ಸೃಜನ-ಕನ್ನಡಿಗ (sRujana-kannaDiga)

ಸಹೃದಯ, ವಿಶ್ವಾಸ ಮತ್ತು ಸೃಜನಶೀಲತೆ: Creator of this blog is Sudarshan. He has interest in Engineering research and Kannada writing. As a part of the process of Kannada writing, this blog will pay extra attention to cultural and philosophical aspects of Mathematics, Science, History, Language etc.

Name:
Location: Mysore, Karnataka, India

Friday, February 10, 2006

ಹಳೆಯ ಮತ್ತು ಹೊಸದರ ನಡುವೆ ಶ್ಯಾಮ್ ಬೆನಗಲ್

ಇವೊತ್ತು ನಿಂತು ನೋಡಿದಾಗ ಹಳೆಯದೆನಿಸಬಹುದಾದ ಕಾಲದಲ್ಲಿ ಹೊಸ ಅಲೆಯ ಚಿತ್ರ ಕೊಟ್ಟ ನಿರ್ದೇಶಕ ಶ್ಯಾಮ್ ಬೆನಗಲ್ ನಮ್ಮ ಇನ್ಸ್ಟಿಟ್ಯೂಟ್‍ಗೆ ಬಂದಿದ್ದರು. ಲೀಡರ್‍‍ಶಿಪ್ ಬಗ್ಗೆ ಮಾತಾಡಲು ಮ್ಯಾನೇಜ್‍ಮೆಂಟ್ ಸ್ಕೂಲ್-ನವರು ಅವರನ್ನು ಕರೆಸಿದ್ದರು.

ತಾವು ಆರನೇ ವಯಸ್ಸಿನಲ್ಲಿಯೇ ಸಿನಿಮಾ ಮಾಡುವ ಮನಸ್ಸು ಹೊಂದಿದ್ದರ ಬಗ್ಗೆ, ತಮ್ಮ ಮೇಲೆ ಪ್ರಭಾವ ಬೀರಿದ ನೆಹರು ಬಗ್ಗೆ ಮಾತನಾಡಿದರು. (ಒಂದು ಸಂವಹನೆಯಲ್ಲಿ ಅಡಗಿರಬಹುದಾದ ಹಲವು ಪದರು-ಗಳ ಬಗ್ಗೆ ನೆಹರು ಅವರ ಕಾಲೇಜಿನಲ್ಲಿ ಮಾತಾಡಿದ್ದರಂತೆ. ಇವೊತ್ತಿನ ಯಾವ ರಾಜಕಾರಣಿಯೂ ಅಂಥ ವಿಷಯದ ಬಗ್ಗೆ ಮಾತನಾಡುವ ಸಾಧ್ಯತೆಯನ್ನು ಯೋಚಿಸಲಾರೆ ಎಂದರು.) ಇವೊತ್ತಿನ ಎಮ್.ಎನ್.ಸಿ.ಗಳಿಗೆ ವ್ಯತಿರಿಕ್ತವಾಗಿ ಅಂದಿನ ಟಾಟ, ಬಿರ್ಲಾ ಸಂವೇದನೆಗಳನ್ನು, ಅವರ ನಾಯಕತ್ವದ ಗುಣಗಳನ್ನು ನೆನೆದರು.

ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿ ಮತ್ತು ಅದರ ನಾಯಕರು ಇಂಗ್ಲೆಂಡಿನ ಶಿಕ್ಷಣದಿಂದ ತಂದ ಆಧುನಿಕ ಮೌಲ್ಯಗಳಾದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾನತೆ ಇವುಗಳನ್ನು ಬಿತ್ತುತ್ತಿರುವಾಗ, ಸಮಾನಾಂತರವಾಗಿ ಭಾರತೀಯ ಚಲನಚಿತ್ರದ ಮುಖ್ಯವಾಹಿನಿ ಹೇಗೆ ಪರಂಪರೆ ಮತ್ತು ಆಧುನಿಕತೆಯ ನಡುವಿನ ಸಂಘರ್ಷವನ್ನು ದಾಖಲಿಸುತ್ತಾ ಬಂತು ಎಂಬುದನ್ನು ವಿವರಿಸಿದರು.

ಹಿಂದಿನ ಸಿನೆಮಾಗಳು ಪರಂಪರೆ ಮತ್ತು ಆಧುನಿಕತೆ, ಹಳ್ಳಿ ಮತ್ತು ನಗರ, ಬಡವ ಮತ್ತು ಶ್ರೀಮಂತ ಇವುಗಳ ಸಂಘರ್ಷದಲ್ಲಿ ಪರಂಪರೆ, ಹಳ್ಳಿ ಮತ್ತು, ಬಡವನ ಮೌಲ್ಯಗಳನ್ನೇ ಎತ್ತಿಹಿಡಿಯುತ್ತಿದ್ದವು. ಇತ್ತೀಚಿನ ಕೆಲವು ಸಿನೆಮಾಗಳಲ್ಲಿ ಆಧುನಿಕತೆಯನ್ನು ಸಾಂಕೇತಿಸುವ ಪಾತ್ರಗಳು ಭಾರತೀಯರನ್ನು ಕ್ರಿಯಾಶೀಲತೆಯತ್ತ ಉತ್ತೇಜಿಸುವುದನ್ನು ತೋರಿಸುತ್ತಿವೆ ಎಂಬುದನ್ನು ವಿವರಿಸುತ್ತಾ,
ಇವೊತ್ತಿನ ಟೈಮ್ಸ್ ಆಫ್ ಇಂಡಿಯಾದ ಲೇಖನವನ್ನು ಉದ್ಧರಿಸುತ್ತಾ ಆಮೀರ್ ಖಾನ್‍ನ ಇತ್ತೀಚಿನ ಚಿತ್ರ `ರಂಗ್ ದೇ ಬಸಂತಿ'ಯಲ್ಲಿನ ಇಂಗ್ಲೀಶ್ ಯುವತಿಯ ಪಾತ್ರವೊಂದು ಯುವಕರನ್ನು ಭ್ರಷ್ಟಾಚಾರದ ವಿರುದ್ಧ ಕ್ರೀಯಾಶೀಲರಾಗುವಂತೆ ಉತ್ತೇಜಿಸುವ ಚಿತ್ರಣವನ್ನು ಉಧಾರಿಸಿದರು. (ಲೇಖನ `ಲಗಾನ್' ಮತ್ತು `ಮಂಗಲ್ ಪಾಂಡೆ' ಚಿತ್ರಗಳು ಈ ದಿಕ್ಕಿನಲ್ಲಿನ ಹಿಂದಿನ ಮೊದಲ ಹೆಜ್ಜೆಗಳು ಎಂದು ವಾದಮಾಡುತ್ತದೆ.)

ಆದರೆ ಈ ಸಂಕೇತಗಳನ್ನು ಇಂದಿನ ಪ್ರೇಕ್ಷಕ ಐ.ಟಿ. ಉತ್ತೇಜಿತ ಸಂಸ್ಕೃತಿಯ ಜೊತೆ ಸಮೀಕರಿಸುವ ಸಾಧ್ಯತೆ ಇದೆಯಲ್ಲವೆ? ಎಂದು ನನಗೆ ಬೆನಗಲ್ ಅವರನ್ನು ಆ ಕ್ಷಣದಲ್ಲಿ ಕೇಳಬೇಕು ಎನ್ನಿಸಿತು. ಆಗ ಕೇಳುವ ಅವಕಾಶವಾಗಲಿಲ್ಲ. ಭಾಷಣ ಮುಗಿದ ನಂತರ ಸೆಮಿನಾರ್ ರೂಮಿನಲ್ಲಿ ಒಂದು ಸಂವಾದ ಇಟ್ಟುಕೊಂಡಿದ್ದರು. ಆಗ ಕೇಳಿದೆ.

ನಾನು ಪ್ರಶ್ನೆ ಪೂರ್ತಿ ಮಾಡುವ ಮೊದಲೇ ಐ.ಟಿ., ಆಧುನಿಕ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಷ್ಟಾಚಾರ ರಹಿತ ವ್ಯವಸ್ಥೆ ಇತ್ಯಾದಿಗಳನ್ನು ತರುವ ಸಾಧ್ಯತೆಗಳನ್ನು ಖಡಾಖಂಡಿತವಾಗಿ ನಿರಾಕರಿಸಿದರು. ಬೆಂಗಳೂರಿನ ಐ.ಟಿ.ಯಿಂದ ಲಾಭಪಡೆದವರು ಸಮಾಜದಲ್ಲಿ ಅಂಥಾ ವ್ಯತ್ಯಾಸವೇನೂ ಮಾಡಿಲ್ಲ ಎಂದರು. ಬಿ.ಪಿ.ಓ.ನ ಹೆಚ್ಚಿನ ಸಂಬಳದ ಕೆಲಸದಿಂದ ಯಾವುದೇ ರಚನಾತ್ಮಕ ವ್ಯತ್ಯಾಸ ಆಗಿಲ್ಲ, ಆಗುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಇನ್ಫಾರ್ಮೇಶನ್ ಟೆಕ್ನಾಲಜಿಯ ಪ್ರೊಫೆಸರ್ ಒಬ್ಬರು ಕರ್ನಾಟಕದ ಪ್ರಾಜೆಕ್ಟ್ `ಭೂಮಿ', ಮತ್ತು ಮಹಾರಾಷ್ಟ್ರದ `ರೈಟ್ ಟು ಇನ್ಫಾರ್ಮೇಶನ್ ಆಕ್ಟ್' ಇಂಥವು ಆಡಳಿತದಲ್ಲಿ ಪಾರದರ್ಶಕತೆಯನ್ನು ತರುತ್ತಿರುವ ಕಡೆ ಅವರ ಗಮನ ಸೆಳೆದರು. ಅಂಥವು ಕೆಲವು ಪ್ರಗತಿಪರ ಹೆಜ್ಜೆಗಳು ಎಂದು ಒಪ್ಪಿಕೊಂಡ ಬೆನಗಲ್ ಭ್ರಷ್ಟಾಚಾರವನ್ನು ಪೋಷಿಸುವ ಹಿತಾಸಕ್ತಿಗಳ ಬೇರು ಎಷ್ಟು ಆಳವಾದದ್ದು ಎಂದು ಕೆರೋಸಿನ್ ಲಾಬಿಯ ಜೊತೆಗಿನ ತಮ್ಮ ಅನುಭವದ ಮೂಲಕ ವಿವರಿಸಿದರು. ಸಬ್ಸಿಡಿಯ ಪ್ರಚಾರಕ್ಕೆ ಸಂಬಂಧಿಸಿದಂತೆ ಚಿತ್ರವೊಂದನ್ನು ಮಾಡುವಂತೆ ಸರ್ಕಾರ ಅವರನ್ನು ಕೇಳಿಕೊಂಡಿತ್ತು.

ಆಮುಲ್ ಚಳುವಳಿಗೆ ಸಂಬಂಧ ಪಟ್ಟ ತಮ್ಮ ಚಿತ್ರ `ಮಂಥನ್' ಮತ್ತು `ಸ್ವಾಧ್ಯಾಯ' ಚಳುವಳಿಗೆ ಸಂಬಂಧ ಪಟ್ಟ ತಮ್ಮ ಚಿತ್ರ `ಅಂತರ್ನಾದ್' ಇವುಗಳ ನಿರ್ಮಾಣದ ಅನುಭವದ ರೋಮಾಂಚನವನ್ನು ಹಂಚಿಕೊಂಡರು. ಇವೆರಡೂ ಸ್ವಾತಂತ್ರ್ಯೋತ್ತರ ಭಾರತ ಕಂಡ ಉತ್ಕೃಷ್ಟ `ಸಹಕಾರೀ' ಚಳುವಳಿಗಳು ಎಂಬುದನ್ನು ಇಲ್ಲಿ ನೆನೆಯಬಹುದು.

ನಿಮ್ಮ ಇತ್ತೀಚಿನ ಚಿತ್ರಗಳು ಸಾಮಾಜಿಕ ಬದಲಾವಣೆ, ಅಭಿವೃದ್ಧಿಯ ಸಮಸ್ಯೆಯ ಕುರಿತು ಒತ್ತು ಕಳೆದುಕೊಳ್ಳುತ್ತಿವೆಯಲ್ಲ? ಎಂಬ ಸಭಿಕರೊಬ್ಬರ ಪ್ರಶ್ನೆಗೆ, ಮನರಂಜನೆಗೆ ಒತ್ತು ಹೆಚ್ಚಾಗಿರುವ ಇವೊತ್ತಿನ ಸಂದರ್ಭದಲ್ಲಿ ಅಂಥ ಅನಿವಾರ್ಯತೆಯನ್ನು ಒಪ್ಪಿಕೊಂಡರು. ಮಲ್ಟಿಪ್ಲೆಕ್ಸ್ ವ್ಯವಸ್ಥೆಯಿಂದ ಪ್ರೇಕ್ಷಕರ ವಿಭಾಗೀಕರಣ ಸುಲಭವಾಗಿ ಸಹಾಯವಾಗಿದೆ ಎಂದರು.

ಶ್ಯಾಮ್ ಬೆನೆಗಲ್‍ರು ನಮ್ಮ ನಿಮ್ಮಂತೆ ಹಳೆಯ ಸಂವೇದನೆಗಳನ್ನು ಉಳಿಸಿಕೊಳ್ಳಲು ಹೆಣಗುತ್ತಾ, ಇವೊತ್ತಿನ ಹೊಸ ಕಾಲಕ್ಕೂ ಹೊಂದಿಕೊಳ್ಳಲು ಯತ್ನಿಸುತ್ತಿರುವ ವ್ಯಕ್ತಿಯಾಗಿ ಕಂಡರು.

ಶ್ರೀನಿವಾಸ ವೈದ್ಯರ ಕಥೆ `ರುದ್ರಪ್ರಯಾಗ'ದ ಕುರಿತು ಒಂದು ಟಿಪ್ಪಣಿ

ಶ್ರೀನಿವಾಸ ವೈದ್ಯರು ೧೯೯೪ರಲ್ಲಿ ಪ್ರಕಟಿಸಿದ `ತಲೆಗೊಂದು ತರತರ' ೧೯೯೭ರಲ್ಲಿ ಪ್ರಕಟಿಸಿದ `ಮನಸುಖರಾಯನ ಮನಸ್ಸು' ಹರಟೆ ಸಂಗ್ರಹಗಳಿಂದಲೇ ಉತ್ತರ-ಕರ್ನಾಟಕದಲ್ಲಿ ಜನಪ್ರಿಯತೆ ಗಳಿಸಿದ್ದರೂ, ಕಳೆದ ವರ್ಷ ಮನೋಹರ ಗ್ರಂಥಮಾಲೆ ಪ್ರಕಟಿಸಿದ `ಹಳ್ಳ ಬಂತು ಹಳ್ಳ' ಕಾದಂಬರಿಯ ಮೂಲಕ ಸಾಹಿತ್ಯವಲಯಗಳಲ್ಲಿ ವೈದ್ಯರದು ಇತ್ತೀಚೆಗೆ ಹೆಚ್ಚು ಗಂಭೀರವಾಗಿ ಚರ್ಚಿಸಲಾಗುತ್ತಿರುವ ಹೆಸರು.

ಸದ್ಯದ ಕೇಂದ್ರೀಕೃತ, ಕೈಗಾರಿಕೀಕೃತ, ಜಾಗತೀಕರಣದ ಭರದಲ್ಲಿ ಹೊಸ ತಲೆಮಾರಿನ ಸ್ಮೃತಿಯಿಂದ ಮಾಯವಾಗುತ್ತಿರುವ ಪಟ್ಟಣ, ಗ್ರಾಮೀಣ ಸೀಮೆಯ ಜೀವನ-ಕ್ರಮ, ಭಾಷೆ, ಸಂಸ್ಕೃತಿಗಳನ್ನು ಜೀವಂತವಾಗಿ ಸೆರೆಹಿಡಿದು ಎತ್ತಿಕೊಡುವ ಪ್ರಯತ್ನ ಮಾಡುತ್ತಿರುವ ಮತ್ತು ಅದರಲ್ಲಿ ಸಫಲವಾಗುತ್ತಿರುವ ಕೆಲವು ಲೇಖಕರಲ್ಲಿ ಒಬ್ಬರಾದ ಶ್ರೀನಿವಾಸ ವೈದ್ಯರದು ಬೆಂಗಳೂರು, ಮುಂಬೈ ಮಹಾನಗರಗಳಲ್ಲಿ ಬದುಕು ಸವೆಸಿದ ನಂತರವೂ ಉತ್ತರ-ಕರ್ನಾಟಕದ, ವಿಶೇಷವಾಗಿ ಧಾರವಾಡ ಪ್ರದೇಶದ ಸಂಸ್ಕೃತಿಯಲ್ಲಿ ಬೇರೂರಿದ ಮನಸ್ಸು.

ಪ್ರಸ್ತುತ ಕಥೆ `ರುದ್ರಪ್ರಯಾಗ'ದಲ್ಲಿ (ಕಥೆ `ದೇಶಕಾಲ' ಸಾಹಿತ್ಯ ಪತ್ರಿಕೆಯ ಮೊದಲ ಸಂಪುಟದ ನಾಲ್ಕನೇಯ ಸಂಚಿಕೆಯಲ್ಲಿ ಮೊದಲು ಪ್ರಕಟಗೊಂಡಿದ್ದು, ಆಸಕ್ತರು
ಇಲ್ಲಿ ಅಂದರೆ ಅಂತರ್ಜಾಲದಲ್ಲಿ ಕನ್ನಡಸಾಹಿತ್ಯ.ಕಾಂ‍ನ ಫೆಬ್ರುವರಿ ತಿಂಗಳ ಸಂಚಿಕೆಯಲ್ಲಿ ಸಹ ಓದಬಹುದು.) ವೈದ್ಯರು ವಿಧವೆ ಕೃಷ್ಟಕ್ಕ, ಅವಳ ದತ್ತಕ ಪುತ್ರ ಗುರಣ್ಣ ಮತ್ತು ಗುರಣ್ಣನ ಮೊಮ್ಮಗಳು (ಅಮೇರಿಕನ್‍ಳನ್ನು ಮದುವೆಯಾಗಿ ಅಮೇರಿಕೆಯಲ್ಲೇ ನೆಲೆಸಿರುವ ಮಗನ ಮಗಳು) ಸೂಸನ್ ಹೀಗೆ ಮೂರು ಮುಖ್ಯ ಪಾತ್ರಗಳ ಸಂಬಂಧವನ್ನು ಕೇದಾರ-ಬದರೀ-ಪ್ರಯಾಗ ಯಾತ್ರೆಯ ಸಂದರ್ಭದ ಮೂಲಕ ಚಿತ್ರಿಸುತ್ತಾರೆ.

ಮೊದಲು ಕಥೆಯಲ್ಲಿ ಕಾಣುವ ದೋಷದ ಬಗ್ಗೆ ಗಮನಹರಿಸೋಣ.

ಸಾಂಪ್ರದಾಯಿಕತೆಯಲ್ಲಿ ಬೇರೂರಿದ ಹಿರಿವಯಸ್ಸಿನ ಪಾತ್ರಗಳಾದ ಕೃಷ್ಟಕ್ಕ ಮತ್ತು ಗುರಣ್ಣರ ಅಂತರಂಗ ಮತ್ತು ಸಂಕಟಗಳು ಓದುಗರಿಗೆ ದಕ್ಕುವಂತೆ ಸೂಸನ್‍ಳ ಅಂತರಂಗಕ್ಕೆ ಓದುಗನಿಗೆ ಪ್ರವೇಶವೇ ಇಲ್ಲದಿರುವುದು ಕಥೆಯಲ್ಲಿ ಎದ್ದುಕಾಣುವ ಮುಖ್ಯ ಲೋಪ. ಅವಳು ಯಾತ್ರಿಕರ ಜೊತೆ ಪ್ಯಾಂಟ್ ಧರಿಸಿ ಸಿಗರೇಟು ಸೇದುವ, ಜೀಪಿನ ಪಟ್ಟಿ ಹಿಡಿದು ತೂಗಾಡುವ, ಮಂಗ್ಯಾನ್ಹಾಂಗ ಕುಣಿದಾಡುವ ಚಂಚಲ ಸ್ಟಿರಿಯೋಟೈಪ್ ಆಗಿ ನಮಗೆ ಕಾಣಿಸುತ್ತಾಳೆಯೇ ಹೊರತು ಅದನ್ನು ಮೀರಿ ಪಾತ್ರ ಬೆಳೆಯುವುದೇ ಇಲ್ಲ. ಅನ್ಯ ಸಂಸ್ಕೃತಿಯಿಂದ ಬಂದ ಎಳೆ ವಯಸ್ಸಿನ ಸೂಸನ್‍ಳಲ್ಲಿ ಗುರಣ್ಣಜ್ಜನ ಬಗ್ಗೆಯೂ, ಕೃಷ್ಟಕ್ಕಜ್ಜಿಯ ಬಗ್ಗೆಯೂ, ಒಟ್ಟೂ ಪರಿಸರದ ಬಗ್ಗೆಯೂ ಇರಬಹುದಾದ ಪ್ರೀತಿ, ಅನುಮಾನ, ಆತಂಕಗಳು ಓದುಗರಿಗೆ ತಲುಪುವುದೇ ಇಲ್ಲ. ಹೀಗಾಗಿ ರುದ್ರಪ್ರಯಾಗದಲ್ಲಿ ಸಂಭವಿಸಬೇಕಾಗಿದ್ದ, ಇನ್ನಷ್ಟು ವಿಸ್ಫೋಟಕಾರಿಯಾಗಬಹುದಾಗಿದ್ದ, ಮೂರು ತಲೆಮಾರುಗಳ `ಸಂಗಮ' ಅಪೂರ್ಣವೆನಿಸುತ್ತದೆ. ಇದು ಕಥೆಯ ಬಗೆಗಿನ ಅತೃಪ್ತಿ.

ಲೇಖಕರ ಶಕ್ತಿ ಇರುವುದು ಪಾರಂಪರಿಕ ಭಾಷೆಯಲ್ಲಿ ವಿವರಗಳನ್ನು, ಸೂಕ್ಷ್ಮಗಳನ್ನು ದಾಖಲಿಸುವಲ್ಲಿ (`ಅಂಟಿನ ಉಂಡಿಗೆ ಒಣಖೊಬ್ಬರಿ ಯಾವಾಗ ಹಾಕಬೇಕು, ಉತ್ತತ್ತಿ ಎಷ್ಟು ಸಣ್ಣದಾಗಿ ಹಚ್ಚಬೇಕು..'). ಕೃಷ್ಟಕ್ಕನ ಕ್ಷೋಭೆಯನ್ನು ದಾಟಿಸುವಲ್ಲಿ; ಅವಳ ದೃಷ್ಟಿಯಲ್ಲಿ ಅವಳ ಗಂಡನ ಸಾವಿಗೆ ಕಾರಣರಾದ ಅವಳ ಗಂಡ ಇಟ್ಟುಕೊಂಡ ಮುಳುಗುಂದದ ಸಕೇಶಿ ಮತ್ತವಳ ಮಗ ಬಿಂದ್ಯಾನೊಂದಿಗಿನ ಈರ್ಷ್ಯೆಯನ್ನು ಮೂಡಿಸುವಲ್ಲಿ. (`ನನಗ ಮಕ್ಕಳಾಗಲಿಲ್ಲೆರವ ಪಾಪಿ ನಾನು..ಖರೆ..ಆದರ ಆಗಿನ ಕಾಲದ ಲೋಕಾರೂಢಿ ಪ್ರಕಾರ ಇನ್ನೊಂದು ಲಗ್ನ ಮಾಡಿಕೋಬೇಕಾಗಿತ್ತು..ಯಾರು ಬ್ಯಾಡಾ ಅಂತಿದ್ರು..ಅದು ಬಿಟ್ಟು ಅಡಿಗೀ ಮಾಡಿ ಹಾಕಲಿಕ್ಕೆ ಅಂತ ಬಂದ ಆ ಮುಳಗುಂದದ ಸಕೇಶಿ..ಅಕೀ ಸಂಗತೀನ...' ). ಇದೆಲ್ಲವೂ ಪ್ರಯಾಗದ ಪ್ರವಾಸದ ಭಾವೋನ್ಮತ್ತತೆಯಲ್ಲಿ ತಾರಕಕ್ಕೇರುತ್ತದೆ. ಮ್ಲೇಚ್ಛ ಸಂಸ್ಕೃತಿಯಿಂದ ಬಂದ ಸೂಸನ್‍ಳ ಬಗೆಗೆ ಏನೇ ಕಸಿವಿಸಿಯಿದ್ದರೂ ಅವಳ ಗಾಯದ ಕಾಲಿಗೆ ಬೇರು ತೇದು ಹಚ್ಚುವಾಗ ವಾತ್ಸಲ್ಯ ಮಿಡಿಯುವ ಮೂಲಕ ಪಾತ್ರದ ಪೂರ್ಣತೆ ಓದುಗನ ಅರಿವಿಗೆ ದಕ್ಕುತ್ತದೆ.

ದತ್ತಕ ತಾಯಿ ಕೃಷ್ಟಕ್ಕನ ಜೊತೆ ಬದುಕು ತೊಡಕಾಗಿಸಿಕೊಂಡು, ತಿಳುವಳಿಕೆ ಬಂದ ಮೇಲೂ ಝಾಡಿಸಿ ಒದ್ದು ಈಚೆ ಬರುವ ಇಚ್ಛೆ ಇದ್ದರೂ, ತನ್ನ ಸಹಜ ಮೃದು ಸ್ವಭಾವದಿಂದ ಬರಲಾರದೇ ಒದ್ದಾಡುವ ಗುರಣ್ಣನಿಗೆ ತನ್ನಿಂದ ಸಾಧ್ಯವಾಗದ ಸ್ವಚ್ಛಂದತೆ ದಕ್ಕಿಸಿಕೊಂಡಿರುವ ಸೂಸನ್‍ಳನ್ನು, ದೂರವಾದ ಮಗನ ಕೊರಗಿನಲ್ಲಿ ಸಾವು ಕಂಡ ಹೆಂಡತಿಯನ್ನು ನೆನೆದು, ತನ್ನ ಬದುಕಿನ ವೈಫಲ್ಯದ ದ್ಯೋತಕ ಎಂದುಕೊಳ್ಳುವುದೂ, ಆದರೆ ಜೊತೆಜೊತೆಗೆ ತನಗೆ ಸಾಧಿತವಾಗದ್ದು ತನ್ನ ಪ್ರತಿಭಾವಂತ ಮಗನಿಗೆ ಸಾಧಿತವಾಗಿ ತನ್ಮೂಲಕ ಮೊಮ್ಮಗಳಲ್ಲಿ ಅಭಿವ್ಯಕ್ತವಾಗಿದ್ದನ್ನು ಕಂಡು ಧೈರ್ಯ ಪಡೆದುಕೊಳ್ಳುವುದೂ, ಹೀಗೆ ಗುರಣ್ಣನ ಮನಸ್ಸಿನ ತುಮುಲ ಅನಾವರಣಗೊಳ್ಳುತ್ತದೆ. ಆದರೂ ಕೃಷ್ಟಕ್ಕನಷ್ಟು ಪೂರ್ಣವಾಗಿ ಗುರಣ್ಣ ನಮಗೆ ದಕ್ಕುವುದಿಲ್ಲ.

ಆದರೆ ಒಟ್ಟಿನಲ್ಲಿ ತಮ್ಮ ಮೂಲ ಸಂಸ್ಕೃತಿಯಲ್ಲಿ ಬೇರೂರಿದ ಪಾತ್ರಗಳನ್ನು ಅರಿಯುವುದರಲ್ಲಿ, ಅನಾವರಣಗೊಳಿಸುವುದರಲ್ಲಿ, ಧಾರವಾಡದ ಪಾರಂಪರಿಕ ಭಾಷೆಯಲ್ಲಿ ವಿವರಗಳನ್ನು ದಾಖಲಿಸುವಲ್ಲಿ ವೈದ್ಯರ ಪ್ರತಿಭೆ ದೊಡ್ಡದು ಎಂಬುದು `ಶ್ರದ್ಧಾ', `ಗಾಯಕವಾಡ ದಾದಾ', `ಹಳ್ಳ ಬಂತು ಹಳ್ಳ' ಕೃತಿಗಳ ನಂತರ ಮತ್ತೊಮ್ಮೆ ಸಾಬೀತಾಗುತ್ತದೆ.