ಲಗೇ ರಹೋ ಮುನ್ನಾಭಾಯಿ: ಒಂದು ವಾರೆ ನೋಟ
[ಈ ಲೇಖನ ದಿನಾಂಕ ೧-೧೦-೨೦೦೬ರ ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾಗಿದೆ. ಉದಯವಾಣಿಯ ಲಿಂಕ್ ಇಲ್ಲಿದೆ.]
ನಾನು ಈ ಸಿನೆಮಾ ನೋಡಿದ್ದು ಮುಂಬೈ-ನ ಕಾಂಜೂರು ಉಪನಗರದ ರೈಲುನಿಲ್ದಾಣದ ಬಳಿಯ ಮಲ್ಟಿಪ್ಲೆಕ್ಸ್ ಒಂದರಲ್ಲಿ. ರೈಲು-ನಿಲ್ದಾಣದ ಸುತ್ತಲಿನ ಪ್ರದೇಶ ಮುಂಬೈನ ಹಲವು ಪ್ರದೇಶಗಳಂತೇ ಹಲವಾರು ಕಾಂಟ್ರ್ಯಾಸ್ಟ್-ಗಳಿಂದ ತುಂಬಿರುವಂಥದ್ದು. ಹಲವಾರು ನಮೂನಿಯ ಅಂಗಡಿಗಳು, ತರಕಾರಿ ಮಾರುವವರು, ನಿಂಬೂಪಾನಿ ಮಾರುವವರು, ಪಾನಿಪುರಿಯವರು, ಅಟೋ-ನಿಲ್ದಾಣ, ಪುರಾತನ ಕಾಲದ್ದೆನಿಸುವ ಖಾರಪುಡಿ, ಮಸಾಲೆಪುಡಿ ಕುಟ್ಟುವ ಕಾರ್ಖಾನೆ, ನಿಲ್ದಾಣಕ್ಕೆ ಹೋಗಿಬರುವ ಜನರು, ಅಶಿಸ್ತು, ಗಜಿಬಿಜಿ, ಧೂಳು, ಹೊಗೆ, ಕೊಳಚೆ. ಇವೆಲ್ಲವುಗಳ ಮಧ್ಯ ಒಂದೆರಡು ಲಕಲಕಿಸುವ ಹೈ-ರೈಸ್ ಅಪಾರ್ಟ್ಮೆಂಟುಗಳು ಮತ್ತು ಮುಲ್ಟಿಪ್ಲೆಕ್ಸ್ ಹೊಂದಿರುವ ಮಾಲ್. ಏರ್ ಕಂಡೀಶನ್ಡ್ ಮಲ್ಟಿಪ್ಲೆಕ್ಸ್-ನ ಹೊರಗಿರುವವವನಿಗೆ ಹೇಗಾದರೂ ಮಾಡಿ ಮಲ್ಟಿಪ್ಲೆಕ್ಸ್-ಒಳಗೆ ಸೇರಿ ಬಿಗಿಯಾದ ಉಡುಪು ಧರಿಸಿದ ಆ ಯುವಜೋಡಿಯಂತೆ ಝಂ ಎಂದು ಸಿನೆಮಾ ನೋಡುವ ಆಸೆ, ಆತುರ. ಮಲ್ಟಿಪ್ಲೆಕ್ಸ್-ನಲ್ಲಿರುವವರಿಗೆ ಸುತ್ತಲಿನ ಆ ಅಸಹ್ಯದ ಬಗ್ಗೆ ಅನುಕಂಪ, ಕನಿಕರ, ಅಸಡ್ಡೆ, ನಮ್ಮಿಂದ ಸಾಧ್ಯವಾಗುವುದಾದರೆ ಇದನ್ನೆಲ್ಲ ಬದಲಿಸಿಬಿಡಬೇಕೆಂಬ ರೋಷ ಇವುಗಳಾನ್ನು ಹೊತ್ತ ಸ್ಥಿತಿವಂತರ ಕಲಸುಮೇಲೊಗರದ ಭಾವ.
ನಮ್ಮ ಇಂಥಾ ಒಂದು ಎಕ್ಸಿಸ್ಟೆನ್ಷಿಯಲ್ ಸ್ಥಿತಿಯನ್ನು ಮನಸ್ಸಿನಲ್ಲಿಟ್ಟುಕೊಂಡು `ಲಗೇ ರಹೋ ಮುನ್ನಾಭಾಯಿ'ಯನ್ನು ಪರಿಶೀಲಿಸೋಣ.
ಮುನ್ನಾಭಾಯಿ ಮತ್ತು ಸರ್ಕೇಷ್ವರ್(ಸರ್ಕೀಟ್) ನಿತ್ಯ ಬದುಕುವ ಪರಿಸರ 'ಅಸಹ್ಯ'ವಾದ ಸ್ಲಮ್ಮಿಗೆ ಸೇರಿದ್ದಾದರೆ, ನಾಯಕಿ-ಯ ಪರಿಸರ ಕೆಲವರಿಗೆ ಮಾತ್ರ ಕೈಗೆಟಕುವ ವೊರ್ಲ್ದ್‍ಸ್ಪೇಸ್ ಸೆಟಲೈಟ್ ರೇಡಿಯೋ-ದ ಸ್ಟುಡಿಯೋದ ಹವಾನಿಯಂತ್ರಿತ ಪರಿಸರ. ಸಿನೆಮಾ ಹೇಳುವ ಪ್ರಕಾರ ನಾಯಕ ನಾಯಕಿಯ ಪ್ರೀತಿ ಪಡೆಯಲು ಬಳಸುವ ಮಾರ್ಗ 'ದಾದಾಗಿರಿ'ಯಾಗದೇ 'ಗಾಂಧಿಗಿರಿ'ಯಾಗಿರುತ್ತದೆ. ಇದು ಬಹುಮಟ್ಟಿಗೆ ನಿಜವೂ ಹೌದು. ಅಂತೆಯೇ ಸಿನೆಮಾ ನಮ್ಮ ನಿಮ್ಮೆಲ್ಲರ ಮನಸ್ಸನ್ನು ಗೆಲ್ಲುತ್ತದೆ.
ಈ ಸಿನೆಮಾದ ಹಿಂದಿನ ಅವತರಣಿಕೆಯಾದ 'ಮುನ್ನಾಭಾಯಿ ಎಂ.ಬಿ.ಬಿ.ಎಸ್.', ವಸಾಹತುಶಾಹಿ ನಿರ್ಮಿಸಿರುವ ವ್ಯವಸ್ಥೆಯ ಲೋಪದೋಷಗಳಿಗೆ (ಆಧುನಿಕ ವೈದ್ಯಕೀಯ ವ್ಯವಸ್ಥೆಯಲ್ಲಿ ವಿದ್ಯಾರ್ಜನೆಗೆ ವ್ಯವಸ್ಥೆಯ ಅಂಚಿನಲ್ಲಿರುವ ಮುನ್ನಾಭಾಯಿ ಅಂಥವರಿಗೆ ಜಾಗವಿಲ್ಲ), ಸಿನೆಮಾ ಕೊಡುವ ಪರಿಹಾರವಾಗಲಿ, ಸಿನೆಮಾದ ಒಟ್ಟೂ ನಿರೂಪಣೆಯಾಗಲಿ `ನಾಗರಿಕ' ಸಮಾಜ ಒಪ್ಪುವಂಥದ್ದಾಗಿರಲಿಲ್ಲ.
ಆದರೆ `ಲಗೇ ರಹೋ..' ತೋರಿಸುವ ಪರಿಹಾರ ಮಾರ್ಗವೂ, ಸಿನೆಮಾದ ಒಟ್ಟೂ ನಿರೂಪಣೆಯೂ ಹೆಚ್ಚು ಆರೋಗ್ಯಕರವಾಗಿದೆ. ಅಂತೆಯೇ ತುಸು ಹೆಚ್ಚು ಗಂಭೀರ ವಿಮರ್ಶೆಗೆ ಅರ್ಹವಾಗಿದೆ. ತತ್‍ಕ್ಷಣಕ್ಕೆ ಹೊಳೆವ ಕೆಲವು ಉತ್ತಮ ಅಂಶಗಳು ಇವು. ಮುನ್ನಾ ಮತ್ತು ಸರ್ಕೀಟ್ ನಗರೀಕರಣ ಹಿನ್ನೆಲೆಯಲ್ಲಿ ನೆಲೆಯಿಲ್ಲದಂತಾಗಿರುವ ವೃದ್ಧರಿಗೆ ಭೂಮಾಲೀಕರಿಂದ ಅಹಿಂಸೆ ಮತ್ತು ಪ್ರೀತಿಯ ಮಾರ್ಗದಿಂದಲೇ ಆಶ್ರಯ ಮರಳಿಗಳಿಸಿಕೊಡುತ್ತಾರೆ. ತಂದೆಯ ಹಣ ಕಳೆದ ಮಗನನ್ನು ಟ್ಯಾಕ್ಸಿ ನಡೆಸುವ ವೃತ್ತಿಮಾರ್ಗಕ್ಕೆ ಹಚ್ಚುತ್ತಾರೆ. (ಸ್ವತಃ ಅವರಿಬ್ಬರು ಅಷ್ಟೇ ಗಂಭೀರವಾಗಿ ಯಾವುದೇ ಪ್ರಾಮಾಣಿಕ ವೃತ್ತಿಗೆ ತತ್‍ಕ್ಷಣಕ್ಕೆ ಪ್ರವೃತ್ತರಾಗುದಿಲ್ಲ. ಆ ಮಾತು ಬೇರೆ. ನಾಯಕ ನಾಯಕಿಯನ್ನು ಗಾಂಧಿಗಿರಿಯ ಮೂಲಕ ಗೆಲ್ಲಬೇಕು. ಜೊತೆಗೇ ನಮ್ಮನ್ನು ರಂಜಿಸಬೇಕು. ಇದು ಸಿನೆಮಾ. ಇದನ್ನು ಬಿಟ್ಟು ಅವರು ಕದಲುವಂತಿಲ್ಲ). ಸಿನೆಮಾದುದ್ದಕ್ಕೂ ವ್ಯಕ್ತವಾಗುವ ಗಾಂಧಿಯನ್ನು ಪುತ್ಥಳಿಯಿಂದಲೂ, ನೋಟುಗಳಿಂದಲೂ, ರಸ್ತೆಗಳ ನಾಮ ಫಲಕದಿಂದಲೂ, ಕೋರ್ಟು-ಕಚೇರಿಗಳ ಗೋಡೆಯಿಂದಲೂ ಕೆಳಗಿಸಿ ನಮ್ಮ ನಮ್ಮ ಹೃದಯದಲ್ಲಿ ಇಳಿಸಿಕೊಳ್ಳಬೇಕೆಂಬ ಸರಳ ಸಂದೇಶ. ಒಳ್ಳೆಯ ಕೆಲಸ ಮಾಡಿದರೆ ಈ ಜನ ಮುನ್ನಾಭಾಯಿಯನ್ನೂ ಪುತ್ಥಳಿಗೆ ಏರಿಸಿಬಿಡಬಹುದೆಂಬ ವ್ಯಂಗ್ಯದಲ್ಲೂ ವ್ಯಕ್ತವಾಗುವುದೂ ಅದೇ ಸಂದೇಶವೇ! ಈ ಸಂದೇಶದಿಂದ ನಿತ್ಯ ಭಯೋತ್ಪಾದನೆಯ ಇಂದಿನ ದಿನಗಳಲ್ಲಿ ೧೯೯೩ರ ಮುಂಬೈ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಆರೋಪ ಎದುರಿಸುತ್ತಿರುವ ನಟ ಸಂಜಯ ದತ್ತ ಸೇರಿದಂತೆ ನಾವು ನೀವೂ ಪಾಠ ಕಲಿಯುವುದಿದೆ. ಅಂದ ಹಾಗೆ ಆರೋಪ ಸಾಬೀತಾಗದ ಸಂಜಯ ದತ್ತರಿಗಿಂತ ನಾವೂ, ನೀವೂ ಹೆಚ್ಚು ಸಾಧುಗಳು ಎಂದು ಹೇಳುವುದಕ್ಕೆ ನನ್ನ ಬಳಿ ಯಾವ ಆಧಾರಗಳೂ ಇಲ್ಲ. ಗಾಂಧೀವಾದದ ಪ್ರಕಾರ ಪಾಶ್ಚಾತ್ಯ ನಾಗರೀಕತೆಯ ಬೆನ್ನು ಹತ್ತಿರುವ ನಾವೆಲ್ಲರೂ ಪರೋಕ್ಷವಾಗಿ ಭಯೋತ್ಪಾದನೆಯನ್ನು ಪೋಷಿಸುತ್ತಿರುವವರೇ! ಕೆಲವು 'ಪೋಸ್ಟ್‍ಮಾಡರ್ನಿಸ್ಟ್' ಬುದ್ಧಿಜೀವಿಗಳು ಗಾಂಧಿಯನ್ನು ಅನಾಧುನಿಕ ನೆಲೆಯಲ್ಲಿ ರೋಮ್ಯಾಂಟಿಕೀಕರಣಗೊಳಿಸುತ್ತಾ ಎಲ್ಲಾ ಗ್ರಾಮೀಣ (ಮೂಢ)ನಂಬಿಕೆಗಳ ಪರರಂತೆ ಸರಳೀಕರಿಸಿ ಚಿತ್ರಿಸುವುದೂ ಉಂಟು. ಅಂಥವರಿಗೆ ಚಾಟಿಯೇಟು ಕೊಡುವಂತೆ ಇಲ್ಲಿ ಗಾಂಧಿ ಕುಂಡಲಿ-ಕಳಂಕವಿರುವ ವಿವಾಹವನ್ನೂ ಬೆಂಬಲಿಸುವ ಆಧುನಿಕ ವೈಚಾರಿಕರಾಗಿಯೇ ಚಿತ್ರಿತರಾಗಿದ್ದಾರೆ. ಇದೂ ಕೂಡಾ ಸಿನೆಮಾದಲ್ಲಿ ನಾನು ಇಷ್ಟಪಟ್ಟ ಮತ್ತೊಂದು ಅಂಶ. ಗಾಂಧೀಜಿ ಬೆಂಬಲಿಸುತ್ತಿದ್ದ ಇನ್ನೂ ಕೆಲವು ಪ್ರಗತಿಪರ ಅಂಶಗಳನ್ನು ನಿರ್ದೇಶಕರು ತೋರಿಸುವ ಧೈರ್ಯ ಮಾಡಬಹುದಿತ್ತು ಅನಿಸುತ್ತದೆ.
ಇದೇ ಹಿನ್ನೆಲೆಯಲ್ಲಿ ಇನ್ನೊಂದು ಕಾಂಟ್ರ್ಯಾಸ್ಟ್ ಬಗ್ಗೆ ಚರ್ಚಿಸಬಯಸುತ್ತೇನೆ. 'ಲಗೇ ರಹೋ..' ನೋಡುವ ಕೆಲವೇ ದಿನ ಮೊದಲು ರಿತ್ವಿಕ್ ಘಾತಕ್ ಅವರ 'ಸುವರ್ಣರೇಖಾ' ನೋಡುವ ಅವಕಾಶ ಸಿಕ್ಕಿತು. ಸಿನೆಮಾದ ಮೊದಲ ದೃಶ್ಯದಲ್ಲಿ ೧೯೪೭ರ ವಿಭಜನೆಯಿಂದಾಗಿ ಬಂಗ್ಲಾದೇಶದಿಂದ ಬಂಗಾಳಕ್ಕೆ ಹೊಸ ಬದುಕಿನ ಆಸೆ ಹೊತ್ತು ವಲಸೆ ಬಂದ ನಿರ್ವಸತಿಕರೆಲ್ಲಾ ಸೇರಿ ತಮಗಾಗಿ ತಾತ್ಕಾಲಿಕ ವಸತಿ ಮತ್ತು ಶಾಲೆಯೊಂದನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಗಾಂಧೀಯುಗದ ಆದರ್ಶ, ಕನಸು, ಮೌಲ್ಯಗಳನ್ನು ಹೊತ್ತವರು ಅವರು. ದಿನಾಂಕ ಫೆಬ್ರುವರಿ ೧, ೧೯೪೮. ಅಂದಿನ ದಿನ ಪತ್ರಿಕೆ ಮಧ್ಯವಯಸ್ಕ ಶಿಕ್ಷಕನೊಬ್ಬನ ಕೈಯಲ್ಲಿದೆ. ಗಾಂಧೀ ಹತ್ಯೆಯಾದ ಸುದ್ದಿ ಪ್ರಕಟಗೊಂಡಿದೆ. ಪತ್ರಿಕೆ ಕೈಜಾರುತ್ತಿದ್ದಂತೆ ಆತನ ಬಾಯಿಯಿಂದ ಉದ್ಗಾರ ಹೊರಬೀಳುತ್ತದೆ 'ಹೇ ಭಗವಾನ್! ನಾವು ಮೋಸಹೋದೆವು'. ಗಾಂಧೀಯ ರಾಮರಾಜ್ಯದ ಭರವಸೆಯಲ್ಲಿ ಬಂದಿದ್ದ ಅವರಿಗೆ ಭ್ರಮನಿರಸನವಾದ ಚಿತ್ರಣವಿದು. ಕಪ್ಪು-ಬಿಳುಪಿನಲ್ಲಿ ಘಾತಕ್-ರು ಸೆರೆಹಿಡಿಯುವ ಆ ಚಿತ್ರ ಇನ್ನೂ ಮನಸ್ಸಿನಲ್ಲಿದೆ. `ಸುವರ್ಣರೇಖಾ' ಎಂಬ ಈ ಸಿನೆಮಾ ಗಾಂಧೀಜಿಯ ಪಾತ್ರವನ್ನು ಚಿತ್ರಕಥೆಯೊಳಗೆ ನೇರವಾಗಿ ತರದೇ ಕಳೆದು ಹೋಗುತ್ತಿರುವ ಗಾಂಧೀವಾದದ ಮೌಲ್ಯಗಳ ಯುಗಪಲ್ಲಟಗಳನ್ನು ದಾಖಲಿಸುವ ಒಂದು ವಾಸ್ತವವಾದಿ ಮಾರ್ಗದ ಚಿತ್ರವಾಗಿದೆ.
ಇನ್ನೊಂದು ಚಿತ್ರವನ್ನು ನೆನೆಸಿಕೊಳ್ಳಿ. ಇದು ನಮ್ಮ ಇಂದಿನ ದಿನಗಳ ವಾಸ್ತವವಾದಿ ಸಿನೆಮಾ ದಿಗ್ದರ್ಶಕನೊಬ್ಬನಿಂದ ಚಿತ್ರೀಕರಿಸಲು ಕಾದಿದ್ದು. ಉತ್ತರ ಅಮೇರಿಕೆಯ ಯಾವುದೇ ನಗರ, ಪಟ್ಟಣದ ಮಧ್ಯಮ ತರಗತಿಯ ಒಂದು ಮನೆ. ಹೊಸ ಬದುಕಿನ ಹೊಸ ಆಸೆ, ಅಮೇರಿಕನ್ ಕನಸು ಹೊತ್ತು ಬಂದ ಮಧ್ಯಮ ವರ್ಗದ ಹಿನ್ನೆಲೆಯ, ದಕ್ಷಿಣ ಏಶಿಯಾದಿಂದ ವಲಸೆ ಬಂದ, ರೂಮ್‍ಮೇಟ್ ಆಗಿರುವ ಯುವಕರು ಟಿ. ವಿ. ಮೇಲೆ ಸಿ. ಎನ್. ಎನ್. ಚಾನೆಲ್ ನೋಡುತ್ತಿದ್ದಾರೆ. (ಈ ಯುವಕರ ಹಿರಿಯರು ಸರ್ಕಾರೀ ನೌಕರರೂ, ಗಾಂಧಿ ಮತ್ತು ಸಮಾಜವಾದೀ ಮೌಲ್ಯಗಳು ನಿಧಾನವಾಗಿ ವಿಘಟಿತಗೊಳ್ಳುತ್ತಿರುವ ದಿನಗಳಲ್ಲಿ, ಮೌಲ್ಯಗಳಿಗಾಗಿ ಸೆಣೆಸುತ್ತಾ ಒಟ್ಟು ಕುಟುಂಬದ ತಾಪತ್ರಯಗಳನ್ನೂ ನಿಭಾಯಿಸುತ್ತಾ ಮಕ್ಕಳನ್ನು ಬೆಳೆಸಿದವರೂ ಆಗಿರುತ್ತಾರೆ.) ದಿನಾಂಕ ಸೆಪ್ಟೆಂಬರ್ ೧೧, ೨೦೦೧. ಈಗಾಗಲೇ ವಿಶ್ವ ವಾಣಿಜ್ಯ ಸಂಸ್ಥೆಯ ಒಂದು ಟವರ್ ಕಟ್ಟಡ ಹೊತ್ತಿ ಉರಿಯುತ್ತಿದೆ. ನೋಡು ನೋಡುತ್ತಿದ್ದಂತೆ ಇನ್ನೊಂದು ವಿಮಾನವೊಂದು ಎಲ್ಲಿಂದಲೋ ಬಂದು ಇನ್ನೊಂಡು ಟವರ್ ಕಟ್ಟಡಕ್ಕೆ ಢಿಕ್ಕಿ ಹೊಡೆಯುತ್ತದೆ. ಯುವಕರು ಒಬ್ಬರ ಮುಖವನ್ನೊಬ್ಬರು ಆತಂಕಭರಿತವಾಗಿ ನೋಡುತ್ತಾರೆ. `ನಾವು ಮೋಸ ಹೋದೆವು' ಎಂಬ ಉದ್ಗಾರ ಅವರ ಕಣ್ಣಲ್ಲೇ ಮೂಡಿರುತ್ತದೆ.
ಈ ಎರಡೂ ದೃಶ್ಯಗಳ ನಡುವಿನ ಸಾಮ್ಯ ಮತ್ತು ಕಾಂಟ್ರಾಸ್ಟ್ ರಾಚುವಂಥದ್ದು. ೧೯೪೮ರ ವಲಸೆಗಾರರು ಕನಸು ಕಂಡಿದ್ದು ಗಾಂಧೀ ಪ್ರತಿನಿಧಿಸುವ ರಾಮರಾಜ್ಯದ ಸಂಸ್ಕೃತಿ. ೨೦೦೧ರಂದು ಅಮೇರಿಕೆಗೆ ವಲಸೆ ಬಂದ ತಲೆಮಾರು ಅರಸಿದ್ದು ವರ್ಲ್ಡ್ ಟ್ರೇಡ್ ಸೆಂಟರ್ ರೂಪದಲ್ಲಿದ್ದ ಆಡಮ್ ಸ್ಮಿತ್‍ನ ವಾದವನ್ನು ಪ್ರತಿನಿಧಿಸಿದ ಸಂಸ್ಕೃತಿ. ಎರಡೂ ಕಡೆ ಉತ್ತಮ ಬದುಕಿನ ಭ್ರಮ-ನಿರಸನವಾಗುವುದು ಮೂಲಭೊತವಾದಿಗಳು ಎಸಗುವ ಕೃತ್ಯದಿಂದ. ಒಂದು ಕಡೆ ಗಾಂಧೀವಾದದ ಹತ್ಯೆಯಾದರೆ ಇನ್ನೊಂದು ಕಡೆ ಆಡಮ್ ಸ್ಮಿತ್‍ನ ವಾದದ ಹತ್ಯೆ. ಪ್ರಪಂಚದ ಹಲವು ಮುಗ್ಧರಿಗೆ ಬಂಡವಾಳಶಾಹಿಯ ಕರಾಳ ಮುಖಗಳನ್ನು ಅನಾವರಣಗೊಳಿಸಿದ ಘಳಿಗೆ ಅದು. ನಾನು ಈ ೨೦೦೧ರ ಯುವಕರನ್ನೂ ಅವರ ಮೌಲ್ಯಗಳನ್ನೂ ನ್ಯಾಯನೀರ್ಣಯಕ್ಕೆ ಒಳಪಡಿಸಲು ಈಗಲೇ ನಾನು ಸಿದ್ಧನಿಲ್ಲ. (ಬಂಡವಾಳುಶಾಹಿಯ ವಕ್ತಾರನಾಗಿದ್ದ ಸ್ಮಿತ್-ಗೆ ಸಂಪತ್ತು ಎಲ್ಲರಿಗೂ ಹಂಚಿಕೆಯಾಗಬೇಕು ಎಂಬ ತಾತ್ವಿಕ ಮಟ್ಟದ ಕಾಳಜಿಯೂ ಇತ್ತು). ಹೀಗಾಗಿ ಎರಡೂ ತಲೆಮಾರಿನವರು ತಮ್ಮ ತಮ್ಮ ಚಾರಿತ್ರಿಕ ಸಂದರ್ಭದ ವಿಧಿವಶರು.
'ಲಗೇ ರಹೋ..' ಒಂದು ಕಾಮೆಡಿ ಚಿತ್ರ. ಈ ಸಿನೆಮಾದಲ್ಲಿ ಮೇಲೆ ಕಾಣಿಸಿದ ಯಾವುದೇ ತಲ್ಲಣಗಳಿಗೆ ಅವಕಾಶವಿಲ್ಲ. ಇಲ್ಲಿ ಆಡಮ್ ಸ್ಮಿತ್ ಮತ್ತು ಗಾಂಧಿ ಮುಜುಗರವಿಲ್ಲದೇ ಬೆರೆಯುತ್ತಾರೆ. ಆಡಮ್ ಸ್ಮಿತ್-ನನ್ನು ವಿಮರ್ಶಿಸುವ ಗಾಂಧಿ ನಮಗೆ ಕಾಣುವುದೇ ಇಲ್ಲ. ಇಲ್ಲಿ ವ್ಯಕ್ತವಾಗುವ `ಗಾಂಧಿಗಿರಿ' ಬಹಳ ಸೀಮಿತವಾದದ್ದು. ಅಂದರೆ ಸಿನೆಮಾ 'ಗಾಂಧೀವಾದ'ದ ಕೆಲವೇ ಕೆಲವು ಸೀಮಿತ ಅಂಶದ ಕುರಿತು ಮಾತ್ರ ಮಾತನಾಡುತ್ತದೆ. ಸ್ಥೂಲವಾಗಿ ಹೇಳುವುದಾದರೆ ಅಸತ್ಯದ ನುಡಿ ಮತ್ತು ವ್ಯಕ್ತ ಹಿಂಸೆ(explicit violence)ಯ ನಿರಾಕರಣೆ. ಒಟ್ಟೂ ಸೂಕ್ಷ್ಮವಾದ, ಹೆಚ್ಚು ಆಳವಾದ ಗಾಂಧಿವಾದದ `ಸತ್ಯ'ಗಳ ಬಗ್ಗೆ ಅಲ್ಲ. ಅಂದರೆ ನಗರೀಕರಣ, ಕೇಂದ್ರೀಕರಣ, ಬೃಹತ್ ಕೈಗಾರಿಕೆಗಳ ಬಗೆಗಿನ ಗಾಂಧಿಯ ವಿರೋಧ ಮತ್ತು ಆ ಮೂಲಕ ಸಮಾನತೆ ಮತ್ತು ಸೌಹಾರ್ದಗಳನ್ನು ಹೇಗೆ ಸಾಧಿಸಬಹುದು ಎಂಬುದರ ಕುರಿತು ಅವರ ಚಿಂತನೆ ಇವೆಲ್ಲದರ ಕುರಿತು ಸಿನೆಮಾ ಉಸಿರೆತ್ತುವುದಿಲ್ಲ. ಅಂದರೆ ನಮ್ಮ ನಿಮ್ಮ ವಾಸ್ತವದಲ್ಲಿ ಅಗಸರ ಕೇರಿಯ `ಮುನ್ನಾಭಾಯಿ' ಮತ್ತು ರೇಡಿಯೋ ಜಾಕಿ 'ಜಾಹ್ನವಿ' ಸಹಜವಾಗಿ ವ್ಯವಹರಿಸಬಹುದಾದ, ಅದಕ್ಕಗತ್ಯವಾದ ವಾತಾವರಣದ ನಿರ್ಮಾಣಕ್ಕೆ ಒಂದು ಮಾರ್ಗವಾಗಬಹುದಾದ `ಸಂಪೂರ್ಣ ಗಾಂಧಿವಾದ'ಕ್ಕೆ ಇಲ್ಲಿ ಅವಕಾಶವಿಲ್ಲ. ಈ ಅಂಶಗಳು ನಮ್ಮ ಮನಸ್ಸಿನಲ್ಲಿದ್ದರೆ ಈ ಸಿನೆಮಾವನ್ನು ಹೆಚ್ಚಿನ ಉತ್ಪ್ರೇಕ್ಷೆ ಇಲ್ಲದೆ ಸಮಚಿತ್ತದಿಂದ ಗ್ರಹಿಸಲು ಸಾಧ್ಯವಾಗುತ್ತದೆ.
ಬಾಲಿವುಡ್‍ನ ಒಂದು `ಕಾಮೆಡಿ' ಸಿನೆಮಾನಿಂದ ನೀವು ಹೆಚ್ಚು ಅಪೇಕ್ಷೆ ಮಾಡುತ್ತಿದ್ದೀರಿ ಎಂದು ಕೆಲವರು ಹೇಳಬಹುದು. ನಿರೀಕ್ಷೆ ಮಾಡುತ್ತಿಲ್ಲ. 'ಲಗೇ ರಹೋ..' ದೇಶಾದ್ಯಾಂತ ಪ್ರಭಾವ ಬೀರಿ ಚರ್ಚಿತವಾಗುತ್ತಿದೆ. ಆದ್ದರಿಂದ ಅದರ ಕೆಲವು ಇತಿಮಿತಿಗಳ ಬಗ್ಗೆ ಎಚ್ಚರವೂ ಇರಬೇಕೆಂಬ ದೃಷ್ಟಿಯಿಂದ ಈ ಚರ್ಚೆ. ಗಾಂಧೀಜಿಯನ್ನು ಒಂದು ಕಾಮೆಡಿ ಸಿನೆಮಾದಲ್ಲಿ ಪಾತ್ರವಾಗಿಸುವುದೊಂದು ನಾಜೂಕಿನ ಕೆಲಸವೇ. ಕಾಮೆಡಿ ಮೂಲಕ ಹೇಳಿದ್ದರಿಂದ ಜನ ಸ್ವೀಕರಿಸಿದರು ಎಂಬ ನಿರ್ದೇಶಕರ ಮಾತಿಗೆ ಮಾಧ್ಯಮಗಳು ಕೊಡುವ ಮಹತ್ವ, ಆ ಮಟ್ಟದಲ್ಲಿ ಮಾತ್ರ ಗಾಂಧಿಯನ್ನು ನಾವು ಸ್ವೀಕರಿಸಬಯಸುತ್ತೇವೆ ಎಂದು ಸೂಚಿಸಬಹುದಾದ ಅಪಾಯವೂ ಇದೆ. ಸಿನೆಮಾ `ಗಾಂಧೀಜಿ'ಯನ್ನು ಪುತ್ಥಳಿಯಿಂದ ಕೆಳಗಿಳಿಸುವ ಒಂದು ಮೊದಲ ಹೆಜ್ಜೆಯೂ ಆಗಬಹುದು. ಸಿನೆಮಾದ ಶೀರ್ಷಿಕೆಯ ಹಾಡೇ ಹೇಳುವಂತೆ `ಬಂದೇ ಮೆ ಥಾ ದಮ್' ಎಂಬುದನ್ನು ಮನಃಪೂರ್ವಕವಾಗಿ ಒಪ್ಪುವ ಅಸಂಖ್ಯಾತ ಭಾರತೀಯರಲ್ಲಿ ಒಬ್ಬನಾಗಿ ಆ ವ್ಯಕ್ತಿಯ ವ್ಯಕ್ತಿತ್ವದ ಹಲವು ಆಯಾಮಗಳನ್ನು ಮರೆಯದಿರಲು ಈ ನನ್ನ ಟಿಪ್ಪಣಿ.