ವಿವೇಕ್ ಶಾನಭಾಗರ ಹೊಸ ಕಥಾ ಸಂಕಲನ `ಮತ್ತೊಬ್ಬನ ಸಂಸಾರ'
ವಿವೇಕ್ ಶಾನಭಾಗರ `ಮತ್ತೊಬ್ಬನ ಸಂಸಾರ' ಕಥಾಸಂಕಲನ ಈ ಭಾನುವಾರ ಡಿಸೆಂಬರ್ ೧೧ರಂದು ಅಂಕಿತ ಪುಸ್ತಕಾಲಯದಲ್ಲಿ ಬಿಡುಗಡೆಯಾಯಿತು. ಕಾರ್ಯಕ್ರಮದಲ್ಲಿ ಎಲ್ಲವೂ ಚುಟುಕಾಗಿತ್ತು. ಸ್ಥಳ, ಅವಧಿ, ಮಾತುಗಳು ಎಲ್ಲವೂ. ಬರಹಗಾರರು, ಸಾಹಿತ್ಯ ಪೋಷಕರು, ಓದುಗರು ಎಲ್ಲರಿಂದ ಕಿಕ್ಕಿರಿದು ತುಂಬಿತ್ತು ಪುಟ್ಟ ಅಂಕಿತ್. ಪುಸ್ತಕ-ಬಿಡುಗಡೆಯ ನಂತರ "ಎಲ್ಲಾ ಕ್ಷೇತ್ರದ, ಎಲ್ಲಾ ಹಿನ್ನೆಲೆಯ ಅನಾಮಿಕನೂ ಓದಬಯಸುವ ಲೇಖಕ ವಿವೇಕ್" ಎಂದವರು ಜಯಂತ್ ಕಾಯ್ಕಿಣಿ. ಸಾಹಿತ್ಯದ ಬಗ್ಗೆ ಏನೂ ಗೊತ್ತಿಲ್ಲದವರಂತೆ ಇರಬಯಸುವ ತಮ್ಮ ವಿಶಿಷ್ಟ ಅಲೆಮಾರಿ ನೆಲೆಯಲ್ಲಿ ನವಿರು ಹಾಸ್ಯ ತುಂಬಿ ಮಾತಾಡಿದ ಅಬ್ದುಲ್ ರಶೀದ್ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಲ್ಲದೆ ಅಂಕಿತ್ ಪ್ರಕಾಶನದ ಪ್ರಕಾಶ್ ಕಂಭತ್ತಳ್ಳಿ ಅವರಿಂದ ತಮ್ಮ ಬರಹಗಳನ್ನೂ ಪ್ರಕಟಿಸುವುದಾಗಿ ಮಾತುಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಷ್ಟೇ ಚುಟುಕಾಗಿ ಮಾತನಾಡಿದ ವಿವೇಕ್ ಇದೇ ಮೊದಲ ಬಾರಿ ಅವರ ಪುಸ್ತಕ ಪ್ರಕಟಿಸುತ್ತಿರುವ ಅಂಕಿತ್ ಪ್ರಕಾಶನದವರಿಗೆ ಮನ್ನಣೆ ಸಲ್ಲಿಸುತ್ತಾ, ತಮಗೆ ಧ್ಯಾನದ ವಾತಾವರಣ ನೀಡಿದ `ಅಕ್ಷರ' ಪ್ರಕಾಶನವನ್ನು ನೆನೆದರು. ಕಾರ್ಯಕ್ರಮದ ನಂತರ ಗಾಂಧಿ-ಬಜಾರದ ಅಂದಿನ ತೇವದ ವಾತಾವರಣದಲ್ಲಿ ಕಾಫಿ, ಸ್ನೇಹದ ಮಾತುಗಳು ಎಲ್ಲವೂ ಚುರುಕಾಗಿದ್ದವು.
ಕಥಾ ಸಂಕಲನದ ಕತೆಗಳ ಬಗ್ಗೆ ಒಂದೆರಡು ಮಾತು:
ಅನುಭವದ ಗಾಢತೆಯನ್ನು ಓದುಗನಿಗೆ ಅಷ್ಟೇ ಗಾಢವಾಗಿ ತಲುಪಿಸಲು ತುಡಿಯುವುದು, ಸಮಾಜದ ನಿತ್ಯದ ಬದುಕಿನಲ್ಲಿ ಪಾತ್ರಗಳು ನಿರ್ವಹಿಸುವ ವ್ಯಕ್ತಿತ್ವಕ್ಕಿಂತ ಭಿನ್ನ ವ್ಯಕ್ತಿತ್ವಗಳನ್ನು ಅನಾವರಣಗೊಳಿಸುವುದು, ವ್ಯಕ್ತಿತ್ವ, ಕುಟುಂಬ, ಸಮುದಾಯದ ವಿಘಟನೆಯ `ಕಾರಣ'ಗಳನ್ನು ಹುಡುಕುವುದು, ಇಂದು ಪ್ರಬಲವಿರುವ `ದೇಶ-ಕಾಲ'ದ ಪರಿಕಲ್ಪನೆಗಿಂತಲೂ ಭಿನ್ನವಾದ ಪರಿಕಲ್ಪನೆ ಹೊಂದಿರುವ ಪಾತ್ರಗಳನ್ನು ಬೆಳಕಿಗೆ ತಂದು ಪ್ರಜಾಪ್ರಭುತ್ವದಲ್ಲಿ ಅವುಗಳಿಗೆ ದನಿ ಕೊಡುವುದು, ಇವೇ ಮೊದಲಾದವು ವಿವೇಕ್‍ರ ಈ ಕಥಾಸಂಕಲನದಲ್ಲಿ ಅಡಕವಾಗಿರುವ ಕಥೆಗಳ ವೈಶಿಷ್ಟ್ಯ. ಗಾಢವಾಗಿ ತಟ್ಟುವ ಕಥೆ `ಕಾರಣ', ಆಧುನಿಕ ನಾಗರೀಕತೆಯಲ್ಲಿ ಬದುಕು ನಿರ್ವಹಣೆಗಾಗಿ ವಿಭಿನ್ನ ನಂಬಿಕೆಗಳನ್ನು ಆಧರಿಸಿ ಸೆಣಸುವುದನ್ನು ನವಿರು ಹಾಸ್ಯ, ಸಂವೇದನೆಗಳು ಹದಗೆಡದಂತೆ ನಿರ್ವಹಿಸಿ ಯಶಸ್ವಿಯಾಗುವ ಕಥೆ `ಶರವಣ ಸರ್ವೀಸಸ್', ತನ್ನ ಕನಸಿನ ಕಥೆಗಳಿಂದ ವಾಸ್ತವದ ಬದುಕನ್ನು, ಸುತ್ತಲಿನ ಸಮಾಜವನ್ನೂ ನಿರ್ವಹಿಸುವ ಜನ್ನನ ಕಥೆ `ಸರಹದ್ದು' ಇವು ಬಹಳ ಹಿಡಿಸಿದವು. ಇನ್ನೂ ಕೆಲವು ಕಥೆಗಳನ್ನು ನಾನು ಓದಬೇಕಿದೆ. ಅವುಗಳ ಬಗ್ಗೆ ಇನ್ಯಾವಾಗಲಾದರೂ...

3 Comments:
ಕನ್ನಡದಲ್ಲಿ ನಿಮ್ಮ ಬ್ಲ್ಲಾಗ್ ನೋಡಿ ಖುಶಿಯಾಯಿತು. ದಯವಿಟ್ಟು ಮುಂದುವರೆಸಿ. ವಿವೇಕನ ಸಂಕಲನದ ಬಿಡುಗಡೆಯ ಬಗೆಗೆ ಪ್ರೀತಿಯಿಂದ ಬರೆದಿದ್ದೀರಿ, ಕಥೆಗಳ ಬಗ್ಗೆ (ಎಲ್ಲ ಓದಿದ ಮೇಲೆ) ಏನು ಬರೆಯುತ್ತೀರೋ ಎಂಬ ಕುತೂಹಲ.
ಶ್ರೀರಾಮ್
ವಿವೇಕ್ ಶಾನುಭಾಗರ ಹೊಸ ಕಥೆ ಶರವಣ ಸರ್ವಿಸಸ್ ನನ್ನಲ್ಲಿ ಬೆಳೆದ ಬಗೆಯ ಕುರಿತು ಎರಡು ಮಾತುಗಳು.
ಅವರ "ಮತ್ತೊಬ್ಬನ ಸಂಸಾರ" ಕಥಾಸಂಕಲನದಲ್ಲಿನ "ಶರವಣ ಸರ್ವಿಸಸ್" ಕತೆ ಈ ಹಿಂದೆ ದೇಶಕಾಲ ಪತ್ರಿಕೆಯಲ್ಲೂ ಓದಿದ್ದೆ. ಈ ಕಥೆಯಾಗಲೀ ಅಥವಾ ಅದೇ ಸಂಕಲನದ ಇತರ ಕಥೆಗಳಾಗಲೀ ಮೊದಲ ಓದಿನ ತತ್ಕ್ಷಣಗಳಲ್ಲಿ ಯಾವುದೇ ತೀವ್ರವಾದ ಪರಿಣಾಮವನ್ನುಂಟು ಮಾಡಿರಲಿಲ್ಲ. ಅನೇಕ ವೇಳೆ ಇದು ಸಹಜವೇ ಆದರೂ ಅವರ "ಹುಲಿ ಸವಾರಿ" ಕಥಾಸಂಕಲನದ ವಿಷಯದಲ್ಲಿ ಹೀಗಾಗಿರಲಿಲ್ಲ. ಅದರ ಓದಿನ ಅನುಭವ ನನ್ನಲ್ಲಿ ಇವತ್ತಿಗೂ ಜೀವಂತವಾಗಿದೆ.
ಸ್ವಲ್ಪ ದಿನ ಸುಮ್ಮನಿದ್ದು ಮತ್ತೆ ಶರವಣ ಸರ್ವಿಸಸ್ ಓದಿದಾಗ ಆಸಕ್ತಿ ಕೆರಳಿ ನಿಂತು, ಅನೇಕ ವಿಷಯಗಳು ಹೊಳೆಯುತ್ತಾ ಬಂದವು. ಅವರ "ಹುಲಿ ಸವಾರಿ" ಸಂಕಲನದ ಗುಂಗಿನಲ್ಲೇ "ಮತ್ತೊಬ್ಬನ ಸಂಸಾರ" ಓದಿದ್ದು ಪ್ರಾಯಶಃ ಅಸಮರ್ಪಕ. ಹೊಸ ಪುಸ್ತಕ ಮುಕ್ತವಾದ ಓದನ್ನು ಬೇಡುತ್ತದೆ, ಯಾವಾಗಲೂ. ಈ ಬಗ್ಗೆ ನನ್ನ ಬ್ಲಾಗ್-ನಲ್ಲಿ ವಿವರವಾಗಿ ಬರೆದಿದ್ದೇನೆ.
ನನ್ನೀ ಬರಹದ ಕೆಲ ಅಪಾಯಗಳನ್ನೂ ಸಹ ಮೊದಲೇ ಸೂಚಿಸಿಬಿಡುವುದು ಒಳಿತೇನೋ. ಸದ್ಯದ ಆತಂಕಗಳನ್ನು ಮೈಮೇಲೆಳೆದುಕೊಂಡು ಎಲ್ಲವನ್ನೂ ಅವುಗಳ ಮೂಲಕವೇ ಪ್ರವೇಶಿಸುತ್ತಿರುವ ನಮಗೆ ಈ ಕನ್ನಡಕವಿಲ್ಲದೇ ತೆರೆದ ಮನಸ್ಸಿನಿಂದ ನೋಡುವುದು ಕಷ್ಟವಾಗಿದೆ. ಆದ್ದರಿಂದ ಈ ಲೇಖನದ ನನ್ನ ಅನಿಸಿಕೆಗಳು ಸ್ವಲ್ಪ ಅತಿ ಅನ್ನಿಸಬಹುದು. ಕಥೆಗಾರರಾದ ಮನಸ್ಸಿನಲ್ಲಿಲ್ಲದ್ದಂತೂ ಓದುಗರ ಅನಿಸಿಕೆಗಳಲ್ಲಿ ಇದ್ದೇ ಇರುತ್ತದೆ. ಆದರೆ ಕತೆಗಾರರ ಆಶಯಕ್ಕೆ ಹೊರತಾದ ಅನಿಸಿಕೆಗಳೂ ಇರಬಹುದಾದ ಸಾಧ್ಯತೆಗಳಿವೆ ಈ ಪ್ರತಿಕ್ರಿಯೆಯಲ್ಲಿ. ಅಥವಾ, ಅವರ ಕಥೆಯಲ್ಲಿ ಕಲಾತ್ಮಕವಾಗಿ ಸೂಚ್ಯವಾಗಿರುವುದು, ಈ ಪ್ರತಿಕ್ರಿಯೆಯಲ್ಲಿ ಕಸಿವಿಸಿಪಡುವಷ್ಟು ಅತಿವಾಚ್ಯತೆಯನ್ನು ಪಡೆದುಕೊಂಡುಬಿಟ್ಟಿರಬಹುದು. ಕಥೆಯ ಮುಕ್ತವಾದ ಪ್ರವೇಶಕ್ಕೆ, ವಿವಿಧ ಅನುಭವಗಳ ದರ್ಶನಕ್ಕೆ ಇಂತಹ ಬರಹಗಳು ಕಾಲಿಗೆ ತೊಡರೊಡ್ಡುತ್ತವೆ ಎಂದೆನ್ನಿಸಬಹುದು. ಪ್ರಾಮಾಣಿಕ ಕ್ಷಮೆಯನ್ನಷ್ಟೇ ಕೇಳಬಯಸುತ್ತೇನೆ, ಸದ್ಯಕ್ಕೆ.
ಮತ್ತೊಬ್ಬನ ಸಂಸಾರ ಪುಸ್ತಕದ ಹಿಂಬದಿಯಲ್ಲಿರುವ ಅಕ್ಷರರ ಕೆಲ ಮಾತುಗಳು ನನ್ನ ಒಟ್ಟು ವಿಚಾರಲಹರಿಯ ಮೂಲಪ್ರೇರಣೆಯಾದರೂ, ಸಿಕ್ಕ ಸಿಕ್ಕ ದಿಕ್ಕಿನಲ್ಲೆಲ್ಲಾ ಅರ್ಥಕ್ಕಾಗಿ ಕೈಚಾಚಿ ದಕ್ಕಿತು ಎಂದೆನ್ನಿಸಿದ್ದನ್ನೆಲ್ಲಾ ಅಲ್ಲಿ ಬರೆದಿದ್ದೇನೆ.
ಚಿಕ್ಕದಾಗಿ ಹೇಳುವುದಾದರೆ, ವಿವೇಕರ ಈ ಕಥೆಯಲ್ಲಿ ವಾಸ್ತವದ ಒಂದು ತುಣುಕಿನ ಮೂಲಕ, ವ್ಯವಸ್ಥೆ ಸೃಷ್ಟಿಸುವ ಗೋಡೆಗಳನ್ನು ಮೀರಿ ಬೆಳೆಯುವ ಇಬ್ಬರ ನಡುವಿನ ಸಂಬಂಧದ ಮೂಲಕ ಭಾರತ ಮತ್ತು ಆಧುನಿಕತೆಯ ಸಂಬಂಧ ಶೋಧಿಸುತ್ತಿರುವಂತಿದೆ. ನಮ್ಮ ಸಾಹಿತ್ಯ ಪರಂಪರೆಯಲ್ಲಿ ಇದೇನೂ ಹೊಸತಲ್ಲ. ಆದರೆ, ಈ ಚಿಕ್ಕ ಕಥೆಯಲ್ಲಿ ತೋರುತ್ತಿರುವ ವಸ್ತುಚಿತ್ರಣದ ಸಮಗ್ರತೆ ಆಶ್ಚರ್ಯ ಹುಟ್ಟಿಸುವಂತಿದೆ. ಕಥೆಯ ಶಿಲ್ಪವೇ ಇಲ್ಲಿ ಮೌಲ್ಯವೊಂದನ್ನು, ಮೆಲುದನಿಯ ಆದರೆ ಗಟ್ಟಿಯಾದ ನಿಲುವೊಂದನ್ನು ತೆಗೆದುಕೊಂಡಂತಿದೆ.
ವಿವೇಕ್ ಶಾನಭಾಗ್‍ರ ಕಥೆ `ಶರವಣ ಸರ್ವೀಸಸ್' ಕುರಿತ `ಜೀವಿಶಿವು' ಅವರ ವಿಸ್ತಾರವಾದ ಚಿಂತನೆಯನ್ನು ಆಸಕ್ತರು ಇಲ್ಲಿ ಅವರ ಬ್ಲಾಗ್‍ನಲ್ಲಿ ನೋಡಬಹುದು.
Post a Comment
<< Home