಳಿಯಿಂದ ತುಂಬಿದ ಚಿಂತನಧಾರೆ ಸದಾ ಹರಿಯುತ್ತಲೇ ಇರಲಿ. ಕನ್ನಡ ಸಮುದಾಯದ ಜೊತೆ ಅವರ ಈ ಅನುಸಂಧಾನ ನಿರಂತರವಾಗಿ ಸಾಗಲಿ.






Labels: , , , ,

Thursday, September 28, 2006

ಲಗೇ ರಹೋ ಮುನ್ನಾಭಾಯಿ: ಒಂದು ವಾರೆ ನೋಟ

[ಈ ಲೇಖನ ದಿನಾಂಕ ೧-೧೦-೨೦೦೬ರ ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾಗಿದೆ. ಉದಯವಾಣಿಯ ಲಿಂಕ್ ಇಲ್ಲಿದೆ.]

ನಾನು ಈ ಸಿನೆಮಾ ನೋಡಿದ್ದು ಮುಂಬೈ-ನ ಕಾಂಜೂರು ಉಪನಗರದ ರೈಲುನಿಲ್ದಾಣದ ಬಳಿಯ ಮಲ್ಟಿಪ್ಲೆಕ್ಸ್ ಒಂದರಲ್ಲಿ. ರೈಲು-ನಿಲ್ದಾಣದ ಸುತ್ತಲಿನ ಪ್ರದೇಶ ಮುಂಬೈನ ಹಲವು ಪ್ರದೇಶಗಳಂತೇ ಹಲವಾರು ಕಾಂಟ್ರ್ಯಾಸ್ಟ್-ಗಳಿಂದ ತುಂಬಿರುವಂಥದ್ದು. ಹಲವಾರು ನಮೂನಿಯ ಅಂಗಡಿಗಳು, ತರಕಾರಿ ಮಾರುವವರು, ನಿಂಬೂಪಾನಿ ಮಾರುವವರು, ಪಾನಿಪುರಿಯವರು, ಅಟೋ-ನಿಲ್ದಾಣ, ಪುರಾತನ ಕಾಲದ್ದೆನಿಸುವ ಖಾರಪುಡಿ, ಮಸಾಲೆಪುಡಿ ಕುಟ್ಟುವ ಕಾರ್ಖಾನೆ, ನಿಲ್ದಾಣಕ್ಕೆ ಹೋಗಿಬರುವ ಜನರು, ಅಶಿಸ್ತು, ಗಜಿಬಿಜಿ, ಧೂಳು, ಹೊಗೆ, ಕೊಳಚೆ. ಇವೆಲ್ಲವುಗಳ ಮಧ್ಯ ಒಂದೆರಡು ಲಕಲಕಿಸುವ ಹೈ-ರೈಸ್ ಅಪಾರ್ಟ್ಮೆಂಟುಗಳು ಮತ್ತು ಮುಲ್ಟಿಪ್ಲೆಕ್ಸ್ ಹೊಂದಿರುವ ಮಾಲ್. ಏರ್ ಕಂಡೀಶನ್ಡ್ ಮಲ್ಟಿಪ್ಲೆಕ್ಸ್-ನ ಹೊರಗಿರುವವವನಿಗೆ ಹೇಗಾದರೂ ಮಾಡಿ ಮಲ್ಟಿಪ್ಲೆಕ್ಸ್-ಒಳಗೆ ಸೇರಿ ಬಿಗಿಯಾದ ಉಡುಪು ಧರಿಸಿದ ಆ ಯುವಜೋಡಿಯಂತೆ ಝಂ ಎಂದು ಸಿನೆಮಾ ನೋಡುವ ಆಸೆ, ಆತುರ. ಮಲ್ಟಿಪ್ಲೆಕ್ಸ್-ನಲ್ಲಿರುವವರಿಗೆ ಸುತ್ತಲಿನ ಆ ಅಸಹ್ಯದ ಬಗ್ಗೆ ಅನುಕಂಪ, ಕನಿಕರ, ಅಸಡ್ಡೆ, ನಮ್ಮಿಂದ ಸಾಧ್ಯವಾಗುವುದಾದರೆ ಇದನ್ನೆಲ್ಲ ಬದಲಿಸಿಬಿಡಬೇಕೆಂಬ ರೋಷ ಇವುಗಳಾನ್ನು ಹೊತ್ತ ಸ್ಥಿತಿವಂತರ ಕಲಸುಮೇಲೊಗರದ ಭಾವ.

ನಮ್ಮ ಇಂಥಾ ಒಂದು ಎಕ್ಸಿಸ್ಟೆನ್ಷಿಯಲ್ ಸ್ಥಿತಿಯನ್ನು ಮನಸ್ಸಿನಲ್ಲಿಟ್ಟುಕೊಂಡು `ಲಗೇ ರಹೋ ಮುನ್ನಾಭಾಯಿ'ಯನ್ನು ಪರಿಶೀಲಿಸೋಣ.

ಮುನ್ನಾಭಾಯಿ ಮತ್ತು ಸರ್ಕೇಷ್ವರ್(ಸರ್ಕೀಟ್) ನಿತ್ಯ ಬದುಕುವ ಪರಿಸರ 'ಅಸಹ್ಯ'ವಾದ ಸ್ಲಮ್ಮಿಗೆ ಸೇರಿದ್ದಾದರೆ, ನಾಯಕಿ-ಯ ಪರಿಸರ ಕೆಲವರಿಗೆ ಮಾತ್ರ ಕೈಗೆಟಕುವ ವೊರ್ಲ್ದ್‍ಸ್ಪೇಸ್ ಸೆಟಲೈಟ್ ರೇಡಿಯೋ-ದ ಸ್ಟುಡಿಯೋದ ಹವಾನಿಯಂತ್ರಿತ ಪರಿಸರ. ಸಿನೆಮಾ ಹೇಳುವ ಪ್ರಕಾರ ನಾಯಕ ನಾಯಕಿಯ ಪ್ರೀತಿ ಪಡೆಯಲು ಬಳಸುವ ಮಾರ್ಗ 'ದಾದಾಗಿರಿ'ಯಾಗದೇ 'ಗಾಂಧಿಗಿರಿ'ಯಾಗಿರುತ್ತದೆ. ಇದು ಬಹುಮಟ್ಟಿಗೆ ನಿಜವೂ ಹೌದು. ಅಂತೆಯೇ ಸಿನೆಮಾ ನಮ್ಮ ನಿಮ್ಮೆಲ್ಲರ ಮನಸ್ಸನ್ನು ಗೆಲ್ಲುತ್ತದೆ.

ಈ ಸಿನೆಮಾದ ಹಿಂದಿನ ಅವತರಣಿಕೆಯಾದ 'ಮುನ್ನಾಭಾಯಿ ಎಂ.ಬಿ.ಬಿ.ಎಸ್.', ವಸಾಹತುಶಾಹಿ ನಿರ್ಮಿಸಿರುವ ವ್ಯವಸ್ಥೆಯ ಲೋಪದೋಷಗಳಿಗೆ (ಆಧುನಿಕ ವೈದ್ಯಕೀಯ ವ್ಯವಸ್ಥೆಯಲ್ಲಿ ವಿದ್ಯಾರ್ಜನೆಗೆ ವ್ಯವಸ್ಥೆಯ ಅಂಚಿನಲ್ಲಿರುವ ಮುನ್ನಾಭಾಯಿ ಅಂಥವರಿಗೆ ಜಾಗವಿಲ್ಲ), ಸಿನೆಮಾ ಕೊಡುವ ಪರಿಹಾರವಾಗಲಿ, ಸಿನೆಮಾದ ಒಟ್ಟೂ ನಿರೂಪಣೆಯಾಗಲಿ `ನಾಗರಿಕ' ಸಮಾಜ ಒಪ್ಪುವಂಥದ್ದಾಗಿರಲಿಲ್ಲ.

ಆದರೆ `ಲಗೇ ರಹೋ..' ತೋರಿಸುವ ಪರಿಹಾರ ಮಾರ್ಗವೂ, ಸಿನೆಮಾದ ಒಟ್ಟೂ ನಿರೂಪಣೆಯೂ ಹೆಚ್ಚು ಆರೋಗ್ಯಕರವಾಗಿದೆ. ಅಂತೆಯೇ ತುಸು ಹೆಚ್ಚು ಗಂಭೀರ ವಿಮರ್ಶೆಗೆ ಅರ್ಹವಾಗಿದೆ. ತತ್‍ಕ್ಷಣಕ್ಕೆ ಹೊಳೆವ ಕೆಲವು ಉತ್ತಮ ಅಂಶಗಳು ಇವು. ಮುನ್ನಾ ಮತ್ತು ಸರ್ಕೀಟ್ ನಗರೀಕರಣ ಹಿನ್ನೆಲೆಯಲ್ಲಿ ನೆಲೆಯಿಲ್ಲದಂತಾಗಿರುವ ವೃದ್ಧರಿಗೆ ಭೂಮಾಲೀಕರಿಂದ ಅಹಿಂಸೆ ಮತ್ತು ಪ್ರೀತಿಯ ಮಾರ್ಗದಿಂದಲೇ ಆಶ್ರಯ ಮರಳಿಗಳಿಸಿಕೊಡುತ್ತಾರೆ. ತಂದೆಯ ಹಣ ಕಳೆದ ಮಗನನ್ನು ಟ್ಯಾಕ್ಸಿ ನಡೆಸುವ ವೃತ್ತಿಮಾರ್ಗಕ್ಕೆ ಹಚ್ಚುತ್ತಾರೆ. (ಸ್ವತಃ ಅವರಿಬ್ಬರು ಅಷ್ಟೇ ಗಂಭೀರವಾಗಿ ಯಾವುದೇ ಪ್ರಾಮಾಣಿಕ ವೃತ್ತಿಗೆ ತತ್‍ಕ್ಷಣಕ್ಕೆ ಪ್ರವೃತ್ತರಾಗುದಿಲ್ಲ.
ಆ ಮಾತು ಬೇರೆ. ನಾಯಕ ನಾಯಕಿಯನ್ನು ಗಾಂಧಿಗಿರಿಯ ಮೂಲಕ ಗೆಲ್ಲಬೇಕು. ಜೊತೆಗೇ ನಮ್ಮನ್ನು ರಂಜಿಸಬೇಕು. ಇದು ಸಿನೆಮಾ. ಇದನ್ನು ಬಿಟ್ಟು ಅವರು ಕದಲುವಂತಿಲ್ಲ). ಸಿನೆಮಾದುದ್ದಕ್ಕೂ ವ್ಯಕ್ತವಾಗುವ ಗಾಂಧಿಯನ್ನು ಪುತ್ಥಳಿಯಿಂದಲೂ, ನೋಟುಗಳಿಂದಲೂ, ರಸ್ತೆಗಳ ನಾಮ ಫಲಕದಿಂದಲೂ, ಕೋರ್ಟು-ಕಚೇರಿಗಳ ಗೋಡೆಯಿಂದಲೂ ಕೆಳಗಿಸಿ ನಮ್ಮ ನಮ್ಮ ಹೃದಯದಲ್ಲಿ ಇಳಿಸಿಕೊಳ್ಳಬೇಕೆಂಬ ಸರಳ ಸಂದೇಶ. ಒಳ್ಳೆಯ ಕೆಲಸ ಮಾಡಿದರೆ ಈ ಜನ ಮುನ್ನಾಭಾಯಿಯನ್ನೂ ಪುತ್ಥಳಿಗೆ ಏರಿಸಿಬಿಡಬಹುದೆಂಬ ವ್ಯಂಗ್ಯದಲ್ಲೂ ವ್ಯಕ್ತವಾಗುವುದೂ ಅದೇ ಸಂದೇಶವೇ! ಈ ಸಂದೇಶದಿಂದ ನಿತ್ಯ ಭಯೋತ್ಪಾದನೆಯ ಇಂದಿನ ದಿನಗಳಲ್ಲಿ ೧೯೯೩ರ ಮುಂಬೈ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಆರೋಪ ಎದುರಿಸುತ್ತಿರುವ ನಟ ಸಂಜಯ ದತ್ತ ಸೇರಿದಂತೆ ನಾವು ನೀವೂ ಪಾಠ ಕಲಿಯುವುದಿದೆ. ಅಂದ ಹಾಗೆ ಆರೋಪ ಸಾಬೀತಾಗದ ಸಂಜಯ ದತ್ತರಿಗಿಂತ ನಾವೂ, ನೀವೂ ಹೆಚ್ಚು ಸಾಧುಗಳು ಎಂದು ಹೇಳುವುದಕ್ಕೆ ನನ್ನ ಬಳಿ ಯಾವ ಆಧಾರಗಳೂ ಇಲ್ಲ. ಗಾಂಧೀವಾದದ ಪ್ರಕಾರ ಪಾಶ್ಚಾತ್ಯ ನಾಗರೀಕತೆಯ ಬೆನ್ನು ಹತ್ತಿರುವ ನಾವೆಲ್ಲರೂ ಪರೋಕ್ಷವಾಗಿ ಭಯೋತ್ಪಾದನೆಯನ್ನು ಪೋಷಿಸುತ್ತಿರುವವರೇ! ಕೆಲವು 'ಪೋಸ್ಟ್‍ಮಾಡರ್ನಿಸ್ಟ್' ಬುದ್ಧಿಜೀವಿಗಳು ಗಾಂಧಿಯನ್ನು ಅನಾಧುನಿಕ ನೆಲೆಯಲ್ಲಿ ರೋಮ್ಯಾಂಟಿಕೀಕರಣಗೊಳಿಸುತ್ತಾ ಎಲ್ಲಾ ಗ್ರಾಮೀಣ (ಮೂಢ)ನಂಬಿಕೆಗಳ ಪರರಂತೆ ಸರಳೀಕರಿಸಿ ಚಿತ್ರಿಸುವುದೂ ಉಂಟು. ಅಂಥವರಿಗೆ ಚಾಟಿಯೇಟು ಕೊಡುವಂತೆ ಇಲ್ಲಿ ಗಾಂಧಿ ಕುಂಡಲಿ-ಕಳಂಕವಿರುವ ವಿವಾಹವನ್ನೂ ಬೆಂಬಲಿಸುವ ಆಧುನಿಕ ವೈಚಾರಿಕರಾಗಿಯೇ ಚಿತ್ರಿತರಾಗಿದ್ದಾರೆ. ಇದೂ ಕೂಡಾ ಸಿನೆಮಾದಲ್ಲಿ ನಾನು ಇಷ್ಟಪಟ್ಟ ಮತ್ತೊಂದು ಅಂಶ. ಗಾಂಧೀಜಿ ಬೆಂಬಲಿಸುತ್ತಿದ್ದ ಇನ್ನೂ ಕೆಲವು ಪ್ರಗತಿಪರ ಅಂಶಗಳನ್ನು ನಿರ್ದೇಶಕರು ತೋರಿಸುವ ಧೈರ್ಯ ಮಾಡಬಹುದಿತ್ತು ಅನಿಸುತ್ತದೆ.

ಇದೇ ಹಿನ್ನೆಲೆಯಲ್ಲಿ ಇನ್ನೊಂದು ಕಾಂಟ್ರ್ಯಾಸ್ಟ್ ಬಗ್ಗೆ ಚರ್ಚಿಸಬಯಸುತ್ತೇನೆ. 'ಲಗೇ ರಹೋ..' ನೋಡುವ ಕೆಲವೇ ದಿನ ಮೊದಲು ರಿತ್ವಿಕ್ ಘಾತಕ್ ಅವರ 'ಸುವರ್ಣರೇಖಾ' ನೋಡುವ ಅವಕಾಶ ಸಿಕ್ಕಿತು. ಸಿನೆಮಾದ ಮೊದಲ ದೃಶ್ಯದಲ್ಲಿ ೧೯೪೭ರ ವಿಭಜನೆಯಿಂದಾಗಿ ಬಂಗ್ಲಾದೇಶದಿಂದ ಬಂಗಾಳಕ್ಕೆ ಹೊಸ ಬದುಕಿನ ಆಸೆ ಹೊತ್ತು ವಲಸೆ ಬಂದ ನಿರ್ವಸತಿಕರೆಲ್ಲಾ ಸೇರಿ ತಮಗಾಗಿ ತಾತ್ಕಾಲಿಕ ವಸತಿ ಮತ್ತು ಶಾಲೆಯೊಂದನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಗಾಂಧೀಯುಗದ ಆದರ್ಶ, ಕನಸು, ಮೌಲ್ಯಗಳನ್ನು ಹೊತ್ತವರು ಅವರು. ದಿನಾಂಕ ಫೆಬ್ರುವರಿ ೧, ೧೯೪೮. ಅಂದಿನ ದಿನ ಪತ್ರಿಕೆ ಮಧ್ಯವಯಸ್ಕ ಶಿಕ್ಷಕನೊಬ್ಬನ ಕೈಯಲ್ಲಿದೆ. ಗಾಂಧೀ ಹತ್ಯೆಯಾದ ಸುದ್ದಿ ಪ್ರಕಟಗೊಂಡಿದೆ. ಪತ್ರಿಕೆ ಕೈಜಾರುತ್ತಿದ್ದಂತೆ ಆತನ ಬಾಯಿಯಿಂದ ಉದ್ಗಾರ ಹೊರಬೀಳುತ್ತದೆ 'ಹೇ ಭಗವಾನ್! ನಾವು ಮೋಸಹೋದೆವು'. ಗಾಂಧೀಯ ರಾಮರಾಜ್ಯದ ಭರವಸೆಯಲ್ಲಿ ಬಂದಿದ್ದ ಅವರಿಗೆ ಭ್ರಮನಿರಸನವಾದ ಚಿತ್ರಣವಿದು. ಕಪ್ಪು-ಬಿಳುಪಿನಲ್ಲಿ ಘಾತಕ್-ರು ಸೆರೆಹಿಡಿಯುವ ಆ ಚಿತ್ರ ಇನ್ನೂ ಮನಸ್ಸಿನಲ್ಲಿದೆ. `ಸುವರ್ಣರೇಖಾ' ಎಂಬ ಈ ಸಿನೆಮಾ ಗಾಂಧೀಜಿಯ ಪಾತ್ರವನ್ನು ಚಿತ್ರಕಥೆಯೊಳಗೆ ನೇರವಾಗಿ ತರದೇ ಕಳೆದು ಹೋಗುತ್ತಿರುವ ಗಾಂಧೀವಾದದ ಮೌಲ್ಯಗಳ ಯುಗಪಲ್ಲಟಗಳನ್ನು ದಾಖಲಿಸುವ ಒಂದು ವಾಸ್ತವವಾದಿ ಮಾರ್ಗದ ಚಿತ್ರವಾಗಿದೆ.

ಇನ್ನೊಂದು ಚಿತ್ರವನ್ನು ನೆನೆಸಿಕೊಳ್ಳಿ. ಇದು ನಮ್ಮ ಇಂದಿನ ದಿನಗಳ ವಾಸ್ತವವಾದಿ ಸಿನೆಮಾ ದಿಗ್ದರ್ಶಕನೊಬ್ಬನಿಂದ ಚಿತ್ರೀಕರಿಸಲು ಕಾದಿದ್ದು. ಉತ್ತರ ಅಮೇರಿಕೆಯ ಯಾವುದೇ ನಗರ, ಪಟ್ಟಣದ ಮಧ್ಯಮ ತರಗತಿಯ ಒಂದು ಮನೆ. ಹೊಸ ಬದುಕಿನ ಹೊಸ ಆಸೆ, ಅಮೇರಿಕನ್ ಕನಸು ಹೊತ್ತು ಬಂದ ಮಧ್ಯಮ ವರ್ಗದ ಹಿನ್ನೆಲೆಯ, ದಕ್ಷಿಣ ಏಶಿಯಾದಿಂದ ವಲಸೆ ಬಂದ, ರೂಮ್‍ಮೇಟ್ ಆಗಿರುವ ಯುವಕರು ಟಿ. ವಿ. ಮೇಲೆ ಸಿ. ಎನ್. ಎನ್. ಚಾನೆಲ್ ನೋಡುತ್ತಿದ್ದಾರೆ. (ಈ ಯುವಕರ ಹಿರಿಯರು ಸರ್ಕಾರೀ ನೌಕರರೂ, ಗಾಂಧಿ ಮತ್ತು ಸಮಾಜವಾದೀ ಮೌಲ್ಯಗಳು ನಿಧಾನವಾಗಿ ವಿಘಟಿತಗೊಳ್ಳುತ್ತಿರುವ ದಿನಗಳಲ್ಲಿ, ಮೌಲ್ಯಗಳಿಗಾಗಿ ಸೆಣೆಸುತ್ತಾ ಒಟ್ಟು ಕುಟುಂಬದ ತಾಪತ್ರಯಗಳನ್ನೂ ನಿಭಾಯಿಸುತ್ತಾ ಮಕ್ಕಳನ್ನು ಬೆಳೆಸಿದವರೂ ಆಗಿರುತ್ತಾರೆ.) ದಿನಾಂಕ ಸೆಪ್ಟೆಂಬರ್ ೧೧, ೨೦೦೧. ಈಗಾಗಲೇ ವಿಶ್ವ ವಾಣಿಜ್ಯ ಸಂಸ್ಥೆಯ ಒಂದು ಟವರ್ ಕಟ್ಟಡ ಹೊತ್ತಿ ಉರಿಯುತ್ತಿದೆ. ನೋಡು ನೋಡುತ್ತಿದ್ದಂತೆ ಇನ್ನೊಂದು ವಿಮಾನವೊಂದು ಎಲ್ಲಿಂದಲೋ ಬಂದು ಇನ್ನೊಂಡು ಟವರ್ ಕಟ್ಟಡಕ್ಕೆ ಢಿಕ್ಕಿ ಹೊಡೆಯುತ್ತದೆ. ಯುವಕರು ಒಬ್ಬರ ಮುಖವನ್ನೊಬ್ಬರು ಆತಂಕಭರಿತವಾಗಿ ನೋಡುತ್ತಾರೆ. `ನಾವು ಮೋಸ ಹೋದೆವು' ಎಂಬ ಉದ್ಗಾರ ಅವರ ಕಣ್ಣಲ್ಲೇ ಮೂಡಿರುತ್ತದೆ.

ಈ ಎರಡೂ ದೃಶ್ಯಗಳ ನಡುವಿನ ಸಾಮ್ಯ ಮತ್ತು ಕಾಂಟ್ರಾಸ್ಟ್ ರಾಚುವಂಥದ್ದು. ೧೯೪೮ರ ವಲಸೆಗಾರರು ಕನಸು ಕಂಡಿದ್ದು ಗಾಂಧೀ ಪ್ರತಿನಿಧಿಸುವ ರಾಮರಾಜ್ಯದ ಸಂಸ್ಕೃತಿ. ೨೦೦೧ರಂದು ಅಮೇರಿಕೆಗೆ ವಲಸೆ ಬಂದ ತಲೆಮಾರು ಅರಸಿದ್ದು ವರ್ಲ್ಡ್ ಟ್ರೇಡ್ ಸೆಂಟರ್ ರೂಪದಲ್ಲಿದ್ದ ಆಡಮ್ ಸ್ಮಿತ್‍ನ ವಾದವನ್ನು ಪ್ರತಿನಿಧಿಸಿದ ಸಂಸ್ಕೃತಿ. ಎರಡೂ ಕಡೆ ಉತ್ತಮ ಬದುಕಿನ ಭ್ರಮ-ನಿರಸನವಾಗುವುದು ಮೂಲಭೊತವಾದಿಗಳು ಎಸಗುವ ಕೃತ್ಯದಿಂದ. ಒಂದು ಕಡೆ ಗಾಂಧೀವಾದದ ಹತ್ಯೆಯಾದರೆ ಇನ್ನೊಂದು ಕಡೆ ಆಡಮ್ ಸ್ಮಿತ್‍ನ ವಾದದ ಹತ್ಯೆ. ಪ್ರಪಂಚದ ಹಲವು ಮುಗ್ಧರಿಗೆ ಬಂಡವಾಳಶಾಹಿಯ ಕರಾಳ ಮುಖಗಳನ್ನು ಅನಾವರಣಗೊಳಿಸಿದ ಘಳಿಗೆ ಅದು. ನಾನು ಈ ೨೦೦೧ರ ಯುವಕರನ್ನೂ ಅವರ ಮೌಲ್ಯಗಳನ್ನೂ ನ್ಯಾಯನೀರ್ಣಯಕ್ಕೆ ಒಳಪಡಿಸಲು ಈಗಲೇ ನಾನು ಸಿದ್ಧನಿಲ್ಲ. (ಬಂಡವಾಳುಶಾಹಿಯ ವಕ್ತಾರನಾಗಿದ್ದ ಸ್ಮಿತ್-ಗೆ ಸಂಪತ್ತು ಎಲ್ಲರಿಗೂ ಹಂಚಿಕೆಯಾಗಬೇಕು ಎಂಬ ತಾತ್ವಿಕ ಮಟ್ಟದ ಕಾಳಜಿಯೂ ಇತ್ತು). ಹೀಗಾಗಿ ಎರಡೂ ತಲೆಮಾರಿನವರು ತಮ್ಮ ತಮ್ಮ ಚಾರಿತ್ರಿಕ ಸಂದರ್ಭದ ವಿಧಿವಶರು.

'ಲಗೇ ರಹೋ..' ಒಂದು ಕಾಮೆಡಿ ಚಿತ್ರ. ಈ ಸಿನೆಮಾದಲ್ಲಿ ಮೇಲೆ ಕಾಣಿಸಿದ ಯಾವುದೇ ತಲ್ಲಣಗಳಿಗೆ ಅವಕಾಶವಿಲ್ಲ. ಇಲ್ಲಿ ಆಡಮ್ ಸ್ಮಿತ್ ಮತ್ತು ಗಾಂಧಿ ಮುಜುಗರವಿಲ್ಲದೇ ಬೆರೆಯುತ್ತಾರೆ. ಆಡಮ್ ಸ್ಮಿತ್-ನನ್ನು ವಿಮರ್ಶಿಸುವ ಗಾಂಧಿ ನಮಗೆ ಕಾಣುವುದೇ ಇಲ್ಲ. ಇಲ್ಲಿ ವ್ಯಕ್ತವಾಗುವ `ಗಾಂಧಿಗಿರಿ' ಬಹಳ ಸೀಮಿತವಾದದ್ದು. ಅಂದರೆ ಸಿನೆಮಾ 'ಗಾಂಧೀವಾದ'ದ ಕೆಲವೇ ಕೆಲವು ಸೀಮಿತ ಅಂಶದ ಕುರಿತು ಮಾತ್ರ ಮಾತನಾಡುತ್ತದೆ. ಸ್ಥೂಲವಾಗಿ ಹೇಳುವುದಾದರೆ ಅಸತ್ಯದ ನುಡಿ ಮತ್ತು ವ್ಯಕ್ತ ಹಿಂಸೆ(explicit violence)ಯ ನಿರಾಕರಣೆ. ಒಟ್ಟೂ ಸೂಕ್ಷ್ಮವಾದ, ಹೆಚ್ಚು ಆಳವಾದ ಗಾಂಧಿವಾದದ `ಸತ್ಯ'ಗಳ ಬಗ್ಗೆ ಅಲ್ಲ. ಅಂದರೆ ನಗರೀಕರಣ, ಕೇಂದ್ರೀಕರಣ, ಬೃಹತ್ ಕೈಗಾರಿಕೆಗಳ ಬಗೆಗಿನ ಗಾಂಧಿಯ ವಿರೋಧ ಮತ್ತು ಆ ಮೂಲಕ ಸಮಾನತೆ ಮತ್ತು ಸೌಹಾರ್ದಗಳನ್ನು ಹೇಗೆ ಸಾಧಿಸಬಹುದು ಎಂಬುದರ ಕುರಿತು ಅವರ ಚಿಂತನೆ ಇವೆಲ್ಲದರ ಕುರಿತು ಸಿನೆಮಾ ಉಸಿರೆತ್ತುವುದಿಲ್ಲ. ಅಂದರೆ ನಮ್ಮ ನಿಮ್ಮ ವಾಸ್ತವದಲ್ಲಿ ಅಗಸರ ಕೇರಿಯ `ಮುನ್ನಾಭಾಯಿ' ಮತ್ತು ರೇಡಿಯೋ ಜಾಕಿ 'ಜಾಹ್ನವಿ' ಸಹಜವಾಗಿ ವ್ಯವಹರಿಸಬಹುದಾದ, ಅದಕ್ಕಗತ್ಯವಾದ ವಾತಾವರಣದ ನಿರ್ಮಾಣಕ್ಕೆ ಒಂದು ಮಾರ್ಗವಾಗಬಹುದಾದ `ಸಂಪೂರ್ಣ ಗಾಂಧಿವಾದ'ಕ್ಕೆ ಇಲ್ಲಿ ಅವಕಾಶವಿಲ್ಲ. ಈ ಅಂಶಗಳು ನಮ್ಮ ಮನಸ್ಸಿನಲ್ಲಿದ್ದರೆ ಈ ಸಿನೆಮಾವನ್ನು ಹೆಚ್ಚಿನ ಉತ್ಪ್ರೇಕ್ಷೆ ಇಲ್ಲದೆ ಸಮಚಿತ್ತದಿಂದ ಗ್ರಹಿಸಲು ಸಾಧ್ಯವಾಗುತ್ತದೆ.

ಬಾಲಿವುಡ್‍ನ ಒಂದು `ಕಾಮೆಡಿ' ಸಿನೆಮಾನಿಂದ ನೀವು ಹೆಚ್ಚು ಅಪೇಕ್ಷೆ ಮಾಡುತ್ತಿದ್ದೀರಿ ಎಂದು ಕೆಲವರು ಹೇಳಬಹುದು. ನಿರೀಕ್ಷೆ ಮಾಡುತ್ತಿಲ್ಲ. 'ಲಗೇ ರಹೋ..' ದೇಶಾದ್ಯಾಂತ ಪ್ರಭಾವ ಬೀರಿ ಚರ್ಚಿತವಾಗುತ್ತಿದೆ. ಆದ್ದರಿಂದ ಅದರ ಕೆಲವು ಇತಿಮಿತಿಗಳ ಬಗ್ಗೆ ಎಚ್ಚರವೂ ಇರಬೇಕೆಂಬ ದೃಷ್ಟಿಯಿಂದ ಈ ಚರ್ಚೆ. ಗಾಂಧೀಜಿಯನ್ನು ಒಂದು ಕಾಮೆಡಿ ಸಿನೆಮಾದಲ್ಲಿ ಪಾತ್ರವಾಗಿಸುವುದೊಂದು ನಾಜೂಕಿನ ಕೆಲಸವೇ. ಕಾಮೆಡಿ ಮೂಲಕ ಹೇಳಿದ್ದರಿಂದ ಜನ ಸ್ವೀಕರಿಸಿದರು ಎಂಬ ನಿರ್ದೇಶಕರ ಮಾತಿಗೆ ಮಾಧ್ಯಮಗಳು ಕೊಡುವ ಮಹತ್ವ, ಆ ಮಟ್ಟದಲ್ಲಿ ಮಾತ್ರ ಗಾಂಧಿಯನ್ನು ನಾವು ಸ್ವೀಕರಿಸಬಯಸುತ್ತೇವೆ ಎಂದು ಸೂಚಿಸಬಹುದಾದ ಅಪಾಯವೂ ಇದೆ. ಸಿನೆಮಾ `ಗಾಂಧೀಜಿ'ಯನ್ನು ಪುತ್ಥಳಿಯಿಂದ ಕೆಳಗಿಳಿಸುವ ಒಂದು ಮೊದಲ ಹೆಜ್ಜೆಯೂ ಆಗಬಹುದು. ಸಿನೆಮಾದ ಶೀರ್ಷಿಕೆಯ ಹಾಡೇ ಹೇಳುವಂತೆ `ಬಂದೇ ಮೆ ಥಾ ದಮ್' ಎಂಬುದನ್ನು ಮನಃಪೂರ್ವಕವಾಗಿ ಒಪ್ಪುವ ಅಸಂಖ್ಯಾತ ಭಾರತೀಯರಲ್ಲಿ ಒಬ್ಬನಾಗಿ ಆ ವ್ಯಕ್ತಿಯ ವ್ಯಕ್ತಿತ್ವದ ಹಲವು ಆಯಾಮಗಳನ್ನು ಮರೆಯದಿರಲು ಈ ನನ್ನ ಟಿಪ್ಪಣಿ.

Saturday, September 02, 2006

ಮಲ್ಲಾಡಿಹಳ್ಳಿಯಲ್ಲಿ ಒಂದು 'ಸಂವಾದ'

೨೧ ನೇ ಶತಮಾನದ ವೇಗದ ಆಧುನಿಕತೆಯಿಂದ- ಬೆಂಗಳೂರಿನಿಂದ ಸುಮಾರು ದೂರದಲ್ಲಿ, ಆಧುನಿಕತೆಯತ್ತ ಇನ್ನೂ ಮೈಮುರಿಯುತ್ತ ಏಳುತ್ತಿರುವ ದಾವಣಗೆರೆಯಿಂದ ಸುಮಾರು ೫೦ ಕಿ.ಮೀ. ದೂರದ 'ಮಲ್ಲಾಡಿಹಳ್ಳಿ'ಯಲ್ಲಿ ಕುಳಿತು, 'ದೇಸಿ'ಗೆ ಕೊಂಚ ಹೆಚ್ಚು ಹತ್ತಿರವಾಗಿ ತಮ್ಮದೇ ಪ್ರಪಂಚ ಕಟ್ಟಿ ನಮಗೆ ಕೊಡುತ್ತಿರುವ ರಾಘವೇಂದ್ರ ಪಾಟೀಲರನ್ನು ಮುಖತಃ ಸಂದರ್ಶಿಸುವ ಅವಕಾಶ. ಕೊಟ್ಟದ್ದು ನಮಗೆ (ನನಗೆ ಮತ್ತು ನನ್ನ ಸಂಗಾತಿ ಪ್ರೀತಿಗೆ) ಹೊಸ 'ಜೀವ' ಕೊಡಲೆಂದು ಇನ್ನೂ ಕಾದು ಕೂತಿದ್ದ ಸಮಯ.

ಪಾಟೀಲರ 'ತೇರು' ಕೃತಿಯ ಬಗ್ಗೆ, ಆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಾಗ ಒಂದು ಚುಟುಕು ಟಿಪ್ಪಣಿ ಬರೆದಿದ್ದೆ. ವಿವರವಾಗಿ ಆ ನಂತರ ಬರೆಯುತ್ತೇನೆ ಎಂದು ನನ್ನ ಗೆಳೆಯರಿಗೆ ಕೊಟ್ಟ ವಾಗ್ದಾನವನ್ನು ಆ ಮುಂಚಿನ ಇತರೇ ಕೆಲವು ವಾಗ್ದಾನಗಳಂತೇ ನೆರವೇರಿಸಿರಲಿಲ್ಲ. ಹೀಗಾಗಿ ಪಾಟೀಲರನ್ನು ಭೇಟಿಯಾಗಿ 'ವಾಗ್ವಾದ'ವಲ್ಲದಿದ್ದರೂ ಒಂದು `ಸಂವಾದ'ವನ್ನು ನಡೆಸಿ ಅದರ ವಿವರಗಳನ್ನು ಗೆಳೆಯರೊಂದಿಗೆ ಹಂಚಿಕೊಳ್ಳುವ ಅವಕಾಶವೊಂದು ಎದುರಿಗೇ ಕಂಡಾಗ ಸಹಜವಾಗಿ ಉತ್ಸಾಹ ಏರಿತ್ತು.

ಆದರೆ ಪಾಟೀಲರ ಜೊತೆ ಹೇಗೆ ಸಂವಾದ ನಡೆಸುವುದು ಎಂಬ ಅಳುಕೂ ಇತ್ತು. ಸಾಹಿತ್ಯ ಮತ್ತು ರಂಗ ಚಟುವಟಿಕೆಗಳ ಮೂಲಕ ದಾವಣಗೆರೆಯ ಸುತ್ತಮುತ್ತಲೂ ಗೌರವಗಳಿಸಿರುವ ನನ್ನ ಸಂಗಾತಿ ಪ್ರೀತಿಯ ತಂದೆ ಬಿ.ಜಿ.ನಾಗರಾಜ್ ಮತ್ತು ಪ್ರೀತಿಯ ಸೋದರಮಾವನ ಜೊತೆ ಸೇರಿ ಹೊರಟಿದ್ದು, ಅವರು ಈ ಸಂವಾದಕ್ಕೆ ಕೊಂಡಿಯಾಗಬಹುದು ಎಂಬ ಭರವಸೆ ಸ್ವಲ್ಪ ಧೈರ್ಯಕೊಟ್ಟಿತ್ತು.
ಮಳೆಗಾಲದ ಮೋಡಗಳ ಸುರತದಿಂದ ತೊಯ್ದ ಹೊಲಗದ್ದೆಗಳು, ಆಧುನಿಕಗೊಳ್ಳುತ್ತಿರುವ ಕೆಲ ರೈತರ ಸಾಹಸದಿಂದ ಮಲೆನಾಡಿನವರೊಡನೆ ಸ್ಪರ್ಧಿಸುವಂತೆ ವಾಣಿಜ್ಯ ಬೆಳೆಯಾಗಿ ಬೆಳೆದು ನಿಂತಿದ್ದ ಅಡಕೆ ತೋಟಗಳು, ಸೂಳೆಯೊಬ್ಬಳು ತನ್ನ ಗಳಿಕೆಯಿಂದ ಕಟ್ಟಿಸಿದ್ದು ಎಂಬ ಐತಿಹ್ಯದ `ಸೂಳೆಕೆರೆ' ಎಲ್ಲವನ್ನೂ ನೋಡಿಕೊಂಡು ಮಲ್ಲಾಡಿಹಳ್ಳಿಯ ಪಾಟೀಲರ ಮನೆ ಸೇರುವ ಹೊತ್ತಿಗೆ ತಡವಾಗಿತ್ತು. ಮನೆಯ ಗೇಟಿನಲ್ಲೇ ನಗುತ್ತಾ ಸ್ವಾಗತಿಸಿದ ಪಾಟೀಲರು 'ನಾವು ಸಹ ಇದೀಗ ತಾನೆ ಕಾರ್ಯಕ್ರಮವೊಂದನ್ನು ಮುಗಿಸಿಬಂದೆವು' ಎಂದು ಹೇಳಿದ ಮಾತು ನಮ್ಮನ್ನು ಸಮಾಧಾನಮಾಡಲೆಂದೇ ಇತ್ತೋ?
ಪಾಟೀಲರ ಗ್ರಹಿಕೆಯಲ್ಲಿ 'ನವ್ಯೋತ್ತರ'ದ ಲಕ್ಷಣಗಳನ್ನು ಹೊಂದಿರುವಂಥದ್ದು (ಈ ಮಾತನ್ನು ಇನ್ನಷ್ಟು ವಿವರವಾಗಿ ನಂತರ ವಿವರಿಸುವೆ) ಎಂದು ಹೇಳಬಹುದಾದ ಅವರ ಮನೆಯ ಪುಟ್ಟ ಮಹಡಿ ಕೋಣೆಗೆ ನಮ್ಮನ್ನು ಕರೆದೊಯ್ದರು. ಅಲ್ಲಿ ಕನ್ನಡದ ಇನ್ನೋರ್ವ ಬರಹಗಾರ ಚಂದ್ರಶೇಖರ್ ತಾಳ್ಯ ಸಹ ಇದ್ದರು.

ರಾಘವೇಂದ್ರ ಪಾಟೀಲ ಮತ್ತು ಚಂದ್ರಶೇಖರ ತಾಳ್ಯ ಇಬ್ಬರೂ 'ಅಲ್ಲಮ ಶರಣರ ಚಳುವಳಿಗೆ ಏಕೆ ಬಂದ?' ಎಂಬ ವಿಷಯದ ಕುರಿತು ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದ್ದ ವಿಚಾರ-ಸಂಕಿರಣದ ಕುರಿತು ಯೋಚನಾ ಮಗ್ನರಾದಂತೆ ಕಂಡಿತು. ಆ ವಿಷಯದ ಕುರಿತೇ ಅವರ ಜಿಜ್ಞಾಸೆ ಸಾಗಿತ್ತು. ಭಾರತೀಯ ಸಂಸ್ಕೃತಿ ಇತಿಹಾಸದುದ್ದಕ್ಕೂ ಅಲೌಕಿಕ-ಲೌಕಿಕ, ಮೆಟಾಫಿಸಿಕಲ್-ಮಟೀರಿಯಲ್ ಹೀಗೆ ಯಾವುದೋ ಒಂದು ಅತಿಗೆ ಹೋಗದಂತೆ ನಿರ್ಬಂಧಿಸುವ ಡಯಲೆಕ್ಟಿಕ್‍ನಿಂದ ಕೂಡಿದೆ. ಆದುದರಿಂದ ಬಸವಣ್ಣನ ನೇತೃತ್ವದಲ್ಲಿ ಅತಿ ವ್ಯವಹಾರಿಕ-ಸಾಮಾಜಿಕವಾಗಬಹುದಾಗಿದ್ದ ಚಳುವಳಿಗೆ ಅನುಭಾವದ ಮೆರುಗನ್ನು ತರಲು ಅಲ್ಲಮ ಶರಣಚಳುವಳಿಗೆ ಬಂದಿರಬಹುದು ಎಂಬುದು ಪಾಟೀಲರ ತರ್ಕವಾಗಿತ್ತು.

ರಾಜಾರಾಮ ಹೆಗಡೆಯವರ 'ಗತಕಥನ'

ಈ ಪುಸ್ತಕವನ್ನು, ಇಂಥ ಪುಸ್ತಕವನ್ನು ಕನ್ನಡಕ್ಕೆ ತಮ್ಮ ಮಾಲೆಯಿಂದ ಪ್ರಕಟಿಸಿಕೊಟ್ಟಿದ್ದಕ್ಕೆ ಪಾಟೀಲರನ್ನು ಮನಸ್ಸು ತುಂಬಿ ಅಭಿನಂದಿಸಿದೆ. ಈ ಪುಸ್ತಕದ ಬಗ್ಗೆ ಒಂದೆರಡು ಮಾತುಗಳನ್ನು ನಾನಿಲ್ಲಿ ಹೇಳಲೇಬೇಕು. ನಾನು ಚರಿತ್ರೆಯ ಸಂಶೋಧಕನಲ್ಲ. ಆದರೆ ಹಲವು ಬಗೆಯ ಧೋರಣೆಗಳಿಂದ ಹೊಮ್ಮುವ ಭಾರತದ ಚರಿತ್ರೆಗೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ಓದಿದ್ದೇನೆ ಮತ್ತು ಯಾವ ಪುಸ್ತಕ, ಯಾವ ಲೇಖನ ಯಾವ ನೆಲೆಯಿಂದ ರಚಿಸಲ್ಪಟ್ಟಿದೆ ಎಂದು ಸ್ಥೂಲವಾಗಿಯಾದರೂ ಗ್ರಹಿಸಬಲ್ಲೆನು ಎಂಬ ಧೈರ್ಯವಿರುವುದರಿಂದ, ಈ ಒಂದು ಮಾತನ್ನು ಧೈರ್ಯವಾಗಿ ಹೇಳಬಲ್ಲೆ. 'ಗತಕಥನ' ಕನ್ನಡ ಸಾರಸ್ವತಲೋಕಕ್ಕೆ ಸಂದಿರುವ ವಿಶೇಷ ಪುಸ್ತಕ. ವರ್ತಮಾನದಲ್ಲಿ ನಿಂತು ಭವಿಷ್ಯದ ತಮ್ಮ ತಮ್ಮ ಏಜೆಂಡಾಗಾಗಿ 'ಭೂತ'ವನ್ನು ನಿರ್ಮಿಸಿಕೊಡುವ ದೇಶದ ಎಲ್ಲಾ ಪ್ರಮುಖ ಮನಸ್ಸಿನ ಧಾರೆಗಳನ್ನು, ಇತಿಹಾಸದಲ್ಲಿ ಕಥನವನ್ನೂ, ಕಥನದಲ್ಲಿ ಇತಿಹಾಸವನ್ನೂ ಹುಡುಕುತ್ತಾ ಸಾಗುವ ರಾಜಾರಾಮ ಹೆಗಡೆಯವರ ಬರವಣಿಗೆ ಸಮಚಿತ್ತದ, ಪ್ರಬುದ್ಧತೆಯನ್ನು ಮೆರೆಯುತ್ತಾ ಪ್ರಚೋದನಾಕಾರಿಯಲ್ಲದ ರೋಮಾಂಚನಕಾರಿ ಆಗಿದೆ. ಜೊತೆಗೆ ಮಾಸ್ತಿ ಅವರ ಚಿಕವೀರರಾಜೇಂದ್ರ ವಸಾಹತುಶಾಹಿಗೆ ಪ್ರತಿಕ್ರಿಯಿಸಿದ ಬಗೆ, ಕಲೆಯ ಬಗ್ಗೆ ಶಿವರಾಮ ಕಾರಂತರ ಧೋರಣೆಗಳು, ಭೈರಪ್ಪನವರ 'ಸಾರ್ಥ' ಸಂಘಪರಿವಾರದ ಆಸಕ್ತಿಗೆ ಬಲಿಯಾಗಬಹುದಾದ ಅಪಾಯ ಇವೆಲ್ಲವನ್ನೂ ಗಹನವಾಗಿ ವಿವರಿಸುವ ಲೇಖನಗಳು ಈ ಕೃತಿಯಲ್ಲಿವೆ.

[ಇತಿಹಾಸದ ಸಂಶೋಧಕರಾಗಿರುವ ರಾಜಾರಾಮ ಹೆಗಡೆ, ವಿಶೇಷತಃ 'ವಸಾಹತುಶಾಹಿ ಮತ್ತು ರಾಷ್ಟ್ರೀಯತೆ' ಈ ವಿಷಯದ ಕುರಿತು ಆಳವಾಗಿ ಚಿಂತಿಸಿದವರು. ಅವರ ಇನ್ನೊಂದು ಕೃತಿ 'ಲೌಕಿಕ-ಅಲೌಕಿಕ' ಸಹ ಮಲ್ಲಾಡಿಹಳ್ಳಿಯ ಆನಂದಕಂದ ಪ್ರಕಾಶನದ ಪ್ರಕಟಣೆ.]

ಸಾಹಿತ್ಯ ಮತ್ತು ತಂತ್ರಜ್ಞಾನ ಕ್ಷೇತ್ರಗಳ ನಡುವೆ ಸಂವಾದ

`ತಂತ್ರಜ್ಞಾನದ ಕ್ಷೇತ್ರದಲ್ಲಿರುವ ನಿಮಗೆ ನಮ್ಮ ಸಾಹಿತ್ಯ ಲೋಕದಿಂದ ಬರುವ ಟೀಕೆಗಳ ಬಗ್ಗೆ ಏನನ್ನಿಸುತ್ತದೆ? ಬೇಸರವಿದೆಯೆ?' ಎಂದು ಲೇಖಕ ತಾಳ್ಯ ಪ್ರಶ್ನಿಸಿದರು.

`ಹೌದು ಸ್ವಲ್ಪ ಬೇಸರವಿದೆ. ಈ ಎರಡೂ ಕ್ಷೇತ್ರದ ನಡುವೆ ನಿಜವಾದ ಆರೋಗ್ಯಕರ ಸಂವಾದ ನಡೆಯದೇ ಇರುವಂಥ ಸ್ಥಿತಿ ಉಂಟಾಗಿದೆ. ಇದು ಅಷ್ಟು ಸರಿಯಲ್ಲ ಎಂದು ನನಗನ್ನಿಸುತ್ತದೆ' ಎಂದು ಹೇಳಿದೆ. ಹಾಗೆ ಹೇಳಿದ ನಂತರ ನಮ್ಮ ಚರ್ಚೆ ಬೇರೆಕಡೆಗೆ ಹರಿಯಿತಾದರೂ, ನಾನು ಹೇಳದೇ ಉಳಿದ ಮಾತುಗಳು ಇವು:

'ಎರಡು ಕಡೆಯಿಂದ ಅತಿರೇಕದ ನಿಲುವುಗಳು ಹೊರಟಾಗ ಇವೆರಡರ ನಡುವೆ ಸಂವಾದ ಸಾಧ್ಯವಾಗುವುದಿಲ್ಲ. ಅದೇ ರೀತಿ ಒಬ್ಬರು ಇನ್ನೊಬ್ಬರ ಕುರಿತು ವಸ್ತುನಿಷ್ಠವಾಗಿ ವಿಮರ್ಶಿಸದೇ ಬರೀ ಲಘುವಾದ ಧೋರಣೆಯ ಮಾತುಗಳನ್ನಾಡುತ್ತಿದ್ದರೂ ಯಾವುದೇ ರಚನಾತ್ಮಕ ಪ್ರಗತಿ ಆಗುವುದಿಲ್ಲ. ಸಾಹಿತ್ಯ ಲೋಕದ ಧೀಮಂತರು ತಂತ್ರಜ್ಞಾನದ ಉದ್ಯಮಿಗಳ ಬಗ್ಗೆ ಆ ಉದ್ಯಮ ಬೇಡುವ ಅಪಾರ ಸೃಜನಶೀಲತೆ, ಸಾಮೂಹಿಕ ಪರಿಶ್ರಮ, ವ್ಯವಹಾರ ಕುಶಲತೆ ಇವೆಲ್ಲವನ್ನೂ ಮರೆತು ಅವರ ಬಗ್ಗೆ, ಉದ್ಯಮದ ಬಗ್ಗೆ ಹಗುರವಾಗಿ ಗೇಲಿಮಾಡುವುದು ಸರಿಯಲ್ಲ. ಹಾಗೆ ಮಾಡುವುದರ ಮೂಲಕ ತಂತ್ರಜ್ಞಾನ ಕ್ಷೇತ್ರದ ಕುರಿತು ವಸ್ತುನಿಷ್ಠ ವಿಮರ್ಶೆ ಮಾಡುವ ಶಕ್ತಿಯನ್ನೂ, ಮತ್ತು ಅಂಥ ಟೀಕೆಗೆ ಆರೋಗ್ಯಕರ ಸ್ಪಂದನೆ, ಪ್ರತಿಕ್ರಿಯೆಗಳನ್ನು ಪಡೆಯುವ ಯೋಗ್ಯತೆಯನ್ನೂ, ಸಾಧ್ಯತೆಯನ್ನೂ ಸಾಹಿತ್ಯಲೋಕ ಕಳೆದುಕೊಳ್ಳುತ್ತದೆ. ಅದೇ ರೀತಿ ತಂತ್ರಜ್ಞಾನದ ಉದ್ಯಮಿಗಳು ತಮಗಿರುವ ಬಂಡವಾಳ ಶಕ್ತಿ, ಆಧುನಿಕ ಜ್ಞಾನ ಇವುಗಳನ್ನು ಕನ್ನಡಕ್ಕಾಗಿ ವಿನಿಯೋಗಿಸದೇ ತಾವು ದೇವಲೋಕ್ಕೆ ಸೇರಿದವರಂತೆ ಕರ್ನಾಟಕ ಸರ್ಕಾರದೊಡನೆ, ಜನಸಾಮಾನ್ಯರೊಡನೆ ನಡೆದುಕೊಳ್ಳುವುದೂ ಸಹ ಅಂಥದೇ ನಕಾರಾತ್ಮಕ ನಡುವಳಿಕೆಯಾಗುತ್ತದೆ. (ಅಲ್ಲದೇ ತಂತ್ರಜ್ಞಾನಕ್ಕೆ ಕನ್ನಡ ಅಳವಡಿಸುವುದರಲ್ಲಿ ಹೆಚ್ಚಿನ ಗದ್ದಲವಿಲ್ಲದೇ ಕ್ರೀಯಾಶೀಲರಾಗಿರುವವರು ಶಕ್ತಿ,ಪ್ರಭಾವ ಇರುವ ಇವರಾರೂ ಅಲ್ಲ. ಪವನಜ, ವಾಸು, ಪ್ರೊ. ಯೋಗಾನಂದ, ಶೇಖರಪೂರ್ಣ ಇಂಥ ಸಾಮಾನ್ಯರಲ್ಲೇ ಅನನ್ಯವಾಗಿರುವ ತಂಡಗಳು). ಇವೊತ್ತಿನ ಸಂದರ್ಭದಲ್ಲಿ ಇವೆರಡೂ ಕ್ಷೇತ್ರಗಳ ನಡುವಿನ ಆರೋಗ್ಯಕರ ಸಂವಾದ ಇಂದಿನ ತುರ್ತು ಮತ್ತು ಅಗತ್ಯವಾಗಿದೆ '.

'ನವ್ಯೋತ್ತರ'ದ ಲಕ್ಷಣ

ಪಾಟೀಲರಿಗೆ ನಿಮ್ಮ ಗ್ರಹಿಕೆಯಲ್ಲಿ 'ನವ್ಯೋತ್ತರ'ದ ಲಕ್ಷಣಗಳು ಎಂದರೆ ಯಾವವು? ಎಂದು ಕೇಳಿದೆ. 'ಬರೀ ಎಡಪಂಥೀಯ ದೃಷ್ಟಿಕೋಣದಿಂದಲೇ ಆಗಲಿ, ಬರೀ ಬಲಪಂಥೀಯ ದೃಷ್ಟಿಕೋಣದಿಂದಲೇ ಆಗಲಿ ಲೋಕವನ್ನು ಗ್ರಹಿಸುವುದು ಸಾಧ್ಯವಿಲ್ಲ. ಸಂಘರ್ಷವನ್ನಾಗಲಿ, ಭಾವುಕತೆಯನ್ನೇ ಆಗಲಿ, ಲೌಕಿಕ, ಸಾಮಾಜಿಕ, ಅಲೌಕಿಕಗಳನ್ನು ಅತಿಗೆ ಒಯ್ಯುವುದಿಲ್ಲ. ಅದೇ ರೀತಿ ಪರಿಸರ ಮತ್ತು ಪ್ರಜ್ಞೆಯ ದೃಷ್ಟಿಯಿಂದ ದೇಸೀ ಮತ್ತು ಆಧುನಿಕತೆಗಳೆರಡು ವಿಪರೀತವಾಗಿರುವುದಿಲ್ಲ. ಈ ರೀತಿ ಎಲ್ಲವೂ ಹದವಾಗಿ ಬೆರೆತಿರುವುದೇ ನವ್ಯೋತ್ತರ' ಎಂದೆನ್ನುತ್ತಾ ಪಾಟೀಲರು 'ದೇಸೀ ಮತ್ತು ಆಧುನಿಕತೆಯಲ್ಲಿ ದೇಸಿಗೆ ಹೆಚ್ಚು ಒತ್ತು' ಎಂದರು (ಮಲ್ಲಾಡಿಹಳ್ಳಿಯ ಪಾಟೀಲರ ಮನೆಯ ಸ್ವರೂಪವನ್ನು ಈ ಅರ್ಥದಲ್ಲಿ ಗ್ರಹಿಸಬಹುದು!).
ಆದರೆ ವಿವೇಕ ಶಾನಭಾಗರ ಕಥನದಲ್ಲಿ 'ಹುಲಿಸವಾರಿ'ಯ ನಂತರದ ಬರವಣಿಗೆಯಲ್ಲಿ ಪ್ರಜ್ಞೆ ಮತ್ತು ಪರಿಸರದ ದೃಷ್ಟಿಯಿಂದ ಆಧುನಿಕಕ್ಕೇ ಹೆಚ್ಚು ಒತ್ತಿದೆಯಲ್ಲವೆ? ಅಥವಾ ವಿವೇಕರ 'ಇನ್ನೂ ಒಂದು' ಕೃತಿಯ ಸ್ವಾತಿ ಒಂದು ಕಡೆ ಹೇಳುವಂತೆ 'ವಾದಕ್ಕಾಗಿ ಅಂಶಗಳನ್ನು ಹೆಕ್ಕಿತೆಗೆಯುತ್ತೇವೆ' ಎಂಬ ಅರಾಜಕತೆಯ ದೃಷ್ಟಿಯೇ ನವ್ಯೋತ್ತರದ ಲಕ್ಷಣವೆ? ಎಂಬ ಅನುಮಾನವೂ ಆಗಾಗ ಕಾಡಿದ್ದಿದೆ. ಆದರೆ ತೇಜಸ್ವಿ, ಪಾಟೀಲರು, ಶಾನಭಾಗರು, ಸತ್ಯನಾರಾಯಣ ಎಲ್ಲರ ಕೃತಿಗಳನ್ನು ಸ್ವಲ್ಪ ದೂರದಲ್ಲಿ ನಿಂತು ಸಮಗ್ರವಾಗಿ ಗ್ರಹಿಸಿದಾಗ ಹಾಗೇನೂ ಇಲ್ಲ ಎಂದು ಸಮಾಧಾನವಾಗುತ್ತದೆ. ಸ್ಥೂಲವಾಗಿ ಹೇಳಬೇಕೆಂದರೆ 'ನವ್ಯೋತ್ತರ' ಅನ್ನೋದು ನವೋದಯ, ನವ್ಯದಂತೆ ಒಂದು ಸಮೂಹದ ಲಕ್ಷಣ ಹೊತ್ತ ಪ್ರಾಕಾರವಾಗಿ ಇನ್ನೂ ಮೈತಳೆದಿಲ್ಲ. ಬದಲಾಗಿ ಇಂದಿಗೂ ಹೆಚ್ಚಾಗಿ ಇದು ಬರಹಗಾರ-ವ್ಯಕ್ತಿ-ವ್ಯಕ್ತಿತ್ವವನ್ನು ಅವಲಂಬಿಸಿ ನಿರ್ದಿಷ್ಟವಾಗಿದೆ. ಆದರೆ ಸುದೈವವಶಾತ್ ಕನ್ನಡ ಸಾಹಿತ್ಯ ಯಾವ ಕಾಲಘಟ್ಟದಲ್ಲೂ ಸಮುದಾಯದ ಸಾಂಸ್ಕೃತಿಕ ಕಾಳಜಿಯ ಬಗ್ಗೆ ತನ್ನ ಜವಾಬ್ದಾರಿಯನ್ನು ಕಳಚಿಕೊಳ್ಳುವಂತೆ ಅರಾಜಕವಾಗಿಲ್ಲ ಎಂದು ಹೇಳಬಹುದಾಗಿದೆ.
ನವ್ಯೋತ್ತರ ಧಾರೆ ಕನ್ನಡಸಾಹಿತ್ಯ ಈ ವರೆಗೆ ನೀಡಿದ ಸಿದ್ಧ ಆಕೃತಿಯನ್ನು ಮೀರಿ ಬೆಳೆಯುತ್ತಿದೆಯೆ? ಈ ದಿಸೆಯಲ್ಲಿ ಶಾನಭಾಗರ 'ಇನ್ನೂ ಒಂದು' ಮತ್ತು ಸತ್ಯನಾರಾಯಣ ಅವರ 'ಕಾಲಜಿಂಕೆ' ಇವುಗಳನ್ನು ಹೆಚ್ಚು ಆಸ್ಥೆಯಿಂದ ಪರಿಶೀಲಿಸುವ ಅಗತ್ಯ ಇದೆ.

ಆನಂದ ಝುಂಜರವಾಡರ ಕಾವ್ಯ

ಕೆಲವು ವರ್ಷಗಳ ಹಿಂದೆ ಆನಂದರು ಬರೆದ ಪದ್ಯವೊಂದನ್ನು ಪತ್ರಿಕೆಯೊಂದರಲ್ಲಿ ಓದಿದಂತೆ ನೆನಪು. ಪದ್ಯಮನಸ್ಸಿಗೆ ನಾಟಿತ್ತು. ಪಂಢರಪುರ, ಶಬರಿಮಲೈದಂಥ ಕ್ಷೇತ್ರಗಳಿಗೆ ಭಕ್ತರು ಬರಿಗಾಲಲ್ಲಿ ನಡೆದುಹೋಗುವ ವ್ರತಕ್ಕೆ `ದಿಂಡಿ' ಅಥವಾ 'ದಂಡಿಗೆ' ಅನ್ನುತ್ತಾರೆ. ಆಧುನಿಕತೆಯ ಸಂದರ್ಭದಲ್ಲಿ ಕೆಲವು ಸೋಗಲಾಡಿ ರಾಜಕೀಯ ಗುಂಪುಗಳು ಸಾಮೂಹಿಕ ಮೆರವಣಿಗೆ ನಡೆಸುತ್ತಾರೆ. ಇದು ಬಹಳಷ್ಟು ಸಲ ಗಾಂಧೀಜಿಯ `ದಾಂಡಿ' ಯಾತ್ರೆಯ ಅಣುಕು ನಕಲಾಗಿರುತ್ತದೆ. ಬರೀ ಮಾಧ್ಯಮಗಳನ್ನು ಆಕರ್ಷಿಸುವ ತಂತ್ರವಾಗಿರುತ್ತದೆ. ಭಕ್ತರು ನಡೆಸುವ 'ದಿಂಡಿ'ಗೆ 'ದಾಂಡಿ'ಯ ರಾಜಕೀಯದ ಪ್ರಜ್ಞೆಯೂ ಸೇರಬೇಕು, ಸೋಗಲಾಡಿಗಳು ನಡೆಸುವ 'ದಾಂಡಿ'ಗೆ 'ದಿಂಡಿ'ಯ ಭಕ್ತಿ ಸೇರಲಿ ಎಂಬ ಆಶಯದ ಪದ್ಯವದು. ಗಾಂಧೀಜಿಯ ಉಪ್ಪಿನ ಸತ್ಯಾಗ್ರಹದ 'ದಾಂಡಿ' ಯಾತ್ರೆ 'ದಿಂಡಿ'ಯೂ ಆಗಿತ್ತು ಎಂಬ ಕವಿಯ ಅರಿವಿನ ಹಿನ್ನೆಲೆಯಲ್ಲಿ ಆ ಪದ್ಯ ಮೂಡಿತ್ತು. ಅನಿವಾಸಿಯ ವನವಾಸ ಕಳೆದು ನಿವಾಸಿಯಾಗಿ 'ದೇಶಕಾಲ'ದ ಎರಡನೇ ಸಂಚಿಕೆಯನ್ನು ಕೈಗೆತ್ತಿಕೊಂಡಾಗ ನನ್ನ ಗಮನ ಸೆಳೆದದ್ದು ಅದೇ ಕವಿಗಳ 'ಶೂರ್ಪಾಲಿ' ಪದ್ಯ. ಪದ್ಯದ 'ಸ್ತಬ್ಧ ಚಿತ್ರಗಳು' 'ಶೂರ್ಪಾಲಿ'ಯ ಸಾಂಪ್ರದಾಯಿಕ ಆವರಣದಲ್ಲಿ ಆಧುನಿಕತೆ ಪ್ರವೇಶಿಸುವಾಗಿನ ತಿಕ್ಕಾಟವನ್ನು ಅನಾವರಣಗೊಳಿಸುತ್ತವೆ. ಆನಂದರ ಪ್ರತಿಭೆ ಇರುವುದು ಶಕ್ತಿಯುತ ಪ್ರತಿಮೆಗಳನ್ನು ಕೆತ್ತುವುದರಲ್ಲಿ. ಆ ಶಕ್ತಿಯ ಉತ್ತುಂಗ ಶಿಖರ ನನಗೆ ಕಂಡುಬಂದಿದ್ದು 'ಕೀರ್ತಿ' ಸ್ಟಾಲಿನ ಗಿಡಮೂಲಿಕೆಗಳು ಪದ್ಯದಲ್ಲಿ. ಈ ಪದ್ಯವನ್ನು ಜೋರಾಗಿ ಗಟ್ಟಿದನಿಯಲ್ಲಿ ಓದುವುದೇ ಒಂದು ಅಪೂರ್ವ ರೋಚಕ ಅನುಭವ. ಕೀರ್ತಿನಾಥ ಕುರ್ತಕೋಟಿಯವರು ತಮ್ಮ ಸಾಹಿತ್ಯ ಬದುಕಿನುದ್ದಕ್ಕೂ ದೇಶೀ ಸಂಸ್ಕೃತಿಯ ಪರವಾಗಿ ನಿಂತು ಪಾಶ್ಚಾತ್ಯ ಪೀಡಿತರ ಜೊತೆ ಸಂಘರ್ಷದ ವಿರೋಧವಾಗಿ ಸಾಮರಸ್ಯದ ಪರವಾಗಿ ಹೋರಾಡಿದವರು. ಪದ್ಯದಲ್ಲಿ ಕವಿ ಆನಂದರು ಕೀರ್ತಿಯನ್ನು ಆಧುನಿಕರ ಸಂಘರ್ಷದ ಹಲವು ಗಾಯಗಳಿಗೆ ತಕ್ಕ ಮೂಲಿಕೆಯ ಔಷಧಿಗಳನ್ನು ಬಲ್ಲ ಓರ್ವ ಆಯುರ್ವೇದ ಪಂಡಿತನಂತೆ ಕಾಣುತ್ತಾರೆ. ಕೀರ್ತಿ ಅಂಥ 'ನವ್ಯ'ರಿಗೆ ಸರಿಯಾದ ಸಮಯಕ್ಕೆ ಸರಿಯಾದ ಔಷಧ ಕೊಟ್ಟಿದ್ದರೆ ಅಂಥವರಿಂದ ಮುಖ ಕಿವುಚಿ, ಹುಬ್ಬುಗಂಟಿಕ್ಕಿ ಓದಬಹುದಾದ ಪದ್ಯಗಳ ಬದಲು ಕುಲುಕುಲು ನಗೆಯ ಪದ್ಯಗಳು ಹುಟ್ಟಬಹುದಿತ್ತಂತೆ. ಪ್ರತಿಮೆಗಳನ್ನು ನೀವೇ ಓದಿ ಅನುಭವಿಸಿ (ಕುರ್ತಕೋಟಿ ಅವರ, ಆನಂದ ಝುಂಜರವಾಡರ ಸಾಹಿತ್ಯಿಕ ನಿಲುವುಗಳನ್ನು ಒಪ್ಪದೇಯೂ ಇಲ್ಲಿರುವ ಪ್ರತಿಮಾ ಶಕ್ತಿಗೆ ತಲೆದೂಗಲೇಬೇಕಾದ ಪದ್ಯವಿದು):

ಪಸೆ ತೀರಿದ ಶಬ್ದಯೋನಿಗೆ
ಸಿದ್ಧಾಂತಗಳ ಮಸಾಜುಮಾಡಿ
ಮೈನರೆಯುವ ಮೊದಲೇ
ಮೇಲೆಹಾರಲು ಮರಿಗಳ ಹೆರಲು,
ಹುರುಪಳಿಸುತ್ತಿದ್ದ ಜನಾಂಗದ
ಹೆರಿಗೆ-ಕೋಣೆಯಲ್ಲಿ ನೀವೂ ಇದ್ದೀರಿ
ಯುಗಧರ್ಮದ ಸೂಲಗಿತ್ತಿಯಾಗಿ,
ಅಸಲೀ ಅನುಭವದ ಅಗ್ಗಿಷ್ಟಿಕೆಯ
ಕಾವು ಕೊಟ್ಟುಕೊಳ್ಳಲಾಗದೇ,
ಕೂಸು-ಬಾಣಂತಿಗೆ ಕಾಸುವ-ಕಟ್ಟುವ ಆರೈಕೆಯಾಗದೇ,
ಜೀವನ ಸತ್ವ ತೇದು ಸೀಪಿಸುವವರಿಲ್ಲದೇ,
ಹೊಕ್ಕುಳ-ಬಳ್ಳಿ ಕತ್ತರಿಸಿಕೊಂಡು
ರಕ್ತಮಯವಾಗಿದ್ದ ಆ-ರಕ್ತ ಕಣ್ಣುಗಳನ್ನೂ
ಅನುರಕ್ತಿಯಿಂದ ಸಹಿಸಿದಿರಿ.

ಇರಬೇಕಾದಷ್ಟು ಕಾಲ ಕತ್ತಲೆಯಲ್ಲೇ ಇರಬೇಕೆಂಬ ಪಾಠ ಕಲಿಸಿ,
ಸಕಾಲದಲ್ಲಿ ಗುಡಿಗೆ ಕರೆದುಕೊಂಡು ಹೋಗಿ,
ಬಿಂಬದರ್ಶನ ಮಾಡಿಸಿ,
ರಕ್ತ-ಹಾಲು, ಮಲ-ಮೂತ್ರ, ಭಾವ-ವಿಚಾರ,
ಎಲ್ಲಅಡಗಿದ ಅಗುಳಿನ ವಿಶ್ವರೂಪ ಕಾಣುವ ಕಣ್ಣುಗಳ ಕರುಣಿಸಿ,
ಅನ್ನಪ್ರಾಶನ ಮಾಡಿಸಿದ್ದರೆ,
ನಿಂತ ತೊಟ್ಟಿಲು ತೂಗಿ,
ಮುತ್ತಿನ ಕುಂಚಿಗೆ ಕಟ್ಟಿ,
ಕುಸಿರೆಳ್ಳಿನ ಕಿರೀಟವಿಟ್ಟು,
ವಿಕರಾಳ ಮುಖದ ಕೋಡು-ಕೋರೆಗಳನ್ನೂ ಮುದ್ದಿಟ್ಟು,
ಕುಂಡಲಿ-ಹಾಕಿ-ಜಾತಕ ಬರೆದು-
ಬೆಚ್ಚಗಿನ ಬರಹಗಳ ಲೋಭಾನ ಹೊಗೆ ಕೊಟ್ಟು,
ನೀವು ತೋರಿದ ಕಕ್ಕುಲಾತಿಗೆ
ಒಂದಾದರೂ ಹೊಸ ಕವಿತೆ ಕುಲುಕುಲು ನಗುತ್ತಿತ್ತೋ ಏನೋ

ಪೋಸ್ಟ್ ಕೊಲೊನಿಯಲ್ ಧೋರಣೆಯವರ ಕುರಿತು ಆನಂದರ ವ್ಯಂಗ್ಯದ ಧ್ವನಿ ಹೀಗಿದೆ:

ಹೊಸ ಮಕ್ಕಳು ಹೇಸಿಕೊಳ್ಳುತ್ತವೆ
ನೋಯದೇ ನುರಿಸುವ ಸರ್ವತಂತ್ರ
ಸ್ವತಂತ್ರ ಹಲ್ಲಿನ ಹೊಳಪು ಕಂಡು,
ಒಳಗೊಳಗೇ ಭಯವೂ ಇದ್ದೀತು,
ಪ್ರತ್ಯಸ್ತ್ರಗಳ ಪ್ರಯೋಗ ತಿಳಿಯದೆ
ಶಾಸ್ತ್ರಾಸ್ತ್ರಗಳ ಪೆಟ್ಟು ಉಂಡು,
ಓಝೋನ್ ಪೊರೆ-ಹರಿದು
ಧೋ ಧೋ ಬೆಂಕಿ-ಮಳೆ ಸುರಿದು
ಮುಳುಗಡೇಯಾಗುತ್ತಿರುವ ಮೂರನೇ ಜಗತ್ತಿನ
ಸಂತ್ರಸ್ತರ ಸೃಜನ ನಗರದ ಹೊರವಲಯದ
ಹೊಸ ಹೊಸ ಕಾಲನಿಗಳಲ್ಲಿ `ಪಾದಯಾತ್ರೆ' ಮುಗಿಸಿ,
ಮರಳಿಪೂರ್ವ-ಮೀಮಾಂಸೆಯ ಸಂಪ್ರೋಕ್ಷಣೆ ಮಾಡಿಕೊಳ್ಳುತ್ತಿದ್ದಾರೇನೋ.

ಕೀರ್ತಿ ಕುರಿತು ಆನಂದರ ತಕರಾರೊಂದು ಕೂಡಾ ಆಸಕ್ತಿಕರವಾಗಿದೆ:

ಎಲ್ಲೋ ಬೇರು ಬಿಟ್ಟು,
ಇಲ್ಲಿ ಬಾಲ ಚಾಚಿಎಲ್ಲಿಯವರೂ ಅಲ್ಲದಿದ್ದರೂ
ಎಲ್ಲೆಡೆಗೂ ಜಿಗಿದಾಡುವವರ"ನಖ ಸ್ತುತಿ"
ಏಕೆ ಇಷ್ಟುದ್ದ ಬರೆದಿರಿ?

ಕುರ್ತಕೋಟಿ ಅವರನ್ನು ಕುರಿತು ಇಂಥ ರೋಮಾಂಚಕಾರಿ ಪದ್ಯ ಕೊಟ್ಟ ಆನಂದರಿಗೆ ಅಭಿನಂದನೆಗಳು. ಆದರೆ ಆನಂದರ ಹಲವಾರು ಪದ್ಯಗಳು ಕನ್ನಡ ಕಾವ್ಯಪರಂಪರೆ ಈಗಾಗಲೇ ದತ್ತಮಾಡಿರುವ ಸಿದ್ಧ ಆಕೃತಿಗಳಲ್ಲೇ ಉಸಿರಾಡುತ್ತವೆ ಎಂದು ನನಗೆ ಕೊಂಚ ಆತಂಕವಿದೆ. ಅಂದರೆ ದೇಸಿ-ಆಧುನಿಕತೆಯ ಆಕರ್ಷಣೆ, ವಿಕರ್ಷಣೆ, ಸಂಘರ್ಷ ಈ ಕುರಿತು ಬಳಸುವ ಸಲಕರಣೆಗಳು. ಮತ್ತು ಕವಿಯ ಒಲವು-ನಿಲುವು ಸಹ ದೇಶೀ ಸಾಂಸ್ಕೃತಿಕವಾದಕ್ಕೆ ಹತ್ತಿರವಾಗಿದೆ ಎಂಬುದೂ ಸ್ಪಷ್ಟವಿದೆ. ಪರ್ಯಾಯವಾಗಿ ಹೊಸಕಾವ್ಯ ಬರೆಯುತ್ತಿರುವ ಮಂಜುನಾಥ್ ಸೇರಿದಂತೆ ಇತರ ಹಲವರು ನಡೆಸುತ್ತಿರುವ ಪ್ರಯೋಗಗಳು ಪ್ರಜ್ಞೆ ಮತ್ತು ಆಕೃತಿಯ ದೃಷ್ಟಿಯಿಂದ ಹೆಚ್ಚು ಉಲ್ಲಾಸಕರವಾಗಿವೆ. ಉದಾಹರಣೆಗೆ ಮಂಜುನಾಥರ ಪದ್ಯಗಳಲ್ಲಿ ದೇಸೀ ಅನುಭಾವದ ಸೆಳೆತವಿದ್ದರೂ, ಆ ಅನುಭಾವ, ದೇಸೀ-ಆಧುನಿಕತೆ ಎಂಬ ರಾಜಕೀಯದ ಗೊಡವೆಗೆ ಹೋಗದೆ ಎಲ್ಲವನ್ನೂ ಒಳಗೊಳ್ಳುತ್ತಾ ತನ್ನದೇ ಪ್ರಪಂಚವನ್ನು ಸೃಷ್ಟಿಸಿಕೊಳ್ಳುತ್ತದೆ. ಆನಂದರ ಪದ್ಯಗಳು ಬಹುಶಃ ಅವರ ತಾತ್ವಿಕ ಚೌಕಟ್ಟಿನ ಮಿತಿಯಲ್ಲಿ ಹಾಗಿರುವುದು ಅನಿವಾರ್ಯವೇನೋ.

[ಆನಂದ ಝುಂಜರವಾಡ ಮುಧೋಳದಲ್ಲಿ ನೆಲೆಸಿರುವ ಕವಿ. ಅವರ 'ದಿಂಡಿ ಮತ್ತು ದಾಂಡಿ' ಕವನಸಂಕಲನ ಆನಂದಕಂದ ಪ್ರಕಾಶನ, ಮಲ್ಲಾಡಿಹಳ್ಳಿಯಿಂದ ಪ್ರಕಟವಾಗಿದೆ. ]


['ಮಾಯಿಯ ಮುಖಗಳು', 'ದೇಸಗತಿ' ಕಥಾಸಂಕಲನಗಳು, 'ತೇರು' ಕಾದಂಬರಿ, 'ವಾಗ್ವಾದ' ಬಿಡಿಲೇಖನಗಳ ಸಂಗ್ರಹ, 'ಸಂವಾದ' ಸಾಹಿತ್ಯಕ್ಕೆ ಸಂಬಂಧಿಸಿದ ಸಂಚಿಕೆ ಇವು ರಾಘವೇಂದ್ರ ಪಾಟೀಲರ ಸಾಹಿತ್ಯ ಸೃಷ್ಟಿ.]

ಮಲ್ಲಾಡಿಹಳ್ಳಿಯಿಂದ ಮರಳಿ ಬರುವಾಗ ನಮಗೆ ಅದೊಂದು ಸಾರ್ಥಕ ಭಾವದ ಸಂಜೆ. ಅಂದ ಹಾಗೆ ನನಗೆ ಮತ್ತು ನನ್ನ ಸಂಗಾತಿ ಪ್ರೀತಿಗೆ ಹೊಸ `ಜೀವ' ಕೊಡಲೆಂದು ಕಾದು ಕೂತಿದ್ದ ಸಮಯ ಬಂದೇ ಬಿಟ್ಟಿತು. ೨೬ ರ ಆಗಸ್ಟ್,ಶನಿವಾರ ಗೌರಿ ಹಬ್ಬದ ದಿನದಂದು ನಮಗೆ 'ಗೌರಿ' ಹುಟ್ಟಿದಳು.

Wednesday, May 17, 2006

ಕಲಾಪ್ರತಿಮೆಗಳಾಗಿ ಗಣಿತಜ್ಞರು

ಈ ಬಾರಿಯ `ಅಗಸೆಯ ಅಂಗಳ'ದಲ್ಲಿ ವಿನಾಯಕರು ರಾಬರ್ಟ್ ಮುಸಿಲ್ ಎಂಬ ಜರ್ಮನ್ ಲೇಖಕ `ಗಣಿತಜ್ಞ'ನ ಬಗ್ಗೆ ೧೯೧೩ರಲ್ಲಿಯೇ ಬರೆದ ಲೇಖನವೊಂದರ ಆಂಗ್ಲ ಆವೃತಿಯ ಸಮರ್ಥ ಕನ್ನಡಾನುವಾದ ಮಾಡಿದ್ದಾರೆ. ಯಂತ್ರಯುಗದ ಗಣಿತಜ್ಞನ ಸ್ಥಿತಿಯ ಬಗ್ಗೆ ಮುಸಿಲ್ ಹೇಳಿರುವ ಮಾತುಗಳು ಇಂದು ಹೆಚ್ಚು ಪ್ರಸ್ತುತವಾಗಿವೆ. ಆಮೂರ್ತ ಮತ್ತು ಸೌಂದರ್ಯ ಪ್ರಜ್ಞೆಯ ಗಣಿತಜ್ಞ ಇಂದು ಹೆಚ್ಚು ಹೆಚ್ಚು ಪ್ರಭುತ್ವ ಮತ್ತು ವಿನಾಶಕಾರಿ ತಂತ್ರಜ್ಞಾನದ ಬಂದಿಯಾಗದಂತೆ ತಪ್ಪಿಸಿಕೊಳ್ಳಲು ಹಿಂದಿಗಿಂತ ಹೆಚ್ಚು ಕಷ್ಟಪಡಬೇಕಾಗಿದೆ. ಈ ದಿನಗಳಲ್ಲಿ ಆತನಿಗೆ `ಮುಕ್ತಿ' ಅಷ್ಟು ಸುಲಭವಲ್ಲ.

ತಾನು ಸೃಷ್ಟಿಸಿದ ಗಣಿತವೆಲ್ಲವೂ `ಶುದ್ಧ'ವಾಗಿ ಉಳಿಯಬೇಕೆಂದು ಪರಿತಪಿಸಿದ್ದ, ತನ್ನದೇ ರೀತಿಯಲ್ಲಿ ಮಡಿವಂತನಾಗಿದ್ದ, ಮಡಿವಂತ ರಾಮನುಜನ್‍ನ ಬಂಟನಾಗಿದ್ದ, ಗುರುವಾಗಿದ್ದ, ಪೋಷಕನಾಗಿದ್ದ
ಜಿ.ಎಚ್. ಹಾರ್ಡಿ `ನಂಬರ್ ಥಿಯರಿ', ಅದು ಷ್ಟೊಂದು ಹೈ ಪ್ರೊಫೈಲ್ ಶಾಖೆಯಲ್ಲ ಎಂದು ಭಾವಿಸುವವರಿಗೆ ಪ್ರತಿಯಾಗಿ, ಆ ಶಾಖೆಯ ಕುರಿತು ಹೇಳುತ್ತಿದ್ದನಂತೆ (ಏ ಮ್ಯಾಥೆಮೇಟಿಶಿಯನ್ಸ್ ಅಪಾಲಜಿ, ೧೯೪೦): "ಗಾಸ್ ಮತ್ತು ಅವನಂಥ ಕುಬ್ಜ ಜಾತಿಯ ಗಣಿತಜ್ಞರು ಅದೆಷ್ಟು ಪುಣ್ಯವಂತರು? ಮನುಷ್ಯನ ಸಾಮಾನ್ಯ ಚಟುವಟಿಕೆಗಳಿಂದ ಆ ಶಾಖೆಗಿರುವ ದೂರತ್ವವೇ ಅದನ್ನು ಮೃದುವಾಗಿಯೂ, ಶುದ್ಧವಾಗಿಯೂ ಉಳಿಸೀತು" ಎಂದು. ಆದರೆ ಇಂದು ವಿಷಯ ತಿಳಿದರೆ ಹಾರ್ಡಿ ತನ್ನ ಗೋರಿಯಲ್ಲೇ ಹೊರಳಾಡಬಹುದು. "ನಂಬರ್ ಥಿಯರಿ" ಸೇರಿದಂತೆ ಆತ ಸೃಷ್ಟಿಸಿರುವ ಗಣಿತವೆಲ್ಲವೂ ವಿನಾಶಕಾರಿ ಮಿಲಿಟರಿ ತಂತ್ರಜ್ಞಾನವೂ ಸೇರಿದಂತೆ ಎಲ್ಲಾ ಬಗೆಯ ಮಾನವ ಚಟುವಟಿಕೆಗೆ ಪೂರಕವಾಗುವ ತಂತ್ರಜ್ಞಾನದಲ್ಲಿ ಬಳಕೆಯಾಗಿದೆ. ಹಾರ್ಡಿಯ ಧೋರಣೆ ಅತಿರೇಕದ್ದೆನ್ನಿಸಿದರೂ, ಒಟ್ಟೂ ನಾಗರೀಕತೆಗೆ ಅದು ಆತ ಎಚ್ಚರ ಹೇಳುವ ಬಗೆಯಾಗಿತ್ತು ಎಂದೇ ನಾವು ತಿಳಿಯಬೇಕು.

ಇಂಥಾ ಹಾರ್ಡಿ(ಅಲ್ಲದೇ ಈತ ಕನ್ನಡಿ ದ್ವೇಷಿಯೂ, ಸಮಾಜವಾದಿ ಒಲವಿನವನೂ, ಕ್ರಿಕೆಟ್ ಆರಾಧಕನೂ ಆಗಿದ್ದನಂತೆ) ಮತ್ತು `ನಮ್ಮ'
ಶ್ರೀನಿವಾಸ ರಾಮನುಜನ್ ಜೋಡಿಯ ಕುರಿತ ಚಲನಚಿತ್ರವೊಂದನ್ನು (ನಮಗೆಲ್ಲಾ ಚಿರಪರಿಚಿತವಿರುವ ರಾಬರ್ಟ್ ಕೆನಿಗಲ್‍ನ ಪುಸ್ತಕ `ಮ್ಯಾನ್ ವ್ಹು ನ್ಯೂವ್ ದಿ ಇನ್ಫಿನಿಟಿ: ಅನಂತವನ್ನರಿತ ಮನುಜ' ಪುಸ್ತಕವನ್ನಾಧರಿಸಿ) ದೇವ್ ಬೆನಗಲ್ ಮತ್ತು ಸ್ಟಿಫನ್ ಫ್ರೈ ಜೋಡಿ ತಯಾರಿಸಲಿದೆಯಂತೆ. ನಿಜ ಜೀವನಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿ ಅಥವಾ ಘಟನೆ ಕುರಿತಂತೆ ಚಲನಚಿತ್ರ ಮಾಡುವುದು ಸೂಕ್ಷ್ಮ ಮತ್ತು ಜವಾಬ್ದಾರಿಯ ವಿಷಯ. ಇಲ್ಲಿ ಪ್ರಸ್ತುತ ನನ್ನ ಚರ್ಚೆ ಗಣಿತಜ್ಞರ ಕುರಿತು ಮಾತ್ರ ಮೀಸಲು ಎಂದು ಓದುಗರಿಗೆ ನೆನಪಿಸಬಯಸುತ್ತೇನೆ. ಕಲಾಕೃತಿಯೊಂದು (ಒಳ್ಳೆಯದೋ, ಕೆಟ್ಟದ್ದೋ, ಪ್ರತಿಯೊಂದು ಚಲನಚಿತ್ರವೂ ಕಲಾಕೃತಿಯೇ, `ಏ ಫಾರ್ಮ್ ಆಫ್ ಆರ್ಟ್' ಎನ್ನುವ ಅರ್ಥದಲ್ಲಿ) ನಾವು ಈಗಾಗಲೇ ನಮಗಾಗಿ ಸೃಷ್ಟಿಸಿಕೊಂಡಿರುವ ಭಾವಪ್ರಪಂಚವೊಂದನ್ನು ಒಡೆದು ಹೊಸದನ್ನು ಕಟ್ಟುವ ಪ್ರಯತ್ನಮಾಡುತ್ತದೆಯಷ್ಟೇ. ಅಂಥ ಒಡೆದು ಕಟ್ಟುವ ಅನುಭವ ನಲಿವಿನ ಜೊತೆ ಅಪಾರ ನೋವು, ಹಿಂಸೆಯನ್ನು ಉಂಟುಮಾಡುತ್ತದೆ. ಏಕೆಂದರೆ ಈಗಿರುವ `ಭಾವಚಿತ್ರ'ವು ಆ ಗಣಿತಜ್ಞನ ಬಗೆಗೆ ನಮ್ಮ ಬಳಿ ಈಗಿರುವ ಮಾಹಿತಿ ಮತ್ತು ನಮ್ಮ ವೈಯಕ್ತಿಕ ಸಂವೇದನೆಯೊಂದಿಗೆ ಬೆರೆತು ಸೃಷ್ಟಿಯಾದುದ್ದಾಗಿರುತ್ತದೆ. ಅಂಥ ಭಾವಚಿತ್ರಕ್ಕೆ ಹೊಸದೊಂದು ಚಿತ್ರ, ಅದೂ ಇನ್ನೊಬ್ಬ ವ್ಯಕ್ತಿಯು ಹೊತ್ತು ತಂದ ಮಾಹಿತಿ ಮತ್ತು ಸಂವೇದನೆಗನುಸಾರವಾಗಿ ರೂಪಿತವಾದದ್ದು, ಎದುರಾದಾಗ ಸಹಜವಾಗಿಯೇ ಸಂಕಟ-ಸಂಘರ್ಷ ಉದ್ಭವಿಸುತ್ತದೆ. ಈ ಮುಖಾಮುಖಿಯ ನಂತರ ನಮ್ಮಲ್ಲಿ ಆ ಗಣಿತಜ್ಞನ ಬಗ್ಗೆ ಇರುವ `ಭಾವಚಿತ್ರ'ವನ್ನು ನಮ್ಮ ಆಯ್ಕೆಗೆ ತಕ್ಕಂತೆ ಮಾರ್ಪಡಿಸಿಕೊಳ್ಳುತ್ತೇವೆ.

ಆದುದರಿಂದಲೇ ಗೇಂ ಥಿಯರಿಯ ಕರ್ತೃ ಜಾನ್ ನ್ಯಾಶ್‍ನ ಕುರಿತ ಹಾಲಿವುಡ್ ಚಿತ್ರ `ಬ್ಯೂಟಿಫುಲ್ ಮೈಂಡ್' (ಇದು ಸಿಲ್ವಿಯಾ ನಸರ್ ಎಂಬುವವರ ಇದೇ ಹೆಸರಿನ ಪುಸ್ತಕವನ್ನು ಆಧರಿಸಿದೆ ಎಂಬುದು ನಿಮಗೆ ತಿಳಿದಿರಲಿಕ್ಕೆ ಸಾಕು) ಬಿಡುಗಡೆಯಾದಾಗ, ಅಮೇರಿಕೆಯಲ್ಲಿ ಗಣಿತ, ತಾಂತ್ರಿಕ ವಿಷಯಗಳ ವಿದ್ಯಾರ್ಥಿಗಳಾಗಿದ್ದ ನಾವು ಕೆಲವರು ಅದನ್ನು ನೋಡದಿರಲು ನಿರ್ಧರಿಸಿದ್ದೆವು. ಅದೊಂದು ಬಗೆಯ ಎಲೈಟಿಸ್ಟ್ ಧೋರಣೆ ಎಂದು ಈಗನ್ನಿಸಿದರೂ, ನಮ್ಮ ಮನಸ್ಸಿಗೆ ಆಪ್ತವಾಗಿರುವ ಸಂಗತಿಯೊಂದು ಒಡೆದುಹೋಗದಂತೆ ರಕ್ಷಿಸಬೇಕೆನ್ನುವ ತುಡಿತವೂ ಅದರಲ್ಲಿತ್ತೆಂಬುದನ್ನೂ ಗಮನಿಸಬೇಕು.

ಹೀಗಿರುವಾಗ, ನ್ಯಾಶ್‍ಗಿಂತಲೂ ಸಂಸ್ಕೃತಿಕ ಕಾರಣಗಳಿಗಾಗಿ ಆಪ್ತನಾಗಿರುವ ನಮ್ಮ ರಾಮನುಜನ್‍ರ ಬಗ್ಗೆಯೇ ಚಿತ್ರವೊಂದು ಬರಲಿದೆ ಎಂದಾದಾಗ ಆತಂಕ ಸಹಜವಲ್ಲವೆ? ರಾಮಾನುಜನ್ ಮತ್ತು ಹಾರ್ಡಿ ಕುರಿತ ಕಥೆ-ದಂತಕಥೆಗಳನ್ನೆಲ್ಲಾ ಇಲ್ಲಿ ಬರೆಯಲು ಜಾಗವಿಲ್ಲ. ಅವೆಲ್ಲಾ ನಮಗೆ ಗೊತ್ತಿದ್ದದ್ದೆ. ನಮ್ಮ ನಮ್ಮ ಕಾಲೇಜಿನ ಕ್ಯಾಂಟೀನುಗಳಲ್ಲಿ, ಕಾಫೀ ಶಾಪುಗಳಲ್ಲಿ ಕುಳಿತು ಚರ್ಚಿಸಿದ್ದು, ಚರ್ಚಿಸಬೇಕಾದದ್ದು. ("ಮಾಸಲು ಲಕೋಟೆಯಲ್ಲಿ ಬಂದ ಲೆಕ್ಕದ ಹಾಳೆಗಳನ್ನು ಹಾರ್ಡಿ ಕೆಂಬ್ರಿಜ್‍ನ ತನ್ನ ಕೋಣೆಯಲ್ಲಿ ಕೂತು ಮೊದಲು ಅನುಮಾನದಿಂದ ನೋಡಿದ್ದು, ಆಮೇಲೆ ಲಿಟ್ಲ್ ವುಡ್‍ಗೆ ತೋರಿಸಿ ಇಬ್ಬರೂ ಖುಷಿಯಿಂದ ಹಾರಾಡಿದ್ದು. ಪೈಜಾಮಿನಲ್ಲಿ ರಾಮನುಜನ್ ಹುಳಿಗೆ ಅಂತ ಸೌತೆಕಾಯಿ ಕೊಚ್ಚುತ್ತಾ ಹಾರ್ಡಿಯ ಸವಾಲನ್ನೂ ಕೊಚ್ಚಿ ಹಾಕಿದ್ದು, ಹುಷಾರಿಲ್ಲ ಅಂತ ಜ್ವರ ಬಂದು ತಣ್ಣಗೇ ಮಲಗಿದ್ದಾಗ ಮುದುಕ ಹಾರ್ಡಿ ಬಂದು ತಾನು ಬಂದ ಟ್ಯಾಕ್ಸಿಯ ನಂಬರ್ ಅದೆಷ್ಟು ಸಪ್ಪೆ ಅಂತಾ ಗೊಣಗಿದಾಗ ಮಿಳುಗುತಣ್ಣೀರ್‍ನ ರುಚಿಯೆಲ್ಲಾ ಆ ನಂಬರ್‍ನಲ್ಲಿ ತೋರಿಸಿದ್ದು..ಇತ್ಯಾದಿ")

ಕಾಲೇಜಿನ ಎಳಸುತನದ ಉತ್ಸಾಹವನ್ನೂ ಮೀರಿ ನೋಡಿದರೆ, ಈ ವಸ್ತು ಎಂಥ ಸಾಂಸ್ಕೃತಿಕ ನಯ,ನಾಜೂಕು, ಸೂಕ್ಷ್ಮಗಳಿಂದ ತುಂಬಿದೆ ಎಂದ್ರೆ ದೇವ್ ಬೆನಗಲ್ ಮತ್ತು ಸ್ಟೀಫನ್ ಫ್ರೈ ಜೋಡಿ ಇದನ್ನು ಸಮರ್ಥವಾಗಿ ತೆರೆಗೆ ತರಬಲ್ಲರೆ ಎಂಬ ಬಗ್ಗೆ ನಮಗೆಲ್ಲಾ ಆತಂಕವಿದೆಯಲ್ಲವೆ? ನಮ್ಮ ಬಳಿ ಇರುವ ಚಿತ್ರವನ್ನು ಅವರ ಚಿತ್ರ ಯಾವ ರೀತಿ ಮಾರ್ಪಡಿಸುತ್ತದೆ? ಪೂರ್ತಿ ಒಡೆದು ಹಾಕುತ್ತದೋ? ವೈಯಕ್ತಿಕವಾಗಿ ಹೇಳುವುದಾದರೆ, ನನ್ನ ಬಳಿ ಇರುವ ಚಿತ್ರ ಮುಖ್ಯವಾಗಿ ಕೆನಿಗಲ್‍ನ ಪುಸ್ತಕ, ಹಾರ್ಡಿಯ ಪುಸ್ತಕ(ಗಣಿತಜ್ಞನ ಕ್ಷಮಾಪಣೆ, ೧೯೪೦) ಮತ್ತು ಭಾರತೀಯ ಸಾಂಸ್ಕೃತಿಕ ಮೂಲದ ಗಣಿತ ಮತ್ತು ತಾಂತ್ರಿಕ ವಿಷಯಗಳ ವಿದ್ಯಾರ್ಥಿಯಾಗಿ ಅಮೇರಿಕೆಯ ವಿಶ್ವವಿದ್ಯಾಲಯದ ಪಶ್ಚಿಮದ ಸಂಸ್ಕೃತಿಯ ಪ್ರೋಫೆಸರ್‍‍ಗಳ ಜೊತೆಗಿನ ಅನುಸಂಧಾನದ ಅನುಭವದಿಂದ ರೂಪಿತವಾಗಿದೆ. (ಗಣಿತಜ್ಞನಾಗಿ, ತಂತ್ರಜ್ಞನಾಗಿ ನಾನೆಷ್ಟು ಉತ್ತಮನು ಎಂಬ ಪ್ರಶ್ನೆ ನನಗನಿಸುವಂತೆ ಇಲ್ಲಿ ಅಪ್ರಸ್ತುತವೆನಿಸುತ್ತದೆ.)



ನಮಗೆ ತಿಳಿದಿರುವಂತೆ ರಾಮನುಜನ್ ಮತ್ತು ಹಾರ್ಡಿ ವಸ್ತುವಿನ ಕುರಿತ ನಾಟಕವೊಂದನ್ನು ಈಗಾಗಲೇ ಪ್ರಯತ್ನಿಸಲಾಗಿದೆ. ಇಯಾನ್ ಹಾಪ್ಟ್‍ಮನ್ ಎಂಬುವವರು ನಿರ್ಮಿಸಿದ `ಪಾರ್ಟಿಶನ್' ಎಂಬ ಹೆಸರಿನ ನಾಟಕದಲ್ಲಿ ಮುಖ್ಯವಾಗಿ ಆಧುನಿಕ ಗಣಿತದ ಶಿಷ್ಟಶಾಸ್ತ್ರದ ಶಿಸ್ತನ್ನು ರೂಢಿಸಿಕೊಳ್ಳಲಾಗದೇ ಶಿಷ್ಟ ಶಿಕ್ಷಣದ ಆಸರೆ ಇಲ್ಲದೇ ಸ್ವತಂತ್ರ ದೇಸೀ ಚಿಂತನೆಯ ಮೂಲಕ `ಆಧುನಿಕ' ಕ್ರಮದ `ಆಧಾರ'ವಿಲ್ಲದೇ ಗಣಿತದ ಪ್ರಮೇಯಗಳನ್ನು ಮಂಡಿಸುತ್ತಿದ್ದ ರಾಮಾನುಜನ್‍ಗೆ ಹಾರ್ಡಿಯ ಸಾಂಗತ್ಯ ಮತ್ತು ಪಶ್ಚಿಮದ ಪರಿಸರ ಮಾನಸಿಕವಾಗಿ, ದೈಹಿಕವಾಗಿ ಮಾರಕವಾಯಿತೆ? ಸೂಕ್ಷ್ಮ ಸಂಗತಿಯನ್ನು ನಿರ್ವಹಿಸುವ ಪ್ರಯತ್ನವನ್ನು ಮಾಡಿದೆಯಂತೆ. ಕುಂಭಕೋಣಮ್-ನಲ್ಲೇ ಬಹುತೇಕ ತನ್ನ ಬಾಲ್ಯ-ಯುವಾವಸ್ಥೆಗಳನ್ನು ಕಳೆದ, ೧೦೦ ವರ್ಷ ಹಿಂದಿನ ಸಾಂಪ್ರದಾಯಿಕ ಭಾರತೀಯ ಯುವ ಮನಸ್ಸು ತನ್ನ ತಾಯಿಯಿಂದ, ಸಾವಿರಾರು ಮೈಲು ದೂರದ ಅನ್ಯ ಪರಿಸರದಲ್ಲಿ ಸಂಪೂರ್ಣ ಗಣಿತಕ್ಕಾಗಿಯೇ ತೇಯುವ ಕಥೆಯಲ್ಲಿ ಮನಶಾಸ್ತ್ರಜ್ಞರಿಗೂ, ಜನಸಾಮಾನ್ಯರಿಗೂ ಅನೇಕ ಆಸಕ್ತಿಯ ಪದರುಗಳನ್ನು ಹೊಂದಿರಲಿಕ್ಕೆ ಸಾಕು. ಅಂತೆಯೇ ಈ ಪ್ರಶ್ನೆಯನ್ನು ಹಲವಾರು ಗಣಿತಜ್ಞರೂ ಸೇರಿದಂತೆ, ಸಂಸ್ಕೃತೀ ಚಿಂತಕರೂ, ಮನಶಾಸ್ತ್ರಜ್ಞ್ಯರೂ ಈಗಲೂ ಚರ್ಚಿಸುತ್ತಲೇ ಇದ್ದಾರೆ. ಇಲ್ಲಿ ಗಣಿತ-ಸಂಸ್ಕೃತಿಗಳಿಗೆ ಸಂಬಂಧಿಸಿದಂತೆ ಇನ್ನೊಂದು ಸೂಕ್ಷ್ಮ, ಸಾರಸ್ಯಕರ, ವಿವಾದಾತ್ಮಕ ಸಂಗತಿಯೊಂದಿದೆ(*). ಭಾರತೀಯ ಗಣಿತ-ಸಂಪ್ರದಾಯದಲ್ಲಿ ತಾರ್ಕಿಕ ಆಧಾರಕ್ಕೆ ಸ್ಥಾನವೇ ಇಲ್ಲ ಎಂಬ ಮಿಥ್ಯ ಕಲ್ಪನೆಯೊಂದು ಚಾಲ್ತಿಯಲ್ಲಿದೆ. ಅದು ಅಷ್ಟು ಸರಿಯಲ್ಲವೆಂದೂ, ಆಧುನಿಕ ವಲಯದಲ್ಲಿ ಪ್ರಮೇಯವನ್ನು ಮಂಡಿಸಿದವನೇ ತಾರ್ಕಿಕ ಆಧಾರವನ್ನೂ ಮಂಡಿಸಬೇಕೆಂಬುದು ಅಪೇಕ್ಷಿತವಾಗಿದೆ, ಆದರೆ ಪ್ರಾಚೀನ ಭಾರತೀಯ ಗಣಿತ ಸಂಪ್ರದಾಯದಲ್ಲಿ ಪ್ರಮೇಯವನ್ನು ಮಂಡಿಸುವವರು ಮತ್ತು ವ್ಯಾಖ್ಯಾನಕಾರರು ಬಹುತೇಕ ಬೇರೆಬೇರೆಯಾಗಿದ್ದು, ಪ್ರತ್ಯೇಕ ಗ್ರಂಥಗಳಲ್ಲಿ ಪ್ರಮೇಯಗಳು ಮತ್ತದರ ತಾರ್ಕಿಕ ವಿವರಣೆಗಳು ಪ್ರಕಟವಾಗಿದ್ದರಿಂದ ಅಂಥ ಮಿಥ್ಯಕಲ್ಪನೆ ಹುಟ್ಟಿದೆಯೆಂದು ಭಾರತೀಯ ಗಣಿತದ ಸಮರ್ಥಕರು ವಾದಿಸುತ್ತಾರೆ. ಒಟ್ಟಿನಲ್ಲಿ ರಾಮನುಜನ್-ಹಾರ್ಡಿಯ ಸಂಬಂಧದಲ್ಲಿ, ಆ ಒಟ್ಟೂ ಅನುಭವದಲ್ಲಿ ಅನೇಕ ಸಂಘರ್ಷಗಳಿದ್ದರೂ, ರಾಮನುಜನ್ ಪಡೆದದ್ದೂ, ಪ್ರಪಂಚಕ್ಕೆ ಕೊಟ್ಟದ್ದೂ ಗಣನೀಯವಾಗಿಯೇ ಇದೆ ಎಂಬಂಶವನ್ನಂತೂ ನಿರಾಕರಿಸುವಂತಿಲ್ಲ. (ಇದೇ ವಸ್ತುವನ್ನು ಗಹನವಾಗಿ ಶೋಧಿಸುವ, ಇಲ್ಲಿ ನೆನೆಯಬಹುದಾದ ಇನ್ನೊಂದು ಪುಸ್ತಕ, ಆಶೀಶ್ ನಂದಿ ವಿರಚಿತ, "ಪರ್ಯಾಯ ವಿಜ್ಞಾನಗಳು: ಸೃಜನಶೀಲತೆ ಮತ್ತು ಅಧಿಕೃತತೆ: ಇಬ್ಬರು ವಿಜ್ಞಾನಿಗಳು, ಬೋಸ್ ಮತ್ತು ರಾಮನುಜನ್"). `ಪಾರ್ಟಿಶನ್' ನಾಟಕವನ್ನು ನಾನು ನೋಡಿಲ್ಲವಾದ್ದರಿಂದ ಅದರ ಗುಣಮಟ್ಟದ ಬಗ್ಗೆ ನಾನು ಇಲ್ಲಿ ಹೆಚ್ಚೇನನ್ನೂ ಹೇಳಲಾರೆ.
ಅಮೇರಿಕನ್ ಮ್ಯಾಥೆಮ್ಯಾಟಿಕಲ್ ಸೊಸೈಟಿಯ ತಾಣದಲ್ಲಿ ಲಭ್ಯವಿರುವ ವಿಮರ್ಶೆಯೊಂದನ್ನು ಗಮನಿಸಿದರೆ, ನಾಟಕ ಕೆಲವು ಚಾರಿತ್ರಿಕ ಸತ್ಯಗಳನ್ನು ಪಲ್ಲಟಗೊಳಿಸುವುದರೊಂದಿಗೆ, ನಾಮಗಿರಿ ಅಮ್ಮನ ಪ್ರೇರಣೆಯ ಸಂಗತಿಯನ್ನು ಉತ್ಪ್ರೇಕ್ಷೆಗೊಳಿಸುವ ಧೋರಣೆಯನ್ನು ಮೀರುವುದಿಲ್ಲವೆಂದು ತೋರುತ್ತದೆ. ಆದ್ದರಿಂದ ನಮ್ಮೆದುರಿಗೆ ಪ್ರಶ್ನೆ ಇರುವುದು ದೇವ್ ಬೆನಗಲ್ ಮತ್ತು ಸ್ಟೀಫನ್ ಫ್ರೈ ಇಂಥ ಗಹನ, ಗಂಭೀರ ವಸ್ತುವನ್ನು ನಮಗೆ ಯಾವ ರೂಪದಲ್ಲಿ ಕೊಡಲಿದ್ದಾರೆ ಎನ್ನುವುದು. ಮುಖ್ಯವಾಹಿನಿಯ ಚಿತ್ರವೊಂದನ್ನು ರೂಪಿಸ ಹೊರಟಿರುವ ಈ ನಿರ್ದೇಶಕರು ವಸ್ತುವಿನ ಗಾಢತೆ-ಗಹನತೆಯ ಕುರಿತು ಒಪ್ಪಂದ ಮಾಡಿಕೊಳ್ಳುವರೆ? ಅದೊಂದು ಓರಿಯೆಂಟಲಿಸ್ಟ್ ಧೋರಣೆಯ ಚಿತ್ರವಾಗದಂತೆ, ಇಸ್ಮಾಯಿಲ್-ಮರ್ಚಂಟ್‍ರ ಚಿತ್ರಗಳಿಗೆ ಇರುವುದಕ್ಕಿಂತಲೂ ಹೆಚ್ಚಿನ ಆಳ, ಸೂಕ್ಷ್ಮ, ನೈಜತೆ ಬರುವಂತೆ ನೋಡಿಕೊಳ್ಳಬಲ್ಲರೆ? ಹಾಗಾಗದಂತೆ ನೋಡಿಕೊಳ್ಳಲು ಬೆನಗಲ್ ಮತ್ತು ಫ್ರೈ ಜೋಡಿ, ಬರೀ ಕೆನಿಗೆಲ್‍ನ ಪುಸ್ತಕ ಓದಿದರೆ ಸಾಲದು ಎನ್ನಿಸುತ್ತದೆ. ಚಿತ್ರ ಮಾಡುವವರು ಕ್ಯಾಂಬ್ರಿಜ್‍ನ ಕಾರಿಡಾರುಗಳಲ್ಲೂ, ನಾಮಗಿರಿ, ಕುಂಭಕೋಣಂ-ನ ಬೀದಿಯಲ್ಲೂ ಓಡಾಡಿ, ಅಟ್ಲಾಂಟಿಕ್‍ನ ಎರಡೂ ಬದಿಯ ಗಣಿತಜ್ಞರೂ, ಸಂಸ್ಕೃತಿ ಚಿಂತಕರೂ ಮತ್ತು ಮನಶಾಸ್ತ್ರಜ್ಞ್ಯರ ಜೊತೆ ಸಂವಹಿಸಬೇಕಾಗುತ್ತದೆ. ನನ್ನ ಬೇಡಿಕೆ ಅತಿಯೆನ್ನಿಸುವಂತೆ ತೋರುವುದಾದರೂ, ಇವೆಲ್ಲದರ ಜೊತೆ ನಿರ್ದೇಶಕರಿಂದ ನಾನು ಬೇಡುವುದೆಂದರೆ ಗಣಿತದ ಸಾಂಸ್ಕೃತಿಕ ಬೀದಿಗಳಲ್ಲೂ ಸ್ವತಃ ಓಡಾಡಿ ಅನುಭವ ಪಡೆಯುವುದು ಒಳ್ಳೆಯದು. (ಈ ದಿಸೆಯಲ್ಲಿ ಗಣಿತಜ್ಞರು ನಿಮಗೆ ಸಹಾಯಮಾಡಬಲ್ಲರು). ಆಗ ಮಾತ್ರ ರಾಮಾನುಜನ್-ಹಾರ್ಡಿಯ ಬಗ್ಗೆ ಒಳನೋಟದ ಬೆಳಕು ಸಿಕ್ಕು, ಅದನ್ನು ತೆರೆಯ ಮೂಲಕ ಎಲ್ಲರಿಗೂ ಕಾಣಿಸುವ ಸಾಫಲ್ಯ, ಸಾರ್ಥಕ್ಯ ಪಡೆಯಬಹುದು ಎನಿಸುತ್ತದೆ.



ನಾನು ಹೇಳಬಯ
ಸುತ್ತಿರುವುದು ಇಷ್ಟು. ಗಣಿತಜ್ಞನ ಬಗ್ಗೆ 'ಚಿತ್ರ' ಮಾಡಲು ಹೊರಟರೆ, ಒಂದೋ ಎಲ್ಲರಿಗೂ ತಲುಪಬೇಕೆಂಬ ತುಡಿತದಲ್ಲಿ ಆತನ ಗಣಿತದಿಂದಲೇ ಪ್ರೇರಿತವಾದ ಆತನ ಸತ್ವವನ್ನು ಕೈಬಿಡಬೇಕಾಗಿ, ಎಲ್ಲರಿಗೂ ಸಾಮನ್ಯವೆನಿಸಬಲ್ಲ ಮಾನವೀಯ ಅಂಶಗಳನ್ನಷ್ಟೆ ತೋರಿಸಿ, ಈತ ನಮ್ಮ-ನಿಮ್ಮಂತೆಯೇ ಎಂದೆನಿಸುವಂತೆ ಮಾಡಬಹುದು. ಇಲ್ಲದಿದ್ದರೆ, ಆಸಕ್ತರಿಗೆ ಮಾತ್ರ ತಲುಪಬಯಸುವ, ಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾಗಬಲ್ಲ, ಗಣಿತದ ಒಳನೋಟಗಳು, ಗಣಿತದ ಚಟುವಟಿಕೆಯ ಹಿಂದಿನ ತಾಳ್ಮೆ, ಪರಿಶ್ರಮ ಇವುಗಳನ್ನು ದಾಖಲಿಸುವ, ಗಣಿತಜ್ಞರ ಜೊತೆ ಸಂದರ್ಶನಗಳಿಂದ ಕೂಡಿದ ಸಾಕ್ಷ್ಯಚಿತ್ರವೇ ಉತ್ತಮವೆನ್ನಿಸುತ್ತದೆ. "ನಂಬರ್ ಥಿಯರಿ"ಯ ಇನ್ನೊಬ್ಬ ವಿಕ್ಷಿಪ್ತ ದಿಗ್ಗಜ ಪೌಲಿ ಎರ್ಡಿಶ್ ಬಗ್ಗೆ ತಯಾರಿಸಿದ "ಎನ್ ಇಸ್ ಎ ನಂಬರ್" ಮತ್ತು ಫರ್ಮ್ಯಾಟ್ ಥಿಯರಿ-ಗೆ "ಆಧಾರ" ಮಂಡಿಸಿದ ಆಂಡ್ರ್ಯೂವ್ ವೈಲ್ಸ್ ಕುರಿತ ಚಿತ್ರ "ಆಧಾರ: ಫರ್ಮಾಟ್‍ನ ಕೊನೆಯ ಪ್ರಮೇಯ" ಇವುಗಳನ್ನು ನೆನೆಯಬಹುದು.



ರಾಮನುಜನ್-ಹಾರ್ಡಿಯ ವಸ್ತು ಇತರ ಗಣಿತಜ್ಞರ ಕಥೆಗಿಂತ ಅಂತರ್-ಸಾಂಸ್ಕೃತಿಕ ಕಾರಣಗಳಿಂದಾಗಿ ಹೆಚ್ಚು ನಾಜೂಕು ಮತ್ತು ಗಹನವಾದದ್ದು. ಹೇಗೆ ವಾಸ್ತವಿಕ ಚರಿತ್ರೆ ನಮಗೆ ದಕ್ಕುವುದು ಅಸಾಧ್ಯವೋ, ಹಾಗೇ ರಾಮನುಜನ್-ಹಾರ್ಡಿಯವರ `ವಾಸ್ತವ' ಚಿತ್ರವೂ ನಮಗೆ ದಕ್ಕಲಾರದು. ಹಾಗೆಂದುಕೊಂಡು ಈ ಕಥೆಯಲ್ಲಿ ನಾಟಕೀಯವೆನ್ನಬಹುದಾದ, ಮಿಥಿಕಲ್ ಎನ್ನಬಹುದಾದ ಅಂಶಗಳಿವೆ ಎಂಬ ಉತ್ಸಾಹೀ ಧೋರಣೆಗಳನ್ನು ಮಾತ್ರ ಹೊತ್ತು ಇನ್ನೊಂದು ರಂಜನೀಯ ಪುರಾಣವನ್ನು ಸೃಷ್ಟಿಸಿದರೆ ಅದರಿಂದ ವಸ್ತುವಿಗೆ ಅಪಚಾರವಾಗುತ್ತದೆ. ಆದ್ದರಿಂದ ಮಾನವೀಯ ರಸಗಳ ಜೊತೆ, ವಸ್ತುವಿನ ಗಹನತೆಯನ್ನು ಹದವಾಗಿ ಬೆರೆಸಿದ ಚಿತ್ರವೊಂದನ್ನು ನಾನು ಅಪೇಕ್ಷಿಸುತ್ತಿದ್ದೇನೆ. ಬೆನೆಗಲ್ ಮತ್ತು ಫ್ರೈ ಅವರ ಚಿತ್ರ ಉತ್ತಮವಾಗಿ ಮೂಡಿ ಬರಲಿ ಎಂದೇ ಆಶಿಸುತ್ತೇನೆ. ಆದರೆ ಅದರ ಜೊತೆಗೆ ಅದು ಈಗಾಗಲೇ ನಮ್ಮ ಬಳಿ ಇರುವ `ಭಾವ'ಚಿತ್ರವನ್ನು ಹಾನಿಮಾಡದಿರಲಿ ಎಂದೂ ಬಯಸುತ್ತೇನೆ.

(*)ವಿಜ್ಞಾನ-ಗಣಿತದ ಪೂರ್ವ-ಪಶ್ಚಿಮದ ಸಂಸ್ಕೃತಿಗಳ ಕುರಿತು ಪ್ರೋ. ರೊದ್ದಂ ನರಸಿಂಹರ ಕೆಲವು ಆಸಕ್ತಿಕರ ಆಲೋಚನೆಗಳನ್ನು ಇಲ್ಲಿ ಓದಬಹುದು. ಕೆ.ವಿ. ಅಕ್ಷರ ಅವರು ಅನುವಾದ ಮಾಡಿರುವ ಅಕ್ಷರ ಪ್ರಕಾಶನದ ಕನ್ನಡ ಅವತರಣಿಕೆಯೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಪೂರಕವಾದ ನನ್ನ ವಿಮರ್ಶಾ ಲೇಖನವೊಂದು ಇಲ್ಲಿದೆ.

೦೬-೦೯-೨೦೦೬ ರಂದು ಸೇರಿಸಿದ ಟಿಪ್ಪಣಿ:
ಶ್ರೀನಿವಾಸ ರಾಮನುಜನ್‍ರ ಕುರಿತು ಇನ್ನೊಂದು ಬಹುಮುಖ್ಯ ಆಕರ ಗ್ರಂಥ: `ರಾಮಾನುಜನ್: ಲೆಟರ್ಸ್ ಆಂಡ್ ಕಾಮೆಂಟರಿ', ಕಲ್ಚರ್ ಆಂಡ್ ಹಿಸ್ಟರಿ ಆಫ್ ಮ್ಯಾಥೆಮ್ಯಾಟಿಕ್ಸ್ -೧, ಅಮೇರಿಕನ್ ಮ್ಯಾಥೆಮ್ಯಾಟಿಕಲ್ ಸೊಸೈಟಿ. ಈ ಪುಸ್ತಕದಲ್ಲಿ ಪ್ರಸ್ತುತಪಡಿಸಲಾಗಿರುವ ಎರಡು ಮುಖ್ಯ ಅಂಶಗಳನ್ನು ಓದುಗರ ಆಸಕ್ತಿಗಾಗಿ ಉಲ್ಲೇಖಿಸಬಯಸುತ್ತೇನೆ.

೧)ಭೌತವಿಜ್ಞಾನಿ ಚಂದ್ರಶೇಖರ್ ಬರೆದಿರುವ ಲೇಖನದಲ್ಲಿ `ನಾಮಗಿರಿಯ ಅಮ್ಮನ ಪ್ರೇರಣೆಯಿಂದ ಗಣಿತ ಸೂತ್ರಗಳನ್ನು ಹೊಮ್ಮಿಸುವ' ಪುರಾಣವನ್ನು ನಿರಚನಗೊಳಿಸುವ ಪ್ರಯತ್ನಮಾಡಿದ್ದಾರೆ. ಈ ವಿಷವಾಗಿ ಸ್ವತಃ ಚಂದ್ರಶೇಖರ್ ಹಾರ್ಡಿ-ಗೆ ಪತ್ರ ಬರೆದು ಅವರ ಅಭಿಪ್ರಾಯ ಕೇಳುತ್ತಾರೆ. ಇದಕ್ಕೆ ಹಾರ್ಡಿ `ರಾಮನುಜನ್-ನಲ್ಲಿದ್ದ ಕೆಲವು ಸಾಂಸ್ಕೃತಿಕ ಲಕ್ಷಣಗಳನ್ನು ಹೊರತುಪಡಿಸಿ, ಆತ ನಮ್ಮ ನಿಮ್ಮಂತೆ ಬೌದ್ಧಿಕ ಸ್ಫುಟತೆ ( intellectually sound) ಹೊಂದಿದವನೇ ಆಗಿದ್ದ' ಎಂದು ಉತ್ತರಿಸುತ್ತಾರೆ.

೨)ರಾಮಾನುಜನ್ ಬದುಕಿನ ಇನ್ನೊಂದು ಬಹುಮುಖ್ಯ ನಾಜೂಕು ಸಂಗತಿ ಅವರ ಆತ್ಮಹತ್ಯೆಯ ಪ್ರಯತ್ನ. ವೇಗದ ಲಂಡನ್-ನ ಮೆಟ್ರೋ ರೈಲಿನ ಗಾಲಿಗೆ ತಮ್ಮನ್ನು ಒಪ್ಪಿಸಿಕೊಳ್ಳುವ ಅವರ ಪ್ರಯತ್ನ ವಿಫಲವಾಗುತ್ತದೆ. ಪೋಲಿಸರು ಬಂಧಿಸುತ್ತಾರೆ. ಹಾರ್ಡಿ-ಗೆ ಕರೆಹೋಗುತ್ತದೆ. ಹಾರ್ಡಿ ಠಾಣೆಗೆ ಬಂದು 'ರಾಮನುಜನ್ ಕೆಂಬಿಜ್‍ನ ಪ್ರತಿಷ್ಠಿತ ಫೆಲೋ ಆದದ್ದರಿಂದ ನೀವು ಅವರನ್ನು ಬಂಧಿಸುವಂತಿಲ್ಲ' ಎಂದು ವಾದಹೂಡುತ್ತಾನೆ. ಆದರೆ ಈ ಸಂಗತಿ ಸುಳ್ಳಾಗಿರುತ್ತದೆ. ಈ ವಿಷಯವಾಗಿ ಹಾರ್ಡಿ ಮತ್ತು ಕೆಲವು ಗಣಿತಜ್ಞರು ರಾಮನುಜನ್ ಪರವಾಗಿ ಲಾಬಿ ಮಾಡುತ್ತಿರುತ್ತಾರೆ. ಕೆಲವು ವಿರೋಧಿಗಳೂ ಇರುತ್ತಾರೆ. ಆತ್ಮಹತ್ಯೆಯ ಪ್ರಯತ್ನ ಮತ್ತು ಬಂಧನದ ಸುದ್ದಿ ಹೊರಬಂದರೆ ರಾಮನುಜನ್-ಗೆ ಆ ಹಿರಿಮೆ ದಕ್ಕದೇ ಹೋಗಬಹುದು ಎಂಬ ಆತಂಕ ಹಾರ್ಡಿ-ಗೆ. ಪೋಲಿಸ್ ಅಧಿಕಾರಿ ರಾಮನುಜನ್-ರನ್ನು ವಿಚಾರಣೆಗೆ ಗುರಿಪಡಿಸದೇ ಬಿಡುಗಡೆಗೊಳಿಸುತ್ತಾರೆ. ಕೆಲವೇ ತಿಂಗಳಲ್ಲಿ ರಾಮಾನುಜನ್-ಗೆ `ಫೆಲೋ' ಸ್ಥಾನ ಸಿಗುತ್ತದೆ. 'ಫೆಲೋ ಆದವರನ್ನು ಬಂಧಿಸುವಂತಿಲ್ಲ ಎಂಬ ಕಾನೂನೇನೂ ಇರಲಿಲ್ಲ, ಇಲ್ಲ. ಗಣಿತಜ್ಞರ ಬಗ್ಗೆ ನಮಗಿರುವ ಗೌರವದಿಂದಾಗಿ ಕೇಸು ನಡೆಸಲಿಲ್ಲ ಅಷ್ಟೇ' ಎಂದು ಈ ಘಟನೆ ನಡೆದ ಹಲವು ವರ್ಷಗಳ ನಂತರ ಆ ಪೋಲೀಸ್ ಅಧಿಕಾರಿ ಹಾರ್ಡಿ-ಯನ್ನೇ ಅಚ್ಚರಿಗೊಳಿಸದನೆಂಬ ಸಂಗತಿ ಕೂಡಾ ಈ ಪುಸ್ತಕದಲ್ಲಿ ಇದೆ.

ಆದರೆ ಈ ಇಡೀ ಸಂಗತಿಯ ಹಿಂದೆ ರಾಮಾನುಜನ್-ರ ಅಂತರ್ಯದಲ್ಲಿ ಯಾವ ಬಗೆಯ ಕೋಲಾಹಲ ನಡೆಯುತ್ತಿರಬಹುದು? ಸಾವಿರಾರು ಮೈಲಿ ಆಚೆಯ ತಾಯಿ ಮತ್ತು ಹೆಂಡತಿಯ ನಡುವಿನ ಮನಸ್ತಾಪವೊಂದೇ ಕಾರಣವೆ? (ಹೆಂಡತಿ ಗಂಡನಿಗೆ ಬರೆಯುವ ಪತ್ರಗಳು ಅತ್ತೆಯ ತಂತ್ರಗಳಿಂದಾಗಿ ಆತನಿಗೆ ತಲುಪುತ್ತಿಲ್ಲ) ಕೆಂಬ್ರಿಜ್-ನ ಪರಿಸರವೂ ಕಾರಣವೆ?

ಆದುದರಿಂದ ರಾಮಾನುಜನ್-ರ ಆಂತರ್ಯವನ್ನೂ, ಅವರ ಸುತ್ತ ನಡೆದಿರಬಹುದಾದ ಸಂಗತಿಗಳನ್ನೂ ಒಂದು `ಕಲೆ'ಯಾಗಿ ನಿರೂಪಿಸಲು ಅತ್ಯುತ್ತಮ ಕಥೆಗಾರನ ಸಂವೇದನೆಯೇ ಬೇಕು. ನಾನಿಲ್ಲಿ ರಾಮಾನುಜ-ರ ಒಳಬದುಕಿನ ನಾಜೂಕು ಸಂಗತಿಯ ಬಗ್ಗೆ ಹಲವು ಅಧಿಕೃತ ಪುಸ್ತಕಗಳಲ್ಲಿ ಉಲ್ಲೇಖವಿರುವುದರಿಂದ ಬರೀ ಗಾಸಿಪ್ ಆಗಿರಲಿಕ್ಕಿಲ್ಲ ಎಂಬ ಧೈರ್ಯವಿದ್ದರೂ, ಕೊಂಚ ಒರಟೊರಟಾಗಿ ಬರೆದಿರುವುದಕ್ಕೆ ಖೇದವಿದೆ. ನಮ್ಮ ಸಿನೆಮಾ ನಿರ್ದೇಶಕರು ನನಗಿಂತ ಉತ್ತಮರಾಗಲಿ ಎಂದು ಮಾತ್ರ ಆಶಿಸುತ್ತೇನೆ.

Wednesday, April 12, 2006

ಸೃಜನ ಕನ್ನಡಿಗನೊಬ್ಬನ ಕಣ್ಮರೆ


ಇಡೀ ಕನ್ನಡ ಸಮುದಾಯದ ಭಾವಪ್ರಪಂಚವನ್ನು ಆಳುವ ಸಾಮರ್ಥ್ಯ ಪಡೆದಿದ್ದ, ಬಹುಶ ಇನ್ನೂ ಕೆಲವು ವರ್ಷಗಳ ಕಾಲ ಸಹ ಆಳಬಲ್ಲಂತಿದ್ದ ಕನ್ನಡ ಮೇರುನಟ ಭೌತಿಕ ಪ್ರಪಂಚದಿಂದ ಸರಿದುಹೋಗಿದ್ದಾರೆ. ಇಲ್ಲಿ ಭೂತಕಾಲದ ಪ್ರತ್ಯಯ ಬಳಸುವುದು ಕಷ್ಟವೇ! ವರ್ತಮಾನದಲ್ಲಿ ಅಷ್ಟು ಅವರು ನಿಚ್ಚಳರಾಗಿದ್ದಾರೆ, ಭವಿಷ್ಯದಲ್ಲೂ ಇರಲಿದ್ದಾರೆ.

ಸಿನೆಮಾ ಪ್ರಪಂಚದಲ್ಲಿ ಬದುಕಿಯೂ, ಸಿನೆಮಾದಲ್ಲಿಯೂ, ತಮ್ಮ ವಾಸ್ತವದ ಬದುಕಿನಲ್ಲಿಯೂ ಸಾಂಪ್ರದಾಯಿಕ ಮೌಲ್ಯಗಳಿಗೆ ಬದ್ಧರಾಗಿ ಬದುಕಿದ್ದೇ ಅವರು ಎಲ್ಲಾ ವರ್ಗಗಳಿಂದ ಮನ್ನಣೆ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ ಅಂಶ. ರಂಗಭೂಮಿಯ ಹಿನ್ನೆಲೆಯಿಂದ ಬಂದು, ಗಾಯನದ ಎಲ್ಲಾ ಪ್ರಾಕಾರಗಳಲ್ಲಿ ಜನ-ಮೆಚ್ಚುಗೆಗಳಿಸುವಂತೆ ಮೆರೆದಿದ್ದು ಅವರ ಸೃಜನ ಶಕ್ತಿಗೆ ಸಾಕ್ಷಿ. ಅವರ ಗಾಯನದ ಗುಣ-ಮಟ್ಟದ ಶಾಸ್ತ್ರೀಯ ಮೌಲ್ಯಮಾಪನ ಪಂಡಿತವರ್ಗಕ್ಕೆ ಬಿಟ್ಟದ್ದು. ಆದರೆ ಅವರ ಹಲವು ಹಾಡುಗಳು ಜನಮನದಲ್ಲಿ (`ನಿನಗಾಗಿ ಓಡೋಡಿ ಬಂದೆ', `ನಾದಮಯ ಈ ಲೋಕವೆಲ್ಲಾ',`ಜೇನಿನ ಹೊಳೆಯೂ..' ಈ ಧಾಟಿಯ ಹಲವು ಹಾಡುಗಳು ನನ್ನ ಮನದಲ್ಲೂ), ಇನ್ನೂ ಕೆಲವು ದಶಕಗಳ ಕಾಲ ಉಳಿಯಲಿವೆ ಎಂಬುದರಲ್ಲಿ ಸಂಶಯಬೇಡ.

ಆದರೆ ಮೃತರನ್ನು ಹೇಗೆ ಗೌರವಿಸಬೇಕು ಎಂಬುದನ್ನು ನಮ್ಮ ಸಮಾಜ ಕಲಿತುಕೊಳ್ಳುವ ಪ್ರಯತ್ನವನ್ನೇ ಮಾಡಿದಂತಿಲ್ಲ. ನಮ್ಮ ಸಮಾಜದ ಕೆಳವರ್ಗದ ಕೆಲವರು ಮಾಡುವ ಎಲ್ಲಾ ತಪ್ಪುಗಳಿಗೆ ಅವರ ನಿತ್ಯದ ಬವಣೆಯ, ಅವರ ಅಸಹಾಯಕತೆಯ ಅಥವ ಇನ್ಯಾವುದೋ ಸಮಜಾಯಿಷಿ ಕೊಡುತ್ತಾ ಹೋಗುವುದು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನಿನ್ನೆಯ ಘಟನೆಗಳನ್ನು ಕನ್ನಡ ಸಮುದಾಯದ ಎಲ್ಲಾ ಹಿರಿಯರು (ಅದರಲ್ಲೂ ಮುಖ್ಯವಾಗಿ ಸಾಂಸ್ಕೃತಿಕ ಕ್ಷೇತ್ರದ ಗಣ್ಯರು) ನಿರ್ಭಯವಾಗಿ ಖಂಡಿಸಬೇಕು. ಚಿತ್ರರಂಗದ ಸಮಸ್ಯೆ, ಕನ್ನಡದ ಸಮಸ್ಯೆ, ಇನ್ನಿತರ ಜನಪರ ಚಟುವಟಿಕೆಗಳ ಸಂದರ್ಭದಲ್ಲಿ ಸ್ವತಃ ಡಾ. ರಾಜ್‍ಕುಮಾರ್ ತಮ್ಮ ಬೆಂಬಲಿಗರನ್ನು ನಿಯಂತ್ರಿಸುವಲ್ಲಿ ತಮ್ಮ ಹಲವು ಪ್ರಯತ್ನಗಳ ನಂತರವೂ ವಿಫಲರಾಗುತ್ತಿದ್ದರೆಂಬುದನ್ನು ನಮಗೆ ಈ ಹೊತ್ತಿನಲ್ಲಿ ಸ್ವಲ್ಪ ಕಷ್ಟವಾದರೂ ನೆನಪಿಸಿಕೊಳ್ಳಬಹುದು. ಇದನ್ನು ಕೇವಲ ಒಬ್ಬ ವ್ಯಕ್ತಿಯ ಮೇಲಿನ ಆಪಾದನೆ ಎಂದು ಯಾರೂ ತಪ್ಪು ತಿಳಿಯಬಾರದು. ಮೃತರನ್ನು ಗೌರವಿಸುವ ಕುರಿತಂತೆ, ಜನಾಂದೋಲನಗಳನ್ನು ನಡೆಸುವ ಕುರಿತಂತೆ ಪ್ರಜಾತಂತ್ರದಲ್ಲಿ ನಾವೆಲ್ಲರೂ ಅಂದರೆ ನಾಗರಿಕರೂ, ಜನನಾಯಕರೂ, ಬರಹಗಾರರೂ ಒಟ್ಟಾಗಿ ಚಿಂತಿಸಿ, ಕೆಲವು ನಿಯಮಾವಳಿಗಳನ್ನು ರೂಪಿಸಿಕೊಂಡು ಅಚರಣೆಗೆ ತರಬೇಕಾದದ್ದು ಎಲ್ಲರ ಕರ್ತವ್ಯ. ವ್ಯಕ್ತಿ, ಭಾಷೆ, ನಾಡು, ದೇಶದ ಹೆಸರಿನಲ್ಲಿ ನಡೆಯುವ ಜನಸಮೂಹದ ಚಟುವಟಿಕೆಗಳು ಹಿಂಸಾರೂಪಕ್ಕೆ ಪರಿವರ್ತಿತವಾಗದಂತೆ ಜನನಾಯಕರು ಹೇಗೆ ನಡೆದುಕೊಳ್ಳಬೇಕು ಎಂಬುದರ ಕುರಿತು ಅಪಾರ ಸಂಕಟದ ಚಿಂತನೆ ನಡಿಸಿದ್ದ ಗುರುದೇವ ರವೀಂದ್ರನಾಥ ಟ್ಯಾಗೋರರ ಪಠ್ಯಗಳನ್ನು ನಾವು ಈ ಸಂದರ್ಭದಲ್ಲಿ ಪರಿಶೀಲಿಸಬಹುದಾಗಿದೆ ಎನ್ನಿಸುತ್ತದೆ.

ಸೃಜನ-ಕನ್ನಡಿಗ ಡಾ ರಾಜ್‍ಕುಮಾರ್ ಅವರಿಗೆ ಮೌನದಲ್ಲಿಯೇ ಗೌರವದ ನಮನ.

Tuesday, March 21, 2006

ಅನಂತಮೂರ್ತಿಯವರ ಕೃತಿಗಳಲ್ಲಿ `ಹಡೆ' ಪಾತ್ರಗಳು

`ಹಡೆ' ಪಾತ್ರಗಳ ಕುರಿತು ಅನಂತಮೂರ್ತಿಯವರಿಗೆ ಏನೋ ಒಂದು ವಿಶೇಷ ಆಕರ್ಷಣೆ, ಕುತೂಹಲವಿದ್ದಂತಿದೆ. ಅದೇಕೆ ಹಾಗೆ ಎಂದು ನನಗೂ ಕೆಟ್ಟ ಕುತೂಹಲ. ಈ ವಿಷಯದ ಬಗ್ಗೆ ಬರೆಯಬೇಕೆಂದು ಹಲವು ಸಲ ಚಿಂತಿಸಿ ವ್ಯವಧಾನ ಸಾಲದೇ ತಳ್ಳಿಹಾಕಿದ್ದೆ. ಉದಯವಾಣಿಯ ಋಜುವಾತು ಅಂಕಣದ ನಂಜುಂಡಸ್ವಾಮಿಯವರ ಕುರಿತ ವ್ಯಕ್ತಿಚಿತ್ರದಲ್ಲಿ `ಆಚಾರ'ರ ಚಿತ್ರಣವನ್ನು ಓದುತ್ತಿದ್ದಂತೆ, ಆ ನನ್ನ ಹಳೆಯ ಹಂಬಲ ಮತ್ತೆ ಜಾಗ್ರತವಾಯಿತು. ಈ ಸಂದರ್ಭದಲ್ಲಿ ವ್ಯಕ್ತಿಚಿತ್ರದ ಬಗ್ಗೆ ಒಂದು ಮಾತು ಹೇಳದೆ ಮುಂದೆ ಹೋಗಲಾರೆ. ವ್ಯಕ್ತಿಚಿತ್ರದ ಪ್ರಾಕಾರದಲ್ಲಿ ಅನಂತಮೂರ್ತಿ ಅವರಿಗೊಂದು ವಿಶೇಷ ಶಕ್ತಿಯಿದೆ. ಬೇಂದ್ರೆ, ಗೋಪಾಲಗೌಡರು, ವಿ.ಸೀತಾರಾಮಯ್ಯ, ಆಚಾರ್ಯ ಕೃಪಲಾನಿ ಇವರನ್ನೆಲ್ಲಾ ಅನನ್ಯವೆನ್ನಿಸುವ ರೀತಿಯಲ್ಲಿ ನಮಗೆ ಕಾಣಿಸಿದ್ದಾರೆ. ನಂಜುಂಡಸ್ವಾಮಿಯವರ ಬಗೆಗಿನ ವ್ಯಕ್ತಿಚಿತ್ರ ಕೂಡಾ ಅದೇ ಸಾಲಿಗೆ ಸೇರುತ್ತದೆ.

ಅನಂತಮೂರ್ತಿ ಅವರ ಕೃತಿಯ `ಹಡೆ' ಪಾತ್ರಗಳನ್ನು ಚರ್ಚಿಸುವ ಮೊದಲು, `ಹಡೆ' ಪದದ ಅರ್ಥವ್ಯಾಪ್ತಿಯನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತೇನೆ. ಈ ಪದ ಮನಸ್ಸಿಗೆ ಹೊಳೆಯಿಸುವ ಪ್ರತಿಮೆ ಎಂತಹುದು?

`ಹಡೆ' ಪಾತ್ರವೆಂದರೆ ಸಾಮಾನ್ಯವಾಗಿ ನಾನು ಗುರುತಿಸಿದಂತೆ ಸ್ವತಃ ತನ್ನ ಅಧಿಕಾರ, ಶಕ್ತಿ, ಸ್ಥಾನಮಾನಗಳ ಕುರಿತು ಎಚ್ಚರವಿಲ್ಲದ, ಅವುಗಳನ್ನು ಪಡೆಯಬೇಕೆಂಬ ಹಂಬಲವಿಲ್ಲದ ವ್ಯಕ್ತಿ. ಜೊತೆಗೇ ತನ್ನ ಎದುರಿಗೆ ಇರುವುವರ ಶಕ್ತಿ, ಅಧಿಕಾರ, ಸ್ಥಾನಮಾನಗಳನ್ನು ಲೆಕ್ಕಕ್ಕೆ ತಾರದೇ ವರ್ತಿಸಬಲ್ಲ ಪಾತ್ರ. ಒಂದು ಕೋನದಿಂದ ನೋಡಿದಾಗ ವ್ಯವಹಾರಿಕ ಕೌಶಲ್ಯವಿಲ್ಲದ ಹ್ಯಾಪನಂತೆ ಕಂಡುಬಂದರೆ, ಅದೇ ಇನ್ನೊಂದು ಕೋನದಿಂದ ನೋಡಿದಾಗ ಅನನ್ಯ ಕೌಶಲ್ಯದ ವ್ಯಕ್ತಿಯಾಗಿ ಕಂಡು ಬರುವುದೇ ಪಾತ್ರದ ವೈಶಿಷ್ಟ್ಯ. ಹಾಗಿರುವುಂದಲೇ ಅಂಥ ಪಾತ್ರಗಳಿಗೆ, ವ್ಯಕ್ತಿಗಳಿಗೆ ಅನಂತಮೂರ್ತಿ ಅವರ ಕೃತಿ-ಪ್ರಪಂಚದಲ್ಲಿ ವಿಶೇಷ ಸ್ಥಾನಮಾನ.

ಎರಡು ವಿಭಿನ್ನ ಮೌಲ್ಯ, ಸಂವೇದನೆಗಳ (ಅನಂತಮೂರ್ತಿ ಅವರ ಕೃತಿಗಳಲ್ಲಿ ಪ್ರಧಾನವಾಗಿ ಪರಂಪರೆ ಮತ್ತು ಆಧುನಿಕತೆಯನ್ನು ಪ್ರತಿನಿಧಿಸುವ) ಪ್ರತೀಕಗಳು ಅಥವಾ ಪಾತ್ರಗಳು ಸಂಘರ್ಷಕ್ಕೊಳಗಾದಾಗ, ಆ ಉದ್ವಿಗ್ನ ವಾತಾವರಣದಲ್ಲಿ, ಈ ಬಗೆಯ ಪಾತ್ರವು ತನ್ನ ಹಗುರುತನದಿಂದ ಸಂವಾದ ಹುಟ್ಟಿಸುವ ಶಕ್ತಿ ಪಡೆದಿರುತ್ತದೆ. ವ್ಯಕ್ತಿಗಳ ಸ್ವ-ಪ್ರತಿಷ್ಠೆ, ಅಹಂಕಾರದ ಅಂಧತ್ವದ ಮುಖವಾಡಗಳನ್ನು ಕಿತ್ತೆಸೆದು ಮಾನವೀಯ ಮುಖಗಳನ್ನು ಅನಾವರಣಗೊಳಿಸುವ ಶಕ್ತಿ ಪಡೆದಿರುತ್ತದೆ.

`ಸಂಸ್ಕಾರ'ದ ಪುಟ್ಟ, `ಪ್ರಸ್ತ'ದ ಶ್ಯಾಂಭಟ್ಟರು, `ಸೂರ್ಯನ ಕುದುರೆ'ಯ ವೆಂಕಟ, `ದಿವ್ಯ'ದ ಕೇಶವ ಅನಂತಮೂರ್ತಿಯವರು ಕೆತ್ತಿರುವ ಕೆಲವು ವಿಶಿಷ್ಟ ಹಡೆ ಪಾತ್ರಗಳು.

ಸಂಸ್ಕಾರದ ಪುಟ್ಟ ಪ್ರಾಣೇಶಾಚಾರ್ಯರ ಅಂತರಂಗದಲ್ಲಿ ನಡೆಯುತ್ತಿದ್ದ ಮೌಲ್ಯ ಸಂಘರ್ಷಕ್ಕೆ ಸಾಕ್ಷಿಪ್ರಜ್ಞೆಯಾಗಿ ಬಂದರೆ, `ಪ್ರಸ್ತ'ದ ಶ್ಯಾಂಭಟ್ಟರು ಎಲ್ಲಾ ಸಂಬಂಧಗಳ ನಡುವಿನ ಸೂಕ್ಷ್ಮ ಸಮಸ್ಯೆಗಳನ್ನು ಬಿಡಿಸುವ ಸಂಧಾನಕಾರರಾಗಿ ಬರುತ್ತಾರೆ. ಬಹುತೇಕ ವಿಮರ್ಶಕರು ಈಗಾಗಲೇ ಗುರುತಿಸಿರುವ ಲೇಖಕರ ಸಾಹಿತ್ಯ ಬದುಕಿನ ಎರಡು ಘಟ್ಟಗಳಲ್ಲಿ (ಡಿ.ಆರ್. ನಾಗರಾಜ್ ಬಳಸುವ ಪದಗಳು `ಮೂಲನವ್ಯ' ಮತ್ತು `ಪರಿವರ್ತನಶೀಲ ನವ್ಯ') `ಪುಟ್ಟ' ಮತ್ತು `ಶ್ಯಾಂಭಟ್ಟರು' ಮೊದಲ ಘಟ್ಟಕ್ಕೆ ಸೇರುತ್ತಾರೆ. `ವೆಂಕಟ' ಮತ್ತು `ಕೇಶವ' ಎರಡನೇ ಘಟ್ಟಕ್ಕೆ ಸೇರಿದ ಪಾತ್ರಗಳು. `ವೆಂಕಟ' ತನ್ನ ನಿಷ್ಕ್ರೀಯತೆಯಿಂದ, ತನ್ನ ನಾನ್-ಪಾಲಿಟಿಕಲ್ ಧೋರಣೆಯಿಂದ ಆಧುನಿಕತೆಯನ್ನು ಪ್ರಶ್ನಿಸುವ ಸಂಕೇತವಾಗುತ್ತಾನೆ. `ದಿವ್ಯ'ದ ಕೇಶವ ಕೂಡಾ ಅದೇ ಬಗೆಯ ಸಂಕೇತವಾಗಿ ಘನಶ್ಯಾಮನ ಪಾತ್ರಕ್ಕೆ ಪ್ರತಿದ್ವಂದ್ವಿಯಾಗುತ್ತಾನೆ. ಹೀಗೆ ಎರಡನೇ ಘಟ್ಟದಲ್ಲಿ ಹೆಚ್ಚಾಗಿ ಈ `ಹಡೆ' ಪಾತ್ರಗಳು ಪಾಶ್ಚಾತ್ಯ ಪ್ರಣೀತ ಆಧುನಿಕತೆಯನ್ನು ಪ್ರಶ್ನಿಸುವ ಸಲಕರಣೆಯಾಗಿ ಬಳಸಲ್ಪಡುವಂತೆ ತೋರುತ್ತದೆ.

ಎಲ್ಲದಕ್ಕೂ ಅತೀತನಾಗಿ ಇರುವುದೇ ಆತನ ರಾಜಕಾರಣ ಎಂದು ಅನಂತಮೂರ್ತಿ ಹಲವು ಕಡೆ ಗುರುತಿಸಿದ್ದಾರೆ. ಬಹುಶಃ ಅದೇ ಕಾರಣಕ್ಕೆ ಲೌಕಿಕವಾಗಿ ವರ್ತಿಸುವವರಿಗೆ ಇಂಥವರ ಬಗ್ಗೆ ಭಯ ("ಆದರೆ ಅವನು ಹೇಳದಿದ್ದ ಮಾತುಗಳೆಲ್ಲ ಅವನ ನಗುವಿನಲ್ಲಿ ಇವೆಯೆಂದೆನಿಸಿ ನಾನು ಸೋರಿ ಹೋಗಿಬಿಡಬಹುದೆಂದು ದಿಗಿಲಾಯಿತು": `ಸೂರ್ಯನ ಕುದುರೆಯ' ಅನಂತೂ, ವೆಂಕಟನ ಬಗ್ಗೆ) ಮತ್ತು ಮೆಚ್ಚುಗೆ ("ಈ ಹಡೇ ವೆಂಕಟನೂ ಒಬ್ಬ ಹವಣಿಕೆಯ ರಾಜಕಾರಣಿಯೇ. ಎಂಥ ಮ್ಯಾನಿಪುಲೇಟರ್. ನನ್ನ ಸ್ಥಿತಿಯನ್ನೇ ಬದಲಾಯಿಸಲು ಹವಣಿಸಿದ್ದ"). `ಹಡೆ' ಅನ್ನೋದು ಒಂದು ರೀತಿಯ ರಾಜರ್ಷಿ ಎಂಬ ಭಾರತೀಯ ಪರಿಕಲ್ಪನೆಗೆ ಸಮೀಪವಾದದ್ದು ಎಂದು ಲೇಖಕರು ಭಾವಿಸುವಂತೆ, ನಮಗೆ ಸೂಚಿಸುವಂತೆ ತೋರುತ್ತದೆ. ಅಧಿಕಾರಿ ವಲಯಗಳಲ್ಲಿ ಇದ್ದೂ ಅಧಿಕಾರವನ್ನು ಮೀರಿದ `ರಾಜರ್ಷಿ' ಓರ್ವ ಹೆಚ್ಚಿನ ಘನತೆ ಪಡೆದಿರುವ `ಹಡೆ'.

ಅನಂತಮೂರ್ತಿ ಅವರ ಕೃತಿಗಳಲ್ಲಿ ಇದೇ ಬಗೆಯ ಗುಣಗಳಿರುವ ಸ್ತ್ರೀ ಪಾತ್ರಗಳನ್ನು ನಾವು ಕಾಣುವುದಿಲ್ಲ. ಈ ಕುರಿತು ಹೆಚ್ಚಿನ ಚರ್ಚೆಯ ಅಗತ್ಯವಿದೆ. ಅದೇ ರೀತಿ ಇತರ ಲೇಖಕರು ಈ ಬಗೆಯ ಪಾತ್ರಗಳನ್ನು ಕಾಣುವ ಬಗೆಯ ಕುರಿತೂ ಚರ್ಚೆಯಾಗಬೇಕಿದೆ.

ಕೊನೆಯದಾಗಿ: ಇತ್ತೀಚೆಗೆ ಸ್ನೇಹಿತನ ಜೊತೆ ಚರ್ಚಿಸುತ್ತಿದ್ದಾಗ ಒಂದು ಮಾತು ಬಂತು, ಬಹುಶಃ ಅದೇ ಹಳೇ ಚರ್ಚೆ: `ಸಂಸ್ಕಾರ'ದ ಪ್ರಾಣೇಶಾಚಾರ್ಯ ಪಾತ್ರ ಆಥೆಂಟಿಕ್ ನೇಟಿವ್ ರಚನೆ ಅಲ್ಲ. ವಸಾಹಾತು ಅನುಭವದಿಂದ ಪೀಡಿತ ಲೇಖಕನೊಬ್ಬ ತನ್ನ ಅನುಭವವನ್ನು ಆ ಪಾತ್ರದ ಮೇಲೆ ಆರೋಪಿಸಿದ್ದು ಇತ್ಯಾದಿ. ನಾನು ಹೇಳಿದೆ: ಅದು ಸರಿ. ಇದರ ಮೂಲಕ ಅದು ಮುಂದಿನ ತಲೆಮಾರಿನವರಲ್ಲಿ ನೇಟಿವ್ ಪಾತ್ರ, ಸಂಸ್ಕೃತಿಯ ಬಗ್ಗೆ ತಪ್ಪು ಗ್ರಹಿಕೆಗಳನ್ನು ಹುಟ್ಟಿಸುವ ಸಾಧ್ಯತೆ ಪಡೆದಿರುವ ಅಪಾಯವೇನೋ ಇದೆ, ಆದರೆ ಅದೇ ಕಾರಣದಿಂದ ವಸಾಹಾತು ಅನುಭವ ಪಡೆದ ಅನಂತಮೂರ್ತಿ ಅವರ ತಲೆಮಾರಿಗೂ, ನಂತರದವರಿಗೂ ಅದಕ್ಕಿರುವ ರೆಲೆವನ್ಸ್-ನ್ನು ನಿರಾಕರಿಸಲು ಸಾಧ್ಯವಿಲ್ಲ ಅಂತ. ಅದೇ ರೀತಿ `ದಿವ್ಯ'ದ ಎಷ್ಟೋ ಪಾತ್ರಗಳು ಇನ್ನೊಂದು ಬಗೆಯ, ಮೇಲಿನದ್ದಕ್ಕೆ ತದ್ವಿರುದ್ಧ ಕಾರಣದಿಂದ, ಕೃತಕತೆ ಪಡೆದಿವೆ. ಕೇಶವನಂಥ ಪಾತ್ರಗಳ ಚಿತ್ರಣದಲ್ಲಿ ಆಧುನಿಕ ಬರಹಗಾರನೊಬ್ಬ ಅತಿ-ಪ್ರಜ್ಞಾಪೂರ್ವಕವಾಗಿ ಇವೊತ್ತು ನಮ್ಮ ಸುತ್ತಲೂ ಕಾಣಸಿಗದ ನೇಟಿವ್ ಪಾತ್ರವನ್ನು ಸೃಷ್ಟಿಸಲು ಹೆಣಗುತ್ತಿರುವುದು ನಮಗೆ ಕಾಣ ಸಿಗುತ್ತದೆ. ಪುರಾಣ ಹೇಳುವ `ಕೇಶವ' ಮತ್ತೆ ಪುರಾಣದಲ್ಲಿನ ಪಾತ್ರದಂತೆ ನಮಗೆ ಕಾಣುತ್ತಾನೆಯೇ ಹೊರತು ಇವೊತ್ತಿನ ವಾತಾವರಣದಲ್ಲಿ ಆಥೆಂಟಿಕ್ ಅನಿಸುವುದಿಲ್ಲ. ಆದರೆ ಒಟ್ಟೂ `ದಿವ್ಯ' ಕೃತಿಯ ಆಶಯವೇ `ದೇಸೀ' ಎನ್ನಬಹುದಾದ ಪರಿಭಾಷೆಯಲ್ಲಿ, `ದೇಸೀ' ವಾತಾವರಣವನ್ನೂ, ಪಾತ್ರಗಳನ್ನೂ ಸೃಷ್ಟಿಸುವ ಸಂಕಲ್ಪದಿಂದಲೇ ಬರೆಯಲಾಗಿರುವುದರಿಂದ, ಈ ಎಲ್ಲಾ ಕೃತಕತೆಗೆ ಒಂದು ಬಗೆಯ ಆಥೆಂಟಿಸಿಟಿ ಇದೆ. ವಿಚಿತ್ರವೆಂದರೆ, ಕೇಶವ ಹಾಗೆ ಪೂರ್ತಿ ಪೌರಾಣಿಕ ಪಾತ್ರವಾಗಿ ಓದುಗನಿಗೆ ಕಂಡುಬಂದಿದ್ದರೆ ಲೇಖಕ ತನ್ನ ಆಶಯದಲ್ಲಿ ಗೆದ್ದಂತೆ. ಸಾಹಿತ್ಯಕೃತಿಗಳಲ್ಲಿನ ತಮ್ಮ ಸೈದ್ಧಾಂತಿಕ ಬದ್ಧತೆಗಳಿಂದಾಗಿ ಪೂರ್ವ, ಪಶ್ಚಿಮಗಳನ್ನು ಸರಳೀಕರಣಗೊಳಿಸುವುದು ಅನಂತಮೂರ್ತಿಯವರ ದೌರ್ಬಲ್ಯ. ಪಶ್ಚಿಮವನ್ನು ಗ್ರಹಿಸುವಾಗ, ಪೂರ್ವವನ್ನು ಗ್ರಹಿಸುವ ಕುರಿತಂತೆ ಪಶ್ಚಿಮದ ಬರಹಗಾರರ ಮೇಲೆ ನಾವು ಆರೋಪಿಸುವ `ಓರಿಯೆಂಟಲಿಸ್ಟ್' ಧೋರಣೆಗಳಿಗೆ ಸಮಾನವಾದ, ನಮ್ಮ `ಆಕ್ಸಿಡೆಂಟಲಿಸ್ಟ್' ಧೋರಣೆಗಳನ್ನು ಮೀರಬಲ್ಲ ಕನ್ನಡ ಲೇಖಕನಿಗಾಗಿ ಕಾಯುತ್ತಿದ್ದೇನೆ.



[ಡಾ ಅನಂತಮೂರ್ತಿ ಪ್ರತಿಕ್ರಿಯೆ: ಈ ಲೇಖನದ ಕುರಿತು ಡಾಅನಂತಮೂರ್ತಿಯವರು ನೀಡಿದ ಪ್ರತಿಕ್ರಿಯೆಯನ್ನು ಸಂಗ್ರಹವಾಗಿ ಗ್ರಹಿಸಿ ಇಲ್ಲಿ ಕೊಡುತ್ತಿದ್ದೇನೆ. ದೂರವಾಣಿಯ ಮೂಲಕ ಗ್ರಹಿಸುವಾಗ ನನ್ನಿಂದ ಏನಾದರೂ ಲೋಪವಾಗಿದ್ದಲ್ಲಿ, ಡಾಅನಂತಮೂರ್ತಿ ನನ್ನನ್ನು ಕ್ಷಮಿಸುವರೆಂಬ ನಂಬಿಕೆಯೊಡನೆ. ಹಾಗೇ ದೂರವಾಣಿಯಯ ಆಚೆ ಬದಿಯಲ್ಲಿ ಅವರ ಧ್ವನಿಯಲ್ಲಿದ್ದ ಶಕ್ತಿಯನ್ನೂ, ಅವರಿಗೆ ತಮ್ಮ ಕೃತಿಗಳ ಬಗ್ಗೆ, ಪಾತ್ರಗಳ ಬಗ್ಗೆ, ಒಟ್ಟೂ ಬರವಣಿಗೆಯ ಬಗ್ಗೆ ಇರುವ ಗಟ್ಟಿ ನಂಬಿಕೆಗಳನ್ನೂ ಇಲ್ಲಿ ನನ್ನ ತೊದಲು ಬರಹದಲ್ಲಿ ಧ್ವನಿಸದೇ ಹೋಗಬಹುದು ಎಂಬ ಆತಂಕದೊಡನೆ.]

"ಲೇಖಕನಾಗಿ `ಹಡೆ' ಪಾತ್ರವನ್ನೇ ಆಗಲಿ, ನನ್ನ ಕೃತಿಯ ಇನ್ನಾವುದೇ ಪಾತ್ರವನ್ನಾಗಲಿ ನಾನು ವಿವರಿಸಬಾರದು. ಅದು ಅದರ ವಿಸ್ತಾರವನ್ನು ಸ್ವತಃ ನಾನೇ ಸಂಕುಚಿತಗೊಳಿಸಿದಂತೆ. ಅದು ಓದುಗರಾದ ನಿಮಗೆ ಬಿಟ್ಟದ್ದು. ನಾನು ಅವರು ಹೇಳುವ [ಬಹುಶಃ ಅಕಾಡೆಮಿಕ್ ವಲಯದವರು] ಪೋಸ್ಟ್-ಮಾಡರ್ನಿಸ್ಟ್ ಫ್ಯಾಶನ್ನಿನಲ್ಲಿ ಬರೆಯುವವನಲ್ಲ. ಅನುಭವಕ್ಕೆ, ಅನಿಸಿಕೆಗೆ ಕಂಡದ್ದನ್ನು ಬರೆಯುವವನು. ಇಲ್ಲಿ (ಮುಖ್ಯವಾಗಿ ಪ್ರಾಣೇಶಾಚಾರ್ಯ) ಪಾತ್ರ ಕೃತಕ, ನೇಟಿವ್ ಹೌದೇ ಅಲ್ಲವೇ ಎಂಬ ಚರ್ಚೆಯೇ ಅಸಂಗತ. ಭೈರಪ್ಪನವರ `ಸಾರ್ಥ'ದ ನಾಗಭಟ್ಟನ ಪಾತ್ರದ ಬಗ್ಗೆಯೂ ಹೀಗೆಯೇ ಹೇಳುವವರಿದ್ದಾರೆ. ಆದರೂ ನನ್ನ ಶೈಲಿ ಭೈರಪ್ಪನವರಿಗಿಂತ ತುಂಬಾ ಭಿನ್ನ. ಮೀನಾಕ್ಷಿ ಮುಖರ್ಜಿ ಗುರುತಿಸುವಂತೆ ನನ್ನ ಕೃತಿಗಳು, ಅಲಿಗೊರಿಕಲ್(ರೂಪಕ) ಮತ್ತು ರಿಯಲಿಸ್ಮ್ (ವಾಸ್ತವ) ಹೀಗೆ ಎರಡು ಮಟ್ಟದಲ್ಲಿ ಕೆಲಸಮಾಡುತ್ತವೆ. (ಅದೇ ರೀತಿ ಎರಿಕ್‍ಸನ್ ನನ್ನ ಬರವಣಿಗೆಯನ್ನು ಸ್ವಲ್ಪ ಅರ್ಥ ಮಾಡಿಕೊಂಡಿದ್ದಾರೆ. ನೈಪಾಲನಿಗೂ ಇದೆಲ್ಲಾ ಅರ್ಥವಾಗುವುದಿಲ್ಲ). ಪ್ರಾಣೇಶಾಚಾರ್ಯರ ಪಾತ್ರವನ್ನು ನಾನು `ಮತ್ಸ್ಯಗಂಧಿಯ ಜೊತೆ ಮಲಗಿ ನಡೆದ ಪರಾಶರ'ನನ್ನು ಆಧರಿಸಿದ್ದು. ಅವನು ನಮ್ಮದೇ ಸಂಸ್ಕೃತಿಯವನು. ಅದು ಹೇಗೆ ಪ್ರಾಣೇಶಾಚಾರ್ಯ ಪಾಶ್ಚಾತ್ಯ ಪೀಡಿತನಾದಾನು? `ಕೇಶವ'ನಂಥವರನ್ನೆಲ್ಲಾ ನಾನು ನನ್ನ ಬದುಕಿನಲ್ಲಿ ಕಂಡಿದ್ದೇನೆ. ಹೀಗೆಲ್ಲಾ ಇರುವಾಗ ನೀವು ಸಮಕಾಲೀನ ಎನ್ನುವುದಾದರೂ ಏನನ್ನು? (ನಾನಂತೂ ಸಮಕಾಲೀನನೇ. ಇಂದಿನ ತುರ್ತು ಅಗತ್ಯಕ್ಕೆ ರಾಜ್ಯಸಭೆಯ ಚುನಾವಣೆ ಹೋರಾಡಲೂ ಹಿಂಜರಿಯದವನು.) ಆದುದರಿಂದ ಇದು ನೇಟಿವ್ ಹೌದೇ ಅಲ್ಲವೆ ಎಂಬ ಚರ್ಚೆಗಿಂತ ಹೆಚ್ಚು ವಿಶಾಲವಾಗಿ ಗ್ರಹಿಸಿ. ಅಲ್ಲಲ್ಲಿ ಗ್ರಹಿಸಿದ್ದೀರಿ ಕೂಡಾ. ನಿಮ್ಮ ಹಾಗೆ ಗ್ರಹಿಸುವವರು ವಿರಳ. ಆ ಕಾರಣಕ್ಕಾಗಿ ನಿಮ್ಮ ಬಗ್ಗೆ ನನಗೆ ಅಭಿಮಾನ. ಧನ್ಯವಾದಗಳು."

Friday, February 10, 2006

ಹಳೆಯ ಮತ್ತು ಹೊಸದರ ನಡುವೆ ಶ್ಯಾಮ್ ಬೆನಗಲ್

ಇವೊತ್ತು ನಿಂತು ನೋಡಿದಾಗ ಹಳೆಯದೆನಿಸಬಹುದಾದ ಕಾಲದಲ್ಲಿ ಹೊಸ ಅಲೆಯ ಚಿತ್ರ ಕೊಟ್ಟ ನಿರ್ದೇಶಕ ಶ್ಯಾಮ್ ಬೆನಗಲ್ ನಮ್ಮ ಇನ್ಸ್ಟಿಟ್ಯೂಟ್‍ಗೆ ಬಂದಿದ್ದರು. ಲೀಡರ್‍‍ಶಿಪ್ ಬಗ್ಗೆ ಮಾತಾಡಲು ಮ್ಯಾನೇಜ್‍ಮೆಂಟ್ ಸ್ಕೂಲ್-ನವರು ಅವರನ್ನು ಕರೆಸಿದ್ದರು.

ತಾವು ಆರನೇ ವಯಸ್ಸಿನಲ್ಲಿಯೇ ಸಿನಿಮಾ ಮಾಡುವ ಮನಸ್ಸು ಹೊಂದಿದ್ದರ ಬಗ್ಗೆ, ತಮ್ಮ ಮೇಲೆ ಪ್ರಭಾವ ಬೀರಿದ ನೆಹರು ಬಗ್ಗೆ ಮಾತನಾಡಿದರು. (ಒಂದು ಸಂವಹನೆಯಲ್ಲಿ ಅಡಗಿರಬಹುದಾದ ಹಲವು ಪದರು-ಗಳ ಬಗ್ಗೆ ನೆಹರು ಅವರ ಕಾಲೇಜಿನಲ್ಲಿ ಮಾತಾಡಿದ್ದರಂತೆ. ಇವೊತ್ತಿನ ಯಾವ ರಾಜಕಾರಣಿಯೂ ಅಂಥ ವಿಷಯದ ಬಗ್ಗೆ ಮಾತನಾಡುವ ಸಾಧ್ಯತೆಯನ್ನು ಯೋಚಿಸಲಾರೆ ಎಂದರು.) ಇವೊತ್ತಿನ ಎಮ್.ಎನ್.ಸಿ.ಗಳಿಗೆ ವ್ಯತಿರಿಕ್ತವಾಗಿ ಅಂದಿನ ಟಾಟ, ಬಿರ್ಲಾ ಸಂವೇದನೆಗಳನ್ನು, ಅವರ ನಾಯಕತ್ವದ ಗುಣಗಳನ್ನು ನೆನೆದರು.

ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿ ಮತ್ತು ಅದರ ನಾಯಕರು ಇಂಗ್ಲೆಂಡಿನ ಶಿಕ್ಷಣದಿಂದ ತಂದ ಆಧುನಿಕ ಮೌಲ್ಯಗಳಾದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾನತೆ ಇವುಗಳನ್ನು ಬಿತ್ತುತ್ತಿರುವಾಗ, ಸಮಾನಾಂತರವಾಗಿ ಭಾರತೀಯ ಚಲನಚಿತ್ರದ ಮುಖ್ಯವಾಹಿನಿ ಹೇಗೆ ಪರಂಪರೆ ಮತ್ತು ಆಧುನಿಕತೆಯ ನಡುವಿನ ಸಂಘರ್ಷವನ್ನು ದಾಖಲಿಸುತ್ತಾ ಬಂತು ಎಂಬುದನ್ನು ವಿವರಿಸಿದರು.

ಹಿಂದಿನ ಸಿನೆಮಾಗಳು ಪರಂಪರೆ ಮತ್ತು ಆಧುನಿಕತೆ, ಹಳ್ಳಿ ಮತ್ತು ನಗರ, ಬಡವ ಮತ್ತು ಶ್ರೀಮಂತ ಇವುಗಳ ಸಂಘರ್ಷದಲ್ಲಿ ಪರಂಪರೆ, ಹಳ್ಳಿ ಮತ್ತು, ಬಡವನ ಮೌಲ್ಯಗಳನ್ನೇ ಎತ್ತಿಹಿಡಿಯುತ್ತಿದ್ದವು. ಇತ್ತೀಚಿನ ಕೆಲವು ಸಿನೆಮಾಗಳಲ್ಲಿ ಆಧುನಿಕತೆಯನ್ನು ಸಾಂಕೇತಿಸುವ ಪಾತ್ರಗಳು ಭಾರತೀಯರನ್ನು ಕ್ರಿಯಾಶೀಲತೆಯತ್ತ ಉತ್ತೇಜಿಸುವುದನ್ನು ತೋರಿಸುತ್ತಿವೆ ಎಂಬುದನ್ನು ವಿವರಿಸುತ್ತಾ,
ಇವೊತ್ತಿನ ಟೈಮ್ಸ್ ಆಫ್ ಇಂಡಿಯಾದ ಲೇಖನವನ್ನು ಉದ್ಧರಿಸುತ್ತಾ ಆಮೀರ್ ಖಾನ್‍ನ ಇತ್ತೀಚಿನ ಚಿತ್ರ `ರಂಗ್ ದೇ ಬಸಂತಿ'ಯಲ್ಲಿನ ಇಂಗ್ಲೀಶ್ ಯುವತಿಯ ಪಾತ್ರವೊಂದು ಯುವಕರನ್ನು ಭ್ರಷ್ಟಾಚಾರದ ವಿರುದ್ಧ ಕ್ರೀಯಾಶೀಲರಾಗುವಂತೆ ಉತ್ತೇಜಿಸುವ ಚಿತ್ರಣವನ್ನು ಉಧಾರಿಸಿದರು. (ಲೇಖನ `ಲಗಾನ್' ಮತ್ತು `ಮಂಗಲ್ ಪಾಂಡೆ' ಚಿತ್ರಗಳು ಈ ದಿಕ್ಕಿನಲ್ಲಿನ ಹಿಂದಿನ ಮೊದಲ ಹೆಜ್ಜೆಗಳು ಎಂದು ವಾದಮಾಡುತ್ತದೆ.)

ಆದರೆ ಈ ಸಂಕೇತಗಳನ್ನು ಇಂದಿನ ಪ್ರೇಕ್ಷಕ ಐ.ಟಿ. ಉತ್ತೇಜಿತ ಸಂಸ್ಕೃತಿಯ ಜೊತೆ ಸಮೀಕರಿಸುವ ಸಾಧ್ಯತೆ ಇದೆಯಲ್ಲವೆ? ಎಂದು ನನಗೆ ಬೆನಗಲ್ ಅವರನ್ನು ಆ ಕ್ಷಣದಲ್ಲಿ ಕೇಳಬೇಕು ಎನ್ನಿಸಿತು. ಆಗ ಕೇಳುವ ಅವಕಾಶವಾಗಲಿಲ್ಲ. ಭಾಷಣ ಮುಗಿದ ನಂತರ ಸೆಮಿನಾರ್ ರೂಮಿನಲ್ಲಿ ಒಂದು ಸಂವಾದ ಇಟ್ಟುಕೊಂಡಿದ್ದರು. ಆಗ ಕೇಳಿದೆ.

ನಾನು ಪ್ರಶ್ನೆ ಪೂರ್ತಿ ಮಾಡುವ ಮೊದಲೇ ಐ.ಟಿ., ಆಧುನಿಕ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಷ್ಟಾಚಾರ ರಹಿತ ವ್ಯವಸ್ಥೆ ಇತ್ಯಾದಿಗಳನ್ನು ತರುವ ಸಾಧ್ಯತೆಗಳನ್ನು ಖಡಾಖಂಡಿತವಾಗಿ ನಿರಾಕರಿಸಿದರು. ಬೆಂಗಳೂರಿನ ಐ.ಟಿ.ಯಿಂದ ಲಾಭಪಡೆದವರು ಸಮಾಜದಲ್ಲಿ ಅಂಥಾ ವ್ಯತ್ಯಾಸವೇನೂ ಮಾಡಿಲ್ಲ ಎಂದರು. ಬಿ.ಪಿ.ಓ.ನ ಹೆಚ್ಚಿನ ಸಂಬಳದ ಕೆಲಸದಿಂದ ಯಾವುದೇ ರಚನಾತ್ಮಕ ವ್ಯತ್ಯಾಸ ಆಗಿಲ್ಲ, ಆಗುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಇನ್ಫಾರ್ಮೇಶನ್ ಟೆಕ್ನಾಲಜಿಯ ಪ್ರೊಫೆಸರ್ ಒಬ್ಬರು ಕರ್ನಾಟಕದ ಪ್ರಾಜೆಕ್ಟ್ `ಭೂಮಿ', ಮತ್ತು ಮಹಾರಾಷ್ಟ್ರದ `ರೈಟ್ ಟು ಇನ್ಫಾರ್ಮೇಶನ್ ಆಕ್ಟ್' ಇಂಥವು ಆಡಳಿತದಲ್ಲಿ ಪಾರದರ್ಶಕತೆಯನ್ನು ತರುತ್ತಿರುವ ಕಡೆ ಅವರ ಗಮನ ಸೆಳೆದರು. ಅಂಥವು ಕೆಲವು ಪ್ರಗತಿಪರ ಹೆಜ್ಜೆಗಳು ಎಂದು ಒಪ್ಪಿಕೊಂಡ ಬೆನಗಲ್ ಭ್ರಷ್ಟಾಚಾರವನ್ನು ಪೋಷಿಸುವ ಹಿತಾಸಕ್ತಿಗಳ ಬೇರು ಎಷ್ಟು ಆಳವಾದದ್ದು ಎಂದು ಕೆರೋಸಿನ್ ಲಾಬಿಯ ಜೊತೆಗಿನ ತಮ್ಮ ಅನುಭವದ ಮೂಲಕ ವಿವರಿಸಿದರು. ಸಬ್ಸಿಡಿಯ ಪ್ರಚಾರಕ್ಕೆ ಸಂಬಂಧಿಸಿದಂತೆ ಚಿತ್ರವೊಂದನ್ನು ಮಾಡುವಂತೆ ಸರ್ಕಾರ ಅವರನ್ನು ಕೇಳಿಕೊಂಡಿತ್ತು.

ಆಮುಲ್ ಚಳುವಳಿಗೆ ಸಂಬಂಧ ಪಟ್ಟ ತಮ್ಮ ಚಿತ್ರ `ಮಂಥನ್' ಮತ್ತು `ಸ್ವಾಧ್ಯಾಯ' ಚಳುವಳಿಗೆ ಸಂಬಂಧ ಪಟ್ಟ ತಮ್ಮ ಚಿತ್ರ `ಅಂತರ್ನಾದ್' ಇವುಗಳ ನಿರ್ಮಾಣದ ಅನುಭವದ ರೋಮಾಂಚನವನ್ನು ಹಂಚಿಕೊಂಡರು. ಇವೆರಡೂ ಸ್ವಾತಂತ್ರ್ಯೋತ್ತರ ಭಾರತ ಕಂಡ ಉತ್ಕೃಷ್ಟ `ಸಹಕಾರೀ' ಚಳುವಳಿಗಳು ಎಂಬುದನ್ನು ಇಲ್ಲಿ ನೆನೆಯಬಹುದು.

ನಿಮ್ಮ ಇತ್ತೀಚಿನ ಚಿತ್ರಗಳು ಸಾಮಾಜಿಕ ಬದಲಾವಣೆ, ಅಭಿವೃದ್ಧಿಯ ಸಮಸ್ಯೆಯ ಕುರಿತು ಒತ್ತು ಕಳೆದುಕೊಳ್ಳುತ್ತಿವೆಯಲ್ಲ? ಎಂಬ ಸಭಿಕರೊಬ್ಬರ ಪ್ರಶ್ನೆಗೆ, ಮನರಂಜನೆಗೆ ಒತ್ತು ಹೆಚ್ಚಾಗಿರುವ ಇವೊತ್ತಿನ ಸಂದರ್ಭದಲ್ಲಿ ಅಂಥ ಅನಿವಾರ್ಯತೆಯನ್ನು ಒಪ್ಪಿಕೊಂಡರು. ಮಲ್ಟಿಪ್ಲೆಕ್ಸ್ ವ್ಯವಸ್ಥೆಯಿಂದ ಪ್ರೇಕ್ಷಕರ ವಿಭಾಗೀಕರಣ ಸುಲಭವಾಗಿ ಸಹಾಯವಾಗಿದೆ ಎಂದರು.

ಶ್ಯಾಮ್ ಬೆನೆಗಲ್‍ರು ನಮ್ಮ ನಿಮ್ಮಂತೆ ಹಳೆಯ ಸಂವೇದನೆಗಳನ್ನು ಉಳಿಸಿಕೊಳ್ಳಲು ಹೆಣಗುತ್ತಾ, ಇವೊತ್ತಿನ ಹೊಸ ಕಾಲಕ್ಕೂ ಹೊಂದಿಕೊಳ್ಳಲು ಯತ್ನಿಸುತ್ತಿರುವ ವ್ಯಕ್ತಿಯಾಗಿ ಕಂಡರು.

ಶ್ರೀನಿವಾಸ ವೈದ್ಯರ ಕಥೆ `ರುದ್ರಪ್ರಯಾಗ'ದ ಕುರಿತು ಒಂದು ಟಿಪ್ಪಣಿ

ಶ್ರೀನಿವಾಸ ವೈದ್ಯರು ೧೯೯೪ರಲ್ಲಿ ಪ್ರಕಟಿಸಿದ `ತಲೆಗೊಂದು ತರತರ' ೧೯೯೭ರಲ್ಲಿ ಪ್ರಕಟಿಸಿದ `ಮನಸುಖರಾಯನ ಮನಸ್ಸು' ಹರಟೆ ಸಂಗ್ರಹಗಳಿಂದಲೇ ಉತ್ತರ-ಕರ್ನಾಟಕದಲ್ಲಿ ಜನಪ್ರಿಯತೆ ಗಳಿಸಿದ್ದರೂ, ಕಳೆದ ವರ್ಷ ಮನೋಹರ ಗ್ರಂಥಮಾಲೆ ಪ್ರಕಟಿಸಿದ `ಹಳ್ಳ ಬಂತು ಹಳ್ಳ' ಕಾದಂಬರಿಯ ಮೂಲಕ ಸಾಹಿತ್ಯವಲಯಗಳಲ್ಲಿ ವೈದ್ಯರದು ಇತ್ತೀಚೆಗೆ ಹೆಚ್ಚು ಗಂಭೀರವಾಗಿ ಚರ್ಚಿಸಲಾಗುತ್ತಿರುವ ಹೆಸರು.

ಸದ್ಯದ ಕೇಂದ್ರೀಕೃತ, ಕೈಗಾರಿಕೀಕೃತ, ಜಾಗತೀಕರಣದ ಭರದಲ್ಲಿ ಹೊಸ ತಲೆಮಾರಿನ ಸ್ಮೃತಿಯಿಂದ ಮಾಯವಾಗುತ್ತಿರುವ ಪಟ್ಟಣ, ಗ್ರಾಮೀಣ ಸೀಮೆಯ ಜೀವನ-ಕ್ರಮ, ಭಾಷೆ, ಸಂಸ್ಕೃತಿಗಳನ್ನು ಜೀವಂತವಾಗಿ ಸೆರೆಹಿಡಿದು ಎತ್ತಿಕೊಡುವ ಪ್ರಯತ್ನ ಮಾಡುತ್ತಿರುವ ಮತ್ತು ಅದರಲ್ಲಿ ಸಫಲವಾಗುತ್ತಿರುವ ಕೆಲವು ಲೇಖಕರಲ್ಲಿ ಒಬ್ಬರಾದ ಶ್ರೀನಿವಾಸ ವೈದ್ಯರದು ಬೆಂಗಳೂರು, ಮುಂಬೈ ಮಹಾನಗರಗಳಲ್ಲಿ ಬದುಕು ಸವೆಸಿದ ನಂತರವೂ ಉತ್ತರ-ಕರ್ನಾಟಕದ, ವಿಶೇಷವಾಗಿ ಧಾರವಾಡ ಪ್ರದೇಶದ ಸಂಸ್ಕೃತಿಯಲ್ಲಿ ಬೇರೂರಿದ ಮನಸ್ಸು.

ಪ್ರಸ್ತುತ ಕಥೆ `ರುದ್ರಪ್ರಯಾಗ'ದಲ್ಲಿ (ಕಥೆ `ದೇಶಕಾಲ' ಸಾಹಿತ್ಯ ಪತ್ರಿಕೆಯ ಮೊದಲ ಸಂಪುಟದ ನಾಲ್ಕನೇಯ ಸಂಚಿಕೆಯಲ್ಲಿ ಮೊದಲು ಪ್ರಕಟಗೊಂಡಿದ್ದು, ಆಸಕ್ತರು
ಇಲ್ಲಿ ಅಂದರೆ ಅಂತರ್ಜಾಲದಲ್ಲಿ ಕನ್ನಡಸಾಹಿತ್ಯ.ಕಾಂ‍ನ ಫೆಬ್ರುವರಿ ತಿಂಗಳ ಸಂಚಿಕೆಯಲ್ಲಿ ಸಹ ಓದಬಹುದು.) ವೈದ್ಯರು ವಿಧವೆ ಕೃಷ್ಟಕ್ಕ, ಅವಳ ದತ್ತಕ ಪುತ್ರ ಗುರಣ್ಣ ಮತ್ತು ಗುರಣ್ಣನ ಮೊಮ್ಮಗಳು (ಅಮೇರಿಕನ್‍ಳನ್ನು ಮದುವೆಯಾಗಿ ಅಮೇರಿಕೆಯಲ್ಲೇ ನೆಲೆಸಿರುವ ಮಗನ ಮಗಳು) ಸೂಸನ್ ಹೀಗೆ ಮೂರು ಮುಖ್ಯ ಪಾತ್ರಗಳ ಸಂಬಂಧವನ್ನು ಕೇದಾರ-ಬದರೀ-ಪ್ರಯಾಗ ಯಾತ್ರೆಯ ಸಂದರ್ಭದ ಮೂಲಕ ಚಿತ್ರಿಸುತ್ತಾರೆ.

ಮೊದಲು ಕಥೆಯಲ್ಲಿ ಕಾಣುವ ದೋಷದ ಬಗ್ಗೆ ಗಮನಹರಿಸೋಣ.

ಸಾಂಪ್ರದಾಯಿಕತೆಯಲ್ಲಿ ಬೇರೂರಿದ ಹಿರಿವಯಸ್ಸಿನ ಪಾತ್ರಗಳಾದ ಕೃಷ್ಟಕ್ಕ ಮತ್ತು ಗುರಣ್ಣರ ಅಂತರಂಗ ಮತ್ತು ಸಂಕಟಗಳು ಓದುಗರಿಗೆ ದಕ್ಕುವಂತೆ ಸೂಸನ್‍ಳ ಅಂತರಂಗಕ್ಕೆ ಓದುಗನಿಗೆ ಪ್ರವೇಶವೇ ಇಲ್ಲದಿರುವುದು ಕಥೆಯಲ್ಲಿ ಎದ್ದುಕಾಣುವ ಮುಖ್ಯ ಲೋಪ. ಅವಳು ಯಾತ್ರಿಕರ ಜೊತೆ ಪ್ಯಾಂಟ್ ಧರಿಸಿ ಸಿಗರೇಟು ಸೇದುವ, ಜೀಪಿನ ಪಟ್ಟಿ ಹಿಡಿದು ತೂಗಾಡುವ, ಮಂಗ್ಯಾನ್ಹಾಂಗ ಕುಣಿದಾಡುವ ಚಂಚಲ ಸ್ಟಿರಿಯೋಟೈಪ್ ಆಗಿ ನಮಗೆ ಕಾಣಿಸುತ್ತಾಳೆಯೇ ಹೊರತು ಅದನ್ನು ಮೀರಿ ಪಾತ್ರ ಬೆಳೆಯುವುದೇ ಇಲ್ಲ. ಅನ್ಯ ಸಂಸ್ಕೃತಿಯಿಂದ ಬಂದ ಎಳೆ ವಯಸ್ಸಿನ ಸೂಸನ್‍ಳಲ್ಲಿ ಗುರಣ್ಣಜ್ಜನ ಬಗ್ಗೆಯೂ, ಕೃಷ್ಟಕ್ಕಜ್ಜಿಯ ಬಗ್ಗೆಯೂ, ಒಟ್ಟೂ ಪರಿಸರದ ಬಗ್ಗೆಯೂ ಇರಬಹುದಾದ ಪ್ರೀತಿ, ಅನುಮಾನ, ಆತಂಕಗಳು ಓದುಗರಿಗೆ ತಲುಪುವುದೇ ಇಲ್ಲ. ಹೀಗಾಗಿ ರುದ್ರಪ್ರಯಾಗದಲ್ಲಿ ಸಂಭವಿಸಬೇಕಾಗಿದ್ದ, ಇನ್ನಷ್ಟು ವಿಸ್ಫೋಟಕಾರಿಯಾಗಬಹುದಾಗಿದ್ದ, ಮೂರು ತಲೆಮಾರುಗಳ `ಸಂಗಮ' ಅಪೂರ್ಣವೆನಿಸುತ್ತದೆ. ಇದು ಕಥೆಯ ಬಗೆಗಿನ ಅತೃಪ್ತಿ.

ಲೇಖಕರ ಶಕ್ತಿ ಇರುವುದು ಪಾರಂಪರಿಕ ಭಾಷೆಯಲ್ಲಿ ವಿವರಗಳನ್ನು, ಸೂಕ್ಷ್ಮಗಳನ್ನು ದಾಖಲಿಸುವಲ್ಲಿ (`ಅಂಟಿನ ಉಂಡಿಗೆ ಒಣಖೊಬ್ಬರಿ ಯಾವಾಗ ಹಾಕಬೇಕು, ಉತ್ತತ್ತಿ ಎಷ್ಟು ಸಣ್ಣದಾಗಿ ಹಚ್ಚಬೇಕು..'). ಕೃಷ್ಟಕ್ಕನ ಕ್ಷೋಭೆಯನ್ನು ದಾಟಿಸುವಲ್ಲಿ; ಅವಳ ದೃಷ್ಟಿಯಲ್ಲಿ ಅವಳ ಗಂಡನ ಸಾವಿಗೆ ಕಾರಣರಾದ ಅವಳ ಗಂಡ ಇಟ್ಟುಕೊಂಡ ಮುಳುಗುಂದದ ಸಕೇಶಿ ಮತ್ತವಳ ಮಗ ಬಿಂದ್ಯಾನೊಂದಿಗಿನ ಈರ್ಷ್ಯೆಯನ್ನು ಮೂಡಿಸುವಲ್ಲಿ. (`ನನಗ ಮಕ್ಕಳಾಗಲಿಲ್ಲೆರವ ಪಾಪಿ ನಾನು..ಖರೆ..ಆದರ ಆಗಿನ ಕಾಲದ ಲೋಕಾರೂಢಿ ಪ್ರಕಾರ ಇನ್ನೊಂದು ಲಗ್ನ ಮಾಡಿಕೋಬೇಕಾಗಿತ್ತು..ಯಾರು ಬ್ಯಾಡಾ ಅಂತಿದ್ರು..ಅದು ಬಿಟ್ಟು ಅಡಿಗೀ ಮಾಡಿ ಹಾಕಲಿಕ್ಕೆ ಅಂತ ಬಂದ ಆ ಮುಳಗುಂದದ ಸಕೇಶಿ..ಅಕೀ ಸಂಗತೀನ...' ). ಇದೆಲ್ಲವೂ ಪ್ರಯಾಗದ ಪ್ರವಾಸದ ಭಾವೋನ್ಮತ್ತತೆಯಲ್ಲಿ ತಾರಕಕ್ಕೇರುತ್ತದೆ. ಮ್ಲೇಚ್ಛ ಸಂಸ್ಕೃತಿಯಿಂದ ಬಂದ ಸೂಸನ್‍ಳ ಬಗೆಗೆ ಏನೇ ಕಸಿವಿಸಿಯಿದ್ದರೂ ಅವಳ ಗಾಯದ ಕಾಲಿಗೆ ಬೇರು ತೇದು ಹಚ್ಚುವಾಗ ವಾತ್ಸಲ್ಯ ಮಿಡಿಯುವ ಮೂಲಕ ಪಾತ್ರದ ಪೂರ್ಣತೆ ಓದುಗನ ಅರಿವಿಗೆ ದಕ್ಕುತ್ತದೆ.

ದತ್ತಕ ತಾಯಿ ಕೃಷ್ಟಕ್ಕನ ಜೊತೆ ಬದುಕು ತೊಡಕಾಗಿಸಿಕೊಂಡು, ತಿಳುವಳಿಕೆ ಬಂದ ಮೇಲೂ ಝಾಡಿಸಿ ಒದ್ದು ಈಚೆ ಬರುವ ಇಚ್ಛೆ ಇದ್ದರೂ, ತನ್ನ ಸಹಜ ಮೃದು ಸ್ವಭಾವದಿಂದ ಬರಲಾರದೇ ಒದ್ದಾಡುವ ಗುರಣ್ಣನಿಗೆ ತನ್ನಿಂದ ಸಾಧ್ಯವಾಗದ ಸ್ವಚ್ಛಂದತೆ ದಕ್ಕಿಸಿಕೊಂಡಿರುವ ಸೂಸನ್‍ಳನ್ನು, ದೂರವಾದ ಮಗನ ಕೊರಗಿನಲ್ಲಿ ಸಾವು ಕಂಡ ಹೆಂಡತಿಯನ್ನು ನೆನೆದು, ತನ್ನ ಬದುಕಿನ ವೈಫಲ್ಯದ ದ್ಯೋತಕ ಎಂದುಕೊಳ್ಳುವುದೂ, ಆದರೆ ಜೊತೆಜೊತೆಗೆ ತನಗೆ ಸಾಧಿತವಾಗದ್ದು ತನ್ನ ಪ್ರತಿಭಾವಂತ ಮಗನಿಗೆ ಸಾಧಿತವಾಗಿ ತನ್ಮೂಲಕ ಮೊಮ್ಮಗಳಲ್ಲಿ ಅಭಿವ್ಯಕ್ತವಾಗಿದ್ದನ್ನು ಕಂಡು ಧೈರ್ಯ ಪಡೆದುಕೊಳ್ಳುವುದೂ, ಹೀಗೆ ಗುರಣ್ಣನ ಮನಸ್ಸಿನ ತುಮುಲ ಅನಾವರಣಗೊಳ್ಳುತ್ತದೆ. ಆದರೂ ಕೃಷ್ಟಕ್ಕನಷ್ಟು ಪೂರ್ಣವಾಗಿ ಗುರಣ್ಣ ನಮಗೆ ದಕ್ಕುವುದಿಲ್ಲ.

ಆದರೆ ಒಟ್ಟಿನಲ್ಲಿ ತಮ್ಮ ಮೂಲ ಸಂಸ್ಕೃತಿಯಲ್ಲಿ ಬೇರೂರಿದ ಪಾತ್ರಗಳನ್ನು ಅರಿಯುವುದರಲ್ಲಿ, ಅನಾವರಣಗೊಳಿಸುವುದರಲ್ಲಿ, ಧಾರವಾಡದ ಪಾರಂಪರಿಕ ಭಾಷೆಯಲ್ಲಿ ವಿವರಗಳನ್ನು ದಾಖಲಿಸುವಲ್ಲಿ ವೈದ್ಯರ ಪ್ರತಿಭೆ ದೊಡ್ಡದು ಎಂಬುದು `ಶ್ರದ್ಧಾ', `ಗಾಯಕವಾಡ ದಾದಾ', `ಹಳ್ಳ ಬಂತು ಹಳ್ಳ' ಕೃತಿಗಳ ನಂತರ ಮತ್ತೊಮ್ಮೆ ಸಾಬೀತಾಗುತ್ತದೆ.